ಲಸಿಕೆ ಸಂಶೋಧನೆಗೆ ಪಣತೊಟ್ಟ ಭಾರತೀಯ ಕಂಪೆನಿಗಳು
Team Udayavani, May 6, 2020, 5:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತವು ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಇಂದು ಜಗತ್ತಿನ ಬಹುಪಾಲು ಜನರು ಭಾರತದಲ್ಲಿ ಸಿದ್ಧಪಡಿಸಲಾದ ಒಂದಲ್ಲ ಒಂದು ಲಸಿಕೆಯನ್ನು ಪಡೆದೇ ಇರುತ್ತಾರೆ.
ಈಗ ಜಗತ್ತಿನಾದ್ಯಂತ ಲಸಿಕೆ ಕಂಡುಹಿಡಿಯಲು ಅಪಾರ ಪ್ರಯತ್ನ ನಡೆದಿವೆ, ಒಂದು ವೇಳೆ ಲಸಿಕೆ ಅಭಿವೃದ್ಧಿಯಲ್ಲಿ ಯಶಸ್ಸು ದೊರೆತರೆ, ಅವುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವುದು ಎಲ್ಲಿ ಎನ್ನುವ ಪ್ರಶ್ನೆ ಎದುರಾದತಕ್ಷಣ ಜಗತ್ತಿನ ಗಮನ ಹರಿಯುತ್ತಿರುವುದು ಭಾರತದತ್ತಲೇ.
ನಮ್ಮಲ್ಲಿನ ಲಸಿಕೆ ಡೋಸ್ ಉತ್ಪಾದನಾ ಕಂಪನಿಗಳ ಸಾಮರ್ಥ್ಯ ನಿಬ್ಬೆರಗಾಗಿಸುವಂತಿದೆ..ಇದಷ್ಟೇ ಅಲ್ಲದೇ, ಈ ಹೊತ್ತಲ್ಲೇ ದೇಶದ ಅನೇಕ ಕಂಪನಿಗಳು ಸಂಶೋಧನೆಯಲ್ಲಿಯೂ ತೊಡಗಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ…
ನಮ್ಮಲ್ಲಿ ಅಸಂಖ್ಯ ಪುಟ್ಟ ಕಂಪೆನಿಗಳು ಸೇರಿದಂತೆ, 6 ಕ್ಕೂ ಹೆಚ್ಚು ಹೆಸರಾಂತ ಲಸಿಕೆ ಉತ್ಪಾದನಾ ಕಂಪೆನಿಗಳಿವೆ. ಈ ಕಂಪೆನಿಗಳು ಪೊಲಿಯೋ, ಮೆನಿಂಜೈಟಿಸ್, ನ್ಯೂಮೋನಿಯಾ, ರೋಟಾವೈರಸ್, ಬಿಸಿಜಿ, ದಡಾರ ಮತ್ತು ರುಬೆಲ್ಲಾ ಸೇರಿದಂತೆ ಇನ್ನೂ ಅನೇಕ ರೋಗಗಳ ವಿರುದ್ಧ ಲಸಿಕೆ ಸಿದ್ಧಪಡಿಸುತ್ತವೆ. ಈಗ ಆರಕ್ಕೂ ಹೆಚ್ಚು ಭಾರತೀಯ ಕಂಪೆನಿಗಳು ಕೋವಿಡ್-19 ವೈರಸ್ ವಿರುದ್ಧ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.
ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಏನು ಮಾಡುತ್ತಿದೆ?
ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪೆನಿಯೆಂಬ ಗರಿಮೆಗೆ ಪಾತ್ರವಾಗಿರುವ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದತ್ತ ಈಗ ಜಗತ್ತಿನ ದೃಷ್ಟಿ ನೆಟ್ಟಿದೆ. ಈಗ ಈ ಸಂಸ್ಥೆಯು ಅಮೆರಿಕದ ಕೋಡಾಜೆನಿಕ್ಸ್ ಬಯೋಟೆಕ್ ಕಂಪೆನಿಯ ಸಹಭಾಗಿತ್ವದಲ್ಲಿ ಲಸಿಕೆ ಸಂಶೋಧನೆಗೆ ಶ್ರಮಿಸುತ್ತಿದೆ.
53 ವರ್ಷದ ಹಿಂದೆ ಸ್ಥಾಪನೆಯಾದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಪ್ರತಿ ವರ್ಷ 150 ಕೋಟಿ ವಿವಿಧ ಲಸಿಕೆಯ ಡೋಸ್‌ಗಳನ್ನು ಉತ್ಪಾದಿಸುತ್ತದೆ! ಇದರ ಇನ್ನೂ ಎರಡು ಘಟಕಗಳು ನೆದರ್‌ಲ್ಯಾಂಡ್ಸ್ ಮತ್ತು ಝೆಕ್ ಗಣರಾಜ್ಯದಲ್ಲಿದ್ದು ಒಟ್ಟು 7000ಕ್ಕೂ ಅಧಿಕ ಜನರು ಕಾರ್ಯನಿರ್ವಹಿಸುತ್ತಾರೆ. ಅತ್ಯಂತ ಅಗ್ಗದ ದರದಲ್ಲಿ 20ಕ್ಕೂ ಅಧಿಕ ಲಸಿಕೆಗಳನ್ನು 165 ದೇಶಗಳಿಗೆ ಪೂರೈಸುತ್ತದೆ ಈ ಸಂಸ್ಥೆ.
ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು “ಈ ತಿಂಗಳಲ್ಲಿ ನಾವು ಇಲಿಗಳ ಮೇಲೆ ಲಸಿಕೆಯೊಂದನ್ನು ಪ್ರಯೋಗಿಸುತ್ತಿದ್ದೇವೆ. ಸೆಪ್ಟೆಂಬರ್ ವೇಳೆಗೆ ಮನುಷ್ಯರ ಮೇಲೆ ಟ್ರಯಲ್ಸ್ ಮಾಡುವಂತಾಗಬೇಕು ಎನ್ನುವ ಗುರಿ ಇದೆ” ಎನ್ನುತ್ತಾರೆ. ಇದಷ್ಟೇ ಅಲ್ಲದೇ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆ ಪ್ರಯೋಜನಕಾರಿ ಎಂದು ಸಾಬೀತಾದರೆ ಯಶಸ್ವಿಯಾದರೆ, ಅದನ್ನು ಅಪಾರ ಪ್ರಮಾಣದಲ್ಲಿ ಉತ್ಪಾದಿಸಲು ಸೀರಂ ಇನ್‌ಸ್ಟಿಟ್ಯೂಟ್ ಆಕ್ಸ್‌ಫರ್ಡ್ ವಿವಿಯೊಂದಿಗೆ ಹಾಗೂ ಬ್ರಿಟನ್ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬಯೋಕಾನ್‌ನಲ್ಲೂ ಪ್ರಯತ್ನ
ಜಗತ್ತಿನ ಅತಿದೊಡ್ಡ ಬಯೋಫಾರ್ಮಾಸೂಟಿಕಲ್ ಕಂಪೆನಿಗಳಲ್ಲಿ ಒಂದಾದ ಬೆಂಗಳೂರು ಮೂಲದ ‘ಬಯೋಕಾನ್’ ಕೋವಿಡ್-19ಗೆ ಪರಿಹಾರ ಕಂಡುಹಿಡಿಯುವಲ್ಲಿ ಶ್ರಮಿಸುತ್ತಿದೆ. “ನಾವು ಪುಣೆ ಮೂಲದ ಬಯೋಟೆಕ್ ಸಂಸ್ಥೆ ಸೀಗಲ್ ಬಯೋಸಲ್ಯೂಷನ್ಸ್‌ನೊಂದಿಗೆ ಲಸಿಕೆ ಸಂಶೋಧನೆ ಯೋಜನೆಯಲ್ಲಿ ಕೈಜೋಡಿಸಿದ್ದೇವೆ. ಇನ್ನೊಂದು ಆರು ತಿಂಗಳಲ್ಲಿ ಮನುಷ್ಯರ ಮೇಲೆ ಟ್ರಯಲ್ಸ್ ಆರಂಭವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ.
ಇದಷ್ಟೇ ಅಲ್ಲದೇ, ಬಯೋಕಾನ್, ಈ ಹಿಂದೆ ತಾನೇ ಅಭಿವೃದ್ಧಿಪಡಿಸಿರುವ ಎರಡು ಹೊಸ ತಲೆಮಾರಿನ ಔಷಧಗಳನ್ನು ಕೋವಿಡ್ ರೋಗಿಗಳಲ್ಲಿನ ಉರಿಯೂತ ಮತ್ತು ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಬಳಸಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸಿದೆ. ಜತೆಗೆ ಆ್ಯಂಟಿಬಾಡಿ ಚುಚ್ಚುಮದ್ದನ್ನು ಅಥವಾ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಪಡಿಸಲು ಬಯೋಕಾನ್ ಅಮೆರಿಕದ 2-3 ಕಂಪೆನಿಗಳ ಜತೆಗೂ ಕೆಲಸ ಮಾಡುತ್ತಿದೆ.
ಲಸಿಕೆ ಸಂಶೋಧನೆಯಲ್ಲಿ ನಿರತ ಕಂಪೆನಿಗಳು
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯು ಯೂನಿವರ್ಸಿಟಿ ಆಫ್ ವಿಸ್ಕಾನ್‌ಸಿನ್ ಹಾಗೂ ಅಮೆರಿಕ ಮೂಲದ ಫ್ಲ್ಯೂಜನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸಂಶೋಧನೆ ಕೈಗೊಳ್ಳುತ್ತಿದೆ. ಇದು ಲಸಿಕೆ ಡೋಸ್‌ಗಳ ಬೃಹತ್ ಉತ್ಪಾದನಾ ಸಾಮರ್ಥ್ಯವನ್ನೂ ಹೊಂದಿದೆ.
ಅಹಮದಾಬಾದ್ ಮೂಲದ Zydus Cadila ಎರಡು ಲಸಿಕೆಗಳ ಮೇಲೆ ಸಂಶೋಧನೆ ಮಾಡುತ್ತಿದ್ದು, ಹೈದ್ರಾಬಾದ್ ಮೂಲದ Biological E, ಬೆಂಗಳೂರಿನ Mynvax, ಊಟಿ-ಹೈದ್ರಾಬಾದ್‌ನಲ್ಲಿ ಪ್ರಮುಖ ಉತ್ಪಾದನಾ ಘಟಕ ಹೊಂದಿರುವ ಇಂಡಿಯನ್ ಇಮ್ಯೂನಾಲಾಜಿಕಲ್ಸ್ ಸಂಸ್ಥೆಯು ತಲಾ ಒಂದು ಲಸಿಕೆಯ ಮೇಲೆ ಸಂಶೋಧನೆ ಮಾಡುತ್ತಿವೆ. ಇದಷ್ಟೇ ಅಲ್ಲದೇ, ಇನ್ನೂ 4-5 ಹೆಚ್ಚುವರಿ ಲಸಿಕೆಗಳ ಮೇಲೂ ಭಾರತದಲ್ಲಿ ಸಂಶೋಧನೆ ನಡೆದಿದ್ದು, ಅವಿನ್ನೂ ಆರಂಭಿಕ ಹಂತದಲ್ಲಿವೆ.
ಭಾರತ ಬಹುದೊಡ್ಡ ಪಾತ್ರ ನಿರ್ವಹಿಸಬಲ್ಲದು: ಡಾ| ಜೆರೋಮ್ ಕಿಮ್
ಭಾರತವು ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಇಂದು ಜಗತ್ತಿನಲ್ಲಿನ 70 ಪ್ರತಿಶತಕ್ಕೂ ಹೆಚ್ಚು ವಿಸ್ತೃತ ರೋಗನಿರೋಧಕ ಕಾರ್ಯಕ್ರಮಗಳಲ್ಲಿ ಭಾರತದಲ್ಲಿ ಉತ್ಪಾದಿಸಲಾದ ಲಸಿಕೆಯನ್ನು ಬಳಸಲಾಗುತ್ತದೆ.
ಇಂಟರ್‌ನ್ಯಾಷನಲ್ ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್‌ನ ಮಹಾನಿರ್ದೇಶಕ, ಪ್ರಖ್ಯಾತ ಸಂಶೋಧಕ ಡಾ| ಜೆರೋಮ್ ಕಿಮ್ ಅವರು “ಪ್ರಪಂಚದಲ್ಲಿನ ಅಜಮಾಸು ಎಲ್ಲಾ ಮಕ್ಕಳೂ ಸಹ ಭಾರತದಲ್ಲಿ ಉತ್ಪಾದಿಸಲಾದ ಲಸಿಕೆ ಪಡೆದಿದ್ದಾರೆ. ಭಾರತವು ಅತಿದೊಡ್ಡ ಲಸಿಕೆ ಉತ್ಪಾದನಾ ರಾಷ್ಟ್ರವಾಗಿರುವುದರಿಂದ, ಅದು ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು” ಎನ್ನುತ್ತಾರೆ.
“ಭಾರತದಲ್ಲಿ ಅದ್ಭುತ ವಿಶ್ವವಿದ್ಯಾಲಯಗಳಿವೆ, ಅಲ್ಲದೇ ಬಹಳ ಸಂಖ್ಯೆಯಲ್ಲಿ ಪ್ರತಿಭಾವಂತ ಜನರಿದ್ದಾರೆ. ಮುಖ್ಯವಾಗಿ ಅಗಾಧವಾಗಿ ಬೆಳೆಯುತ್ತಿರುವ ಬಯೋಟೆಕ್ ಉದ್ಯಮವಿದೆ. ಈ ಎಲ್ಲಾ ಸಂಪನ್ಮೂಲಗಳನ್ನೂ ಬಳಸಿಕೊಂಡು, ಜಗತ್ತಿಗೆ ಎದುರಾಗಿರುವ ಅತಿದೊಡ್ಡ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಭಾರತ ಬಹುದೊಡ್ಡ ಕೊಡುಗೆ ಕೊಡಬಲ್ಲದು” ಎನ್ನುತ್ತಾರೆ ಜೆರೋಮ್.
ನಿಜಕ್ಕೂ ಪರಿಹಾರ ಸಿಗುವುದೇ?
ಇಡೀ ವಿಶ್ವವೇ ಟೊಂಕಕಟ್ಟಿನಿಂತಿರುವುದು ಸತ್ಯವಾದರೂ, ಕೋವಿಡ್ ವೈರಸ್ ಗೆ ಈ ಕೂಡಲೇ ಪರಿಹಾರ ಸಿಕ್ಕುಬಿಡುತ್ತದೆ ಎಂದು ಭಾವಿಸುವುದು ತಪ್ಪಾದೀತು ಎಂದು ಕೆಲವು ತಜ್ಞರು ಎಚ್ಚರಿಸುತ್ತಿದ್ದಾರೆ. ಲಂಡನ್ ಇಂಪರಿಯಲ್ ಕಾಲೇಜ್‌ನ ಜಾಗತಿಕ ಸ್ವಾಸ್ಥ್ಯ ಘಟಕದ ಮುಖ್ಯಸ್ಥ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ಡೇವಿಡ್ ನಬರೋ ಅವರು, ಕೋವಿಡ್ ವೈರಸ್‌ನ ಅಪಾಯ ಸನಿಹದ ಭವಿಷ್ಯದಲ್ಲೂ ಇರುವ ಸಾಧ್ಯತೆ ಇದ್ದು, ಸದ್ಯಕ್ಕೆ ಲಸಿಕೆ ಲಭ್ಯವಾಗುತ್ತದೆ ಎನ್ನುವುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ ಎನ್ನುತ್ತಾರೆ.
‘ಕೋವಿಡ್ ವೈರಸ್ ಜತೆಗೆ ಬದುಕುವುದನ್ನು ನಾವೆಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ, ಸ್ವಚ್ಛತೆಯೇ ಕೆಲ ವರ್ಷಗಳವರೆಗೆ ಪರಿಹಾರ” ಎನ್ನುವುದು ಯೂನಿವರ್ಸಿಟಿ ಆಫ್ ವರ್ಮಾಂಟ್ ಮೆಡಿಕಲ್ ಸೆಂಟರ್‌ನ ಲಸಿಕೆ ಸಂಶೋಧಕ ಟಿಮ್ ಲಾಹೇ ಅವರ ಅಭಿಪ್ರಾಯ.
ಆದರೆ ಇದೇ ವೇಳೆಯಲ್ಲೇ, ಅನೇಕ ತಜ್ಞರು ಕೋವಿಡ್-19 ಲಸಿಕೆ ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದೇ ಭರವಸೆ ವ್ಯಕ್ತಪಡಿಸುತ್ತಾರೆ. ಏಕೆಂದರೆ, ಕೋವಿಡ್ ವೈರಸ್ ಎಚ್‌ಐವಿ ಅಥವಾ ಮಲೇರಿಯಾದಂತಲ್ಲ.
ಎಚ್‌ಐವಿ ಮತ್ತು ಮಲೇರಿಯಾ ಬಹಳ ಬೇಗನೇ ಮ್ಯೂಟೇಟ್ (ರೂಪಾಂತರ) ಆಗಿಬಿಡುತ್ತವಾದ್ದರಿಂದ, ಅವುಗಳ ನಿರ್ಮೂಲನೆ ಕಷ್ಟಸಾಧ್ಯವಾಗಿದೆ. ಆದರೆ ಕೋವಿಡ್ 19 ವೈರಸ್ ಅಷ್ಟು ತ್ವರಿತವಾಗಿ ರೂಪಾಂತರಗೊಳ್ಳುವುದಿಲ್ಲ ಎಂಬುದು ಇವರ ವಾದವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ
Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ
Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ
ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ… ಮಣಿಪುರ ಹಿಂಸಾಚಾರದ ಕುರಿತು ಸಿಎಂ ಬಿರೇನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.