ಹಳ್ಳಿಯ ಕಥೆ-ವ್ಯಥೆ
Team Udayavani, Jul 16, 2017, 10:30 AM IST
ಒಬ್ಬ ಲಾಯರ್, ಪಂಚಾಯ್ತಿ ಕಟ್ಟೆಯ ಎರಡು ಹಿರಿಯ ಜೀವಗಳು, ಜೊತೆಗೊಂದು ತುಂಟ ಪ್ರೇಮಿಗಳು … ಇಡೀ ಹಳ್ಳಿಯಲ್ಲಿ ಅವರದ್ದೇ ಹಾವಳಿ. ಸುತ್ತಿ ಬಳಸಿ ಇಡೀ ಹಳ್ಳಿ ಸುತ್ತಿದರೂ ಮತ್ತೆ ಮತ್ತೆ ಅವರೇ ಎದುರಾಗುತ್ತಾರೆ. ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತಾ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸುತ್ತಾ ಸಾಗುವ ಅಷ್ಟೂ ಮಂದಿ ಒಂದು ಹಂತದಲ್ಲಿ ಒಂದಾಗುತ್ತಾರೆ. ಅದಕ್ಕೊಂದು ಬಲವಾದ ಕಾರಣವಿದೆ. ಆ ಕಾರಣ ಏನೆಂಬ ಕುತೂಹಲವಿದ್ದರೆ ನೀವು “ಹಳ್ಳಿ ಪಂಚಾಯಿತಿ’ ಸಿನಿಮಾ ನೋಡಿ.
ಹೆಸರು ಹೇಳಿದ ಮೇಲೆ ಇದು ಪಕ್ಕಾ ಹಳ್ಳಿ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನೇ ವಸ್ತುವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಳ್ಳಿ ಜನರ ಮುಗ್ಧತೆ, ಅವರನ್ನು ಯಾಮಾರಿಸುವ ಮಂದಿ, ಹಳ್ಳಿಯ ಸಮಸ್ಯೆಗಳು ಹಳ್ಳಿಕಟ್ಟೆಯಲ್ಲೇ ಪಂಚಾಯ್ತಿಯಾಗಬೇಕೆಂಬ ನಂಬಿಕೆಗಳೇ ಈ ಸಿನಿಮಾದ ಪ್ರಮುಖ ಅಂಶ. ಹಾಗಾಗಿ, ಇಡೀ ಸಿನಿಮಾದಲ್ಲಿ ಅಂತಹ ಘಟನೆಗಳು ಪದೇಪದೇ ಎದುರಾಗುತ್ತಲೇ ಇರುತ್ತವೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಳ್ಳಿ ಕಥೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಬಹುತೇಕ ಸಿನಿಮಾಗಳು ಹಳ್ಳಿ ಮುಗ್ಧ ಜನರು ಮೋಸ ಹೋಗುವ, ಊರಿನ ಗೌಡನ ದರ್ಪದ ಸುತ್ತವೇ ಸುತ್ತಿವೆ. ಈ ಸಿನಿಮಾ ಕೂಡಾ ಅದೇ ಕೆಟಗರಿಗೆ ಸೇರುವ ಸಿನಿಮಾ. ಚಿತ್ರದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಅವರು ಸಿನಿಮಾದಲ್ಲಿದ್ದಾರನ್ನೋದು ಬಿಟ್ಟರೆ ಅವರ ಪಾತ್ರಕ್ಕೊಂದು ತೂಕ, ಅರ್ಥ ಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ.
ಅವರಿಬ್ಬರು ಸಿನಿಮಾದುದ್ದಕ್ಕೂ ಸಾಗಿ ಬಂದರೂ ಅವರನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಹಾಗಾಗಿ, ಅವರಿಬ್ಬರಿಗಿರುವ ಪ್ರಸಿದ್ಧಿಗಾಗಿ ಅವರನ್ನು ಬಳಸಿಕೊಂಡಂತೆ ಕಾಣುತ್ತದೆ. ಅದಕ್ಕೆ ಕಾರಣ, ಚಿತ್ರದಲ್ಲೊಂದು ಗಟ್ಟಿ ಕಥೆ ಇಲ್ಲದ್ದು. ಇಲ್ಲಿ ಘಟನೆಗಳನ್ನು, ಸನ್ನಿವೇಶಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅದು ಈಗಿನ ಟ್ರೆಂಡ್ ಎಂದುಕೊಂಡು ನೀವು ಸಿನಿಮಾ ನೋಡಬಹುದು. ಒಂದು ಹಳ್ಳಿ ಎಂದರೆ ಅಲ್ಲಿ ನೂರೆಂಟು ಸಮಸ್ಯೆಗಳು, ಘಟನೆಗಳು ಇರುತ್ತವೆ.
ಆದರೆ, ಇಲ್ಲಿ ಕೆಲವೇ ಸನ್ನಿವೇಶಗಳಿಗೆ ಸೀಮಿತ ಮಾಡಲಾಗಿದೆ. ಲಾಯರ್ ಮಾಡುವ ಮೋಸ ಹಾಗೂ ವಟವಟ ಮಾತನಾಡುವ ಪ್ರೇಮಿಗಳ ಕಾಟದ ಸುತ್ತವೇ ಬಹುತೇಕ ಸಿನಿಮಾ ಸುತ್ತುತ್ತದೆ. ಅಂದಹಾಗೆ, ಇದು ಕೂಡಾ ಮಂಡ್ಯ ಹಿನ್ನೆಲೆಯ ಚಿತ್ರವಾದ್ದರಿಂದ, ಅಲ್ಲಿನ ಭಾಷೆಯನ್ನೇ ಬಳಸಲಾಗಿದೆ. ಹಾಗಂತ ಚಿತ್ರದಲ್ಲಿ ಒಳ್ಳೆಯ ಅಂಶಗಳೇ ಇಲ್ಲವೆಂದಲ್ಲ. ಹಳ್ಳಿಯ ಕೆಲವು ಶಾಲೆಗಳ ದುಸ್ಥಿತಿ, ಅಧ್ಯಾಪಕರ ನಿರ್ಲಕ್ಷ್ಯತನ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಹೇಳಲಾಗಿದೆ.
ಆದರೆ, ಅವೆಲ್ಲವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುತ್ತಿದ್ದರೆ ಸಿನಿಮಾಕ್ಕೆ ಪ್ಲಸ್ ಆಗುತ್ತಿತ್ತು. ಇಲ್ಲಿ ಖುಷಿಯ ವಿಚಾರವೆಂದರೆ ಚಿತ್ರ ಹಳ್ಳಿಬಿಟ್ಟು ಸಾಗಿಲ್ಲ. ಇಡೀ ಸಿನಿಮಾ ಹಳ್ಳಿಯಲ್ಲೇ ನಡೆದಿದೆ. ಜೊತೆಗೆ ಅಲ್ಲಿನ ಪರಿಸರವನ್ನು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನ ಕೂಡಾ ಆಗಿದೆ. ಹೀರೋಯಿಸಂಗೋಸ್ಕರ ಬಿಲ್ಡಪ್ ಆಗಲಿ, ಪುಂಡರಿಗಾಗಿ ಐಟಂ ಸಾಂಗ್ ಇಡುವ ಗೋಜಿಗೆ ಹೋಗಿಲ್ಲ. ಆ ಮಟ್ಟಿಗೆ ಇದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ.
ಆದರೆ, ಚಿತ್ರದ ಕಥೆ ಹಾಗೂ ನಿರೂಪಣೆ ಮತ್ತಷ್ಟು ಬಿಗಿಯಾಗಿದ್ದರೆ “ಪಂಚಾಯ್ತಿ’ ಫಲಪ್ರದವಾಗುತ್ತಿತ್ತು. ಚಿತ್ರದಲ್ಲಿ ಸೆಂಚುರಿ ಗೌಡ, ಗಡ್ಡಪ್ಪ ಅವರು ನಟಿಸಿದ್ದಾರೆ. ನಟಿಸಿದ್ದಾರೆ ಅನ್ನೋದಕ್ಕಿಂತ ಈ ಹಿಂದಿನ ಚಿತ್ರಗಳಲ್ಲಿ ಹೇಗೆ ಕಾಣಿಸಿಕೊಂಡಿದ್ದರೋ ಬಹುತೇಕ ಅದೇ ಇಲ್ಲಿ ರಿಪೀಟ್ ಆಗಿದೆ ಎನ್ನಬಹುದು. ಅಭಿ ನಟನೆ “ತಿಥಿ’ ನೆನಪಿಸುತ್ತದೆ. ನಾಯಕಿ ಮೇಘನಾ ಬೋಲ್ಡ್ ಆಗಿ ನಟಿಸಿದ್ದಾರೆ.
ಹಿರಿಯ ನಟ ಗೀತಾ ಹಾಗೂ ಜಯರಾಂ ಅವರು ತೆರೆಮೇಲೆ ಇದ್ದಷ್ಟು ಹೊತ್ತು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸಿರುವ ಪ್ರೇಮ ಯುವರಾಜ್ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಮಕ್ಕಳ ಹಾಗೂ ಊರಿನ ಬಗೆಗಿನ ಕಾಳಜಿಯಲ್ಲಿ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದು ಹಂತದಲ್ಲಿ ಸಿನಿಮಾಕ್ಕೆ ಪ್ರಮುಖ ಟ್ವಿಸ್ಟ್ ಕೂಡಾ ಅವರಿಂದಲೇ ಸಿಗುತ್ತದೆ.
ಚಿತ್ರ: ಹಳ್ಳಿ ಪಂಚಾಯ್ತಿ
ನಿರ್ಮಾಣ: ಪ್ರೇಮ ಯುವರಾಜ್
ನಿರ್ದೇಶನ: ಜಿ.ಉಮೇಶ್
ತಾರಾಗಣ: ಸೆಂಚುರಿ ಗೌಡ, ಗಡ್ಡಪ್ಪ, ಅಭಿ, ಮೇಘನಾ, ಗೀತಾ, ಜಯರಾಂ, ಪ್ರೇಮ ಮತ್ತಿತರರು.
* ರವಿ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.