Festivals Celebration ಆಧುನಿಕತೆಯಲ್ಲಿ ಬಂಧಿಯಾಗುತ್ತಿರುವ ಹಬ್ಬಗಳ ಸಂಭ್ರಮ
ವಿಶಿಷ್ಟ ಉತ್ಸವಗಳು, ವಿಭಿನ್ನ ಆಚರಣೆಗಳು
Team Udayavani, Nov 26, 2023, 7:45 AM IST
ಆಗಸ್ಟ್ ತಿಂಗಳು ಬಂತೆಂದರೆ ಒಂದರ ಹಿಂದೆ ಒಂದು ಹಬ್ಬಗಳು ಸಾಲಾಗಿ ಬಂದು ಬಿಡುತ್ತವೆ. ಅದರಲ್ಲಿ ಈ ಭಾರಿ ನವೆಂಬರ್ ತಿಂಗಳಂತೂ ನಮ್ಮ ಕನ್ನಡ ತಾಯಿಯ ಕರ್ನಾಟಕ ರಾಜ್ಯೋತ್ಸವದ ಖುಷಿಯ ಜತೆಜತೆಗೆ, ದೀಪಾವಳಿಯ ಬೆಳಗು ಒಟ್ಟು ಗೂಡಿಕೊಂಡಿದೆ. ವರ್ಷದ ಹಬ್ಬಗಳ ಕೊನೆಯ ಘಟ್ಟ ಇದು. ಇನ್ನು ಹೊಸವರ್ಷದ ಯುಗಾದಿಯ ಬಳಿಕ ಮತ್ತೆ ಮುಂದಿನ ಗಣೇಶನ ಬರುವಿಕೆಯ ವರೆಗೂ ಕಾಯಲೇ ಬೇಕು. ವರ್ಷಾಂತ್ಯಕ್ಕೆ ಮೆರುಗು ನೀಡುವುದು ಊರ ಜಾತ್ರೆಗಳು ಹೌದು. ದೇಶವನ್ನು ಬಿಟ್ಟು ಹೊರದೇಶದಲ್ಲಿ ವಾಸಿಸುವವರಿಗೆ ಊರಿನಲ್ಲಿ ಈ ಎಲ್ಲ ಹಬ್ಬಗಳನ್ನು ಆಚರಿಸುವ ಖುಷಿ, ಸಂಭ್ರಮ ನೆನಪಿನ ಸುಳಿಯಲ್ಲಿ ಹಾದುಹೋಗುತ್ತವೆ. ಈಗ ಪರದೇಶದಲ್ಲಿ ನಮ್ಮ ದೇಶದವರು, ನಾಡಿನವರು ಹಲವಾರು ನೆಲೆಸಿದ್ದಾರೆ. ಅವರೆಲ್ಲರಿಗೂ ನಮ್ಮ ತಾಯ್ನಾಡಿನವರೊಂದಿಗೆ ಬೆರೆಯಲು ಈ ಹಬ್ಬಗಳೇ ಅವಕಾಶವಾಗಿ ಒದಗುತ್ತಿವೆ. ಆದರೆ ಇತ್ತೀಚೆಗಿನ ಹಬ್ಬಗಳ ಆಚರಣೆಗಳು ಕೇವಲ ಮೊಬೈಲ್, ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿಗೆ, ಅಲ್ಲಿಯ ತೋರ್ಪಡಿಕೆಗೆ ಮೀಸಲಾಗುತ್ತಿರುವುದು ಬೇಸರದ ಸಂಗತಿ.
ಈ ನವೆಂಬರ್‌ನಲ್ಲಿ ಆಚರಿಸಿದ್ದು ಮುಖ್ಯವಾಗಿ ಹಬ್ಬಗಳನ್ನೇ, ಅಪರೂಪಕ್ಕೆ ಬರುವ ಕ್ರಿಕೆಟ್ ವಿಶ್ವಕಪ್ಪನ್ನೂ ಸೇರಿ! ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ ,ದೀಪಾವಳಿ ಹಬ್ಬಗಳು ಪ್ರತೀ ವರ್ಷವೂ ಶೋಭಾಯಮಾನವಾಗಿ ಆಚರಿಸುವ ಉತ್ಸವಗಳೇ. ಈ ಎಲ್ಲ ಉತ್ಸವಗಳ ಮಹತ್ವ ವಿಶಿಷ್ಟವಾದರೆ, ಆಚರಣೆಗಳೂ ವಿಭಿನ್ನ. ಈ ವೈವಿಧ್ಯತೆಗಳೇ ಹಬ್ಬಗಳನ್ನು ಸುಲಭವಾಗಿ ನೆನಪಿನಲ್ಲಿಡುವಂತೆ ಮಾಡುವುದು.
ನವೆಂಬರ್ ತಿಂಗಳ ಮೊದಲನೇ ದಿನವೇ ಕನ್ನಡ ಭುವನೇಶ್ವರಿಯ ಹಬ್ಬ. ನವೆಂಬರ್ ಇಡೀ ಆಚರಿಸುವ ಕರ್ನಾಟಕ ರಾಜ್ಯೋತ್ಸವಕ್ಕೆ ಅಂದದ ಮುಕುಟವೇರ್ಪಡುವ ಸಮಯ ನವೆಂಬರ್ ಒಂದು. ದಕ್ಷಿಣ ಭಾರತದ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ, ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನ ಕನ್ನಡಿಗರಿಗೆ ನಾಡಹಬ್ಬ. ಈ ಸಲವಂತೂ ಹಬ್ಬದ ಸಡಗರ ದ್ವಿಗುಣ. ನವೆಂಬರ್ 1, 1973ರಂದು ಮೈಸೂರು ರಾಜ್ಯ ಕರ್ನಾಟಕವಾಯಿತು. ಆ ಐತಿಹಾಸಿಕ ನಿರ್ಧಾರಕ್ಕೆ ಇಂದಿಗೆ 50 ವರ್ಷ. ಅರ್ಥಾತ್ ಮರುನಾಮಕರಣಕ್ಕೆ ಸುವರ್ಣ ಸಂಭ್ರಮ. ರಾಜ್ಯವು ಗಡಿನಾಡು, ಕರಾವಳಿ, ಮಲೆನಾಡು, ಕಲ್ಯಾಣ-ಕಿತ್ತೂರು, ಹಳೆ ಮೈಸೂರು, ಬಯಲು ಸೀಮೆಗಳೆಂಬ ಭೇದವನ್ನು ಮರೆತು ಒಮ್ಮತದಿಂದ ಅಸ್ಮಿತೆಯನ್ನು ಕಾಯುವ ಪಣತೊಡುವ ಹಬ್ಬವಿದು. ಅನಿವಾಸೀ ಕನ್ನಡಿಗರೂ ಸಂಭ್ರಮದಿಂದ ಆಚರಿಸುವ ನಾಡ ಹಬ್ಬ.
ಬಾಲ್ಯದಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಶಾಲೆಯ ಮಟ್ಟಿಗೆ ಪ್ರಧಾನ ಹಬ್ಬಗಳು. ಈ ಮೂರೂ ಆಚರಣೆಗಳಲ್ಲಿ ಧ್ವಜಾರೋಹಣವೇ ಪ್ರಧಾನ. ಹಾಗಾಗಿ ಆರಂಭದಲ್ಲಿ ನಮಗೆ ಈ ಎಲ್ಲ ಹಬ್ಬಗಳೂ ಧ್ವಜವಂದನೆಯ ಹಬ್ಬ. ಬರಬರುತ್ತಾ, ಈ ಮೂರರ ಪ್ರಾಮುಖ್ಯ ಅರಿವಾಗಿದ್ದುದು ಪುಸ್ತಕಗಳ ಪಾಠಗಳಿಂದಲೇ.
ಕರಾವಳಿಯ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿ ಮುದ್ದಣ್ಣ, ಪಂಜೆ ಮಂಗೇಶರಾಯರು, ಗೋವಿಂದ ಪೈ, ಕಯ್ನಾರರು ಮತ್ತು ಇತ್ತೀಚಿಗಿನ ಕನ್ನಡದ ಕಟ್ಟಾಳುಗಳ ಪುನರ್ಮನನವಾಗುತ್ತಿತ್ತು. ಶಾಲೆಯ ವಾಚನಾಲಯ ಸದ್ದಿಲ್ಲದೇ ಬಾಲಮಂಗಳ, ಬಾಲಮಿತ್ರ, ಚಂದಮಾಮಾ, ತುಂತುರು, ದೈನಿಕ ಪತ್ರಿಕೆಗಳ ಪುರವಣಿಗಳು, ಚಿಣ್ಣರ ಕಥೆ-ಚಿತ್ರ ಇವೆಲ್ಲವುಗಳೂ ಕನ್ನಡ-ಇಂಗ್ಲೀಷ್ ಮಾಧ್ಯಮದ ಹೊರತಾಗಿಯೂ, ಮಾತೃಭಾಷೆ ತುಳು-ಕೊಂಕಣಿ-ಬ್ಯಾರಿ ಎಂಬ ತಿಕ್ಕಾಟಗಳ ಪರಿವೆಯಿಲ್ಲದೆಯೂ ಮೌನಕ್ರಾಂತಿ ಮಾಡಿದ್ದುದು ಸತ್ಯವೇ.
ದೀಪಾವಳಿ, ಸ್ನಾನದ ಹಬ್ಬ. ದೀಪಗಳೊಂದಿಗೆ ಸಡಗರ ನೂರ್ಮಡಿಯಾಗುವುದು ಬೆಳಕಿನ ಹಬ್ಬಕ್ಕೆ. ಸಹೋದರ-ಸಹೋದರಿಯರ ಜತೆ ಕುಳಿತು ಗೂಡುದೀಪ ಮಾಡುವುದು, ಮನೆಯ ಮುಂದೆ ಮನೆಯಲ್ಲೇ ಮಾಡಿದ ಗೂಡುದೀಪ ನೇತಾಡಿಸುವ ಅಲಿಖೀತ ಜವಾಬ್ದಾರಿ ಮನೆಯ ಚಿಣ್ಣರಿಗೆ. ಸಾಯಂಕಾಲ ಅಮ್ಮನ ಜತೆ ಮನೆಯ ಹೊರಗಡೆ ದೀಪ ಹಚ್ಚುವುದು. ಆಕಾಶದ ನಕ್ಷತ್ರದ ಜತೆ ನಮ್ಮ ಅಕ್ಕಪಕ್ಕದ ಮನೆಯವರು ಬಿಟ್ಟಿರುವ ಪಟಾಕಿಯನ್ನು ನೋಡಿ ಆನಂದಿಸಿದ್ದು, ನಕ್ಷತ್ರಕಡ್ಡಿ, ನೆಲಚಕ್ರ, ಮಳೆ ಪಟಾಕಿ, ಲಾಠಿ ಪಟಾಕಿ ಹೀಗೆ ಒಂದಿಷ್ಟು ಪಟಾಕಿಯನ್ನು ಜತೆಗೂಡಿ ಬಿಡುವುದು. ಚಿಣ್ಣರಿಗಂದೇ ಮೀಸಲಾಗಿದ್ದ ರೋಲ್-ಕಾಪ್ ರೀತಿಯ ಸಿಡಿ ಪೆಟ್ಟಿಗೆಗಳು, ಬೆಂಕಿಕಡ್ಡಿಯ ಗಾತ್ರದ ಬಣ್ಣದ ಸುರು ಕಡ್ಡಿಗಳು, ಆರಂಭಿಕರಿಗೆ ಬಿರುಸು ಪಟಾಕಿಗಳನ್ನು ಬಿಡಲು ಧೈರ್ಯವನ್ನು ನೀಡುತ್ತಿತ್ತು. ಈ ಹೊತ್ತಿಗೇ ಸರಿಸುಮಾರಾಗಿ ಶಾಲೆಯಲ್ಲಿ ತರಗತಿಯ ನಾಯಕ ಪ್ರತಿಯೊಬ್ಬರಿಂದಲೂ ಒಂದೆರಡು ರೂಪಾಯಿಗಳನ್ನು ಸಂಗ್ರಹಿಸಿ, ಬಣ್ಣದ ಕಾಗದ, ನೂಲು, ಅಂಟನ್ನು ಕೊಂಡು ತಂದು ತರಗತಿಯ ಚಾಣಾಕ್ಷನಿಗೆ ಒಪ್ಪಿಸುತ್ತಿದ್ದ. ಅವನು ತನ್ನೆಲ್ಲ ಕೌಶಲಗಳನ್ನು ಬಳಸಿ ಭರ್ಜರಿಯಾದ ಗೂಡುದೀಪವನ್ನು ತಯಾರಿಸುತ್ತಿದ್ದ. ಇನ್ನು ನಾಲ್ಕಾರು ಮಂದಿ ಸೇರಿ ತರಗತಿಯ ಛಾವಣಿಯ ಮಧ್ಯಕ್ಕೆ ಇಳಿಬಿಟ್ಟ ಜಂತಿಗೆ ಗೂಡುದೀಪವನ್ನು ಕಟ್ಟಿಬಿಡುತ್ತಿದ್ದರೆ, ತರಗತಿಯಲ್ಲಿ ಏನೋ ಸಾಧಿಸಿದ ವಾತಾವರಣ. ಕೊನೆಗೆ ನಾಲ್ಕಾರು ವಯರ್‌ಗಳನ್ನು ಬಳಸಿ ಗೂಡುದೀಪವನ್ನು ಮಿನುಗಿಸುವ ಕರ್ತವ್ಯ. ಇಷ್ಟಕ್ಕೆ ಪ್ರತೀ ತರಗತಿಯೂ ದೀಪಾವಳಿಗೆ ಮುನ್ನ ಸಿಂಗರಿಸಲ್ಪಡುತ್ತಿತ್ತು. ಮನೆಯ ತುಳಸಿ ಪೂಜೆಯ ಚೆಂದ, ಊರಿನ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕ ಮಾಸದ ಹುಣ್ಣಿಮೆಯ ದೀಪೋತ್ಸವದಲ್ಲಿ ಲಗುಬಗೆಯಿಂದ ಭಾಗಿಯಾಗುವುದು ಬಾಲ್ಯದಲ್ಲಿ ಮಾತ್ರ ಸಾಧ್ಯವೇನೋ.
ಇಂದು ಬಹುತೇಕ ಹಬ್ಬಗಳ ಆಚರಣೆ ಸ್ಟೇಟಸ್-ರೀಲ್ಸ…ಗಳಿಗೆ ಆರಂಭವಾಗಿ ಅಲ್ಲಿಯೇ ಬಂಧಿಯಾಗುತ್ತದೆ. ಹಬ್ಬಗಳ ಸಡಗರದ ಪುಷ್ಕಳ ಭೋಜನವನ್ನು ಇದೀಗ ಮಹಾನಗರಗಳ ರೆಸ್ಟೋರೆಂಟ್‌ಗಳು ತಮ್ಮ ಮಾದರಿಗಳನ್ನಾಗಿ ಮಾಡಿಕೊಂಡಿವೆ. ಹೀಗೆ ಸಿದ್ಧ ಮಾದರಿಯಲ್ಲಿ ಎಲ್ಲವೂ ಕೂಗಳತೆಗೆ ಲಭ್ಯ. ಹಬ್ಬಗಳು ರಾಷ್ಟ್ರೀಯವಾಗಿರಲಿ, ಧಾರ್ಮಿಕವಾಗಿರಲಿ, ಅವುಗಳ ಅಂತಃಸತ್ವ ಆಚರಣೆ. ಭಾಷೆ ಯಾವುದೇ ಇರಲಿ, ಅದರ ಸತ್ವಯುತ ಸರಿಯಾದ ಬಳಕೆ ಅಗತ್ಯ. ಇಂದು ನಾವು ಉಲಿಯುವ ಕನ್ನಡ ಮತ್ತು ಗ್ರಾಂಥಿಕ ಕನ್ನಡದ ಶಾಸ್ತ್ರೀಯ ಚೌಕಟ್ಟು ಬೇರೆಬೇರೆಯಾಗಿದೆ. ಕನ್ನಡವನ್ನು ಮುದ್ರಾ ದೋಷಗಳ ನಡುವೆ ಓದುವ ಬಾಬತ್ತು ಬಂದುಬಿಟ್ಟಿದೆ. ಎಗ್ಗಿಲ್ಲದೇ ಭಾಷೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಲಾಗ್ ರೀಲ್ಸ…ಗಳಲ್ಲಿ ಬಳಸುವುದುದು ಖುಷಿಯ ವಿಚಾರವಾದರೆ, ಅದನ್ನೇ ಸರಿಯಾದ ರೂಪ ಎಂದು ನೆಚ್ಚಿಕೊಂಡು ನಡೆಯುವ ಪಂಗಡವೂ ಇರುವುದು ಸುಳ್ಳಲ್ಲ. ಭಾಷೆ ಎಷ್ಟಾದರೂ ಸಂವಹನದ ಮಾಧ್ಯಮವಲ್ಲವೇ?
ದೇಶದ ಹಾಗೂ ನಮ್ಮ ರಾಜ್ಯದ ಅದೆಷ್ಟೋ ಕುಟುಂಬಗಳು ವಿದೇಶದಲ್ಲಿ ನೆಲೆಯಾಗಿದ್ದಾರೆ. ಹತ್ತಿರವಿದ್ದಾಗ ಅದರ ಮಹತ್ವ ತಿಳಿಯುವುದು ಕಷ್ಟ (?) ಆದರೆ ದೂರ ಹೋದಾಗ ನಮ್ಮ ಆಚರಣೆ – ಭಾಷೆ ಇವುಗಳ ಮೇಲೆ ಅಪಾರ ಪ್ರೀತಿ ಗೌರವ ಮೂಡುವುದು ನಿಜ. ಪರದೇಶದಲ್ಲಿರುವ ಅದೆಷ್ಟೋ ಕುಟುಂಬಗಳು, ಕನ್ನಡ ಸಂಘಟನೆಗಳು, ಹಬ್ಬದ ಆಚರಣೆಗಳನ್ನು ಬಹಳ ಅದ್ದೂರಿಯಿಂದಾಗಿ ಆಚರಿಸುತ್ತಾರೆ. ಸುಮಾರು ಒಂದೆರಡು ತಿಂಗಳಿಂದ ಈ ರಾಜ್ಯೋತ್ಸವ, ದೀಪಾವಳಿ ಇತ್ಯಾದಿಗಳನ್ನೆಲ್ಲ ಆಚರಿಸಲು ಸಿದ್ಧತೆ ನಡೆಸುತ್ತಾರೆ. ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಹಾಡು ಹಾಡಿಸುವುದರಲ್ಲಿ ಆನಂದ ಪಡುತ್ತಾರೆ. ವಿದೇಶದಲ್ಲಿ ಅದೆಷ್ಟೋ ಕನ್ನಡಿಗರು ಪರಿಚಯವಾಗುವುದೇ ಕನ್ನಡ ಸಂಘನೆಗಳ ರಾಜ್ಯೋತ್ಸವದ ಆಚರಣೆಗಳಲ್ಲಿ ಹಾಗೂ ದೀಪಾವಳಿಯಂತಹ ಕಾರ್ಯಕ್ರಮದಲ್ಲಿ.
ಅನಿವಾಸೀ ಕನ್ನಡಿಗರಲ್ಲಿ ಭಾಷೆಯ ಬಗೆಗಿನ ಆಸ್ಥೆ-ತುಮುಲತೆ ಉಳಿಯುವಲ್ಲಿ ಪತ್ರಿಕೆ-ಪುರವಣಿಗೆಗಳು ದಾರಿಯಾಗುತ್ತವೆ. ಅದೆಷ್ಟೋ ಕನ್ನಡ ಪ್ರಿಯರಿಗೆ ತಮ್ಮ ಅನಿಸಿಕೆ, ಲೇಖನ, ಕಾರ್ಯಕ್ರಮದ ವರದಿಗಳು, ಮಕ್ಕಳ ಚಿತ್ರಗಳು ಇವೆಲ್ಲವನ್ನೂ ಪ್ರದರ್ಶಿಸಲು ಒಂದು ದೊಡ್ಡ ವೇದಿಕೆಯಾಗಿದೆ. ಒಟ್ಟಿನಲ್ಲಿ ಇಂತಹ ವೇದಿಕೆಯಿಂದಾಗಿಯೇ ವಿದೇಶದಲ್ಲೂ ನಾಡಭಾಷೆ ಉಳಿಯಲು ಕಾರಣವಾಗಿವೆ. ಉದಯವಾಣಿಯ ದೇಸಿಸ್ವರ ಪತ್ರಿಕೆಗೆ ನೂರರ ಸಂಚಿಕೆಗೆಯ ಹಬ್ಬ. ನೂರು ಸಾವಿರವಾಗಲಿ. ಸಾಗರದಾಚೆಯ ಮನಸ್ಸುಗಳನ್ನು ಬೆಸೆಯುವ ದೇಸಿಸ್ವರದ ಅನುರಣನ ಇಮ್ಮಡಿಯಾಗಲಿ.
-ವಿಟ್ಲ ತನುಜ್ ಶೆಣೈ, ಚೆಲ್ಟೆನ್ಹ್ಯಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.