Desi Swara: ಬಂಟ್ಸ್ ಬಹ್ರೈನ್- 20ನೇ ವಾರ್ಷಿಕೋತ್ಸವ ಸಂಭ್ರಮ
ಸಾಧಕರ ಉಪಸ್ಥಿತಿಯೊಂದಿಗೆ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ
Team Udayavani, Dec 23, 2023, 12:49 PM IST
ಬಹ್ರೈನ್: ಸಂಘಟನೆಯೆನ್ನುವುದು ಒಂದು ರಥದಂತೆ. ಆ ರಥವನ್ನು ಒಬ್ಬರೋ ಇಬ್ಬರೋ ಎಳೆಯಲು ಸಾಧ್ಯವಿಲ್ಲ. ಸಮಾಜದ ಎಲ್ಲರೂ ಒಂದಾಗಿ ಆ ರಥವನ್ನು ಎಳೆದಾಗ ಆ ರಥ ಸರಾಗವಾಗಿ ಸಾಗಿ ರಥೋತ್ಸವ ಯಶಸ್ವಿಯಾಗುತ್ತದೆ ಎಂದು ಬಹ್ರೈನ್ ದ್ವೀಪದ ಅನಿವಾಸಿ ಬಂಟರ ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕಳೆದ ಇಪ್ಪತ್ತು ವರುಷಗಳಿಂದ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ದ್ವೀಪದ ಬಂಟ ಬಾಂಧವರನ್ನು ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿರುವ ಬಂಟ್ಸ್ ಬಹ್ರೈನ್ ಸಂಘಟನೆಯ ಪ್ರಸಕ್ತ ಅಧ್ಯಕ್ಷರಾಗಿರುವ ಸೌಕೂರು ಅರುಣ್ ಶೆಟ್ಟಿ ಯವಾರ ಸಾರಥ್ಯದಲ್ಲಿ ಇಲ್ಲಿನ ಪಂಚತಾರಾ ಹೊಟೇಲ್ ಕ್ರೌನ್ ಪ್ಲಾಜಾದ ಸಭಾಂಗಣದಲ್ಲಿ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಬಂಟ ಸಮುದಾಯದ ಸಾಧಕರಾದ ಸಮಾಜ ಸೇವಕರೂ, ಕಾಪು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಗುರ್ಮೆ ಸುರೇಶ್ ಶೆಟ್ಟಿ , ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸಲಗ ಖ್ಯಾತಿಯ ಯಶ್ ಶೆಟ್ಟಿ ಯವರು ಗೌರಾವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ಸಮಾರಂಭಕ್ಕೆ ಹೆಚ್ಚಿನ ಮೆರುಗು ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ದ್ವೀಪದ ಬಂಟ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ಹಾಡು, ನೃತ್ಯ, ಕಿರುಪ್ರಹಸನಗಳ ವರ್ಣರಂಜಿತ ಸಾಂಸ್ಕೃತಿಕ ಲೋಕವು ಅನಾವರಣಗೊಂಡು ನೆರೆದವರಿಗೆ ಯಥೇತ್ಛ ಮನರಂಜನೆ ನೀಡಿತು.
ಪ್ರತಿಮಾ ಅರುಣ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ನಾಡಿನಿಂದ ಬಂದಂತಹ ಅತಿಥಿಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗಣ್ಯರುಗಳು ಒಂದಾಗಿ ಜ್ಯೋತಿ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಅತಿಥಿಗಳನ್ನು ನಾಗ್ಪುರ್ ವಾದ್ಯ ಹಾಗೂ ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಮುಖ್ಯ ದ್ವಾರದಿಂದ ಸಭಾಂಗಣದ ಮುಂಭಾಗದವರೆಗೆ ಕರೆದುಕೊಂಡು ಬರಲಾಯಿತು. ಬಂಟ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ರಂಗದ ಮೇಲೆ ವೈವಿಧ್ಯಮಯವಾದ ನೃತ್ಯ ಪ್ರದರ್ಶನಗಳು, ಗಾಯನ, ಹಾಸ್ಯ, ಕಿರು ನಾಟಕ ರಂಗದ ಮೇಲೆ ಯಶಸ್ವಿಯಾಗಿ ಅನಾವರಣಗೊಂಡು ನೆರೆದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು. ಅಧ್ಯಕ್ಷರಾದ ಅರುಣ್ ಶೆಟ್ಟಿಯವರು ಮಾತನಾಡಿ ಇಪ್ಪತ್ತರ ಸಂವತ್ಸರದಲ್ಲಿರುವ ಬಂಟ್ಸ್ ಬಹ್ರೈನ್ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದಿರುವ ಸ್ವಯಂ ಸೇವಕರನ್ನು ಹಾಗೂ ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಗುರ್ಮೆ ಸುರೇಶ್ ಶೆಟ್ಟಿ ಹಾಗೂ ನಟ ಯಶ್ ಅವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಜತೆಯಾಗಿ ಸಮ್ಮಾನಿಸಿದರು. ಸಭಾಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ರೋಹನ್ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯದರ್ಶಿ ಯಕ್ಷಿತ್ ಶೆಟ್ಟಿ ಹಾಗೂ ಶ್ರುತಿ ಶೆಟ್ಟಿ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ-ಕಮಲಾಕ್ಷ ಅಮೀನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.