Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ
ಅಮೆರಿಕ: ಮಿನ್ನೆಸೋಟ ಕನ್ನಡ ಓದುಗರ ಕಟ್ಟೆಯಲ್ಲಿ ಸಂಶೋಧಕ ಡಾ| ವೀರಭದ್ರಯ್ಯ
Team Udayavani, Jun 29, 2024, 2:45 PM IST
ಮಿನ್ನೆಸೋಟ:ಭಾರತದ ಸಿಂಧೂ ಬಯಲಿನ ನಾಗರಿಕತೆಯ ಹರಪ್ಪ ಮತ್ತು ಮಹೆಂಜೋದಾರೋ ಉಲ್ಲೇಖಗಳೂ ಸೇರಿದಂತೆ ಈ ವರೆಗಿನ ಶಾಸನಾಧಾರಿತ ವ್ಯಾಪಕ ಸಂಶೋಧನ ಆಯಾಮಗಳನ್ನು ಕೇಂದ್ರೀಕರಿಸಿ ವೀರಶೈವವು ಬಸವಪೂರ್ವಯುಗದ ಅತ್ಯಂತ ಪ್ರಾಚೀನ ಸನಾತನ ಧರ್ಮವಾಗಿದೆ ಎಂದು ಕನ್ನಡದ ಹಿರಿಯ ಸಂಶೋಧಕ ಬಳ್ಳಾರಿಯ ಡಾ| ಚಿಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.
ಅವರು ಉತ್ತರ ಅಮೆರಿಕದ ಮಿನ್ನೆಸೋಟ ನಗರದ ಕನ್ನಡ ಓದುಗರ ಕಟ್ಟೆ ಸಂಘಟನೆಯು “ವೀರಶೈವ ಧರ್ಮದ ಆಕರಗಳು ಮತ್ತು ಪ್ರಾಚೀನತೆ: ಒಂದು ಅವಲೋಕನ’ ಎಂಬ ವಿಷಯವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದುಂಡು ಮೇಜಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕ್ರಿಸ್ತ ಪೂರ್ವ ಸುಮಾರು 8 ಸಾವಿರ ವರ್ಷಗಳಷ್ಟು ಪ್ರಾಚೀನವಾದ್ದೆಂದು ಹೇಳಲಾಗುವ ಸಿಂಧೂ ಬಯಲಿನ ಹರಪ್ಪ ಮತ್ತು ಮಹೆಂಜೋದಾರೋ ಸಂಸ್ಕೃತಿಯಲ್ಲಿ ದೇವಾಲಯಗಳ ಕುರುಹುಗಳೇ ಲಭಿಸಿಲ್ಲ.
ಜತೆಗೆ ಇಲ್ಲಿ ಅನೇಕ ಧಾರಣೆ ಯೋಗ್ಯ ಶಿವಲಿಂಗಗಳೇ ಲಭಿಸಿರುವುದರಿಂದ ಅಲ್ಲಿಯ ಜನರು ಶಿವಲಿಂಗಗಳ ಅರ್ಚನೆ, ಆರಾಧನೆ ಹಾಗೂ ಅನುಸಂಧಾನಕ್ಕೆ ತೆರೆದುಕೊಂಡಿರುವುದು ಗೋಚರವಾಗಿರುವ ಹಿನ್ನೆಲೆಯಲ್ಲಿ ಅವರೆಲ್ಲರೂ ವೀರಶೈವರಾಗಿದ್ದರು. ಅವರು ದೇಹದ ಮೇಲೆಯೇ ಶಿವಲಿಂಗಗಳನ್ನು ಧಾರಣೆ ಮಾಡಿದ್ದರಿಂದ “ಇಷ್ಟಲಿಂಗ’ದ ಪರಿಕಲ್ಪನೆ ಕೇವಲ 12ನೇ ಶತಮಾನದ್ದಾಗಿರದೇ ಸಿಂಧೂ ಬಯಲಿನ ಸಂಸ್ಕೃತಿಯಲ್ಲಿಯೇ ಇತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ವೀರಶೈವ ಧರ್ಮದ ಪಂಚಪೀಠಗಳ ಅನೇಕ ಮಹತ್ವದ ದಾಖಲೆಗಳು, ಕ್ರಿಸ್ತ ಪೂರ್ವ 5ನೇ ಶತಮಾನದಿಂದ ಕ್ರಿ.ಶ. 19ನೇ ಶತಮಾನದ ವರೆಗೆ ಲಭ್ಯವಾಗಿರುವ ಅಪೂರ್ವ ಶಾಸನಗಳಲ್ಲಿ, ವೇದ, ಆಗಮ, ಉಪನಿಷತ್ತುಗಳಲ್ಲಿ, ಪುರಾಣಗಳಲ್ಲಿ, ಸಂಸ್ಕೃತ ಕಾವ್ಯಗಳಲ್ಲಿ, ತಮಿಳು ಸಾಹಿತ್ಯದಲ್ಲಿ, ಕನ್ನಡದ ವೀರಶೈವ ಕವಿಗಳ ಕಾವ್ಯಗಳಲ್ಲಿ, ಪ್ರಾಕ್ತನ ಅವಶೇಷಗಳಲ್ಲಿ, ಅನೇಕ ಶಿಲ್ಪಗಳಲ್ಲಿ, ಕಾಂಬೋಡಿಯಾ, ಶ್ರೀಲಂಕಾ, ನೇಪಾಲ, ಜಾವಾ, ಕೆಂಬಿಜ್, ಯುರೋಪ್ ಹಾಗೂ ಮೆಡಿಟರೇನಿಯನ್ ತೀರದ ಪ್ರದೇಶಗಳಲ್ಲಿ ಲಭ್ಯವಾದ ವೀರಶೈವ ಧರ್ಮದ ವಿಶಿಷ್ಟ ಆಕರಗಳು ವೀರಶೈವ ಧರ್ಮದ ಪ್ರಾಚೀನತೆಯನ್ನು ಸಾಕ್ಷೀಕರಿಸುತ್ತಿದ್ದು, ವೀರಶೈವವು ಉತ್ಕೃಷ್ಟ ಸನಾತನ ಧರ್ಮವೆಂಬುದನ್ನು ಸಾಬೀತುಪಡಿಸುತ್ತವೆ.
ವೀರಶೈವ ಧರ್ಮದ ಅಖಂಡತೆಯನ್ನು ಮರೆಮಾಚಲು ವೀರಶೈವ ಧರ್ಮದ ವಿಚಾರಗಳನ್ನು ಕೇವಲ 12ನೇ ಶತಮಾನಕ್ಕಷ್ಟೇ ಸಿಮೀತಗೊಳಿಸಿ ಪ್ರತಿಪಾದಿಸುವ ವಿಚಾರಗಳು ಪ್ರಕ್ಷಿಪ್ತವಾದವುಗಳು ಎಂದೂ ಅವರು ಹೇಳಿದರು.
ವಚನಗಳಲ್ಲಿ ವೀರಶೈವ: ಈ ತನಕ ಲಭ್ಯವಾದ ಒಟ್ಟು ವಚನ ವಾಘ್ಮಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಚನಗಳಲ್ಲಿ “ವೀರಶೈವ’ ಪದಪ್ರಯೋಗವಾಗಿದ್ದು, ಕೈ ಬೆರಳಿಗೆ ಎಣಿಕೆಯಾಗುವಷ್ಟು ವಚನಗಳಲ್ಲಿ ಮಾತ್ರ “ಲಿಂಗಾಯತ’ ಪದಪ್ರಯೋಗವಾಗಿದ್ದನ್ನು ಗಮನಿಸಬೇಕಾಗುತ್ತದೆ ಎಂದೂ ಡಾ| ವೀರಭದ್ರಯ್ಯ ಹೇಳಿದರು.
ಅಮೆರಿಕದ ಮಿನ್ನೆಸೋಟ ನಗರದ ಕನ್ನಡ ಓದುಗರ ಕಟ್ಟೆ ಸಂಘಟನೆಯ ಪರವಾಗಿ ಡಾ| ವೀರಭದ್ರಯ್ಯ ಹಾಗೂ ಅವರ ಪತ್ನಿ ಎಂ.ಸಿ. ಉಷಾರಾಣಿ ವೀರಭದ್ರಯ್ಯ ಅವರನ್ನು ಗೌರವಿಸಲಾಯಿತು. ಮಿನ್ನೆಸೋಟ ಕನ್ನಡ ಓದುಗರ ಕಟ್ಟೆಯ ಹರೀಶ್ ಕೃಷ್ಣಪ್ಪ, ದಿನೇಶ್ ಪಟ್ಟಣಶೆಟ್ಟಿ, ಮೋಹನ್ ಮಠದ, ಮಿನ್ನೆಸೋಟ ಸಂಗೀತ ಕನ್ನಡ ಬಳಗದ ರಮೇಶ ಮುನಿಸ್ವಾಮಿ, ಗೋಪಾಲ ಹಿರೇಗೊಪ್ಪ, ಸ್ವಾಮಿ ಬೇಗೂರು ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.