ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್
Team Udayavani, May 31, 2020, 1:01 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಜನವರಿ 22ರಿಂದ ಎಪ್ರಿಲ್ 30ರವರೆಗೆ ಭಾರತದಲ್ಲಿ ಕೊವಿಡ್ ಸೋಂಕು ದೃಢಪಟ್ಟ 40,184 ಮಂದಿಯಲ್ಲಿ ಕನಿಷ್ಠ ಶೇ.28ರಷ್ಟು ಮಂದಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ ಎಂಬ ವಿಚಾರ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಜತೆಗೆ, ಕೊವಿಡ್ ಮಹಾಮಾರಿಯು ಸೋಂಕಿನ ಲಕ್ಷಣಗಳೇ ಇಲ್ಲದವರು ಅಥವಾ ಅಲ್ಪ ಪ್ರಮಾಣದ ರೋಗಲಕ್ಷಣ ಹೊಂದಿರುವವರಿಂದಲೇ ವ್ಯಾಪಿಸುತ್ತಿದೆಯೇ ಎಂಬ ಆತಂಕವನ್ನೂ ಮೂಡಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತರೆ ಸಂಸ್ಥೆಗಳೊಂದಿಗೆ ಸೇರಿ ಈ ಅಧ್ಯಯನ ನಡೆಸಿದೆ. ಬಹುತೇಕ ಸೋಂಕಿತರಿಗೆ ರೋಗಲಕ್ಷಣವೇ ಇಲ್ಲದ ವ್ಯಕ್ತಿಗಳಿಂದ ಸೋಂಕು ಹಬ್ಬಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
ವರದಿ ಹೇಳುವ ಪ್ರಕಾರ, ದೇಶದಲ್ಲಿನ ಶೇ. 28.1 ಸೋಂಕಿತರು ರೋಗಲಕ್ಷಣ ಇಲ್ಲದೇ ಇರುವವರು, ಶೇ.25.3ರಷ್ಟು ಮಂದಿ ನೇರ ಮತ್ತು ಅಧಿಕ ರಿಸ್ಕ್ ಇರುವ ರೋಗಿಗಳ ಸಂಪರ್ಕಿತರು, ಶೇ.2.8ರಷ್ಟು ಮಂದಿ ಆರೋಗ್ಯ ಕಾರ್ಯಕರ್ತರು (ಸೂಕ್ತ ವೈಯಕ್ತಿಕ ರಕ್ಷಣೆಯಿಲ್ಲದೆ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದವರು).
ರೋಗ ಲಕ್ಷಣವೇ ಇಲ್ಲದೆ ಸೋಂಕು ದೃಢಪಟ್ಟವರ ಸಂಖ್ಯೆ ಶೇ.28.1ಕ್ಕೆ ಸೀಮಿತವಾಗಿರಲಿಕ್ಕಿಲ್ಲ. ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯೂ ಇದೆ ಎಂದು “ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡಮಿಯಾಲಜಿ’ಯ ನಿರ್ದೇಶಕ ಮನೋಜ್ ಮಹೇರ್‌ಕರ್ ಹೇಳಿದ್ದಾರೆ.
ಇದೇ ವೇಳೆ, 50 ರಿಂದ 69 ವಯೋಮಾನದವರ ಮೇಲೆ ಸೋಂಕು ದಾಳಿಯ ಸಾಧ್ಯತೆ ಹೆಚ್ಚಿದ್ದು, 10 ವರ್ಷಗಳಿಗಿಂತ ಕೆಳಗಿನವರಿಗೆ ಈ ಸಾಧ್ಯತೆ ಕಡಿಮೆ. ಅಲ್ಲದೆ, ಮಹಿಳೆಯರಿಗಿಂತ ಪುರುಷರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದೂ ವರದಿ ಹೇಳಿದೆ.
ಒಂದೇ ದಿನ ಗರಿಷ್ಠ 7,964 ಪ್ರಕರಣ
ಕೊವಿಡ್ ಸೋಂಕಿತರ ದೈನಂದಿನ ಸಂಖ್ಯೆಯಲ್ಲಿ ಭಾರತ ಮತ್ತೂಂದು ದಾಖಲೆ ಬರೆದಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದ್ದು, ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8 ಗಂಟೆವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 7,964 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಂದೇ ದಿನ 265 ಮಂದಿ ಸಾವಿಗೀಡಾಗಿದ್ದಾರೆ.
ಜಗತ್ತಿನಲ್ಲೇ ಅತಿ ಹೆಚ್ಚು ಕೊವಿಡ್ ಸೋಂಕಿತರಿರುವ 9ನೇ ದೇಶ ಎಂಬ ಕುಖ್ಯಾತಿಗೆ ಪಾತ್ರವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಒಂದೇ ದಿನದಲ್ಲಿ ಮೃತಪಟ್ಟ 265 ಮಂದಿಯ ಪೈಕಿ ಅತಿ ಹೆಚ್ಚು ಸಾವು ಸಂಭವಿಸಿರುವುದು ಮಹಾರಾಷ್ಟ್ರದಲ್ಲಿ. ಇಲ್ಲಿ 116 ಮಂದಿ ಸಾವಿಗೀಡಾದರೆ, ದೆಹಲಿಯಲ್ಲಿ 82, ಗುಜರಾತ್ ನಲ್ಲಿ 20, ಮಧ್ಯಪ್ರದೇಶದಲ್ಲಿ 12, ತಮಿಳುನಾಡಿನಲ್ಲಿ 9 ಮಂದಿ ಕೊವಿಡ್ ಗೆ ಬಲಿಯಾಗಿದ್ದಾರೆ.
24 ಗಂಟೆಗಳಲ್ಲಿ 11,264 ಮಂದಿ ಗುಣಮುಖ
ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೇ, ಸಮಾಧಾನದ ಸಂಗತಿಯೆಂದರೆ ದೇಶದಲ್ಲಿ ಗುಣಮುಖ ಪ್ರಮಾಣವೂ ಹೆಚ್ಚುತ್ತಿದೆ. ದಾಖಲೆಯ 7,964 ಮಂದಿಗೆ ಕೊವಿಡ್ ದೃಢಪಟ್ಟ ದಿನವೇ ಬರೋಬ್ಬರಿ 11,264 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಈ ಮೂಲಕ ದೇಶದ ಗುಣಮುಖ ಪ್ರಮಾಣ 24 ಗಂಟೆಗಳ ಅವಧಿಯಲ್ಲಿ ಶೇ.4.51ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ ಶೇ.47.40ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಹೀಗಾಗಿ, ಒಟ್ಟಾರೆ ಸೋಂಕಿತರ ಪೈಕಿ 86,369 ಮಂದಿ ಗುಣಮುಖರಾಗಿ ಮನೆಗೆ ಮರಳಿದಂತಾಗಿದೆ.
ಇನ್ನೆರಡು ದಿನಗಳಲ್ಲಿ 2 ಲಕ್ಷಕ್ಕೇರಿಕೆ?
ದೇಶವ್ಯಾಪಿ ಕೊವಿಡ್ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿರುವುದನ್ನು ನೋಡಿದರೆ, ಇನ್ನೆರಡು ದಿನಗಳಲ್ಲೇ ಸೋಂಕಿತರ ಸಂಖ್ಯೆ 2 ಲಕ್ಷ ದಾಟುವ ಸಾಧ್ಯತೆಯಿದೆ. ಸೋಂಕಿತರ ಸಂಖ್ಯೆಗೆ ಸಂಬಂಧಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಗಮನಿಸಿದರೆ, ಇಂಥದ್ದೊಂದು ಆಘಾತ ಎದುರಾಗುವ ಲಕ್ಷಣ ಗೋಚರಿಸಿದೆ.
ಕೇವಲ ಎರಡು ದಿನಗಳ ಅವಧಿಯಲ್ಲಿ ಭಾರತದಲ್ಲಿ ಕೊವಿಡ್ ಸೋಂಕು ದೃಢಪಟ್ಟವರ ಪ್ರಮಾಣ ಶೇ.10ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲೂ ಶೇ.10ರಷ್ಟು ಏರಿಕೆ ಕಂಡಿದೆ. ಅದಕ್ಕೂ ಹಿಂದಿನ 48 ಗಂಟೆಗಳಲ್ಲಿ ಈ ಎರಡರ ಪ್ರಮಾಣವೂ ತಲಾ ಶೇ.9ರಷ್ಟು ಏರಿಕೆಯಾಗಿದ್ದವು.
16 ದಿನಗಳಲ್ಲಿ ಸಾವಿನ ಸಂಖ್ಯೆ ದ್ವಿಗುಣ: ಕಳೆದ ವಾರದ ಅಂಕಿಅಂಶಗಳನ್ನು ಗಮನಿಸಿದರೆ ಸೋಮವಾರದಿಂದ ಶನಿವಾರದವರೆಗೆ ಸೋಂಕಿತರ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದೆ. ಅದಕ್ಕೂ ಹಿಂದಿನ ವಾರದ 5 ದಿನ ಗಳಿಗೆ (ಶೇ.30) ಹೋಲಿಸಿದರೆ ಈ ಪ್ರಮಾಣ ಸ್ವಲ್ಪ ಕಡಿಮೆ. ಆದರೆ, ಸಾವಿನ ಸಂಖ್ಯೆಯಲ್ಲಿ ಈ ವಾರ ಶೇ.24 ಏರಿಕೆಯಾಗಿದ್ದರೆ, ಹಿಂದಿನ ವಾರ ಶೇ.22 ಆಗಿತ್ತು.
ಒಟ್ಟಾರೆ ಕಳೆದ 16 ದಿನಗಳಲ್ಲಿ ಭಾರತದಲ್ಲಿನ ಕೊವಿಡ್ ಸಾವಿನ ಪ್ರಮಾಣ ದ್ವಿಗುಣಗೊಂಡಿದೆ. 14 ದಿನಗಳ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಈಗ ದ್ವಿಗುಣಗೊಂಡಿದೆ. ಈ ಎಲ್ಲ ಲೆಕ್ಕಾಚಾರದ ಪ್ರಕಾರ, ಮುಂದಿನ ಮಂಗಳವಾರದ ವೇಳೆಗೆ ಒಟ್ಟಾರೆ 2 ಲಕ್ಷ ಮಂದಿ ಸೋಂಕಿತರು ದೇಶದಲ್ಲಿರಲಿದ್ದಾರೆ ಎಂದು ಹೇಳಲಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗುತ್ತಿರುವುದು ದೇಶದ ಆರೋಗ್ಯ ವ್ಯವಸ್ಥೆಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಚಿವಾಲಯದ ಇಬ್ಬರಿಗೆ ಸೋಂಕು ದೃಢ
ವಿದೇಶಾಂಗ ಸಚಿವಾಲಯದ ಮುಖ್ಯ ಕಚೇರಿಯ ಇಬ್ಬರು ಸಿಬಂದಿಗೆ ಕೊವಿಡ್ ವೈರಸ್ ಸೋಂಕು ತಗಲಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲಾ ಸಿಬ್ಬಂದಿಗೂ 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ ಇರಲು ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಚಿವಾಲಯದಲ್ಲಿ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಮತ್ತು ಒಬ್ಬ ಮಧ್ಯ ಯೂರೋಪ್ ವಿಭಾಗದ ಸಲಹೆಗಾರರು ಸೋಂಕಿಗೆ ಒಳಗಾಗಿದ್ದಾರೆ. ಕಚೇರಿಯನ್ನು ನೈರ್ಮಲೀಕರಣ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ವಂದೇ ಭಾರತ್ ಅಭಿಯಾನ ಚಾಲ್ತಿಯಲ್ಲಿರುವುದರಿಂದ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲೇಬೇಕಿದೆ ಎಂದು ಅವರು ಹೇಳಿದ್ದಾರೆ.
ಮ.ಪ್ರ: ರಾಜಭವನ ಸಿಬಂದಿಗೆ ಕೊವಿಡ್
ದಿನ ಕಳೆದಂತೆ ರಾಜ್ಯದಲ್ಲಿ ಕೊವಿಡ್ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ರಾಜಭವನದಲ್ಲಿ ಕೆಲಸ ಮಾಡುವ ಮೂವರಿಗೂ ವೈರಸ್ ತಗುಲಿದೆ. ಈ ಮೂಲಕ ಸೋಂಕು ತಗಲಿದವರ ಸಂಖ್ಯೆ 10ಕ್ಕೇರಿದೆ. ರಾಜ್ಯಪಾಲ ಲಾಲ್‌ಜೀ ಟಂಡನ್ ಕೂಡ ಸೋಂಕು ಪರೀಕ್ಷೆ ತಮ್ಮನ್ನು ತಾವು ಒಡ್ಡಿಕೊಂಡಿದ್ದು ಸೋಂಕು ದೃಢ ಪಟ್ಟಿಲ್ಲ. ಸೋಂಕು ದೃಢಪಟ್ಟಿರುವ ಹತ್ತು ಮಂದಿ ಸಮೀಪದಲ್ಲಿ ವಾಸ ಮಾಡುವವರು. ಅಲ್ಲಿರುವ ಸುಮಾರು 190 ಜನರ ಪೈಕಿ 180 ಜನರಿಗೆ ಸೋಂಕು ಪರೀಕ್ಷಿಸಲಾಗಿದ್ದು, ಅವರಿಗೆ ದೃಢಪಟ್ಟಿಲ್ಲ.
ತಬ್ಲಿಘಿಗಳೇ ಕಾರಣ
ತಬ್ಲಿಘಿ ಜಮಾತ್ ಸದಸ್ಯರು ದೇಶದಾದ್ಯಂತ ಕೊವಿಡ್ ವೈರಸ್ ಸೋಂಕನ್ನು ಸೋಂಕನ್ನು ಹರಡಿದರು ಎಂದು ಕೇಂದ್ರ ಸಚಿವ ಮುಖ್ತರ್ ಅಬ್ಟಾಸ್ ನಖ್ವೀ ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.