ರೋಚಕ ದಾರಿಯಲ್ಲಿ ನೂರೆಂಟು ತಿರುವು
ಚಿತ್ರ ವಿಮರ್ಶೆ
Team Udayavani, Apr 13, 2019, 3:00 AM IST
ಅದು 1970. ಪುರಾತತ್ವ ಇಲಾಖೆಯಲ್ಲೊಂದು ಕೊಲೆಯಾಗುತ್ತದೆ. ಅದರ ಬೆನ್ನಲ್ಲೇ ಆ ಇಲಾಖೆಯ ಅಧಿಕಾರಿ ಹಾಗೂ ಆತನ ಕುಟುಂಬ ಕಾಣೆಯಾಗುತ್ತದೆ. ಘಟನೆ ನಡೆದ 40 ವರ್ಷದ ಬಳಿಕ ರಸ್ತೆ ಕಾಮಗಾರಿ ಸಮಯದಲ್ಲಿ ಮಣ್ಣಿನಡಿ ಮೂರು ತಲೆಬುರುಡೆಗಳು, ಎಲುಬು ಸಿಗುತ್ತವೆ. ಹಾಗಾದರೆ ಆ ತಲೆಬುರುಡೆ, ಎಲುಬು ಯಾರದ್ದು?
ಒಂದು ವೇಳೆ ಕೊಲೆಯಾಗಿದ್ದರೆ, ಆ ಕೊಲೆ ಮಾಡಿದವರು ಯಾರು? ಮನಸ್ಸಿಲ್ಲದ ಮನಸ್ಸಿನಿಂದ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿರುವ ಶ್ಯಾಮ್‌ಗೆ ಕೇಸ್ ಬಗ್ಗೆ ಆಸಕ್ತಿ ಬರುತ್ತದೆ. ತನ್ನ ವ್ಯಾಪ್ತಿಯನ್ನು ಮೀರಿ ಆ ಕೇಸ್ ಹಿಂದೆ ಬೀಳುತ್ತಾನೆ. ಹಾಗಾದರೆ, ಕೊಲೆಯಾದವರು ಮತ್ತು ಕೊಲೆ ಮಾಡಿದವರು ಯಾರು? ನಿಮಗೆ ಆ ಕುತೂಹಲವಿದ್ದರೆ ನೀವು “ಕವಲುದಾರಿ’ ನೋಡಬಹುದು.
“ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರದಲ್ಲೇ ಒಂದು ಕಥೆಯನ್ನು ನೀಟಾಗಿ ಹೇಳಬಲ್ಲೆ ಎಂದು ನಿರೂಪಿಸಿದ್ದ ನಿರ್ದೇಶಕ ಹೇಮಂತ್ ರಾವ್, “ಕವಲುದಾರಿ’ಯಲ್ಲೂ ಆ ಭರವಸೆ, ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. ಮರ್ಡರ್ ಮಿಸ್ಟರಿ ಕಥೆಯನ್ನು ಆಯ್ಕೆಮಾಡಿಕೊಂಡಿರುವ ಹೇಮಂತ್, ಎಲ್ಲಾ ಸಿದ್ಧಸೂತ್ರಗಳನ್ನು ಬದಿಗೊತ್ತಿ, ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಪುರಾತತ್ವ ಇಲಾಖೆಯಿಂದ ಆರಂಭವಾಗುವ ಸಿನಿಮಾದಲ್ಲಿ ಹಲವು ಸೂಕ್ಷ್ಮವಿಷಯಗಳು ಬಂದು ಹೋಗುತ್ತವೆ. ಆದರೆ, ಅವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸುತ್ತಾ, ಎಲ್ಲೂ ಗೊಂದಲಕ್ಕೆ ಎಡೆಮಾಡಿಕೊಡದೇ, ಒಂದಕ್ಕೊಂದು ಕೊಂಡಿಯನ್ನು ಜೋಡಿಸುತ್ತಾ ಸಾಗಿದ್ದಾರೆ ಹೇಮಂತ್. ಅದೇ ಕಾರಣದಿಂದ ಚಿತ್ರದಲ್ಲಿ ಬರುವ ಪ್ರತಿ ಅಂಶಗಳು ಪ್ರೇಕ್ಷಕನಿಗೆ ಮುಂದೆ ರಿವೈಂಡ್ ಆಗುತ್ತಾ, ಕಥೆಗೆ ಲಿಂಕ್ ಕೊಡುತ್ತದೆ ಕೂಡಾ.
ಸಾಮಾನ್ಯವಾಗಿ ಮರ್ಡರ್ ಮಿಸ್ಟರಿ ಸಿನಿಮಾ ಎಂದರೆ ಅತಿಯಾದ ರೋಚಕತೆ, ಅಬ್ಬರದ ರೀರೆಕಾರ್ಡಿಂಗ್, ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರುತ್ತದೆ. ಆದರೆ, ಹೇಮಂತ್ ಅವೆಲ್ಲವನ್ನು ಬ್ರೇಕ್ ಮಾಡಿ, ತುಂಬಾ ಸಾವಧಾನವಾಗಿ, ವಿಸ್ತೃತವಾಗಿ ಕಥೆಯನ್ನು ಹೇಳುತ್ತಾ, ಒಂದೊಂದು ಪದರವನ್ನು ಬಿಡಿಸಿಟ್ಟಿದ್ದಾರೆ. ಹಾಗಾಗಿಯೇ ಪ್ರೇಕ್ಷಕ ಕೂಡಾ ಅತಿಯಾದ ಕುತೂಹಲಕ್ಕೆ ಒಳಗಾಗುವುದಿಲ್ಲ.
ನಿರ್ದೇಶಕ ಉದ್ದೇಶ ಸ್ಪಷ್ಟವಾಗಿದೆ. ತಾನು ಮಾಡಿಕೊಂಡಿರುವ ಕಥೆಯನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರಿಗೆ ಮುಟ್ಟಿಸೋದು. ಆ ಮಧ್ಯೆ ಹಾಡು, ಫೈಟ್, ಕಾಮಿಡಿಯನ್ನು ಸೇರಿಸಿ ಕಥೆಯ ಓಟಕ್ಕೆ ಡಿಸ್ಟರ್ಬ್ ಮಾಡಬಾರದೆಂಬುದು. ಆ ಕಾರಣದಿಂದಲೇ ನೀವು ಇಲ್ಲಿ ಹೆಚ್ಚಿನ ಮನರಂಜನೆಯನ್ನು ನಿರೀಕ್ಷಿಸುವಂತಿಲ್ಲ.
ಒಂದು ಥ್ರಿಲ್ಲರ್ ಸಿನಿಮಾವನ್ನು ಅಷ್ಟೇ ಥ್ರಿಲ್ ಆಗಿ ಕಣ್ತುಂಬಿಕೊಳ್ಳುವ ಉದ್ದೇಶ ಹೊಂದಿರುವವರು “ಕವಲುದಾರಿ’ ನೋಡಬಹುದು. ಅದು ಬಿಟ್ಟು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಪ್ರಿಯರಿಗೆ ಚಿತ್ರ ಹೆಚ್ಚು ರುಚಿಸೋದು ಕಷ್ಟ. “ಕವಲುದಾರಿ’ ಹೇಗೆ ಒಂದು ಥ್ರಿಲ್ಲರ್ ಸಿನಿಮಾವೋ, ಹಾಗೆ ಒಂದು ಸೆಂಟಿಮೆಂಟ್ ಸಿನಿಮಾ ಕೂಡಾ.
ಅನಂತ್‌ನಾಗ್ ಅವರ ಮುತ್ತಣ್ಣ ಪಾತ್ರ ತೆರೆದುಕೊಳ್ಳುವ ಮೂಲಕ ಚಿತ್ರಕ್ಕೊಂದು ಸೆಂಟಿಮೆಂಟ್ ಟಚ್ ಸಿಗುತ್ತದೆ. ಹಾಗಂತ ನಿರ್ದೇಶಕರು ಅದನ್ನು ಹೆಚ್ಚು ಬೆಳೆಸುವ ಗೋಜಿಗೆ ಹೋಗಿಲ್ಲ. ಸೆಂಟಿಮೆಂಟ್ ಮಧ್ಯೆ ಕೊಲೆ ರಹಸ್ಯ ಮಂಕಾಗಬಾರದೆಂಬ ಕಾಳಜಿ ಅವರದು. ಇನ್ನು, ಮೇಕಿಂಗ್‌ನಲ್ಲಿ “ಕವಲುದಾರಿ’ ಗಮನಸೆಳೆಯುತ್ತದೆ.
ಫ್ಲ್ಯಾಶ್‌ಬ್ಯಾಕ್ ಅಂಶಗಳನ್ನು ಹೇಳಿರುವುದಾಗಲೀ, ಇಡೀ ಕಥೆಯನ್ನು ಕೊಂಡೊÂಯ್ದ ರೀತಿ ಇಷ್ಟವಾಗುತ್ತದೆ. ಇನ್ನು, ಮೊದಲೇ ಹೇಳಿದಂತೆ ನಿರ್ದೇಶಕರು ಸಾವಧಾನವಾಗಿ ಎಲ್ಲವನ್ನು ಹೇಳಿರುವುದರಿಂದ ಸಿನಿಮಾದ ಅವಧಿ ಕೂಡಾ ಹೆಚ್ಚಾಯಿತೇನೋ ಎಂಬ ಭಾವನೆ ಮೂಡದೇ ಇರದು. ಥ್ರಿಲ್ಲರ್ ಸಿನಿಮಾ ತುಂಬಾನೇ ವೇಗವಾಗಿರಬೇಕೆಂದು ಬಯಸುವ ಪ್ರೇಕ್ಷಕನಿಗೆ ಚಿತ್ರ ಸ್ವಲ್ಪ ನಿಧಾನ ಎನಿಸಬಹುದು.
ಅದು ಬಿಟ್ಟರೆ “ಕವಲುದಾರಿ’ ಒಂದು ನೀಟಾದ ಹಾಗೂ ಕಥೆಯಲ್ಲಿ ಸ್ಪಷ್ಟತೆ ಇರುವ ಸಿನಿಮಾ.ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದರೂ ನೆನಪಲ್ಲಿ ಉಳಿಯುವುದು ಮಾತ್ರ ಕೆಲವೇ ಕೆಲವು ಪಾತ್ರಗಳು. ಅದರಲ್ಲಿ ಅನಂತ್‌ನಾಗ್ ಅವರ ಮುತ್ತಣ್ಣ ಹಾಗೂ ನಾಯಕ ರಿಷಿ ಅವರ ಪಾತ್ರ. ಅನಂತ್‌ನಾಗ್ ಈ ಚಿತ್ರದ ಪ್ರಮುಖ ಶಕ್ತಿ ಎಂದರೆ ತಪ್ಪಲ್ಲ. ಅವರ ಎಂಟ್ರಿ, ನಂತರ ಪಾತ್ರ ಸಾಗುವ ದಿಕ್ಕು ಎಲ್ಲವೂ ಇಷ್ಟವಾಗುತ್ತದೆ.
ನಾಯಕ ರಿಷಿ ಅವರಿಗೆ ತುಂಬಾ ಗಂಭೀರವಾದ ಪಾತ್ರ ಸಿಕ್ಕಿದೆ ಮತ್ತು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸಂಪತ್, ರೋಶನಿ ಸೇರಿದಂತೆ ಇತರರು ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗುವಲ್ಲಿ ಸಂಗೀತ ನಿರ್ದೇಶಕ ಚರಣ್‌ರಾಜ್ ಹಾಗೂ ಛಾಯಾಗ್ರಾಹಕ ಅದ್ವೆ„ತ್ ಗುರುಮೂರ್ತಿ ಅವರ ಪಾತ್ರ ಕೂಡಾ ದೊಡ್ಡದಿದೆ.
ಚಿತ್ರ: ಕವಲುದಾರಿ
ನಿರ್ಮಾಣ: ಅಶ್ವಿನಿ ಪುನೀತ್‌ರಾಜಕುಮಾರ್
ನಿರ್ದೇಶನ: ಹೇಮಂತ್ ರಾವ್
ತಾರಾಗಣ: ರಿಷಿ, ಅನಂತ್‌ನಾಗ್, ಅಚ್ಯುತ್‌ಕುಮಾರ್, ಸಂಪತ್,ರೋಶನಿ ಪ್ರಕಾಶ್ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.