ಅನ್‌ಲಾಕ್ ಜತೆಗೇ ವೃದ್ಧಿಸಿದೆ ಸೋಂಕು ; ಲಾಕ್ ನಾಲ್ಕರಲ್ಲೇ ಅರ್ಧದಷ್ಟು ಕೇಸು ವೃದ್ಧಿ
Team Udayavani, Jun 1, 2020, 7:32 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸೋಮವಾರದಿಂದ ಹೆಚ್ಚಿನ ಸರಳೀಕೃತದ ಐದನೇ ಹಂತದ ಲಾಕ್‌ಡೌನ್ ನಿಯಮಗಳು ಜಾರಿಯಾಗಲಿವೆ. ಅದರ ಜತೆಗೆ ಹಲವು ಭಾಗಗಳಲ್ಲಿ ಸೋಂಕಿನ ಪ್ರಮಾಣ ವೃದ್ಧಿಸಿದೆ. ಇದರೊಂದಿಗೆ 6 ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶಕ್ಕೆ ನಿರ್ಧರಿಸಲಾಗಿದೆ.
ಹೊಸದಿಲ್ಲಿ: ಭಾರತದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಸುಮಾರು ಅರ್ಧದಷ್ಟು ಪ್ರಕರಣಗಳು ಪತ್ತೆಯಾಗಿದ್ದು 4ನೇ ಹಂತದ ಲಾಕ್‌ಡೌನ್‌ನಲ್ಲಿ!
ಲಾಕ್‌ಡೌನ್ 4.0 ಮುಗಿದು ಸೋಮವಾರದಿಂದ 5ನೇ ಹಂತದ ನಿರ್ಬಂಧಕ್ಕೆ ಕಾಲಿಡುವ ಹೊತ್ತಿನಲ್ಲೇ ಇಂಥದ್ದೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ದತ್ತಾಂಶಗಳೇ ಈ ವಿಚಾರವನ್ನು ಖಚಿತಪಡಿಸಿವೆ.
ಮಾ.24ರವರೆಗೆ ಅಂದರೆ ನಿರ್ಬಂಧ ಘೋಷಿಸುವ ಮುನ್ನ ದೇಶದಲ್ಲಿ ಒಟ್ಟಾರೆ 512 ಮಂದಿಗೆ ಸೋಂಕು ತಗಲಿತ್ತು. ಮೊದಲ ಹಂತದ ರಾಷ್ಟ್ರವ್ಯಾಪಿ ನಿರ್ಬಂಧ ಘೋಷಣೆಯಾಗಿದ್ದು ಮಾ.25ರಂದು. ಈ 21 ದಿನಗಳ ಅವಧಿಯ ಲಾಕ್‌ಡೌನ್ ವೇಳೆ ಒಟ್ಟು 10,877 ಪ್ರಕರಣಗಳು ಪತ್ತೆಯಾಗಿದ್ದವು. ಎ.15ರಿಂದ ಆರಂಭವಾಗಿ ಮೇ 3ರವರೆಗೆ ಇದ್ದ ಎರಡನೇ ಹಂತದ ನಿರ್ಬಂಧದಲ್ಲಿ 31,094 ಮಂದಿಗೆ ಸೋಂಕು ತಗುಲಿತ್ತು.
ಮೇ 17ಕ್ಕೆ ಕೊನೆಗೊಂಡ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ 14 ದಿನಗಳ ಅವಧಿಯಲ್ಲಿ 53,636 ಕೇಸುಗಳು ಪತ್ತೆಯಾಗಿದ್ದವು. ಈಗ ಅಂದರೆ 4ನೇ ಹಂತದ ದೇಶವ್ಯಾಪಿ ನಿರ್ಬಂಧ ಮುಗಿಯುತ್ತಿದ್ದಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ 1.82 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 5,100 ದಾಟಿದೆ.
ಅಂದರೆ, 4ನೇ ಹಂತದಲ್ಲಿ ಸೋಂಕು ಅತ್ಯಂತ ತೀವ್ರತರವಾಗಿ ವ್ಯಾಪಿಸಿದ್ದು, ಅದರ ತೀವ್ರತೆ ಈಗಲೂ ಮುಂದುವರಿದಿದೆ. ಜತೆಗೆ, ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಬಾಧಿತ ದೇಶಗಳ ಪೈಕಿ ಭಾರತವು 9ನೇ ಸ್ಥಾನಕ್ಕೆ ತಲುಪಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ಲಾಕ್‌ಡೌನ್ ಸಡಿಲಿಕೆ ಮಾಡಿದ್ದೇ ಮುಳುವಾಯಿತೇ ಎಂಬ ಪ್ರಶ್ನೆಗಳೂ ಮೂಡತೊಡಗಿವೆ.
5,78,816 ಶಂಕಿತರ ಮಾಹಿತಿ ಕೊರತೆ: ಭಾರತದಲ್ಲಿ ಕೋವಿಡ್ ಪರೀಕ್ಷಾ ದತ್ತಾಂಶ ಪಟ್ಟಿಯಲ್ಲಿ ಯಾವುದೇ ಶ್ರೇಣಿಗೆ ಒಳಪಡದ ಶಂಕಿತರ ಸಂಖ್ಯೆಯೇ ಅಧಿಕವಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದರೆ, ಸಾಮಾನ್ಯವಾಗಿ ರೋಗಿಗಳನ್ನು ದಾಖಲಿಸಿಕೊಳ್ಳುವಾಗ 7 ಶ್ರೇಣಿಗಳಲ್ಲಿ ಒಂದು ಶ್ರೇಣಿಗೆ ಸೇರಿಸಲಾಗುತ್ತದೆ. ಜ.22ರಿಂದ ಎ.30ರವರೆಗೆ ಭಾರತದಲ್ಲಿ ಒಟ್ಟು 10,21,518 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ಅವುಗಳನ್ನು ಕ್ರಮವಾಗಿ, ವಿದೇಶದಿಂದ ಬಂದ ಸೋಂಕಿತರು, ಕೋವಿಡ್ ಸೋಂಕಿತರ ಸಂಪರ್ಕಿತರು, ಸೋಂಕಿತ ಆರೋಗ್ಯ ಸಿಬಂದಿ, ಆಸ್ಪತ್ರೆಗೆ ಸ್ವಯಂ ದಾಖಲಾದವರು, ಯಾವುದೇ ಲಕ್ಷಣ ಹೊಂದದ ಸೋಂಕಿತರು, ಲಕ್ಷಣರಹಿತ ಸೋಂಕಿತ ಆರೋಗ್ಯ ಸಿಬಂದಿ, ಹಾಟ್ ಝೋನ್ ಪ್ರಕರಣಗಳು- ಹೀಗೆ 7 ವಿಭಾಗಗಳಲ್ಲಿ ಒಂದಕ್ಕೆ ಶಂಕಿತರನ್ನು ವರ್ಗೀಕರಿಸಲಾಗಿದೆ.
‘ಸೋಂಕಿತರ ಜಾಡು ಪತ್ತೆಗೆ ದತ್ತಾಂಶಗಳು ಸಹಕಾರಿ. ಆದರೆ ರೋಗ ಹೇಗೆ ಹರಡುತ್ತಿದೆ ಎಂದು ನೋಡಲು ಮಾಹಿತಿಗಳ ಕೊರತೆ ಎದುರಾಗಿದೆ. ಪರೀಕ್ಷೆ ವೇಳೆ ರೋಗಿಯ ವಿವರ ಸರಿಯಾಗಿ ದಾಖಲಿಸಿಕೊಳ್ಳದೆ ಹೀಗಾಗಿರಬಹುದು’ ಎಂದು ಐಸಿಎಂಆರ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡಾ| ತರುಣ್ ಭಟ್ನಾಗರ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಸಾಮುದಾಯಿಕ ವ್ಯಾಪಿಸುವಿಕೆ ಸ್ಪಷ್ಟ:
ಪ್ರಸ್ತುತ ಸನ್ನಿವೇಶದಲ್ಲಿ ಕೋವಿಡ್ ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ನಿರೀಕ್ಷಿಸುವುದೇ ಅವಾಸ್ತವಿಕ. ಅಷ್ಟೇ ಅಲ್ಲ, ದೇಶಾದ್ಯಂತ ಈಗಾಗಲೇ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿ ಆಗಿದೆ!
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್, ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಸೋಶಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೋಶನ್ ಆಫ್ ಎಪಿಡೆಮಿಯಾ ಲಜಿಸ್ಟ್ ರವಿವಾರ ಬಿಡುಗಡೆ ಮಾಡಿರುವ ಜಂಟಿ ಪ್ರಕಟನೆಯಲ್ಲಿ ಈ ವಿಚಾರ ಬಹಿರಂಗಪಡಿಸಲಾಗಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಇನ್ನೂ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿದೆ ಎಂಬುದನ್ನು ಒಪ್ಪಿಕೊಂಡಿಲ್ಲ.
ಭಾರತದಲ್ಲಿ ಮಾ.25ರಿಂದ ಮೇ 30ರವರೆಗೆ ಅತ್ಯಂತ ಕಠಿನವಾದ ರಾಷ್ಟ್ರವ್ಯಾಪಿ ನಿರ್ಬಂಧ ಹೇರಲಾಗಿತ್ತು. ಆದರೂ, ಕೋವಿಡ್ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಹೆಚ್ಚಳವಾಗಿದೆ. ಈಗ ದೇಶವು ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ಕಾಲಿಟ್ಟಾಗಿದೆ ಎಂದು ಈ ಪ್ರಮುಖ ತಜ್ಞರು ಹೇಳಿದ್ದಾರೆ. ಜತೆಗೆ, ಸರಕಾರವು ಕೆಲವೊಂದು ನಿಯಮಗಳನ್ನು ಜಾರಿ ಮಾಡುವ ಮುನ್ನ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರನ್ನು ಸಂಪರ್ಕಿಸಿ, ಅವರೊಂದಿಗೆ ಸಮಾಲೋಚನೆ ನಡೆಸದೆ ತಪ್ಪು ಮಾಡಿತು ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ರೋಗ ನಿರೋಧಕ ಅಪಾಯಕಾರಿ
ಯಾವುದೇ ದೇಶ, ತನ್ನ ಇಡೀ ಜನ ಸಮುದಾಯವನ್ನು ಕೋವಿಡ್ ವಿರುದ್ಧ ಸಜ್ಜುಗೊಳಿಸುವ ಉದ್ದೇಶದಿಂದ, ತನ್ನೆಲ್ಲಾ ಪ್ರಜೆಗಳಿಗೆ ವಿಶೇಷವಾದ ರೋಗ ನಿರೋಧಕ ವ್ಯವಸ್ಥೆಯನ್ನು ಜಾರಿಗೊಳಿಸುವ ಆಲೋಚನೆ ಅಪಾಯಕಾರಿ ಎಂದು ‘ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಕೌನ್ಸಿಲ್’ನ ಮಹಾ ನಿರ್ದೇಶಕ (ಸಿ.ಎಸ್.ಐ.ಆರ್.) ಶೇಖರ್ ಮಾಂಡೆ ತಿಳಿಸಿದ್ದಾರೆ.
‘ದೇಶದ ಜನ ಸಂಖ್ಯೆಯಲ್ಲಿ ಶೇ. 60-70ರಷ್ಟು ಜನರು ಕೋವಿಡ್ ನಂತಹ ರೋಗಗಳಿಂದ ಬಾಧಿತರಾದರೆ, ಆಗ ಸಾಮೂಹಿಕ ರೋಗ ನಿರೋಧಕ ಲಸಿಕೆಗಳನ್ನು ಉಪಯೋಗಿಸುವುದು ಅನಿವಾರ್ಯವಾಗುತ್ತದೆ. ಆದರೆ, ಸದ್ಯದ ಕೋವಿಡ್ ಪರಿಸ್ಥಿತಿ ಆ ಮಟ್ಟಕ್ಕೆ ತಲುಪಿಲ್ಲ. ಅವು ರೋಗ ನಿರೋಧಕ ಶಕ್ತಿ ಇಲ್ಲದಿರುವ ವ್ಯಕ್ತಿಗಳನ್ನು ಮಾತ್ರ ಆವರಿಸಿಕೊಳ್ಳುತ್ತಿದೆ. ಇನ್ನು, ಕೋವಿಡ್ ನ ಎರಡನೇ ಅಲೆ ಎದ್ದು ಅದು ತಾರಕಕ್ಕೇರಿದ ನಂತರ ಈ ಸೋಂಕು ಗಣನೀಯವಾಗಿ ತಗ್ಗುತ್ತದೆ. ಹಾಗಾಗಿ, ಸಾಮೂಹಿಕ ರೋಗ ನಿರೋಧಕ ಲಸಿಕೆಯಂಥ ಆಲೋಚನೆಗಳು ಬೇಡ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಟ್‌ಸ್ಪಾಟ್‌ಗಳಲ್ಲಿ ಭಾರತಕ್ಕೆ 7ನೇ ಸ್ಥಾನ
ಸೋಂಕಿತರ ಸಂಖ್ಯೆ 1.89 ಲಕ್ಷ ದಾಟುತ್ತಿದ್ದಂತೆಯೇ, ಭಾರತವು ಜರ್ಮನಿಯನ್ನು ಹಿಂದಿಕ್ಕಿ ಜಗತ್ತಿನ 10 ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತಲುಪಿದೆ. ಈವರೆಗೆ 8ನೇ ಸ್ಥಾನದಲ್ಲಿದ್ದ ಜರ್ಮನಿಯಲ್ಲಿ ಒಟ್ಟಾರೆ 1.83 ಲಕ್ಷಕ್ಕಿಂತ ಅಧಿಕ ಸೋಂಕಿತರಿದ್ದಾರೆ.
ಕೇವಲ 2 ದಿನಗಳ ಅವಧಿಯಲ್ಲಿ ಭಾರತವು 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ. ಪ್ರಸ್ತುತ 10 ಹಾಟ್‌ಸ್ಪಾಟ್ ದೇಶಗಳ ಪೈಕಿ 18 ಲಕ್ಷಕ್ಕಿಂತ ಹೆಚ್ಚು ಸೋಂಕಿತರಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಸ್ಪೇನ್, ಯು.ಕೆ., ಇಟಲಿ ಮತ್ತು ಫ್ರಾನ್ಸ್ ಇದೆ.
8 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು
4ನೇ ಹಂತದ ಲಾಕ್ ಡೌನ್ ಮುಗಿದ 5ನೇ ಹಂತಕ್ಕೆ ಕಾಲಿಡುತ್ತಿರುವಂತೆಯೇ ಆತಂಕಕಾರಿ ಬೆಳವಣಿಗೆಯೆಂಬಂತೆ, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಬರೋಬ್ಬರಿ 8,380 ಮಂದಿಗೆ ಸೋಂಕು ತಗುಲಿದೆ. ಶನಿವಾರ ಬೆಳಗ್ಗೆ 8ರಿಂದ ಭಾನುವಾರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಅವಧಿಯಲ್ಲಿ 193 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1.82 ಲಕ್ಷ ದಾಟಿದಂತಾಗಿದೆ. ಇದೇ ವೇಳೆ, 86,983 ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.47.75ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ 193 ಸಾವುಗಳಿಗೆ ದೇಶ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ
Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.