Desi Swara: ಕನ್ನಡ ಭಾರತಿ -ಮನದಿ ಮಾಸದುಳಿವ ಸಂಕ್ರಾತಿ ಸಡಗರ
ಕನ್ನಡಿಗರ ಹೃದಯ ತುಂಬಿಬಾರದೇ ಇರುವುದಕ್ಕುಂಟೆ?
Team Udayavani, Feb 24, 2024, 10:15 AM IST
ಸಂಘೇ ಶಕ್ತಿಃ ಕಲೌಯುಗೇ ಕಲಿಯುಗದಲ್ಲಿ ಸಂಘಟನೆಯ ಶಕ್ತಿ ಬಲಯುತವಾದುದು. ಹಗ್ಗವಾಗಿ ಮಾಡಲ್ಪಟ್ಟ ಹುಲ್ಲಿನಿಂದ ಮದಿಸಿದ ಆನೆಯನ್ನೂ ಕಟ್ಟಬಹುದು ಎಂದು ಸಂಸ್ಕೃತದ ಸುಭಾಷಿತವೊಂದು ಹೇಳುತ್ತದೆ. ಅಮೆರಿಕದ ಸಿಯಾಟೆಲ್‌ನ ಬಾಥೆಲ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಂಡು ಸಂತೋಷಗೊಳ್ಳುವ ಅವಕಾಶ ದೊರೆತಾಗ ಮೇಲೆ ಹೇಳಿದ ಸಂಗತಿಯು ನಿಜವಾದುದೆಂದು ಗೋಚರವಾಯಿತು.
ಬಾಥೆಲ್‌ನಲ್ಲಿ ಕನ್ನಡ ಭಾರತಿ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೆ. 3ರಂದು ಒಂದು ದಿನದ ಕಾರ್ಯಕ್ರಮ ನಡೆಯಿತು. ಶಾಲೆಯು ಶೃಂಗಾರಗೊಂಡಿತ್ತು. ಸಂತಸ ಮನೆಮಾಡಿತ್ತು. ಜಾತ್ರೆಯೋ, ಮದುವೆಯೋ, ಮುಂಜಿಯೋ (ಉಪನಯನವೋ), ದೇವಕಾರ್ಯವೋ ಎಂಬಂತೆ ಸಡಗರ ಎಲ್ಲಕಡೆಯೂ ಗೋಚರಿಸುತ್ತಿತ್ತು. ಒಳಹೋಗುತ್ತಿದ್ದಂತೆ ಮಂದಹಾಸದಿ ಮಂದಗಮನೆಯರು ಎಳ್ಳುಬೆಲ್ಲವನಿತ್ತು ಸ್ವಾಗತಿಸಿದರು. ಪುಟಾಣಿಗಳು, ಬಾಲಕ – ಬಾಲಕಿಯರು, ಯುವಕ – ಯುವತಿಯರು, ಮಾತೆಯರು, ಮಹನೀಯರು, ವೃದ್ಧರು ಪಾಲ್ಗೊಂಡಿದ್ದರು. ಎಲ್ಲರೂ ಕನ್ನಡವನ್ನೇ ಮಾತನಾಡುತ್ತ, ನಗುತ್ತಾ ಓಡಾಡುವುದನ್ನು ಕಂಡಾಗ ಕನ್ನಡಿಗರ ಹೃದಯ ತುಂಬಿಬಾರದೇ ಇರುವುದಕ್ಕುಂಟೆ? ಎಲ್ಲರ ಕಂಗಳಲ್ಲಿ ಪ್ರೀತಿ ಇಣುಕುತ್ತಿತ್ತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮವು ಭಾರತೀಯರ ಕಲೆ, ಸಂಸ್ಕೃತಿ, ಆಚಾರ- ವಿಚಾರಗಳ ಸಂಗಮದಂತೆ ಭಾಸವಾಯಿತೆಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಭಾರತೀಯ ವೇಷಭೂಷಣ, ಊಟೋಪಚಾರಗಳು ಹೆಮ್ಮೆ ತರುವಂತಿದ್ದವು. ವಿಶಾಲವಾದ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಾಳೆ ಎಲೆಯ ಊಟ, ಬಗೆಬಗೆಯ ಕಜ್ಜಾಯಗಳು, ಪದಾರ್ಥಗಳು, ಬಡಿಸುವವರ ಪ್ರೀತಿ, ಮೇಲ್ವಿಚಾರಕರ ಕಾಳಜಿ ಹೀಗೆ ಎಲ್ಲವೂ ಆದರ್ಶವೇ ಆಗಿತ್ತು. ಸುಮಾರು ಸಾವಿರ ಸಂಖ್ಯೆಯಲ್ಲಿರುವ ಎಲ್ಲರಿಗೂ ಷಡ್ರಸೋಪೇತ ಭೋಜನ !
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪ್ರದರ್ಶನಗೊಂಡ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಲೇಪವಿದ್ದು ಪ್ರೇಕ್ಷಕರನ್ನು ಸಂತೋಷದಲ್ಲಿ ತೇಲಾಡುವಂತೆ ಮಾಡಿತು. ಗಾನ, ವಾದನ, ದಾಸರ ಪದಗಳು, ಶಾಸ್ತ್ರೀಯ ಸಂಗೀತ, ಕೋಲಾಟ, ಮೊದಲಾದ ಹತ್ತೆಂಟು ಬಗೆಯ ಕಲೆಗಳು ಪ್ರದರ್ಶನಗೊಂಡವು. ಎಲ್ಲದರಲ್ಲಿಯೂ ಅಚ್ಚುಕಟ್ಟಿಗೆ ಕೊರತೆ ಇರಲಿಲ್ಲ.
ಮಧ್ಯಂತರದಲ್ಲಿ ಕಲಾ ಪ್ರೋತ್ಸಾಹಕರಿಗೆ, ಪ್ರಾಯೋಜಕರಿಗೆ, ಸಂಘ ಕಟ್ಟುವಲ್ಲಿ ಶ್ರಮಿಸಿದವರಿಗೆ, ಸಾಧಕರಿಗೆ ಮೆಚ್ಚುಗೆಯ ಮಾತನಾಡಿ ಗೌರವಿಸಿದರು. ಸಮ್ಮಾನಕ್ಕೆ ಅರ್ಹರಾದವರನ್ನು ಸಮ್ಮಾನಿಸಿದ್ದು, ಔಚಿತ್ಯಪೂರ್ಣವಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ನಿರೂಪಕರಾಗಿ ತೊಡಗಿಕೊಂಡವರ ಪಾಲೂ ಸಹ ಮಹತ್ವದ್ದಾ ಗಿರುತ್ತದೆ. ನಿರೂಪಕರಾಗಿ ತೊಡಗಿಕೊಂಡವರೆಲ್ಲಾ ಅನುಭವಿಗಳಾಗಿದ್ದು, ತಮ್ಮ ಕೌಶಲಪೂರ್ಣ ಮಾತುಗಾರಿಕೆಯಿಂದ ವಿಶೇಷ ಮೆರುಗು ನೀಡಿದರು.
ಎಲ್ಲರೊಳಗೊಂದಾಗಿ ಬೆರೆಯಲು, ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ನಮಗೂ ಅವಕಾಶ ದೊರಕಿದ್ದು ನಮ್ಮ ಭಾಗ್ಯ. ಯಕ್ಷಗಾನದ ತಾಳಮದ್ದಳೆಯ ತುಣುಕೊಂದು ನಮ್ಮಿಂದ ಪ್ರದರ್ಶಿಸಲ್ಪಟ್ಟಿದ್ದು, ವಾಲಿಮೋಕ್ಷ ಪ್ರಸಂಗದ ಕೊನೆ ಸನ್ನಿವೇಶವಿತ್ತು.
ಭಾರತೀಯ ರಾಯಭಾರಿ ಪ್ರಕಾಶ್ ಗುಪ್ತಾ ಮತ್ತು ಭಾರತೀಯ ಉಪ ರಾಯಭಾರಿ ಸುರೇಶ್ ಶರ್ಮಾ ಕಾರ್ಯಕ್ರಮಕ್ಕೆ ಆಗಮಿಸಿ ಕನ್ನಡ ಭಾರತಿಯ ಕಾರ್ಯವೈಖರಿಯ ಕುರಿತು ಮೆಚ್ಚುಗೆ ಸೂಚಿಸಿದರು. ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಉಳಿಯಬೇಕಾದರೆ ಇಂಥ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯಬೇಕು ಎಂದರು. ಕನ್ನಡ ಭಾರತಿ ವತಿಯಿಂದ ಅವರನ್ನು ಗೌರವಿಸಲಾಯಿತು. ಅಮೆರಿಕ ಸರಕಾರ ಕೊಡಮಾಡುವ ಪ್ರಸಿಡೆಂಟ್ಸ್ ವ್ಯಾಲೆಂಟರ್ ಅವಾರ್ಡ್ ಅನ್ನು ಕನ್ನಡ ಭಾರತಿ ಸ್ವಯಂಸೇವಕರಿಗೆ ನಿಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ಮುಕುಟಪ್ರಾಯವಾದುದು ಸಂಗೀತ ರಸಸಂಜೆ. ಸುಮಾರು ಎರಡು ತಾಸುಗಳಷ್ಟು ನಡೆದ ಈ ಕಾರ್ಯಕ್ರಮದಲ್ಲಿ “ಸರಿಗಮಪ’ ಖ್ಯಾತಿಯ ಸುಪ್ರಿಯಾ ಜೋಶಿ ಹಾಗೂ “ಎದೆ ತುಂಬಿ ಹಾಡುವೆನು’ ಖ್ಯಾತಿಯ ವಿಜಯೇಂದ್ರ ರಾವ್ ಪಾಲ್ಗೊಂಡಿದ್ದರು. ಹಿಮ್ಮೇಳನದ ಸಂಗೀತವನ್ನೊದಗಿಸಿದ ಕಲಾವಿದರ ಪ್ರಬುದ್ಧತೆ ಮೆಚ್ಚುವಂತಿತ್ತು.
ಕ್ರಾಸ್ ಆಫ್ ಕ್ರೈಸ್ಟ್ ಲುಥೆರನ್ ಚರ್ಚ್ ಮತ್ತು ಕನ್ನಡ ಭಾರತಿಗೂ ನಿಜವಾಗಿ ಬಿಡಿಸಲಾರದ ನಂಟಿದೆ. ಭಾರತೀಯ ಹಾಗೂ ಎಲ್ಲ ರೀತಿಯ ಕಲೆಗಳ ಕುರಿತು ತುಂಬು ಅಭಿಮಾನವಿರುವ ಚರ್ಚಿನ ಆಡಳಿತ ಮಂಡಳಿಯು ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಭರತನಾಟ್ಯ, ತಬಲಾ, ಗಿಟಾರ್ ಮೊದಲಾದ ತರಗತಿಗಳನ್ನು ನಡೆಸಲು ಕನ್ನಡ ಭಾರತಿಗೆ ಅನುವು ಮಾಡಿಕೊಟ್ಟಿದೆ. ಚರ್ಚಿನ ಪಾಸ್ಟರ್ ಡೇವ್ ಅವರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘದ ಗೌರವವನ್ನು ಸ್ವೀಕರಿಸಿದರು.
ವರದಿ: ಸುಲೋಚನಾ ಹೆಗಡೆ, ಹರಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.