Dosa King: ಜೊತೆಯಾಗಲಿದ್ದಾರೆ ಹೇಮಂತ್ – ಜ್ಞಾನವೇಲ್; ತೆರೆಗೆ ಬರಲಿದೆ ʼಸರವಣ ಭವನ್ ಕೇಸ್ʼ
ಏನಿದು ʼಸರವಣ ಭವನ್ ಕೇಸ್ʼ?
Team Udayavani, Sep 12, 2024, 12:54 PM IST
ಚೆನ್ನೈ/ ಬೆಂಗಳೂರು: ʼವೆಟ್ಟೈಯನ್ʼ ನಿರ್ದೇಶಕ ಟಿಜೆ ಜ್ಞಾನವೇಲ್(Director TJ Gnanavel) ಮತ್ತು ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರದ ನಿರ್ದೇಶಕ ಹೇಮಂತ್ ರಾವ್ (Hemanth Rao) ಒಂದೇ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ.
ಹೌದು. ಸ್ಯಾಂಡಲ್ ವುಡ್‌ನಲ್ಲಿ ತನ್ನ ವಿಭಿನ್ನ ಕಥಾಶೈಲಿಯಿಂದ ಪ್ರೇಕ್ಷಕರ ಮನಗೆದ್ದಿರುವ ಹೇಮಂತ್ ರಾವ್ ಹಾಗೂ ʼಜೈ ಭೀಮ್ʼ ಖ್ಯಾತಿಯ ಕಾಲಿವುಡ್ ನಿರ್ದೇಶಕ ಟಿ.ಜೆ ಜ್ಞಾನವೇಲ್ ಪ್ಯಾನ್ ಸಿನಿಮಾಕ್ಕಾಗಿ ಕೈಜೋಡಿಸಲಿದ್ದಾರೆ.
ನೈಜ ಘಟನೆ ಆಧಾರಿತ ಪ್ಯಾನ್ ಇಂಡಿಯಾ ಸಿನಿಮಾ:
ಚೆನ್ನೈನ ಶ್ರೀಮಂತ ಹೊಟೇಲ್ ಉದ್ಯಮಿಗಳಲ್ಲಿ ಒಬ್ಬನಾಗಿದ್ದ ‘ದೋಸಾ ಕಿಂಗ್ʼ(Dosa King) ಎಂದೇ ಪ್ರಸಿದ್ಧನಾಗಿದ್ದ ಪಿ ರಾಜಗೋಪಾಲ (P Rajagopal) ʼಸರವಣ ಭವನ್ ಮರ್ಡರ್ ಕೇಸ್ʼ (Saravana Bhavan murder Case) ಕಥೆಯನ್ನು ಆಧರಿಸಿ ಈ ಸಿನಿಮಾ ಬರಲಿದೆ.
ಟಿ.ಜೆ ಜ್ಞಾನವೇಲ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು ಹೇಮಂತ್ ಬರಹಗಾರರಾಗಿ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಜಂಗ್ಲಿ ಪಿಕ್ಚರ್ಸ್ ಸಿನಿಮಾಕ್ಕೆ ಬಂಡವಾಳ ಹಾಕಲಿದೆ.
ಸದ್ಯ ಸಿನಿಮಾಕ್ಕೆ ʼದೋಸಾ ಕಿಂಗ್ʼ ಎಂದು ಟೈಟಲ್ ಇಡಲಾಗಿದ್ದು, ಪಾತ್ರ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಏನಿದು ʼಸರವಣ ಭವನ್ ಮರ್ಡರ್ ಕೇಸ್ʼ?: 80 ದಶಕದಲ್ಲಿ ಚೆನ್ನೈನ ಬೀದಿಯಲ್ಲಿ ಚಹಾದಂಗಡಿ ಇಟ್ಟು ದುಡಿಮೆ ಆರಂಭಿಸಿದ ರಾಜಗೋಪಾಲ ಹಣ ಒಟ್ಟು ಮಾಡಿ, ಪರಿಶ್ರಮ ಪಟ್ಟು ಹೋಟೆಲ್ ಉದ್ಯಮ ಆರಂಭಿಸಿದವರು. ಹೊಟೇಲ್ ʼಸರವಣ ಭವನ್ʼ ಆರಂಭವಾದ ಕೆಲವೇ ವರ್ಷಗಳಲ್ಲಿ ದೇಶದೆಲ್ಲೆಡೆ ತನ್ನ ಶಾಖೆಗಳನ್ನು ತೆರೆಯುವಷ್ಟು ದೊಡ್ಡದಾಗಿ ಬೆಳೆಯುತ್ತದೆ. ಚಿಲ್ಲರ ಹಣ ಲೆಕ್ಕ ಮಾಡುತ್ತಿದ್ದ ರಾಜಗೋಪಾಲ ಕೆಲವೇ ವರ್ಷದಲ್ಲಿ ಕೋಟಿ ಕುಳನಾಗಿ ಬೆಳೆಯುತ್ತಾರೆ.
ಅದೊಂದು ದಿನ ರಾಜಗೋಪಾಲ ಅವರ ಬಳಿ ಜ್ಯೋತಿಷಿಯೊಬ್ಬ ಬಂದು ನಿನ್ನ ಹೊಟೇಲ್ ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಮಗಳನ್ನು ಮದುವೆಯಾದರೆ ನಿನಗೆ ಅದೃಷ್ಟ ಒಲಿಯುತ್ತದೆ, ವ್ಯಾಪಾರ ಮತ್ತಷ್ಟು ವೃದ್ಧಿಸುತ್ತದೆ ಅಂತ ಹೇಳಿದ್ದ.
ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ರಾಜಗೋಪಾಲನ ಮನಸ್ಸಿನಲ್ಲಿ ಜೀವಜ್ಯೋತಿಯ (ಮ್ಯಾನೇಜರ್ ಮಗಳು) ಮೇಲೆ ವ್ಯಾಮೋಹ ಬರುತ್ತದೆ. ಆಕೆಯನ್ನು ಹೇಗಾದರೂ ಮಾಡಿ ಮದುವೆ ಆಗಬೇಕೆನ್ನುವ ನಿಟ್ಟಿನಲ್ಲಿ ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ.
ಆದರೆ ಜೀವಜ್ಯೋತಿ (Jeevajoth) ಪ್ರಿನ್ಸ್ ಶಾಂತಕುಮಾರ ಎನ್ನುವನನ್ನು ಪ್ರೀತಿಸುತ್ತಿದ್ದಳು. ಆತನೊಂದಿಗೆಯೇ ಮದುವೆ ಆದಳು. ಇತ್ತ ರಾಜಗೋಪಾಲ ಜೀವಜ್ಯೋತಿ ದಂಪತಿಯ ಮನಗೆಲ್ಲಲು ಚಿನ್ನಾಭರಣ ಸೇರಿದಂತೆ ನಗದು ಉಡುಗೊರೆ ನೀಡುತ್ತಾರೆ. ಏನು ಮಾಡಿದರೂ ಜೀವಜ್ಯೋತಿಗೆ ತಂದೆ ವಯಸ್ಸಿನಷ್ಟಿರುವ ರಾಜಗೋಪಾಲರ ಮೇಲೆ ಪ್ರೀತಿ ಹುಟ್ಟಲ್ಲ.
ಹಟಕ್ಕೆ ಬಿದ್ದಿದ್ದ ರಾಜಗೋಪಾಲ ಜೀವಜ್ಯೋತಿಯ ಪತಿ ಶಾಂತಕುಮಾರ್ ಕೊಲೆಗೆ ಸುಪಾರಿ ನೀಡಿದ್ದ. ವಿಚ್ಚೇದನ ಪಡೆಯಬೇಕೆಂದು ರಾಜಗೋಪಾಲ ದಂಪತಿಗೆ ಬೆದರಿಕೆ ಹಾಕಿದ್ದರು. ಈ ಕಾರಣದಿಂದ ಯಾವುದರ ಅಗತ್ಯನೂ ತಮಗೆ ಬೇಡವೆಂದು ಜೀವಜ್ಯೋತಿಯೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸಲು ಶಾಂತಕುಮಾರ್ ತೆರಳಿದ್ದರು. ಆದರೆ ಕೆಲ ಸಮಯದಲ್ಲೇ ಶಾಂತಕುಮಾರ್ ಕೊಡೈಕೆನಾಲ್ ನ ಪಶ್ಚಿಮ ಘಟ್ಟಗಳಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಸಂಬಂಧ ನವೆಂಬರ್ 23, 2001 ರಂದು ರಾಜಗೋಪಾಲ ಪೊಲೀಸರಿಗೆ ಶರಣಾಗಿದ್ದರು. 2 ವರ್ಷದ ಬಳಿಕ ಜಾಮೀನು ಪಡೆದು ಹೊರಬಂದ ಬಳಿಕವೂ ಜೀವಜ್ಯೋತಿ ಮೇಲಿನ ವ್ಯಾಮೋಹ ರಾಜಗೋಪಾಲರಿಗೆ ಕಡಿಮೆ ಆಗಿರಲಿಲ್ಲ. ಜುಲೈ 15, 2003 ರಲ್ಲಿ ಅವರ ವಿರುದ್ಧ ಜೀವಜ್ಯೋತಿಗೆ 6 ಲಕ್ಷ ರೂ. ಲಂಚ ನೀಡಿದ ಮತ್ತು ಅವಳ ಸಹೋದರ ರಾಮಕುಮಾರ್ ಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮತ್ತೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಬಾರಿ ಕೋರ್ಟ್ ಅವನಿಗೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು ಮತ್ತು ಜೀವಜ್ಯೋತಿಗೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಹೇಳಿತು.
ಮಾರ್ಚ್ 29, 2019 ರಂದು ಸರ್ವೋಚ್ಛ ನ್ಯಾಯಾಲಯ ರಾಜಗೋಪಾಲನಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಿತು. ಜೈಲಿನಲ್ಲಿ ಹೃದ್ರೋಗದ ಸಮಸ್ಯೆ ಶುರುವಾಗಿ 2019ರ ಜುಲೈ 19 ರಂದು ಕೊನೆಯುಸಿರೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.