ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುಗಳ ಜೀವನ ಚಿತ್ರಣ
Team Udayavani, Jun 12, 2022, 8:56 AM IST
12ನೇ ಶತಮಾನ ಶಿವಶರಣ ಶ್ರೀ ಅಲ್ಲಮಪ್ರಭುಗಳ ಬಗ್ಗೆ ಅನೇಕರು ಕೇಳಿರುತ್ತೀರಿ. ಆಧ್ಯಾತ್ಮ ಜಗತ್ತಿನಲ್ಲಿ ತನ್ನದೇ ಆದ ಸಾಧನೆಯ ಮೂಲಕ ಕಲ್ಯಾಣದ ಶೂನ್ಯಪೀಠ ಸಿಂಹಾಸನಾಧೀಶ್ವರನಾಗಿ ಶಿವತತ್ವವನ್ನು ಪ್ರಚಾರಪಡಿಸಿದ ಶ್ರೀ ಅಲ್ಲಮ ಪ್ರಭುಗಳ ಜೀವನಗಾಥೆಯನ್ನು ದೃಶ್ಯರೂಪದಲ್ಲಿ ತೆರೆಮೇಲೆ ತರಲಾದ ಚಿತ್ರ “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಸಿನಿಮಾ ಈ ವಾರ ತೆರೆಗೆ ಬಂದಿದೆ.
ಚಿತ್ರದ ಹೆಸರೇ ಹೇಳುವಂತೆ, ಇದು ಅಲ್ಲಮಪ್ರಭುಗಳ ಹುಟ್ಟು, ಜೀವನ, ಸಾಧನೆಯನ್ನು ತೆರೆಮೇಲೆ ತೆರೆದಿಡುವ ಚಿತ್ರ. ಪ್ರಭುದೇವ ಎಂಬ ಹುಡುಗನ ಆಧ್ಯಾತ್ಮಿಕ ಸೆಳೆತ, ಮಾಯಾದೇವಿಯ ಬಲೆಯಿಂದ ಪಾರಾದ ರೀತಿ, ಬಳಿಕ ಅಲ್ಲಮ ಪ್ರಭುವಾದ ಬಗೆ, ಅಲ್ಲಮನ ಲೋಕ ಸಂಚಾರ, ಆಧ್ಯಾತ್ಮ ಸಾಧನೆ, ಕಲ್ಯಾಣದ ಶೂನ್ಯಪೀಠ ಸಿಂಹಾಸನಾಧೀಶ್ವರನಾಗಿ ಬೆಳಕು ತೋರಿದ ರೀತಿ ನಂತರ ಶ್ರೀಶೈಲಕ್ಕೆ ತೆರಳಿ ಶಿವೈಕ್ಯನಾದದ್ದು, ಹೀಗೆ… ಅಲ್ಲಮಪ್ರಭುಗಳ ಜೀವನದ ಪ್ರಮುಖ ಘಟ್ಟಗಳನ್ನು “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಸಿನಿಮಾದಲ್ಲಿ ತೆರೆಮೇಲೆ ಹೇಳಲಾಗಿದೆ.
ಅಲ್ಲಮ ಪ್ರಭುಗಳ ಸುದೀರ್ಘ ಆಧ್ಯಾತ್ಮಿಕ ಜೀವನಯಾನವನ್ನು ಚಿಕ್ಕದಾಗಿ, ಚೊಕ್ಕದಾಗಿ ಸಿನಿಮಾ ರೂಪದಲ್ಲಿ ತೆರೆಮೇಲೆ ಹೇಳಿರುವ ಚಿತ್ರತಂಡದ ಪ್ರಯತ್ನ ಪ್ರಶಂಸನಾರ್ಹ. ಆದರೆ ಇಂಥ ವಿಷಯವನ್ನು ಸಿನಿಮಾವಾಗಿಸಿ ತೆರೆಮೇಲೆ ತರುವಾಗ ಚಿತ್ರತಂಡಕ್ಕೆ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳು ಮುಖ್ಯವಾಗುತ್ತದೆ. ಅದರಲ್ಲೂ ಕಥೆಯ ಜೊತೆಗೆ, ಚಿತ್ರಕಥೆ, ನಿರೂಪಣೆ ಮತ್ತು ಹಿನ್ನೆಲೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡದಿದ್ದರೆ, ತೆರೆಮೇಲೆ ಹೇಳುವ ವಿಷಯ ಗೌಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಸಿನಿಮಾದಲ್ಲೂ ಅಂಥದ್ದೇ ಕೆಲವು ಲೋಪಗಳು ಅಲ್ಲಲ್ಲಿ ಹಿನ್ನಡೆಯಾಗಿವೆ.
ಅದರಲ್ಲೂ 12ನೇ ಶತಮಾನದ ಜನ-ಜೀವನ, ಉಡುಗೆ-ತೊಡುಗೆ, ಸಾಮಾಜಿಕ ಸ್ಥಿತಿ-ಗತಿ, ಭಾಷಾ ಬಳಕೆಯ ಬಗ್ಗೆ ಒಂದಷ್ಟು ಸಂಶೋಧನೆ ಮತ್ತು ಅಧ್ಯಯನದ ಕೊರತೆ ಚಿತ್ರದಲ್ಲಿ ಅಲ್ಲಲ್ಲಿ ಎದ್ದು ಕಾಣುತ್ತದೆ. ಒಂದೊಳ್ಳೆಯ ಕಥಾಹಂದರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ಹೇಳುವ ಸಾಧ್ಯತೆಯನ್ನು ಚಿತ್ರತಂಡ ಪರಿಪೂರ್ಣವಾಗಿ ಬಳಸಿಕೊಂಡಂತೆ ಕಾಣುವುದಿಲ್ಲ.
ಇನ್ನು ಚಿತ್ರದಲ್ಲಿ ನಾಯಕ ನಟ ಸಚಿನ್ ಸುವರ್ಣ ಅಲ್ಲಮ ಪ್ರಭುವಾಗಿ ಇಡೀ ಸಿನಿಮಾವನ್ನು ಆರಂಭದಿಂದ ಅಂತ್ಯದವರೆಗೂ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ನೀನಾಸಂ ಅಶ್ವಥ್ ಬಸವಣ್ಣನಾಗಿ, ನಾರಾಯಣಸ್ವಾಮಿ ಸಿದ್ಧರಾಮನಾಗಿ ಪ್ರಮುಖ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಸಂಭ್ರಮ ಶ್ರೀ, ವಿಕ್ರಂ ಪ್ರಭು ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡೆಬಹುದಿತ್ತು. ಸಂಕಲನ ಕಾರ್ಯ ಮತ್ತು ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದ್ದು, ಚಿತ್ರದ ಕೆಲ ತಪ್ಪುಗಳನ್ನು ಮರೆಮಾಚಿಸುತ್ತದೆ.
ಒಟ್ಟಾರೆ ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಒಂದು ಒಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಬ್ಯಾಕ್ ಟು ಬ್ಯಾಕ್ ಆ್ಯಕ್ಷನ್, ಲವ್ ಕಂ ರೊಮ್ಯಾಂಟಿಕ್ ಸಿನಿಮಾಗಳಿಂದ ಬಳಲಿ, ಹೊಸತನ ಬೇಕೆನ್ನುವ ಪ್ರೇಕ್ಷಕರು ಒಮ್ಮೆ ಅಲ್ಲಮನ ದರ್ಶನ ಮಾಡಿ ಬರಲು ಅಡ್ಡಿಯಿಲ್ಲ.
ಜಿ. ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.