ಬದುಕಿನ ಪರಿವರ್ತನೆಯ ಪಯಣ
ಚಿತ್ರ ವಿಮರ್ಶೆ
Team Udayavani, Apr 21, 2019, 3:00 AM IST
“ಚಕ್ರದ ಉಸಿರು ಖಾಲಿಯಾದರೆ ತುಂಬಿಸಿಕೊಳ್ಳಬಹುದು. ಆದರೆ ಮನುಷ್ಯನ ಉಸಿರು ಹೋದ್ರೆ ತುಂಬಿಸಿಕೊಳ್ಳೋಕೆ ಆಗೋದಿಲ್ಲ…’ ಆ ಹಿರಿಯ ಜೀವ ನಾಲ್ವರು ಗೆಳೆಯರಿಗೆ ಈ ಮಾತು ಹೇಳುವ ಹೊತ್ತಿಗೆ, ಅವರ ಮೊಗದಲ್ಲಿ ಖುಷಿ ಮಾಯವಾಗಿ ದುಃಖ ದುಪ್ಪಟ್ಟಾಗಿರುತ್ತದೆ. ನಿರೀಕ್ಷಿಸದ ಘಟನೆಯೊಂದು ನಡೆದು ಹೋಗಿರುತ್ತದೆ.
ಕಲರ್‌ಫುಲ್ ಲೈಫ್ನೊಳಗೆ ಕಾರ್ಮೋಡ ಕವಿದಂತಾಗಿ, ಅವರೆಲ್ಲರೂ ದಿಕ್ಕುತೋಚದೆ ಕಂಗಾಲಾಗಿರುತ್ತಾರೆ. ಅವರ ಜಾಲಿ ಜರ್ನಿಯಲ್ಲಿ ಎಲ್ಲವೂ ಖಾಲಿಯಾಗಿ ಮೌನವೊಂದೇ ಮಾತಾಗಿರುತ್ತದೆ. ಇಷ್ಟಕ್ಕೂ “ಪಯಣಿಗರು’ ಚಿತ್ರದಲ್ಲಿ ಇಷ್ಟೊಂದು ಗಾಢ ಪರಿಣಾಮ ಬೀರುವ ಸನ್ನಿವೇಶಗಳಿವೆಯಾ ಎಂಬ ಪ್ರಶ್ನೆಗೆ, ಅಲ್ಲಿ ಖುಷಿಗಿಂತ ಭಾವುಕತೆಯೇ ಉತ್ತರ.
ಒಂದು ಸರಳ ಕಥೆಯನ್ನು ಹೀಗೂ ಹೇಳಬಹುದು, ಸಂಭ್ರಮ ಕ್ಷಣದ ಜೊತೆಗೆ ದುಮ್ಮಾನವನ್ನೂ ತೋರಿಸಬಹುದು ಎಂಬುದಕ್ಕೆ “ಪಯಣಿಗರು’ ಸಾಕ್ಷಿಯಾಗುತ್ತದೆ. ಇಲ್ಲಿ ಹೀರೋಗಳಿಲ್ಲ. ಆದರೆ, ನಾಟುವ ಗಟ್ಟಿ ಕಥೆ ಇದೆ. ಗಾಂಧಿನಗರದ ಸಿದ್ಧಸೂತ್ರಗಳನ್ನು ಬದಿಗೊತ್ತಿ, ಸಾಮಾನ್ಯವಾಗಿ ಎಲ್ಲರ ಬದುಕಲ್ಲೂ ನಡೆಯುವ ಒಂದು ವಿಷಯವನ್ನು ಇಟ್ಟುಕೊಂಡು ಅಪರೂಪದ ಅಂಶಗಳನ್ನೆಲ್ಲಾ ಪೋಣಿಸಿ, ಒಂದು ನೀಟ್ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.
ಹಾಗಂತ, ಇಡೀ ಚಿತ್ರ ನೋಡುಗರನ್ನು ಹಿಡಿದು ಕೂರಿಸುತ್ತೆ ಅನ್ನುವುದು ತಪ್ಪು. ಮೊದಲರ್ಧ ಎಲ್ಲೋ ಒಂದು ಕಡೆ ತಾಳ್ಮೆ ಕೆಡಿಸುವಂತಹ ಸನ್ನಿವೇಶಗಳು ತುಂಬಿವೆ. ಅಲ್ಲಲ್ಲಿ, ಪಾತ್ರಗಳ ಮಾತುಗಳನ್ನು ಕೊಂಚ ಕಡಿಮೆಗೊಳಿಸಿದ್ದರೆ, ಅನಗತ್ಯ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಇಲ್ಲಿ ಅಬ್ಬರದ ಆ್ಯಕ್ಷನ್‌ಗಳಾಗಲಿ, ಅಪಹಾಸ್ಯ ಎನಿಸುವ ಡೈಲಾಗ್‌ಗಳಾಗಲಿ ಅಡ್ಡ ಬರುವುದಿಲ್ಲ.
ಕಥೆಯಲ್ಲಿ ಒಂಚೂರು ತಾಕತ್ತು ಇರುವುದರಿಂದ ತೆರೆ ಮೇಲೆ ಯಾರಿದ್ದಾರೆ, ಹೇಗೆ ಮಾಡಿದ್ದಾರೆ ಎಂಬುದೆಲ್ಲಾ ಕೌಂಟ್ ಆಗೋದಿಲ್ಲ. ಅಲ್ಲಲ್ಲಿ ಚಿತ್ರಕಥೆಯ ಹಿಡಿತ ತಪ್ಪಿರುವುದು ಬಿಟ್ಟರೆ, ಸಿನಿಮಾದುದ್ದಕ್ಕೂ ಬಿಗಿ ನಿರೂಪಣೆ ಮುಂದೇನಾಗುತ್ತೆ ಎಂಬ ಸಣ್ಣ ಕುತೂಹಲಗಳೊಂದಿಗೆ ಚಿತ್ರ ಸಾಗುತ್ತದೆ. ಇದು ಜರ್ನಿ ಕಥೆ. ಅದನ್ನು ಹೇಗೆ ಹೇಳಬೇಕು, ಎಷ್ಟು ತೋರಿಸಬೇಕು ಎಂಬ ಅರಿವು ನಿರ್ದೇಶಕರಿಗಿದೆ.
ಹಾಗಾಗಿಯೇ ಇಲ್ಲಿ ಶೇ.70 ರಷ್ಟು ಸ್ಕಾರ್ಪಿಯೋ ಜೀಪ್‌ನಲ್ಲೇ ಚಿತ್ರೀಕರಣ ನಡೆದಿದೆ. ಆರು ಜನರ ಮಾತುಕತೆ, ಅವರ ಅಭಿನಯ ಎಲ್ಲವನ್ನೂ ಆ ಜೀಪ್‌ನಲ್ಲೇ ಸೆರೆಹಿಡಿದಿರುವ ಛಾಯಾಗ್ರಾಹಕರ ಜಾಣತನ ಮೆಚ್ಚಬೇಕು. ಜೊತೆಗೆ ದೃಶ್ಯ ಸಂಯೋಜಿಸಿದ ನಿರ್ದೇಶಕರ ಯೋಚನಾ ಲಹರಿಯೂ ಕೆಲಸ ಮಾಡಿದೆ. ಇಂತಹ ಕಥೆಗಳಿಗೆ ಲೊಕೇಷನ್ ಮುಖ್ಯವಾಗಲ್ಲ.
ಬರೀ ಮಾತು ಕತೆಯಲ್ಲೇ ಎಲ್ಲಾ ಸಂದರ್ಭವನ್ನು ಹೇಳಬೇಕು. ಕೆಲವೆಡೆ ಅದು ಕೈ ತಪ್ಪಿದ್ದರೂ, ಅಲ್ಲಲ್ಲಿ ಬರುವ ಬದುಕಿನ ಮೌಲ್ಯಯುತ ಸಂದರ್ಭಗಳು ಕೆಲ ತಪ್ಪುಗಳನ್ನು ಸರಿಪಡಿಸುತ್ತವೆ. ಚಿತ್ರದಲ್ಲಿ ಸುಮಾರು 40 ಪ್ಲಸ್ ಗೆಳೆಯರೆಲ್ಲಾ ಸೇರಿ ಬೆಂಗಳೂರಿನಿಂದ ಗೋವಾಗೆ ಪಯಣ ಬೆಳೆಸುತ್ತಾರೆ. ಆ ಪಯಣದ ಮಧ್ಯೆ ಅವರುಗಳಲ್ಲೇ ಒಂದಷ್ಟು ಮನಸ್ತಾಪಗಳು, ಒಬ್ಬರಿಗೊಬ್ಬರು ಪರಸ್ಪರ ನಿಂದನೆಗಳೊಂದಿಗೆ ಗೋವಾ ಸೇರುತ್ತಾರೆ.
ಮೋಜು, ಮಸ್ತಿ ಎಲ್ಲವೂ ಅವರಂದುಕೊಂಡಂತೆಯೇ ನಡೆಯುತ್ತೆ. ಅಲ್ಲೊಂದು ಘಟನೆಯೂ ನಡೆದುಹೋಗುತ್ತೆ. ಅದೇನು ಎಂಬುದೇ ಪಯಣಿಗರ ಕಥೆ ಮತ್ತು ವ್ಯಥೆ. ಆ ಬಗ್ಗೆ ನೋಡುವ ಕುತೂಹಲವಿದ್ದರೆ ನೋಡಬಹುದು. ಇಲ್ಲಿ ಇಂಥದ್ದೇ ಲೊಕೇಷನ್ ಅಂತೇನೂ ಇಲ್ಲ. ಗೆಳೆಯರೆಲ್ಲಾ ಜಾಲಿ ಟ್ರಿಪ್ ಹೋಗುವಾಗ ಏನೆಲ್ಲಾ ಮಾತುಗಳು ಕೇಳಿಬರುತ್ತವೋ, ಎಲ್ಲೆಲ್ಲಿ ಕಾರು ನಿಲ್ಲಿಸಿ, ಎಂಜಾಯ್ ಮಾಡ್ತಾರೋ ಅಂಥದ್ದೇ ದೃಶ್ಯಗಳು ಇಲ್ಲೂ ಇವೆ.
ಮೊದಲರ್ಧದಲ್ಲಿ ಕಾಣುವ ದೃಶ್ಯಗಳಿಗೂ, ಆಡುವ ಮಾತುಗಳಿಗೂ ದ್ವಿತಿಯಾರ್ಧದಲ್ಲಿ ಒಂದಕ್ಕೊಂದು ಲಿಂಕ್ ಕಲ್ಪಿಸುತ್ತಾ ಹೋಗಿದ್ದಾರೆ. ಹಾಗಾಗಿ, ಚಿತ್ರ ಎಲ್ಲೂ ಗೊಂದಲ ಮೂಡಿಸದೆ, ಒಂದು ಭಾವನಾತ್ಮಕ ಸನ್ನಿವೇಶಗಳೊಂದಿಗೆ ನೋಡುಗರ ಎದೆಭಾರವನ್ನಾಗಿಸುತ್ತೆ. ಮನೆಯವರ ವಿರೋಧದ ನಡುವೆಯೂ ಜರ್ನಿ ಹೊರಡುವ ಒಬ್ಬೊಬ್ಬ ಗೆಳೆಯರ ಒಂದೊಂದು ವ್ಯಕ್ತಿತ್ವ.
ನಾನು, ನನ್ನದು ಎಂಬ ಅಹಂ ಒಬ್ಬನದಾದರೆ, ಒತ್ತಡದಲ್ಲೇ ದಿನ ದೂಡುವ ಮತ್ತೂಬ್ಬ. ಹೆಂಡತಿ ಇದ್ದರೂ ಪರಸ್ತ್ರೀ ಜೊತೆ ಎಂಜಾಯ್ ಮಾಡಿದರೆ ತಪ್ಪೇನು ಎನ್ನುವ ಇನ್ನೊಬ್ಬ. ಹೆಂಡತಿ ಮಕ್ಕಳು ನಾನು ಹೇಳಿದಂತೆ ಕೇಳಬೇಕೆಂಬ ಹಠವಿರುವ ಒಬ್ಬ ಮೇಷ್ಟ್ರು. ಇವರೆಲ್ಲರೂ ಗೋವಾ ತಲುಪಿ ಎಂಜಾಯ್ ಮಾಡುವ ಹೊತ್ತಿಗೆ ತಮ್ಮ ತಪ್ಪಿನ ಅರಿವಾಗಿ ಬದುಕು ಮತ್ತು ನಂಬಿದವರನ್ನು ಪ್ರೀತಿಸಬೇಕು ಅಂತ ನಿರ್ಧರಿಸುತ್ತಾರೆ.
ಅದಕ್ಕೆ ಕಾರಣ ಅಲ್ಲಿ ನಡೆಯುವ ಒಂದು ಘಟನೆ. ಆ ಘಟನೆಯೇ ದ್ವಿತಿಯಾರ್ಧದ ವೇಗಕ್ಕೆ ಜೀವಾಳ. ಚಿತ್ರದಲ್ಲಿ ಗೆಳೆಯರಾಗಿರುವ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್, ರಾಘವೇಂದ್ರ ಬೂದನೂರು ತಮ್ಮ ಪಾಲಿನ ಪಾತ್ರಕ್ಕೆ ಮೋಸ ಮಾಡಿಲ್ಲ.
ಹಿರಿಯ ಕಲಾವಿದ ನಾಗರಾಜ ರಾವ್ ಅವರು ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಕೆ.ಕಲ್ಯಾಣ್ ಬರೆದ “ಬರೀ ದೇಹವಲ್ಲ..’ ಎಂಬ ಹಾಡು ಬದುಕಿನ ಸತ್ಯವನ್ನು ಹೇಳುತ್ತದೆ. ವಿನುಮನಸು ಅವರ ಹಿನ್ನೆಲೆ ಸಂಗೀತ ಇನ್ನಷ್ಟು ಚುರುಕಾಗಿರಬೇಕಿತ್ತು. ರಾಜ ಶಿವಶಂಕರ ಛಾಯಾಗ್ರಹಣದಲ್ಲಿ ಗೆಳೆಯರ ಜರ್ನಿ ಕಲರ್‌ಫುಲ್ ಆಗಿದೆ.
ಚಿತ್ರ: ಪಯಣಿಗರು
ನಿರ್ಮಾಣ: ಕೊಳನ್‌ಕಲ್ ಮಹಾಗಣಪತಿ ಪ್ರೊಡಕ್ಷನ್ಸ್
ನಿರ್ದೇಶನ: ರಾಜ್ ಗೋಪಿ
ತಾರಾಗಣ: ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್, ರಾಘವೇಂದ್ರ ಬೂದನೂರು, ನಾಗರಾಜ ರಾವ್, ಸುಜಾತ ಇತರರು.
* ವಿಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.