ನನ್ನ ಪ್ಯಾನ್ ಇಂಡಿಯಾ ಕಲ್ಪನೆಯೇ ಬೇರೆ : ಇಫಿ ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ
ಇಫಿ ಚಿತ್ರೋತ್ಸವದಲ್ಲಿ ಕನ್ನಡದ ನಟ, ನಿರ್ದೇಶಕನಿಗೆ ಇಷ್ಟೊಂದು ಆದ್ಯತೆ ಸಿಕ್ಕಿದ್ದೇ ಕಡಿಮೆ..
Team Udayavani, Nov 24, 2022, 8:28 PM IST
ಪಣಜಿ: ಸಿನಿಮಾಗಳ ಯಶಸ್ಸು ವೆಚ್ಚಮಾಡುವ ದೊಡ್ಡ ಮೊತ್ತದಿಂದಲ್ಲ; ಬದಲಾಗಿ ಎಲ್ಲರನ್ನೂ ತಲುಪಬಹುದಾದಂಥ ಅನನ್ಯ ಕಥಾವಸ್ತುವಿನಿಂದ ಎಂದಿರುವ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ, ನನ್ನ ಪಾನ್ ಇಂಡಿಯಾ ಪರಿಕಲ್ಪನೆಯೇ ಬೇರೆ ಎಂದರು.
ಇಫಿ ಚಿತ್ರೋತ್ಸವದ ಸಂವಾದದಲ್ಲಿ ಪಾಲ್ಗೊಂಡ ಅವರು, ಕಥೆಗೆ ಬೇಡುವಷ್ಟು ಹಣವನ್ನು ಹಾಕಬೇಕು. ಬರೀ ಹಣ ಸುರಿದು ಸಿನಿಮಾವನ್ನು ಗೆಲ್ಲಿಸುತ್ತೇನೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ಹಾಗೆ ನೋಡುವುದಾದರೆ ಕಾಂತಾರವೇ ನನ್ನ ದೊಡ್ಡ ಬಜೆಟ್ ಸಿನಿಮಾ. ಆದರೆ ಅದು ಗೆದ್ದದ್ದು ಜನರ ಸಂವೇದನೆಯನ್ನು ತಲುಪಿದ್ದರಿಂದಲೇ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ನನ್ನ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆಯೇ ವಿಭಿನ್ನ. ಪಾನ್ ಇಂಡಿಯಾಕ್ಕೆ ನಿರ್ದಿಷ್ಟ ಸೂತ್ರವಿಲ್ಲ. ಒಂದು ಸಿನಿಮಾ ಎಲ್ಲ ಭಾಷೆ, ಪ್ರಾಂತ್ಯ ಮೀರಿ ಎಲ್ಲ ಬಗೆಯ ಪ್ರೇಕ್ಷಕರನ್ನು ತಲುಪಿದರೆ ಅದೇ ಪ್ಯಾನ್ ಇಂಡಿಯಾ ಸಿನಿಮಾ. ಎಲ್ಲರೂ ತಮ್ಮ ತಮ್ಮ ಸಂಸ್ಕೃತಿ, ತಮ್ಮ ಪರಿಸ್ಥಿತಿಗೆ ಹೊಂದಿಸಿಕೊಂಡು, ಹೋಲಿಸಿಕೊಂಡು ಅನುಭವಿಸಬೇಕು. ಅದು ಕಾಂತಾರ ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ರಿಷಬ್.
ನನ್ನ ದೃಢವಾದ ನಂಬಿಕೆಯೇ ಹೆಚ್ಚು ಸ್ಥಳೀಯ, ಪ್ರಾದೇಶಿಕವಾಗುವುದೆಂದರೆ ಹೆಚ್ಚು ಜನರನ್ನು ತಲುಪವುದು. ಇದಕ್ಕೆ ಪ್ರಾದೇಶಿಕ ಅಥವಾ ಭಾಷೆಯ ಬೇಲಿಯಿರದು. ಅದೇ ಜಾಗತಿಕವಾಗಿ ತಲುಪುವುದು ಎಂದರ್ಥ. ಆ ಹಿನ್ನೆಲೆಯಲ್ಲಿ ಈ ಚಿತ್ರವನ್ನೂ ಮಾಡಿದೆ. ಇಷ್ಟು ದೊಡ್ಡ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ. ಆದರೆ ಜನರು ಅದನ್ನು ನಿಜವಾಗಿಸಿದರು ಎಂದರು.
ಕಾಂತಾರ ಸಿನಿಮಾ ಬರೀ ಶಿವ, ಮುರಳಿಯ ಸಂಘರ್ಷದ ಕಥೆಯಲ್ಲ; ಪ್ರಕೃತಿ ಮತ್ತು ಮನುಷ್ಯನೊಡನೆಯ ಸಹಜೀವನದ ಸಾಧ್ಯತೆಯೂ ಇದೆ. ಈ ಕಥೆ ಯಾವುದೂ ನನಗೆ ಹೊಸತಲ್ಲ. ಅದೇ ಹಳ್ಳಿಯಿಂದ ಬಂದ ನನಗೆ ಇವೆಲ್ಲವನ್ನೂ ಅನುಭವಿಸಿದ್ದೇನೆ. ದೈವಾರಾಧನೆಯಿಂದ ಹಿಡಿದು ಅರಣ್ಯ ದ ಸಮಸ್ಯೆವರೆಗೂ ನೈಜ. ಹಾಗೆಯೇ ಇದರಲ್ಲಿನ ಬಹುತೇಕ ಪಾತ್ರಗಳು ನಾನು ಕಂಡ ಮತ್ತು ನನ್ನ ಸುತ್ತಲಿನದ್ದೇ. ಚಿಕ್ಕಂದಿನಿಂದಲೂ ಕಂಬಳ, ಸಂಸ್ಕೃತಿಯನ್ನು ಪರದೆಯ ಮೇಲೆ ತರಬೇಕೆಂಬ ತುಡಿತವಿತ್ತು. ಅದು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಈಡೇರಿದೆ. ಸರಕಾರಿ ಕನ್ನಡ ಶಾಲೆಯ ಬಳಿಕ ನಾನು ನಟನೆಗೆ ಇಳಿದೆ. ಕೆಲವು ಹಾಸ್ಯಪಾತ್ರಗಳೇ ಹೆಚ್ಚಾದವೆನಿಸಿತ್ತು. ಈ ಕಾಮಿಡಿಯನ್ ನೊಳಗಿನ ಆಯಂಗ್ರಿ ಯಂಗ್ ಮ್ಯಾನ್ ಕಾಂತಾರವನ್ನು ಸೃಷ್ಟಿಸಿದ ಎಂದರು ರಿಷಬ್ ಮತ್ತೊಂದು ಪ್ರಶ್ನೆಗೆ.
ಕಾಂತಾರ ಕಥಾವಸ್ತು ಹೀಗೆ ಜಾಗತಿಕವಾಗಿ ಎಲ್ಲರನ್ನೂ ತಲಪಲು ಸಾಧ್ಯ ಎಂದು ಸಿನಿಮಾ ರೂಪಿಸುವ ಮೊದಲು ಎನಿಸಿತ್ತೇ ಎಂಬ ಪ್ರಶ್ನೆಗೆ, ನಮ್ಮದು ಕೃಷಿ ಪ್ರಧಾನವಾದ ದೇಶ. ಎಲ್ಲ ಕಡೆಯೂ ಆಯಾ ಪ್ರಾಂತ್ಯ ಅನುಸಾರ ನಂಬಿಕೆಗಳು, ಆಚರಣೆಗಳು, ಸಂಪ್ರದಾಯ, ಸಂಸ್ಕೃತಿ ರೂಪುಗೊಂಡಿವೆ. ದೈವಾರಾಧನೆ, ಯಕ್ಷಗಾನ ಎಲ್ಲವೂ ನಮ್ಮ ಊರಿನ ಸಂಸ್ಕೃತಿ. ಅದಕ್ಕೂ ಕೃಷಿಗೂ ಸಂಬಂಧವಿದೆ. ಹಾಗಾಗಿ ಕೃಷಿ ಪ್ರಧಾನವಾದ ಎಲ್ಲ ಸಮುದಾಯಗಳಿಗೂ ತಲುಪಬಹುದು ಎಂಬ ನಂಬಿಕೆಯಿಂದ ಈ ಸಿನಿಮಾ ಮಾಡಿದೆ. ಅದು ಫಲಿಸಿದೆ ಎಂದರು.
ಸಿನಿಮಾ ಕ್ಷೇತ್ರದಲ್ಲಿ ನಟನಾಗಿ ಉಳಿಯಲು ಇಚ್ಛಿಸುತ್ತೀರೋ ನಿರ್ದೇಶಕನಾಗಿಯೋ ಎಂದು ಕೇಳಿದ್ದಕ್ಕೆ, ನಿರ್ದೇಶಕನಾಗಿ ಎಂದರು. ಜತೆಗೆ ಕನ್ನಡವಲ್ಲದೇ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೂ, ಇಲ್ಲ. ನನಗೆ ಕನ್ನಡದ ಪ್ರೇಕ್ಷಕರಿಗೆ ಕನ್ನಡದ ಕಥೆಗಳನ್ನು ಹೇಳಬೇಕಿದೆ. ಅದೇ ನನ್ನ ಕರ್ಮಭೂಮಿ. ಅದಕ್ಕೇ ಮೊದಲು ಆದ್ಯತೆ. ಅವುಗಳೇ ಜಾಗತಿಕ ಮಟ್ಟದಲ್ಲೂ ತಲುಪಿದರೆ ಸಂತೋಷ ಎಂದರು.
ನಟ ರಜನೀಕಾಂತರಿಗೆ ಸಿನಿಮಾ ನಿರ್ದೇಶನ ಮಾಡುತ್ತೀರಾ ಎಂದು ಕೇಳಿದ್ದಕ್ಕೆ, ಅವಕಾಶ ಸಿಕ್ಕರೆ ಯಾರು ಇಲ್ಲ ಎನ್ನುತ್ತಾರೆ. ಜತೆಗೆ ಅವರೂ ಕನ್ನಡದ ಮೂಲದವರೇ ಎಂದು ಉತ್ತರಿಸಿದರು.
ಹೊಸಬರು ಬರಲಿ ಅವರ ಕತೆಗಳೇ ಬರಲಿ
ಜನರಿಗೆ ಕಥಾವಸ್ತುವೇ ಮುಖ್ಯ. ಫಾರ್ಮುಲಾ ಅಲ್ಲ. ಚಿಕ್ಕ ಭಾಷೆ, ದೊಡ್ಡ ಭಾಷೆಯೂ ಅಲ್ಲ. ಹೆಚ್ಚು ವೆಚ್ಚ, ಕಡಿಮೆ ವೆಚ್ಚವೂ ಅಲ್ಲ. ಹಾಗಾಗಿ ಹೊಸ ಹೊಸ ನಿರ್ದೇಶಕರು ಬರಬೇಕು. ಅವರು ತಮ್ಮದೇ, ತಮ್ಮ ಮೂಲದ, ತಮ್ಮೂರಿನ ಕಥೆಗಳನ್ನು ಹೇಳಬೇಕು. ಆಗ ಭಾರತೀಯ ಸಿನಿಮಾ ಮತ್ತಷ್ಟು ವಿಶಿಷ್ಟವಾಗಬಲ್ಲದು ಎಂಬುದು ಮತ್ತೊಂದು ಪ್ರಶ್ನೆಗೆ ರಿಷಬ್ ರ ಅಭಿಪ್ರಾಯ.
ಸಿನಿಮಾದ ಅಂತ್ಯ (ಕ್ಲೈಮ್ಯಾಕ್ಸ್) ಬಹಳ ಮುಖ್ಯ. ಯಾಕೆಂದರೆ ಪ್ರೇಕ್ಷಕ ಕೊನೆಗೆ ತೆಗೆದುಕೊಂಡು ಹೋಗುವುದು ಅದನ್ನೇ. ಆದ ಕಾರಣ ಹೆಚ್ಚು ಪ್ರಭಾವಶಾಲಿಯೂ ಆಗಿರುವುದರಿಂದ ಪರಿಣಾಮಕಾರಿಯಾಗಿರಲೇಬೇಕು. ಕಥೆಯ ಅಂತ್ಯದ ಜತೆಗೆ ನಾವು ಹೇಳುವುದೂ ಪ್ರೇಕ್ಷಕಕನ್ನು ತಟ್ಟಬೇಕು. ಅದಕ್ಕೇ ಹೆಚ್ಚು ನಾನು ಯಾವಾಗಲೂ ಸಿನಿಮಾದ ಅಂತ್ಯದ ಕುರಿತು ಹೆಚ್ಚು ಯೋಚಿಸುವೆ ಎಂದರು.
ಕ್ರಾಂತಿಕಾರಿ ಆಲೋಚನೆ ಹಾಗೂ ಧಾರ್ಮಿಕ ಆಲೋಚನೆ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಎರಡನ್ನೂ ನಂಬುವವರಿದ್ದಾರೆ, ಅನುಸರಿಸುವವರಿದ್ದಾರೆ. ಎರಡೂ ವರ್ಗಕ್ಕೆ ಅದು ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾದೇಶಿಕ ಭಾಷೆಗಳ ಸಿನಿಮಾಗಳ ಮಾರುಕಟ್ಟೆ ಕುರಿತ ಪ್ರಶ್ನೆಗೆ, ಈಗ ಆ ಸಮಸ್ಯೆ ಮಾಯವಾಗುತ್ತಿದೆ. ಒಟಿಟಿ ಮತ್ತಿತರ ವೇದಿಕೆಗಳೂ ಬೆಳೆಯುತ್ತಿವೆ. ಜನರು ಜಾಗತಿಕ ಸಿನಿಮಾದಿಂದ ಹಿಡಿದು ಎಲ್ಲವನ್ನೂ ಯಾವುದೇ ಭಾಷೆ ಇತ್ಯಾದಿ ಸಮಸ್ಯೆಗಳಿಲ್ಲದೇ ವೀಕ್ಷಿಸತೊಡಗಿದ್ದಾರೆ. ಸಿನಿಮಾಕ್ಕೆ ಅದರದ್ದೇ ಭಾಷೆ ಇದೆ. ಅದು ಎಲ್ಲರನ್ನೂ ತಲುಪುವಂತಿರಬೇಕು ಎಂದರು.
ನಾನೊಬ್ಬ ಹೆಮ್ಮೆಯ ಕನ್ನಡಿಗ
ಕಾಂತಾರ ಚಿತ್ರದ ಮೂಲಕ ಕನ್ನಡದ ಕಂಪನ್ನು ಮತ್ತು ಕನ್ನಡ ಸಿನಿಮಾ ಜಗತ್ತನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ. ನಾನೊಬ್ಬ ಹೆಮ್ಮೆಯ ಕನ್ನಡಿಗ ಎಂದರು ರಿಷಬ್.
ಸಂವಾದವನ್ನು ಕನ್ನಡದಲ್ಲೇ ಆರಂಭಿಸಿದ ಅವರು, “ನನ್ನ ಭಾಷೆ ಕನ್ನಡ. ನನ್ನ ಭಾವೆನಗಳನ್ನು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಬೇರೆ ಭಾಷೆಯಿಲ್ಲ. ಹಾಗಾಗಿ ಕನ್ನಡದಲ್ಲೇ ಮಾತನಾಡುವೆʼ ಎಂದು ಹತ್ತು ನಿಮಿಷಗಳ ಕಾಲ ಕನ್ನಡದಲ್ಲೇ ಮುಂದುವರಿಸಿದರು. ಆ ಬಳಿಕ ನೀವು ಹೇಳುತ್ತಿರುವುದು ನಮಗೆ ಅರ್ಥವಾಗುತ್ತಿಲ್ಲ. ಹಾಗಾಗಿ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಿದರೆ ನಿಮ್ಮ ಅನುಭವ ನಮಗೂ ತಿಳಿಯುತ್ತದೆ ಎಂಬ ಮನವಿ ಪ್ರೇಕ್ಷಕರಿಂದ ಬಂದಾಗ ಹಿಂದಿಯಲ್ಲಿ ಮಾತನಾಡಿದರು.
ಇಫಿ ಚಿತ್ರೋತ್ಸವದಲ್ಲಿ ಕನ್ನಡದ ನಟ, ನಿರ್ದೇಶಕನಿಗೆ ಇಷ್ಟೊಂದು ಆದ್ಯತೆ ಸಿಕ್ಕಿದ್ದೇ ಕಡಿಮೆ. ಸಭೆಯ ತುಂಬಾ ಸಿನಿ ಆಸಕ್ತರಿದ್ದರು. ಆ ಬಳಿಕವೂ ಅಟೋಗ್ರಾಫ್, ಫೋಟೋವಿಗೆ ಮುಗಿ ಬಿದ್ದರು. ಸಂವಾದಕ್ಕೆ ಮುನ್ನ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿರ್ಮಾಪಕ ತ್ಯಾಗರಾಜನ್ ಸಂವಾದ ನಡೆಸಿಕೊಟ್ಟರು.
ಸಿನಿಮಾವೇ ದೇವರು
ನನ್ನ ಪಾಲಿಗೆ ಸಿನಿಮಾವೇ ದೇವರು. ಕುಂದಾಪುರದ ಕೆರಾಡಿಯಂಥ ಒಂದು ಹಳ್ಳಿಯಿಂದ ಬಂದ ನನ್ನನ್ನು ಈ ಮಟ್ಟಿಗೆ ಬೆಳೆಸಿ ಈ ಸ್ಥಾನದಲ್ಲಿ (ಇಫಿ ಚಿತ್ರೋತ್ಸವ) ಬಂದು ಕುಳ್ಳಿರಿಸಿದೆ ಎಂದರೆ ಅದೇ ನನ್ನ ದೇವರು ಎಂದ ರಿಷಭ್, ಸಿನಿಮಾದಿಂದ ಪ್ರೇಕ್ಷಕರು ಸಕಾರಾತ್ಮಕವಾದುದನ್ನು ಮಾತ್ರ ಜತೆಗೆ ಕೊಂಡು ಹೋಗಬೇಕು. ನೇತ್ಯಾತ್ಮಕವಾದುದನ್ನು ಸಿನಿಮಾ ಮಂದಿರದಲ್ಲೇ ಬಿಟ್ಟು ಹೋಗಿ ಎಂದು ಮನವಿ ಮಾಡಿದರು.
ಜನರಿಗೆ ಬೇಕಾದದ್ದನ್ನು ಕೊಡಬೇಕು. ಡಾ. ರಾಜಕುಮಾರ್ ಮತ್ತಿತರ ನಟರ ಕಾಲದಲ್ಲಿ ಜನರು ಸಿನಿಮಾ ಕ್ಕೆ ಬರುತ್ತಿದ್ದರು. 90 ರ ದಶಕದಲ್ಲಿ ಹೆಚ್ಚು ಭೂಗತಲೋಕ ಇತ್ಯಾದಿ ಕುರಿತೇ ಹೆಚ್ಚು ಸಿನಿಮಾಗಳು ಬಂದವು. ಜನರು ನಿಧಾನವಾಗಿ ವಿಮುಖರಾಗ ತೊಡಗಿದರು. ಜನರು ಬಯಸ್ಸಿದ್ದನ್ನು ಕೊಡದಿದ್ದರೆ ಬೆಂಬಲಿಸಲಾರರು ಎಂಬ ಅಭಿಪ್ರಾಯಪಟ್ಟ ರಿಷಭ್, ಕಲಾತ್ಮಕ ಹಾಗೂ ವಾಣಿಜ್ಯಾತ್ಮ ಕ ಎರಡೂ ಬಗೆಯ ಸಿನಿಮಾಗಳು ಸಿನಿಮಾ ಲೋಕಕ್ಕೆ ಬೇಕು. ಅವುಗಳ ನಡುವಿನ ಸಮತೋಲನವೂ ಅವಶ್ಯ. ಆಗಲಷ್ಟೇ ಸಿನಿಮಾ ಜಗತ್ತು ಸಶಕ್ತವಾಗಿರಲು ಸಾಧ್ಯ ಎಂದರು.
ತುಳುವಿನಲ್ಲೂ ಕಾಂತಾರ ಸಿದ್ಧ
ಕಾಂತಾರ ಎಲ್ಲ ಭಾಷೆಗಳಲ್ಲೂ ಬಂದ ಮೇಲೆ ತುಳುವಿನಲ್ಲಿ ಏಕೆ ಇಲ್ಲ ಎಂದು ಕೇಳತೊಡಗಿದರು. ಹಾಗಾಗಿ ತುಳುವಿನಲ್ಲೂ ಸಿದ್ಧವಾಗಿದೆ. ಅದೂ ಶೀಘ್ರವೇ ಬಿಡುಗಡೆಯಾಗಲಿದೆ ಎಂದರು ರಿಷಬ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.