ನೋಡುಗರ ಮೌನವ್ರತ!
Team Udayavani, Sep 7, 2018, 5:03 PM IST
“ಒನ್ಸ್ ಎಗೇನ್ ಬುದ್ಧಿವಂತರಿಗೆ ಮಾತ್ರ’ ಇದು ಈ ಚಿತ್ರದ ಅಡಿಬರಹ. ಇಂಥದ್ದೊಂದು ಟ್ಯಾಗ್‌ಲೈನ್ ಇದ್ದಾಕ್ಷಣ, ಬುದ್ಧಿವಂತರ ಚಿತ್ರ ಅಂದುಕೊಳ್ಳುವಂತಿಲ್ಲ ಹಾಗಂತ, ಬುದ್ಧಿ ಓಡಿಸಿ ನೋಡಬಹುದಾದ ಚಿತ್ರ ಇರಬಹುದೇನೋ ಅಂತಾನೂ ತಿಳಿಯಬೇಕಿಲ್ಲ. ಇದೊಂದು ಆಕರ್ಷಣೆಯ ಅಡಿಬರಹವಷ್ಟೇ. ಆದರೆ, ಚಿತ್ರದೊಳಗೆ ಅಂತಹ ಯಾವುದೇ ಆಕರ್ಷಣೆ ಇಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಆಕರ್ಷಿಸಬೇಕಾದರೆ ಮುಖ್ಯವಾಗಿ ಚಲನಶೀಲತೆ ಇರಬೇಕು. ಅದಿಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಇಲ್ಲಿ ಭೋದನೆ ಇಲ್ಲ, ಉಪದೇಶವೂ ಇಲ್ಲ.
ತೀರಾ ಸಂಕಟಗಳನ್ನು ನಮ್ಮೊಳಗೆ ತುಂಬಿ ಕಲಕಿಸುವ ಚಿತ್ರವೂ ಅಲ್ಲ. ಇಲ್ಲಿ ಗಂಭೀರತೆಯೆಂಬುದೂ ಬಲು ದೂರ. ಕಾರಣ, ಇಲ್ಲಿ ಹೊಸ ಕಥೆ ಇಲ್ಲ. ಹೊಸತನದ ಅಂಶಗಳೂ ಇಲ್ಲ. ಈ ರೀತಿಯ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಇದು ಕೂಡ ಅಂಥದ್ದೇ ಜಾತಿಗೆ ಸೇರಿದ ಚಿತ್ರವಾದರೂ, ಬುದ್ಧಿವಂತಷ್ಟೇ ನೋಡಬೇಕೆಂದೇನೂ ಇಲ್ಲ. ಎಲ್ಲರೂ ನೋಡಿ ಸಲೀಸಾಗಿ ಚಿತ್ರದ ಆಳ-ಅಗಲ ಅಳೆದುಬಿಡಬಹುದಾದ ಚಿತ್ರ. ಚಿತ್ರದ ಮೊದಲರ್ಧ ತುಂಬಾ ನಿಧಾನ. ದ್ವಿತಿಯಾರ್ಧದಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇದ್ದಿದ್ದರೆ “ಬುದ್ಧಿವಂತರು’ ಮೆಚ್ಚಿಕೊಳ್ಳುತ್ತಿದ್ದರು.
ಆದರೆ, ಹೆಚ್ಚಾಗಿ ಮೆಚ್ಚಿಕೊಳ್ಳುವಂತಹ ಅಂಶಗಳು ಕಡಿಮೆ. ಬಹುತೇಕ ಒಂದು ಫ್ಲ್ಯಾಟ್ ಮತ್ತು ಆಸ್ಪತ್ರೆ ಸುತ್ತವೇ ಕಥೆ ಸಾಗಿದೆ. ನಾಯಕನಿಗೆ ಮನೋಖಾಯಿಲೆ ಇದೆ ಎಂಬುದನ್ನು ಮೊದಲ ದೃಶ್ಯದಲ್ಲೇ ಗೊತ್ತಾಗುವಷ್ಟರ ಮಟ್ಟಿಗೆ ನಿರ್ದೇಶಕರು ಕೆಲಸ ಮಾಡಿರುವುದು ಅವರ ಜಾಣತನ. ಈ ರೀತಿಯ ಚಿತ್ರಗಳಿಗೆ ಹಿನ್ನೆಲೆ ಸಂಗೀತವೂ ಮುಖ್ಯ ಪಾತ್ರವಹಿಸಬೇಕು. ಆದರೆ, ಹಿನ್ನೆಲೆ ಸಂಗೀತವೇ ಚಿತ್ರದ ಹಿನ್ನೆಡೆ ಎನ್ನಬಹುದು. ಕಥೆಯ ಎಳೆ ಚೆನ್ನಾಗಿದೆ.
ಅದಕ್ಕೆ ತಕ್ಕಂತಹ ಚುರುಕುತನದ ಸಂಭಾಷಣೆಯಾಗಲಿ, ಕುತೂಹಲಕ್ಕೆ ಕಾರಣವಾಗುವ ಅಂಶಗಳಾಗಲಿ ಇದ್ದಿದ್ದರೆ, “ಮನೋರಥ’ನನ್ನ ಮನಸಾರೆ ಒಪ್ಪಬಹುದಿತ್ತು. ಆದರೆ ಅವೆಲ್ಲವನ್ನು ಸಾಧ್ಯವಾಗಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಸಾಕಷ್ಟು ತಪ್ಪುಗಳು ಇಲ್ಲಿ ಕಂಡುಬಂದರೂ, ಅವೆಲ್ಲವನ್ನೂ ಬದಿಗೊತ್ತಿ ನೋಡುವುದಾದರೆ, ಮಾನಸಿಕ ರೋಗಿಯೊಬ್ಬ ಭ್ರಮೆ ಮತ್ತು ಭಯದ ಕಲ್ಪನೆಯಲ್ಲೇ ಬದುಕು ಸವೆಸುವ ಪರಿಯನ್ನು ಪರಿ ಪರಿಯಾಗಿ ತೋರಿಸಿದ್ದಾರೆ.
ಅವನ ವಿಚಿತ್ರ ವರ್ತನೆ, ಯಾರೋ ಒಡೆಯುತ್ತಾರೆ ಎಂಬ ಭಯ, ಇನ್ಯಾರೋ ಸಾಯಿಸೋಕೆ ಬರ್ತಾರೆ ಎಂಬ ಗಾಬರಿಯ ಅಂಶಗಳು ಸ್ವಲ್ಪ ಮಟ್ಟಿಗೆ ನೈಜತೆಗೆ ದೂಡುತ್ತವೆ. ಬುದ್ಧಿವಂತರು ಅದನ್ನು ಒಪ್ಪಿಕೊಂಡರೆ ಮಾತ್ರ “ಮನೋರಥ’ ಶ್ರಮ ಸಾರ್ಥಕ. ಅಂತಹ ವ್ಯಕ್ತಿ ಹೇಗೆಲ್ಲಾ ವರ್ತಿಸುತ್ತಾರೆ ಎಂಬ ಕುತೂಹಲವಿದ್ದರೆ ಒಮ್ಮೆ “ಮನೋರಥ’ ನೋಡುವ ಮನಸ್ಸು ಮಾಡಬಹುದು. “ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.
ಮನುಷ್ಯನ ಮನಸ್ಥಿತಿ ಮೇಲೆ ಸಾಗುವ ಕಥೆಯಲ್ಲಿ ಒಬ್ಬ ಮನೋ ವಿಕೃತಿವುಳ್ಳ (ಸೈಕೋ ಫೋಬಿಯಾ) ವ್ಯಕ್ತಿ ತನ್ನ ಸ್ಥಿಮಿತ ಕಳೆದುಕೊಂಡರೆ ಹೇಗೆಲ್ಲಾ ವರ್ತಿಸುತ್ತಾನೆ ಎಂಬುದರ ಮೇಲೆ ಚಿತ್ರ ಮೂಡಿಬಂದಿದೆ. ನಾಯಕ ಚಿಕ್ಕಂದಿನಲ್ಲೇ ಒಂದು ಭಯಂಕರ ಘಟನೆ ನೋಡಿ ಬೆಚ್ಚಿಬಿದ್ದಿರುತ್ತಾನೆ. ಅವನು ದೊಡ್ಡವನಾದ ಮೇಲೂ ಆ ಭಯ ಅವನೊಳಗೆ ಕಾಡುತ್ತಲೇ ಇರುತ್ತೆ.
ಒಬ್ಬನೇ ಸ್ನಾನ ಮಾಡುವಾಗ, ಮಲಗಿರುವಾಗ, ಎಲ್ಲೋ ನಡೆದು ಹೋಗುವಾಗ ಯಾರೋ ಅವನನ್ನು ಹಿಂಬಾಲಿಸಿದಂತೆ, ಬಂದು ಒಡೆದಂತೆ ಭಾಸವಾಗುತ್ತಲೇ ಇರುತ್ತೆ. ತನ್ನ ಆತ್ಮರಕ್ಷಣೆಗೆ ಚಾಕು ಹಿಡಿದು ಓಡಾಡುವ ಅವನು ಕೊಲೆ ಮಾಡಿಬಿಟ್ಟೆ ಎಂಬ ಭಯದ ನೆರಳಲ್ಲೂ ನರಳುತ್ತಾನೆ. ಯಾಕೆ ಹಾಗೆಲ್ಲ ಮಾಡ್ತಾನೆ. ಅವನ ಖಾಯಿಲೆ ಸರಿಹೋಗುತ್ತಾ ಇಲ್ಲವಾ ಎಂಬ ಪ್ರಶ್ನೆ ಇದ್ದರೆ, ಉತ್ತರ ಕಂಡುಕೊಳ್ಳಲು ಸಿನಿಮಾ ನೋಡುವ ಧೈರ್ಯ ಮಾಡಲ್ಲಡ್ಡಿಯಿಲ್ಲ.
ರಾಜ್ ಚರಣ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಬಾಡಿಲಾಂಗ್ವೇಜ್ ಕಡೆ ಇನ್ನಷ್ಟು ಗಮನಹರಿಸಿದರೆ, ಮುಂದೆ ಒಳ್ಳೆಯ ಭವಿಷ್ಯವಿದೆ. ಅಂಜಲಿ ನಟನೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದಂತಿದೆ. ರಘುರಾಮ ಕೊಪ್ಪಲು, ವಿಠ್ಠಲ್‌ಭಟ್ ಇತರರು ಇರುವಷ್ಟು ಕಾಲ ಪಾತ್ರಕ್ಕೆ ಮೋಸ ಮಾಡಿಲ್ಲ. ಚಂದ್ರು ಓಬಯ್ಯ ಸಂಗೀತದಲ್ಲಿ ಯಾವ ಹಾಡೂ ನೆನಪಲ್ಲುಳಿಯಲ್ಲ. ಮುರಳಿ ಕ್ರಿಶ್ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಮನೋರಥ
ನಿರ್ಮಾಣ, ನಿರ್ದೇಶನ: ಪ್ರಸನ್ನ ಕುಮಾರ್
ತಾರಾಗಣ: ರಾಜ್‌ಚರಣ್, ಅಂಜಲಿ, ವಿಠಲ್‌ಭಟ್, ರಘುರಾಮನ ಕೊಪ್ಪ
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.