ಕಾಸರಗೋಡು: ಮತ್ತೆ 9 ಮಂದಿಗೆ ಸೋಂಕು
ತರಾತುರಿಯಲ್ಲಿ ತೆರೆದುಕೊಂಡ ಮೆಡಿಕಲ್ ಕಾಲೇಜು
Team Udayavani, Apr 7, 2020, 5:39 AM IST
ಕಾಸರಗೋಡು: ಕೇರಳದಲ್ಲಿ ಸೋಮವಾರ 13 ಮಂದಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು, ಅವರಲ್ಲಿ 9 ಮಂದಿಯೂ ಕಾಸರಗೋಡು ನಿವಾಸಿಗಳು. ಮಲಪ್ಪುರದಲ್ಲಿ ಇಬ್ಬರಿಗೆ, ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿಸಿದೆ.
ಜಿಲ್ಲೆಯಲ್ಲಿ ಸೋಮವಾರ ಸೋಂಕು ದೃಢಗೊಂಡವರಲ್ಲಿ 6 ಮಂದಿ ವಿದೇಶದಿಂದ ಬಂದವರು. ಇನ್ನು ಮೂವರಿಗೆ ಸೋಂಕು ಬಾಧಿತ ರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ. ಮಲಪ್ಪುರಂ ಮತ್ತು ಕೊಲ್ಲಂನ ಒಟ್ಟು ಮೂವರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು. ಪತ್ತನಂತಿಟ್ಟದ ರೋಗಿ ವಿದೇಶದಿಂದ ಬಂದವರು.
ಈ ವರೆಗೆ ರಾಜ್ಯದಲ್ಲಿ ಒಟ್ಟು 327 ಮಂದಿಗೆ ಸೋಂಕು ತಗಲಿದೆ. ಆಸ್ಪತ್ರೆಗಳಲ್ಲಿ ಒಟ್ಟು 266 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 59 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ಈ ವರೆಗೆ ವಿದೇಶ ಗಳಲ್ಲಿ ದುಡಿಯುತ್ತಿರುವ ಕೇರಳದ 18 ಮಂದಿ ಕೋವಿಡ್ 19 ಸೋಂಕಿನಿಂದ ಸಾವಿಗೀಡಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 10,844 ಮಂದಿ ನಿಗಾದಲ್ಲಿ
ಸೋಮವಾರ ಜಿಲ್ಲೆಯಲ್ಲಿ 10,844 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 10,623 ಮಂದಿ ಮನೆಗಳಲ್ಲಿ, 221 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಸೋಮವಾರ 102 ಮಂದಿಯ ಸ್ಯಾಂಪಲ್ ಸೇರಿದಂತೆ ಈ ವರೆಗೆ 1,769 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1,084 ಮಂದಿಯ ಫಲಿ ತಾಂಶ ಲಭಿಸಿದ್ದು, 143 ಪಾಸಿಟಿವ್, 941 ನೆಗೆಟಿವ್ ಆಗಿವೆ. 685 ಮಂದಿಯ ಫಲಿತಾಂಶ ಲಭಿಸಿಬೇಕಿದೆ.
ಯುಎಇಯಲ್ಲಿ ಸಾವು
ಕಣ್ಣೂರು ಕೊಳಯಾಡ್ ನಿವಾಸಿ ಹಾರಿಸ್ (36) ಕೋವಿಡ್ 19 ಸೋಂಕಿನಿಂದ ಸೋಮವಾರ ಬೆಳಗ್ಗೆ ಸಾವಿಗೀಡಾಗಿರುವುದಾಗಿ ಮನೆಯವರಿಗೆ ಮಾಹಿತಿ ಬಂದಿದೆ. ಅಜ್ಮಾನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 16 ವರ್ಷಗಳಿಂದ ಯುಎಇಯ ಹಾರಿಸ್ ತಲಾಲ್ ಗ್ರೂಪ್ ಸಂಸ್ಥೆಯ ಅಜ್ಮಾನ್ ವಲಯ ಪಿಆರ್‌ಒ ಹಾಗೂ ಏರಿಯಾ ಮ್ಯಾನೇಜರ್ ಆಗಿ ಅವರು ದುಡಿಯುತ್ತಿದ್ದರು.
ಮೆಡಿಕಲ್ ಕಾಲೇಜು ಆರಂಭ
ಬಹಳ ಸಮಯದಿಂದ ಉಕ್ಕಿನಡ್ಕದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಾಸರಗೋಡು ಮೆಡಿಕಲ್ ಕಾಲೇಜನ್ನು ಕಾರ್ಯಾರಂಭಿಸಲಾಗಿದೆ. ಕಾಸರಗೋಡಿನಿಂದ ಯಾವುದೇ ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳದಿರುವುದೂ ತರಾತುರಿಯಲ್ಲಿ ಮೆಡಿಕಲ್ ಕಾಲೇಜನ್ನು ಆರಂಭಿಸಲು ಕಾರಣ ಎನ್ನಲಾಗುತ್ತಿದೆ. ನಾಲ್ಕೇ ದಿನಗಳಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಪ್ರಥಮ ಹಂತದಲ್ಲಿ 200 ಹಾಸಿಗೆಗಳು, 10 ಐಸಿಯು ಕೊಠಡಿ ವ್ಯವಸ್ಥೆಗೊಳಿಸಲಾಗಿದೆ. ಇನ್ನೂ 100 ಹಾಸಿಗೆ ಹಾಗೂ 10 ಐಸಿಯು ವ್ಯವಸ್ಥೆ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪರಿಣತರ ತಂಡ ಆಗಮನ
ಕೋವಿಡ್ ಆಸ್ಪತ್ರೆಯಾಗಿ ಚಟುವಟಿಕೆ ನಡೆಸಲಿರುವ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಲು ತಿರುವನಂತಪುರ ಸರಕಾರಿ ಮೆಡಿಕಲ್ ಕಾಲೇಜಿನಿಂದ ರಾಜ್ಯ ಮಟ್ಟದ 27 ಮಂದಿಯ ಪರಿಣತರ ತಂಡ ಆಗಮಿಸಿದೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಈ ತಂಡವನ್ನು ಶುಭ ಹಾರೈಸಿ ಬೀಳ್ಕೊಟ್ಟಿದ್ದರು. 11 ಮಂದಿ ವೈದ್ಯರು, 10 ಮಂದಿ ಸ್ಟಾಫ್ ನರ್ಸ್‌ಗಳು, 6 ಅಸಿಸ್ಟೆಂಟ್ ನರ್ಸ್‌ಗಳು ಈ ತಂಡದಲ್ಲಿದ್ದಾರೆ.
64 ಪ್ರಕರಣ; 100 ಮಂದಿ ಸೆರೆ
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 64 ಕೇಸುಗಳನ್ನು ದಾಖಲಿಸಿ 100 ಮಂದಿಯನ್ನು ಬಂಧಿಸಲಾಗಿದೆ. 37 ವಾಹನಗಳನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 6, ಕುಂಬಳೆ 4, ಬದಿಯಡ್ಕ 9, ಕಾಸರಗೋಡು 3, ಆದೂರು 4, ಹೊಸದುರ್ಗ 4, ಚಂದೇರ 6, ರಾಜಪುರಂ 1, ನೀಲೇಶ್ವರ 3, ಅಂಬಲತ್ತರ 2, ಬೇಕಲ 7, ಮೇಲ್ಪರಂಬದಲ್ಲಿ 3 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 357 ಕೇಸುಗಳನ್ನು ದಾಖಲಿಸಿ, 517 ಮಂದಿಯನ್ನು ಬಂಧಿಸಲಾಗಿದ್ದು,
232 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕಿತ್ಸೆ ಲಭಿಸದೆ ಸತ್ತವರ ಸಂಖ್ಯೆ 10ಕ್ಕೆ
ಕರ್ನಾಟಕದ ಗಡಿಗಳು ಮುಚ್ಚಿರುವುದರಿಂದ ಸರಿಯಾಗಿ ಚಿಕಿತ್ಸೆ ಲಭಿಸದೆ ಸೋಮವಾರ ವೃದ್ಧರೋರ್ವರು ಸಾವಿಗೀಡಾಗುವುದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸೆ ಲಭಿಸದೆ ಸಾವಿಗೀಡಾದವರ ಸಂಖ್ಯೆ 10ಕ್ಕೇರಿದೆ.ಪಾಣತ್ತೂರು ಕಲ್ಲಪಳ್ಳಿಯ ಕೃಷ್ಣ ಗೌಡ (71) ಮೃತಪಟ್ಟವರು. ರವಿವಾರ ಕುಂಜತ್ತೂರು ತೂಮಿನಾಡಿನ ಯೂಸುಫ್, ಹೊಸಂಗಡಿ ಅಂಗಡಿಪದವಿನ ರುದ್ರಪ್ಪ ಸಾವಿಗೀಡಾಗಿದ್ದರು. ಕೋವಿಡ್ 19 ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಗಡಿಗಳನ್ನು ಮುಚ್ಚಲಾಗಿದೆ.
ಕಣ್ಣೂರು ಗಡಿಯೂ ಬಂದ್! ದ್ವೀಪದಂತಾದ ಕಾಸರಗೋಡು
ಕಾಸರಗೋಡು: ಕೋವಿಡ್ 19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಕಣ್ಣೂರು ಜಿಲ್ಲೆಯ ಗಡಿಗಳ ರಸ್ತೆಗಳನ್ನು ಮುಚ್ಚಲಾಗಿದೆ.
ಕರ್ನಾಟಕವನ್ನು ಪ್ರವೇಶಿಸುವ ಎಲ್ಲ ಗಡಿ ರಸ್ತೆಗಳನ್ನು ಈ ಹಿಂದೆಯೇ ಮುಚ್ಚಲಾಗಿದೆ. ಅನಾರೋಗ್ಯ ಎದುರಾದಾಗ ಜಿಲ್ಲೆಯ ಜನರ ಮೊದಲು ಆದ್ಯತೆ ಮಂಗಳೂರಿನ ಆಸ್ಪತ್ರೆಗಳು; ಎರಡನೇಯದು ಕಣ್ಣೂರಿನ ಆಸ್ಪತ್ರೆಗಳು. ಆದರೆ ಈಗ ಎರಡೂ ಬದಿಯ ದಾರಿಗಳು ಬಂದ್ ಆಗಿದ್ದು, ಜಿಲ್ಲೆ ಅಕ್ಷರಶಃ ದ್ವೀಪದಂತಾಗಿದೆ.ಕಾಸರಗೋಡು ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಕೋವಿಡ್ 19 ಸೋಂಕು ಬಾಧಿತವಾಗಿರುವುದರಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.