ವ್ಯರ್ಥ ಸಾರಥಿ!
Team Udayavani, May 18, 2018, 5:56 PM IST
“ಅಪ್ಪ, ಅಮ್ಮ ಸಾಕಿ ಬೆಳೆಸಿದ ಮಾತ್ರಕ್ಕೆ ಮಕ್ಕಳು ಸಾಧನೆ ಮಾಡ್ತಾರೆ ಅನ್ನೋದು ತಪ್ಪು. ಪ್ರೀತಿಯಿಂದ ಯಾರೇ ಸಾಕಿ, ಬೆಳೆಸಿದರೂ ಸಾಧನೆ ಮಾಡ್ತಾರೆ…’ ಈ ಡೈಲಾಗ್ ಬರುವ ಹೊತ್ತಿಗೆ, ಅನಾಥ ಹುಡುಗನೊಬ್ಬ, ಶ್ರೀಮಂತನ ಕೈಗೆ ಸಿಕ್ಕು, ಓದು ಕಲಿತು ದಕ್ಷ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ದುಷ್ಟರನ್ನು ಸದೆಬಡಿಯುವ ಪ್ರಾಮಾಣಿಕ ಅಧಿಕಾರಿ ಅವನು. ಅಂತಹ ಅಧಿಕಾರಿಯೇ ತನ್ನನ್ನು ಸಾಕಿ, ಸಲುಹಿದಾತನ ಮೇಲೆ ಗುಂಡು ಹಾರಿಸಿಬಿಡುತ್ತಾನೆ. ಅದಕ್ಕೆ ಕಾರಣವೇನು ಎಂಬುದೇ ಚಿತ್ರದೊಳಗಿನ ಸಸ್ಪೆನ್ಸ್.
ಹಾಗಂತ, ಚಿತ್ರದುದ್ದಕ್ಕೂ ಅದೇ ಸಸ್ಪೆನ್ಸ್ ಉಳಿದಿದೆ ಅಂದುಕೊಳ್ಳೋದು ತಪ್ಪು. ಆರಂಭದಲ್ಲಿ ಶುರುವಾಗುವ ಚಿತ್ರ, ಮಹತ್ವದ್ದೇನನ್ನೋ ತೋರಿಸುತ್ತದೆ ಅಂತ ನಿರೀಕ್ಷೆ ಇಟ್ಟುಕೊಂಡರೆ, ಅದಕ್ಕೂ ನಿರಾಸೆ. ಇದೊಂದು ಪೊಲೀಸ್ ಅಧಿಕಾರಿಯ ಕಥೆ ಮತ್ತು ವ್ಯಥೆ. ಈಗಾಗಲೇ ಇಂತಹ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಕಥೆಯ ಒನ್‌ಲೈನ್ ಚೆನ್ನಾಗಿದೆ. ಅದಕ್ಕೆ ನಿರೂಪಣೆಯ ಕೊರತೆ ಎದುರಾಗಿದೆ. ಹಾಗಾಗಿ ನೋಡುಗರಿಗೆ ತಾಳ್ಮೆ ಪರೀಕ್ಷಿಸುವುದು ಸುಳ್ಳಲ್ಲ.
ಪೊಲೀಸ್ ಕಥೆಯಲ್ಲಿ ಹೊಡಿ-ಬಡಿ, ಚೇಸಿಂಗ್, ಮೈಂಡ್‌ಗೆಮ್ ಇತ್ಯಾದಿ ವಿಷಯಗಳು ಇರಲೇಬೇಕು. ಆದರೆ, ಇಲ್ಲಿ ಅಂಥದ್ದನ್ನು ಕಾಣುವುದು ಕಷ್ಟ. ಅಲ್ಲಲ್ಲಿ ಗುಂಡಿನ ಸದ್ದು ಬಿಟ್ಟರೆ, ಬೇರೇನೂ ನಿರೀಕ್ಷಿಸುವಂತಿಲ್ಲ. ನಿಷ್ಠಾವಂತ ಪೊಲೀಸ್ ಅಧಿಕಾರಿ ಮತ್ತು ಕಳ್ಳರ ನಡುವಿನ ಮಾತಿನ ಸುರಿಮಳೆಯಲ್ಲೇ ಅರ್ಧ ಸಿನಿಮಾ ಮುಗಿದು ಹೋಗುತ್ತೆ. ಭೂಗತ ಲೋಕದಲ್ಲಿರುವ ಖದೀಮರನ್ನು ಎನ್‌ಕೌಂಟರ್ ಮಾಡುವುದೊಂದೇ ಇಲ್ಲಿ ನಾಯಕನ ಪರಮ ಗುರಿ.
ಹಾಗಾಗಿ ಸಿಕ್ಕವರನ್ನು ಎನ್‌ಕೌಂಟರ್ ಮಾಡುತ್ತಲೇ, ತನ್ನ ಪೊಲೀಸ್ ಖದರ್ ತೋರಿಸುತ್ತಾನೆ. ಕೆಲವೆಡೆ ಕಾಣುವ ದೃಶ್ಯಗಳು, ಆಡುವ ಮಾತುಗಳು ತುಂಬಾ ತಮಾಷೆಯೆನಿಸಿ, ಚಿತ್ರದ ಗಂಭೀರತೆಯನ್ನೇ ಹಾಳುಗೆಡವುತ್ತವೆ. ಸಾಮಾನ್ಯವಾಗಿ ಚಿತ್ರದಲ್ಲಿ ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಹೀಗೆ ಬಂದು ಹಾಗೆ, ಮಾಯವಾಗುತ್ತೆ. ಆದರೆ, ಇಲ್ಲಿನ ಫ್ಲ್ಯಾಶ್‌ಬ್ಯಾಕ್ ಕಥೆಯಲ್ಲೇ ಇನ್ನೊಂದು ಚಿತ್ರ ನೋಡಿದ ಅನುಭವ ಆಗುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕರು ಅಳೆದು, ಎಳೆದು ತೋರಿಸಿದ್ದಾರೆ.
ಒಬ್ಬ ದಕ್ಷ ಪೊಲೀಸ್ ಅಧಿಕಾರಿ, ಭೂಗತ ಪಾತಕಿಗಳನ್ನು ಬೆನ್ನತ್ತುವ ದೃಶ್ಯಗಳು ಹಾಸ್ಯಕ್ಕೆ ಎಡೆಮಾಡಿಕೊಟ್ಟಿವೆ. ಅಸಲಿಗೆ, ಭೂಗತ ಪಾತಕಿಗಳನ್ನು ತುಂಬಾ ಸುಲಭವಾಗಿ ಹಿಡಿದು ಬಗ್ಗು ಬಡಿಯುವ ಸೀನ್‌ಗಳು ನಗು ತರಿಸದೇ ಇರದು. ಇಲ್ಲಿ ಗನ್‌ನೊಳಗಿನ ಬುಲೆಟ್ ಸದ್ದುಗಳು ಬಿಟ್ಟರೆ ಬೇರ್ಯಾವ ಸದ್ದೂ ಇಲ್ಲ. ಹಾಗಾಗಿ, “ಪಾರ್ಥ ಸಾರಥಿ’ ತೆರೆ ಮೇಲೆ ಏನೆಲ್ಲಾ ಹೋರಾಡಿದರೂ ಅದು ವ್ಯರ್ಥವಾಗಿಯೇ ಗೋಚರಿಸುತ್ತದೆ ವಿನಃ, ಅದಕ್ಕೊಂದು ಅರ್ಥ ಹುಡುಕುವುದು ಕಷ್ಟಸಾಧ್ಯ.
ಎಲ್ಲೋ ಮೂಲೆಯಲ್ಲಿ ಬಿದ್ದ ಅನಾಥ ಹುಡುಗನನ್ನು, ಶ್ರೀಮಂತನೊಬ್ಬ ಸಾಕಿ, ಸಲುಹಿ ಪೊಲೀಸ್ ಅಧಿಕಾರಿಯನ್ನಾಗಿಸುತ್ತಾನೆ. ಆ ಪೊಲೀಸ್ ಅಧಿಕಾರಿಯದ್ದು, ಭೂಗತ ಪಾತಕರನ್ನು ಎನ್‌ಕೌಂಟರ್ ಮಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ಇಲ್ಲೂ ಬೊಗಸೆಯಷ್ಟು ಮೌಲ್ಯಗಳಿವೆ, ಹಿಡಿಯಷ್ಟು ಸೆಂಟಿಮೆಂಟ್ ತುಂಬಿಕೊಂಡಿದೆ. ಅಂಗೈನಷ್ಟು ಗೆಳೆತನ ಮೇಳೈಸಿದೆ. ಆ ನಡುವೆ ಒಂದು ಪ್ರೀತಿಯ ಕಥೆ ಶುರುವಾಗುವ ಹೊತ್ತಿಗೆ, ಮತ್ತದೇ ಗುಂಡು, ಸದ್ದುಗಳಿಗೆ ಸಜ್ಜಾಗುತ್ತಾನೆ.
ಕೊನೆಗೆ ತಾನು ಸಾಕಿದವನ ಮೇಲೆಯೇ ಗುಂಡು ಹಾರಿಸುತ್ತಾನೆ. ಹಾಗಾದರೆ, ಆ ಸಾಕಿದ ವ್ಯಕ್ತಿ ಯಾರು? ಅದನ್ನು ತಿಳಿದುಕೊಳ್ಳುವ ಕುತೂಹಲವೇನಾದರೂ ಇದ್ದರೆ, “ಪಾರ್ಥ ಮತ್ತು ಸಾರಥಿ’ಯ ಸಂಬಂಧಗಳ ಮೌಲ್ಯ ತಿಳಿದು ಬರಬಹುದು. ರೇಣುಕುಮಾರ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸರಿ ಹೊಂದಿದ್ದಾರೆ. ಆದರೆ, ನಟನೆಯಲ್ಲಿನ್ನೂ ಸರಿಯಾಗಬೇಕಿದೆ. ಡೈಲಾಗ್ ಹರಿಬಿಟ್ಟಾಕ್ಷಣ, ನಟನೆ ಸಲೀಸಾಗುತ್ತೆ ಎಂಬ ವಿಶ್ವಾಸ ಇರುವುದರಿಂದಲೋ ಏನೋ, ಅಲ್ಲಲ್ಲಿ ಮಾಸ್ ಡೈಲಾಗ್‌ಗಳನ್ನು ಮನಬಂದಂತೆ ಹರಿಬಿಟ್ಟಿರುವುದೇ ಹೆಚ್ಚುಗಾರಿಕೆ.
ನಾಯಕಿ ಅಕ್ಷತಾಗೆ ಹಾಡುಗಳು ಸಿಕ್ಕಿರುವುದೊಂದೇ ಸಮಾಧಾನ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ವಿಕ್ಟರ್ ಲೋಗಿದಸನ್ ಸಂಗೀತದಲ್ಲಿ ಹಾಡುಗಳ್ಯಾವೂ ಗುನುಗುವಂತಿಲ್ಲ. ಹಿನ್ನೆಲೆ ಸಂಗೀತವೂ ವ್ಯರ್ಥ. ನಿಲೇಶ್ ಕೆಣಿ ಛಾಯಾಗ್ರಹಣದಲ್ಲಿ ಪಾರ್ಥ ಹಾಗೂ ಸಾರಥಿಯರ ಆರ್ಭಟವನ್ನು ಚಂದಗಾಣಿಸಿದ್ದಾರೆ.
ಚಿತ್ರ: ಪಾರ್ಥ ಸಾರಥಿ
ನಿರ್ಮಾಣ-ನಿರ್ದೇಶನ: ರಾಬರ್ಟ್ ನವರಾಜ್
ತಾರಾಗಣ: ರೇಣುಕುಮಾರ್,ಅಕ್ಷತಾ ಶ್ರೀಧರ್, ಪ್ರವೀಣ್ ಶೆಟ್ಟಿ, ಸುಹಾಸ್, ಮಂಜುನಾಥ್ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.