Desi Swara: ಕನ್ನಡ ಬಳಗ ಯುಕೆ;ಆಂಗ್ಲರ ನಾಡಲ್ಲಿ ಮೊಳಗಿದ ಕನ್ನಡದ ಕಹಳೆ…
ಕನ್ನಡಿಗರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತ ಬಂದಿರುವ ಬ್ರಿಟನ್‌ನ ಅತೀ ಹಿರಿಯ ಸಂಸ್ಥೆಯಾಗಿದೆ.
Team Udayavani, Oct 14, 2023, 12:20 PM IST
ಬ್ರಿಟನ್: ಭಾಷೆಯೆನ್ನುವುದು ಬರೀ ಮಾಧ್ಯಮವಲ್ಲ. ಏಕೆಂದರೆ ಅದರ ನೆರಳಿನಲ್ಲಿ ಸಂಸ್ಕೃತಿ, ಸಾಹಿತ್ಯ ಮತ್ತು ಅಸ್ಮಿತೆಗಳು ಮನೆಮಾಡಿಕೊಳ್ಳುತ್ತವೆ. ಪ್ರತೀ ಭಾಷೆ ಆಯಾ ಸಮುದಾಯಗಳನ್ನು ಕೂಡಿಸುವ ಒಂದು ಪ್ರಬಲ ಅಸ್ತ್ರವೂ ಆಗಿಬಿಡುತ್ತದೆ. ಗಡಿಗಳನ್ನು ತೊರೆದು ದೂರ ದೇಶಗಳಲ್ಲಿ ಮನೆಮಾಡಿಕೊಂಡಿರುವ ಜನರಿಗಂತೂ ಮಾತೃ ಭಾಷೆಯೆನ್ನುವುದು ತಾಯ್ನಾಡಿನ ನೆನಪನ್ನು ಜೀವಂತವಾಗಿಡುವ ಸಂಜೀವಿನಿ.
ಸಮೃದ್ಧ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ವಿಸ್ತಾರ ಪ್ರಕಾರಗಳಲ್ಲಿನ ಸಾಹಿತ್ಯಕ ಪರಂಪರೆಯನ್ನು ಹೊಂದಿದ ಕನ್ನಡ ಭಾಷೆ ಜಗತ್ತಿನಾದ್ಯಂತ ಹರಡಿದ್ದು, ಅನಿವಾಸಿ ಕನ್ನಡಿಗರ ಮೂಲಕ ಎಲ್ಲೆಡೆ ಮನೆಮಾಡಿಕೊಂಡಿದೆ. ಸಂಘ-ಸಂಸ್ಥೆಗಳ ಮೂಲಕ ಕನ್ನಡ ಕಾರ್ಯಗಳನ್ನು ಹಮ್ಮಿಕೊಂಡು ವಿದೇಶಿ ನೆಲದ ಕನ್ನಡಿಗರು ವಿದೇಶಗಳಿಗೂ – ಕರ್ನಾಟಕಕ್ಕೂ ಸೇತುವೆಯನ್ನು ನಿರ್ಮಿಸಿ¨ªಾರೆ. ಅದಕ್ಕೆ ಕಾರಣ ಕನ್ನಡದ ಮೇಲಿನ ಅವರ ಅಭಿಮಾನವೇ ಆಗಿದೆ.
ಆಂಗ್ಲರ ನಾಡಾದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸೆ. 30 ಮತ್ತು ಅ. 1ರಂದು ಅದ್ದೂರಿ ಕನ್ನಡ ಕಾರ್ಯಕ್ರಮ ನಡೆಯಿತು. ಇಲ್ಲಿನ ಅತ್ಯಂತ ಹಿರಿಯ ಮತ್ತು ರಾಷ್ಟ್ರ ಮಟ್ಟದ ಕನ್ನಡ ಸಂಸ್ಥೆ ಕನ್ನಡ ಬಳಗ ಯುಕೆ ( ಓಆಖೀಓ ) ತನ್ನ 40ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸುಮಾರು 2000 ಜನ ಕನ್ನಡಿಗರು ವಾರಾಂತ್ಯದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂದಿಸಿದರು.
ಕನ್ನಡ ಬಳಗ ಯುಕೆ ಎನ್ನುವುದು ಯಾವುದೇ ಊರು, ಕೇರಿಗಳಿಗೆ ಸಂಬಂಧಿಸಿದ ಸಂಸ್ಥೆಯಲ್ಲ. ಬದಲು ದೇಶದ ಉದ್ದಗಲಕ್ಕೂ ಹರಡಿ ಹಂಚಿಹೋಗಿರುವ ಕನ್ನಡಿಗರನ್ನು ಒಂದುಗೂಡಿಸಿರುವ ಸಂಸ್ಥೆಯಾಗಿದೆ. ಕನ್ನಡಿಗರೆಂಬ ಅಭಿಮಾನ ಮತ್ತು ಅಸ್ಮಿತೆಯನ್ನು ಗೌರವದಿಂದ ನೋಡುವ ಎಲ್ಲ ಕನ್ನಡಿಗರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತ ಬಂದಿರುವ ಬ್ರಿಟನ್‌ನ ಅತೀ ಹಿರಿಯ ಸಂಸ್ಥೆಯಾಗಿದೆ.
ಇದೇ ಕಾರಣಕ್ಕೆ ಪ್ರತೀ ಯುಗಾದಿ ಮತ್ತು ದೀಪಾವಳಿ ಹಬ್ಬವನ್ನು ದೇಶದ ಉದ್ದಗಲದ ಬೇರೆ ಬೇರೆ ನಗರಗಳಲ್ಲಿ ಹಮ್ಮಿಕೊಂಡು “ಕನ್ನಡಿಗರಾಗಿ ನೀವು ಎಲ್ಲಿಯೇ ಇರಿ, ನಾವು ನಿಮ್ಮಲ್ಲಿಯೇ ಬಂದು ಸೇರುತ್ತೇವೆ’ ಎನ್ನುವ ಉತ್ತೇಜನ ನೀಡುತ್ತ ಎಲ್ಲರಿಗೂ ಹತ್ತಿರವಾಗಲು ಸಂಸ್ಥೆ ಶ್ರಮಿಸುತ್ತಿರುವುದು. ಕನ್ನಡಿಗರನ್ನು ಒಟ್ಟುಗೂಡಿಸಬೇಕೆಂಬ ಹಳೆಯ ಬೇರುಗಳ ಈ ಆಶಯ, ಹೊಸ ಚಿಗುರುಗಳ ಮೂಲಕ ನಲವತ್ತನೇ ವಸಂತಕ್ಕೆ ಕಾಲಿಟ್ಟಿದ್ದನ್ನು ನೆನೆಯುತ್ತ ಕಣ್ಣೀರಾದವರಿದ್ದಾರೆ.
ನಾಲ್ಕನೇ ದಶಮಾನೋತ್ಸವ ಈ ಕಾರ್ಯಕ್ರಮವನ್ನು “ಸಂಭ್ರಮ’ ಎನ್ನುವ ಹೆಸರಿನಲ್ಲಿ ಯುಕೆಯ ರಾಜಧಾನಿ ಲಂಡನ್ ನಗರದ ಹ್ಯಾರೋ ಬಡಾವಣೆಯ ಬೈರನ್ ಹಾಲ್‌ನಲ್ಲಿ ಆಚರಿಸಲಾಯಿತು.
ಈ ಸಮಾರಂಭಕ್ಕೆ ಕರ್ನಾಟಕದಿಂದ ಮೈಸೂರಿನ ರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶೈಕ್ಷಣಿಕ ತಜ್ಞ ಗುರುರಾಜ ಕರ್ಜಗಿ, ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆಯವರು, ಪಾವಗಡದ ರಾಮಕೃಷ್ಣ ಸೇವಾಶ್ರಮದ ಸಂಸ್ಥಾಪಕರೂ, ಅಧ್ಯಕ್ಷರೂ ಆದ ಸ್ವಾಮಿ ಜಪಾನಂದ ಮಹಾರಾಜ್ ಮತ್ತು ಕನ್ನಡದ ಹಿನ್ನೆಲೆ ಗಾಯಕರೂ, ನಟರೂ ಆದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಲಂಡನ್ ಮಹಾನಗರದ ಮೇಯರ್, ಇಂಡಿಯನ್ ಹೈ ಕಮಿಷನ್‌ನ ರಾಯಭಾರಿಗಳು ಮತ್ತು ಲಂಡನ್ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾದ ನಂದ ಕುಮಾರ್ ಭಾಗವಹಿಸಿ ಕನ್ನಡ ಬಳಗದ ಆತಿಥ್ಯ ಸ್ವೀಕರಿಸಿದರು.
ಮಹರಾಜ ಯದುವೀರ್ ಅವರಿಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಗುರುರಾಜ ಕರ್ಜಗಿ ಅವರು ಮಹರಾಜರ ಪರಿಚಯವನ್ನು ಮಾಡಿಕೊಟ್ಟರು. ಮಹಾರಾಜರು ಸಭೆಯನ್ನು ಉದ್ದೇಶಿಸಿ ಮಾತಾಡಿ ಅವರ ಅಜ್ಜನ ಕಾಲದಿಂದಲೂ ರಾಜ ಮನೆತನಕ್ಕಿದ್ದ ಲಂಡನ್‌ನ ಜತೆಗಿನ ನಂಟನ್ನು ನೆನೆದರು. ಇವರ ವಿದ್ಯಾಭ್ಯಾಸ ಅಮೆರಿಕದಲ್ಲಿ ನಡೆದಿದ್ದರೂ ಅವರ ಭಾಷಣ ಕನ್ನಡದ ಸುಂದರ ಪದಗಳನ್ನು ಹೊಂದಿತ್ತು.
ಈ ನಲ್ವತ್ತನೇ ವಾರ್ಷಿಕೋತ್ಸವದಲ್ಲಿ ಕನ್ನಡ ಬಳಗ “ಸಂಭ್ರಮ’ ಎನ್ನುವ ಅದೇ ಹೆಸರಿನ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಿತು. ಈ ಸ್ಮರಣ ಸಂಚಿಕೆಯನ್ನು ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲ ಅತಿಥಿಗಳು ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು. ಈ ಸ್ಮರಣ ಸಂಚಕೆಯಲ್ಲಿ ಈ ಹಿಂದೆ ಕನ್ನಡ ಬಳಗಕ್ಕೆ ಅತಿಥಿಗಳಾಗಿ ಬಂದಿದ್ದ ಹಲವು ಪ್ರಸಿದ್ಧನಾಮರ ಮತ್ತು ಕನ್ನಡ ಬಳಗದ ಆಜೀವ ಸದಸ್ಯತ್ವ ಹೊಂದಿರುವ ಸ್ಥಳೀಯ ಬರಹಗಾರರ ಲೇಖನ, ಕವನ, ಪ್ರಬಂಧ, ವಿಶ್ಲೇಷಣೆಗಳ ಬರಹಗಳಿವೆ. ಜತೆಗೆ ಹಿಂದಿನ ಹಲವು ವರ್ಷಗಳ ಕಾರ್ಯಕ್ರಮದ ಸವಿನೆನಪುಗಳಿವೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಫೋಟೋಗಳು, ಹಿಂದಿನ ಅಧ್ಯಕ್ಷರ ಹೆಸರುಗಳು ದಾಖಲಾಗಿವೆ. ಹಲವರು ತಮ್ಮ ಸ್ಮರಣ ಸಂಚಿಕೆಯಲ್ಲಿ ಮಹಾರಾಜರ ಹಸ್ತಾಕ್ಷರ ಪಡೆದು ಖುಷಿಪಟ್ಟರು.
ಮಹಾರಾಜರು ಹಾಗೂ ಕರ್ಜಗಿಯವರು ಅನಿವಾಸಿ ಕನ್ನಡಿಗರ ಕಾರಣ ವಿಶ್ವವ್ಯಾಪಿಯಾಗಿ ಹಬ್ಬಿರುವ ಕನ್ನಡ ಸಂಸ್ಕೃತಿಯ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದರು. ಅನಂತರ ಮಹಾರಾಜರಿಗೆ ಕನ್ನಡ ಬಳಗದ ಕಾರ್ಯಕಾರಿ ಸಮಿತಿಯಿಂದ ಗೌರವಿಸಲಾಯಿತು.
ಕರ್ನಾಟಕ ವೈಭವ ನೃತ್ಯ ನಾಟಕದ ಪ್ರಸ್ತುತಿಯ ಜತೆಗೆ ಹಾಡು, ಭರತನಾಟ್ಯ, ಕಥಕ್ ಶಾಸ್ತ್ರೀಯ ಸಂಗೀತ, ವಾದ್ಯ ಇನ್ನಿತರ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು. ಚರ್ಚಾಗೋಷ್ಠಿ ಈ ಕಾರ್ಯಕ್ರಮವನ್ನು ಯುಕೆಯ ಬರಹಗಾರರ ಬಳಗ “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ನಡೆಸಿಕೊಟ್ಟಿತು.
ಅನಿವಾಸಿ.ಕಾಂ ಎನ್ನುವ ಬ್ಲಾಗ್ ಹೊಂದಿರುವ ಈ ಬರಹಗಾರರ ಬಳಗ, ಸತತ ಒಂಬತ್ತು ವರ್ಷಗಳಿಂದ ಇಲ್ಲಿನ ಅನಿವಾಸಿ ಕನ್ನಡಿಗರ ಬರಹಗಳನ್ನು ವಾರಕ್ಕೊಂದರಂತೆ ಪ್ರಕಟಿಸುತ್ತ ಬಂದಿದೆ. ಕನ್ನಡ ಬಳಗದ ಆಶ್ರಯದಲ್ಲಿ ವರ್ಷಕ್ಕೆರಡರಂತೆ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ “ಶಿಕ್ಷಣ ನೀತಿಗಳು ಸಮಾಜಕ್ಕೆ ಹೊಂದುವಂತಿರಬೇಕು, ವಿರೋಧವಾಗಿರಬಾರದು’ ಮತ್ತು “ಮಾಧ್ಯಮಗಳ ಪ್ರಭಾವ ಮತ್ತು ಶಕ್ತಿ ಅಗತ್ಯಕ್ಕಿಂತ ಹೆಚ್ಚಾಗುತ್ತಿದೆ’ ಎಂಬ ವಿಷಯಗಳ ಮೇಲೆ ಪರ – ವಿರೋಧಗಳ ಚರ್ಚೆಯನ್ನು ಮಾಡಲಾಯಿತು. ಚರ್ಚೆಯ ಮಂಡನೆಯ ಅನಂತರ ಅತಿಥಿಗಳು ತಮಗೆ ಸಂಬಂಧಿಸಿದ ವಿಚಾರದ ಬಗ್ಗೆ ತಮ್ಮ ಪರಿಣಿತ ಅಭಿಪ್ರಾಯಗಳನ್ನು ಮಂಡಿಸಿದರು. ಬಳಿಕ ಅತಿಥಿಗಳ ಜತೆಗೆ ಸಭಿಕರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮೊದಲ ದಿನದ ಗೋಷ್ಠಿಯ ಅಧ್ಯಕ್ಷತೆಯನ್ನು ಸ್ಥಳೀಯ ಅನಿವಾಸಿ ಬರಹಗಾರ್ತಿ ಡಾ| ಪ್ರೇಮಲತ ಬಿ. ವಹಿಸಿದ್ದರು.
ಇದೇ ಸಾಹಿತ್ಯ ಪ್ರಿಯರ ಬಳಗದಿಂದ ಎರಡನೆಯ ದಿನವೂ ಸಭೆ ಮುಂದುವರೆದು “ವಿದೇಶದಲ್ಲಿ ಎದುರಿಸಿದ ಪೇಚಿನ ಪ್ರಸಂಗ’ಗಳ ಬಗ್ಗೆ ಅತಿಥಿಗಳಿಂದ ಕಾರ್ಯಕ್ರಮ ನಡೆಯಿತು. ಅನಂತರ ಪ್ರಶ್ನೋತ್ತರ ಕಾರ್ಯಕ್ರಮ ಮುಂದುವರೆಯಿತು.
ಎರಡನೆಯ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಬರಹಗಾರ್ತಿ ಗೌರೀ ಪ್ರಸನ್ನ ಅವರು ವಹಿಸಿದ್ದರು.
ಸಂಜೆ ಮುಖ್ಯ ವೇದಿಕೆಯಲ್ಲಿ ಅತಿಥಿಗಳ ಭಾಷಣದ ಅನಂತರ, ರಾಜೇಶ್ ಕೃಷ್ಣನ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಕನ್ನಡಿಗರೆಲ್ಲರೂ ಅತೀ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮರುದಿನ ಕನ್ನಡ ಬಳಗದ ವಾರ್ಷಿಕ ಸಭೆ ಜರಗಿತು. ಹಣಕಾಸಿನ ವಿಚಾರದ ಬಗ್ಗೆ , ಹೊಸ ಸದಸ್ಯತ್ವಗಳ ಬಗ್ಗೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಖಜಾಂಚಿ ಡಾ| ರಶ್ಮಿ ಮಂಜುನಾಥ್ ಲೆಕ್ಕಪತ್ರವನ್ನು ಮಂಡಿಸಿದರೆ, ಡಾ| ಮಧುಸೂದನ್ ಪ್ರಸ್ತಾವಿಸಿದರು.
ಇದೇ ಸಂದರ್ಭದಲ್ಲಿ ಹ್ಯಾರೋದ ಡಾ| ರಾಮಚಂದ್ರ, “ಕನ್ನಡ ಬಳಗವೆಂದರೆ ಅದು ಬಹುತೇಕ ವೈದ್ಯರುಗಳೇ ತುಂಬಿರುವ ಸಂಘ’ ಎನ್ನುವ ಅಭಿಪ್ರಾಯ ಲಂಡನ್‌ನ ಸುತ್ತ ಮುತ್ತಲ ಐಟಿ ಜನರಿಗಿರುವ ಬಗ್ಗೆ ತಿಳಿಸಿದರು. ಅದಕ್ಕೆ ಕನ್ನಡ ಬಳಗವು ಅವರ ತೆರೆದ ಬಾಗಿಲಿನ ತತ್ತ್ವದ ಬಗ್ಗೆ ಖಚಿತಪಡಿಸಿ ಆಶ್ವಾಸನೆ ನೀಡಿದರು.
ಸ್ಥಳೀಯ ಯಕ್ಷಗಾನ ಪ್ರತಿಭೆಗಳು “ಪಂಚವಟಿ’ಯ ಒಂದು ಸಣ್ಣ ಪ್ರದರ್ಶನ ನೀಡಿದರು. ನೂರಾರು ಪ್ರತಿಭಾನ್ವಿತರು ಸಾಲು, ಸಾಲಾಗಿ ತಮ್ಮ ಪ್ರತಿಭೆಯನ್ನು ಮೆರೆದರು. ಕಾರ್ಯಕ್ರಮಗಳ ಗುಣಮಟ್ಟವನ್ನು ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಟಗೇರಿ ನಿರ್ವಹಿಸಿದರು.
ಸತತ ಹತ್ತು ತಿಂಗಳುಗಳ ಕಾಲ ಕನ್ನಡ ಬಳಗದ ಹಾಲಿ ಅಧ್ಯಕ್ಷೆ ಸುಮನಾ ಗಿರೀಶ್ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನಿರೂಪಿಸುವಲ್ಲಿ ಶ್ರಮವಹಿಸಿದ್ದರು. ಅವರೊಡನೆ ಕಾರ್ಯಕಾರಿ ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಬೆವರು ಸುರಿಸಿ ದುಡಿದು ಈ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಂಡರು. ಕನ್ನಡ ಬಳಗದ ಜತೆಗೆ ಲಂಡನ್‌ನ “ಹ್ಯಾರೋ ಕನ್ನಡಿಗರು’ ಇದು ತಮ್ಮದೇ ಕಾರ್ಯಕ್ರಮ ಎನ್ನುವಂತೆ ಎರಡೂ ದಿನಗಳ ಕಾಲ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ವಿದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುವುದು ಇಂತಹ ಕನ್ನಡಪ್ರಿಯ ಸ್ವಯಂ ಸೇವಕರಿಂದಲೇ ಎನ್ನುವುದು ವಾಸ್ತವ.
ಇವರೆಲ್ಲರ ತಪಸ್ಸು ಫಲಿಸಿದಂತೆ ಲಂಡನ್ನಿನಲ್ಲೊಂದು ಬೃಹತ್ ಕನ್ನಡ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ನಡೆಯಿತು. ಈ ಎರಡು ದಿನಗಳ ಕಾರ್ಯಕ್ರಮ ಲಂಡನ್ನಿನಲ್ಲೊಂದು ಕರ್ನಾಟಕವನ್ನು ಸೃಷ್ಟಿಸಿಬಿಟ್ಟಿತ್ತು. ಕರ್ನಾಟಕದಿಂದ ಬಂದಿದ್ದ ಅತಿಥಿಗಳೆಲ್ಲರೂ “ಲಂಡನ್ನಿಗೆ ಬಂದಿದ್ದೇವೆ ಅನ್ನಿಸುತ್ತಲೇ ಇಲ್ಲ’ ಎಂದು ಹೇಳಿದ್ದು ಕನ್ನಡ ಬಳಗದ ಕನ್ನಡಪರ ನಡವಳಿಕೆಗೆ ಬರೆದ ಮುಚ್ಚಳಿಕೆಯಾದದ್ದು ಸಂಪೂರ್ಣ ಸತ್ಯ.
*ವರದಿ: ಡಾ| ಪ್ರೇಮಲತ ಬಿ., ಲಿಂಕನ್, ಯುಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.