ರಾಜಕೀಯದಲ್ಲಿ ಹೀಗೂ ಉಂಟೇ?
Team Udayavani, Mar 23, 2018, 6:33 PM IST
“ಸರ್. ನನ್ ಬುಟ್ಬುಡಿ. ನಮ್ ಊರ್ಗ್ ಒಂಟೋಯ್ತಿನಿ… ಇಲ್ಲೀರಕೆ ಆಗಂಗಿಲ್ಲ…’ ಏನನ್ನೂ ಅರಿಯದ ಆ ಹಳ್ಳಿ ಹೈದ, ಶೌಚಾಲಯ ಹಗರಣದಲ್ಲಿ “ಮುಖ್ಯಮಂತ್ರಿ’ ಸ್ಥಾನ ಕಳೆದುಕೊಂಡ ವಡ್ಡೋರಪ್ಪನ ಮುಂದೆ ಪರಿ ಪರಿಯಾಗಿ ಬೇಡಿಕೊಳ್ಳುವ ಹೊತ್ತಿಗೆ, ಅಲ್ಲೊಂದು ದೊಡ್ಡ ಡ್ರಾಮವೇ ನಡೆದಿರುತ್ತದೆ. ಆ ರಾಜಕೀಯ ನಾಟಕದಲ್ಲಿ ಏನೆಲ್ಲಾ ಎಡವಟ್ಟುಗಳಾಗುತ್ತವೆ, ಹೇಗೆಲ್ಲಾ ತಿರುವುಗಳು ಪಡೆದುಕೊಳ್ಳುತ್ತವೆ ಎಂಬುದು ಚಿತ್ರದ ಒನ್‌ಲೈನ್.
ನಿರ್ದೇಶಕ ಶಿವಕುಮಾರ್ ಭದ್ರಯ್ಯ ಕಥೆ ಎಳೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. ಇದೊಂದು ರಾಜಕೀಯ ವಿಡಂಬಣೆ ಅಂದುಕೊಳ್ಳಲ್ಲಡ್ಡಿಯಿಲ್ಲ. ಒಂದು ಕೆಟ್ಟ ವ್ಯವಸ್ಥೆಯಲ್ಲಿ ಏನೆಲ್ಲಾ ನಡೆಯುತ್ತೆ ಎಂಬ ಸಣ್ಣ ಸಂದೇಶದೊಂದಿಗೆ ಅವರದೇ ಧಾಟಿಯಲ್ಲಿ ನಿರೂಪಿಸುತ್ತಾ ಹೋಗಿದ್ದಾರೆ. ಇಡೀ ಚಿತ್ರ ರಾಜಕೀಯ ಮತ್ತು ರಾಜಕಾರಣಿಗಳ ಸುತ್ತ ಸುತ್ತುತ್ತದೆ. ಅಧಿಕಾರ, ಹೆಣ್ಣು, ಹಣ, ಭ್ರಷ್ಟಾಚಾರ, ಟೊಳ್ಳು ನುಡಿವ ಸ್ವಾಮೀಜಿಗಳು ಇತ್ಯಾದಿ ವಿಷಯಗಳು ರಾಜಕೀಯಕ್ಕೆ ಅಂಟಿಕೊಂಡ ನಂಟು.
ಅದನ್ನು ಅಷ್ಟೇ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಶೀರ್ಷಿಕೆಯೇನೋ ಒಂದಷ್ಟು ಕುತೂಹಲ ಕೆರಳಿಸುತ್ತೆ. ಆದರೆ, ಅಷ್ಟೇ ಕುತೂಹಲ ಸಿನಿಮಾದಲ್ಲೂ ಇದೆಯಾ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟ. ಆದರೆ, ಇಲ್ಲಿ ಮುಖ್ಯಮಂತ್ರಿ ಯಾಕೆ ಕಳೆದು ಹೋಗುತ್ತಾನೆ ಎನ್ನುವುದನ್ನೇ ಸ್ವಾರಸ್ಯಕರವಾಗಿ ಹೇಳುವ ಪ್ರಯತ್ನ ಮಾಡಿರುವುದು ನೋಡುಗರಿಗೆ ಇಷ್ಟವಾಗಬಹುದೇನೋ? ಒಂದು ವಿಭಿನ್ನ ಕಥೆಗೆ ಇನ್ನೂ ಬಿಗಿಯಾದ ಚಿತ್ರಕಥೆಯ ಅಗತ್ಯವಿತ್ತು.
ಅದನ್ನು ಸರಿಪಡಿಸಿಕೊಂಡಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ಕೆಲ ದೃಶ್ಯಗಳಲ್ಲಿ ಸಾಕಷ್ಟು ಕೊರತೆ ಎದ್ದು ಕಾಣುತ್ತದೆ. ಒಮ್ಮೊಮ್ಮೆ ಸಿನಿಮಾನಾ ಅಥವಾ ಡಾಕ್ಯುಮೆಂಟರಿನಾ ಎಂಬ ಪ್ರಶ್ನೆ ಕಾಡಿದರೆ ಅಚ್ಚರಿ ಇಲ್ಲ. ಸುಮ್ಮನೆ ನೋಡಿಸಿಕೊಂಡು ಹೋಗುವ ಕಥೆ ಇದ್ದಕ್ಕಿದ್ದಂತೆ ಎಲ್ಲೋ ಹರಿದಾಡುತ್ತಿದೆ ಅಂದುಕೊಳ್ಳುವ ಹೊತ್ತಿಗೆ, ಅಲ್ಲೊಂದು ಲವ್‌ಟ್ರ್ಯಾಕ್ ಇಟ್ಟು, ನೋಡುಗರ ತಾಳ್ಮೆ ಸಮಾಧಾನಿಸುವಲ್ಲಿ ಜಾಣ್ಮೆ ಮೆರೆದಿದ್ದಾರೆ ನಿರ್ದೇಶಕರು.
ಮೊದಲರ್ಧ ಏನಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ದ್ವಿತಿಯಾರ್ಧದಲ್ಲಿ ಕೆಲವು ಪ್ರಶ್ನೆಗಳಿಗೆ ಒಂಚೂರು ಸ್ಪಷ್ಟತೆ ಸಿಗುತ್ತಾ ಹೋಗುತ್ತದೆ. ಅಷ್ಟರಲ್ಲಿ, ಮತ್ತೂಂದು ಡ್ಯುಯೆಟ್ ಹಾಡು ಕಾಣಿಸಿಕೊಂಡು ಮತ್ತೆ ನೋಡುಗರನ್ನು ಸೀಟಿಗೆ ಒರಗಿಕೊಳ್ಳುವಂತೆ ಮಾಡುತ್ತದೆ. ಸಮಾಜದಲ್ಲಿ ಇಣುಕಿ ನೋಡುತ್ತಿರುವ ಕೆಟ್ಟ ವ್ಯವಸ್ಥೆಯನ್ನು ಹೇಳುವ ಭರದಲ್ಲಿ “ಹೀಗೂ ಉಂಟೇ..? ಎಂಬ ಸನ್ನಿವೇಶಗಳೂ ಭರಪೂರವಾಗಿವೆ.
ಅದನ್ನು ಸಹಿಸಿಕೊಂಡು ನೋಡುವುದಾದರೆ, ಒಮ್ಮೆ “ಕಳದೋದ ಮುಖ್ಯಮಂತ್ರಿ’ಯನ್ನೊಮ್ಮೆ ಕಣ್ತುಂಬಿಕೊಂಡು ಬರಲು ಅಡ್ಡಿಯಿಲ್ಲ. ಶೌಚಾಲಯ ಹಗರಣದಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾನೆ. ಆ ಸಿಎಂ ಪಟ್ಟಕ್ಕೇರಲು ಸಂಪುಟದ ಬೆರಳೆಣಿಕೆ ಸಚಿವರು ಕಸರತ್ತು ಮಾಡುತ್ತಾರೆ. ಆದರೆ, ಅವರೆಲ್ಲರೂ ಹಗರಣದಲ್ಲಿ ಸಿಲುಕಿಕೊಂಡವರೇ. ಅವರ್ಯಾರಿಗೂ ಆ ಸ್ಥಾನ ಸಿಗಲ್ಲ. ಸಿಎಂ ಸ್ಥಾನ ಕಳಕೊಂಡ ವಡ್ಡೋರಪ್ಪ, ತಾನು ಹೇಳಿದಂತೆ ಕೇಳುವ, ಹಳ್ಳಿ ಹೈದನೊಬ್ಬನನ್ನು ಸಿಎಂ ಮಾಡುವ ಯೋಚನೆ ಮಾಡುತ್ತಾನೆ.
ಅದರಂತೆ, ಒಂದು ಹಳ್ಳಿಯಲ್ಲಿರುವ ಕೃಷ್ಣ ಎಂಬ ಮುಗ್ಧ ಹಳ್ಳಿಗನನ್ನು ಕರೆದುಕೊಂಡು ಬಂದು ಸಿಎಂ ಪಟ್ಟ ಕಟ್ಟುತ್ತಾನೆ. ಆ ಹೆಬ್ಬೆಟ್ಟು ವ್ಯಕ್ತಿಯನ್ನು ಸಿಎಂ ಮಾಡುವ ವಡ್ಡೋರಪ್ಪಗೆ ರಾಜ್ಯದ ಬೊಕ್ಕಸ ಲೂಟಿ ಮಾಡುವ ಯೋಚನೆ. ಅತ್ತ, ರಾಜ್ಯ ಹೊತ್ತಿ ಉರಿಯುತ್ತಿರುತ್ತದೆ, ವಿರೋಧಪಕ್ಷದವರ ಗಲಾಟೆ ಜೋರಾಗಿರುತ್ತದೆ, ಮಾಧ್ಯಮ ಬಿತ್ತರಿಸುವ ಸುದ್ದಿಗಳೂ ಬಿಸಿ ಮುಟ್ಟಿಸಿರುತ್ತವೆ, ಯಾವುದೇ ಪರಿವಿಲ್ಲದ ಕೃಷ್ಣ ತಾನು ಸಿಎಂ ಆಗಿದ್ದರೂ, ನಾಲ್ಕು ಗೋಡೆ ನಡುವಿನ ಜೈಲಿನಲ್ಲಿರುತ್ತಾನೆ.
ಅಲ್ಲಿಂದ ತಪ್ಪಿಸಿಕೊಂಡರೇ ಸಾಕು ಎಂಬ ತೀರ್ಮಾನಕ್ಕೆ ಬಂದು, ಸಮಯ ನೋಡಿ ಅಲ್ಲಿಂದ ತಪ್ಪಿಸಿಕೊಳ್ತಾನೆ! ಆಗ ಬರೋದೇ “ಮುಖ್ಯಮಂತ್ರಿ ಕಳದೋದ್ನಪ್ಪೊ’ ಎಲ್ಲೆಡೆ ಬ್ರೇಕಿಂಗ್ ನ್ಯೂಸ್. ಅಲ್ಲಿಂದ ಆ ಸಿಎಂಗಾಗಿ ಹುಡುಕಾಟ ಶುರುವಾಗುತ್ತೆ. ಕೊನೆಗೆ ಏನಾಗುತ್ತೆ ಎಂಬುದೇ ಕುತೂಹಲ. ಶಿವಕುಮಾರ್ ಒಬ್ಬ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ಇನ್ನಷ್ಟು ಗಟ್ಟಿಯಾಗಬೇಕಿದೆ.
ಭರತ್ ಭದ್ರಯ್ಯ ಡ್ಯಾನ್ಸ್‌ನಲ್ಲಿ ಕೊಡುವ ಖುಷಿ ನಟನೆಯಲ್ಲಿಲ್ಲ. ಅಮೂಲ್ಯ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರಷ್ಟೇ. ಬಾಬು ಹಿರಣ್ಣಯ್ಯ ಪಾತ್ರವನ್ನು ಜೀವಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಅಷ್ಟಾಗಿ ಗಮನಸೆಳೆಯುವುದಿಲ್ಲ. ನಯನ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಕಾರ್ತಿಕ್ ವೆಂಕಟೇಶ್ ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಹರೀಶ್ ಛಾಯಾಗ್ರಹಣದಲ್ಲಿ “ಮುಖ್ಯಮಂತ್ರಿ’ ಇನ್ನಷ್ಟು ಅಂದವಾಗಬಹುದಿತ್ತು ಅನಿಸದೇ ಇರದು.
ಚಿತ್ರ: ಮುಖ್ಯಮಂತ್ರಿ ಕಳೆದೋದ್ನಪ್ಪೊ
ನಿರ್ಮಾಣ ಮತ್ತು ನಿರ್ದೇಶನ: ಶಿವಕುಮಾರ್ ಭದ್ರಯ್ಯ
ತಾರಾಗಣ: ಶಿವಕುಮಾರ್ ಭದ್ರಯ್ಯ, ಭರತ್ ಭದ್ರಯ್ಯ, ಅಮೂಲ್ಯ, ಬಾಬು ಹಿರಣ್ಣಯ್ಯ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.