Desi swara ಬನ್ನಿರಿ, ಒಂದಾಗಿ ಎಳೆಯೋಣ ಕನ್ನಡದ ತೇರನ್ನು
ಸಹಸ್ರಾರು ಮನಸ್ಸುಗಳಿಗೆ ನೆರಳು ನೀಡುತ್ತಿರುವ ಕನ್ನಡದ ವೃಕ್ಷ
Team Udayavani, Nov 26, 2023, 9:15 AM IST
ಕನ್ನಡ ಭಾಷೆ ಇಂದು ಸಾಗರವನ್ನು ದಾಟಿ ಪ್ರಪಂಚದಾದ್ಯಂತ ತನ್ನ ಬಾಹುವನ್ನು ವಿಸ್ತರಿಸಿಕೊಂಡಿದೆ. ತಾಯ್ನಾಡಿನಿಂದ ದೂರವಾಗಿ ವಿದೇಶದಲ್ಲಿ ಬದುಕು ಕಂಡುಕೊಂಡವರಲ್ಲಿ ಇಂದಿಗೂ ಹಲವಾರು ಮಂದಿ “ಕನ್ನಡ’ವನ್ನು ಜೀವ ಭಾಷೆಯಾಗಿ ಪ್ರೀತಿಸಿ, ಪೋಷಿಸುತ್ತಿದ್ದಾರೆ. ಕನ್ನಡವು ಉಳಿದು, ಇನ್ನಷ್ಟು ವಿಶಾಲವಾಗಿ ಬೆಳೆಯಬೇಕೆಂದರೆ ಕನ್ನಡ ತಾಯಿಯನ್ನು ಎಲ್ಲರೂ ಒಗ್ಗಟ್ಟಾಗಿ ಪೋಷಿಸಿ, ಬೆಳೆಸಬೇಕಿದೆ.
ಭಾಷೆ ಎಂದರೆ ಏನು ಎನ್ನುವ ಪ್ರಶ್ನೆಗೆ, “ಭಾಷೆ ಎಂದರೆ ಮಾನವ ಸಂವಹನದ ಒಂದು ಪ್ರಮುಖ ವಿಧಾನ’ ಎಂದು ಉತ್ತರಿಸಬಹುದು. ಇದು ರಚನಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ ಮತ್ತು ಮಾತು, ಬರವಣಿಗೆ ಇಲ್ಲವೇ ಸಂಕೇತಗಳ ಮೂಲಕ ತಿಳಿಸಲ್ಪಡುತ್ತದೆ ಎನ್ನಬಹುದು. ಇದಲ್ಲದೇ ಭಾಷೆ ಎಂದರೆ ಸಾಂಪ್ರದಾಯಿಕವಾಗಿ ಮಾತನಾಡುವ, ಲಿಖಿತ ಚಿಹ್ನೆಗಳ ವ್ಯವಸ್ಥೆ ಇದರ ಮೂಲಕ ನಾವೆಲ್ಲ ಒಂದು ಸಾಮಾಜಿಕ ಗುಂಪಿನ ಸದಸ್ಯರಾಗಿ ಮತ್ತು ಅದರ ಸಂಸ್ಕೃತಿಯಲ್ಲಿ ಭಾಗವಹಿಸಿ ಭಾಷೆಯನ್ನು ವ್ಯಕ್ತಪಡಿಸುತ್ತೇವೆ ಎನ್ನಬಹುದು.
ಮಾನವ ಕುಲದ ಭಾಷೆಯ ಹುಟ್ಟಿನ ಮೂಲ ಯಾವಾಗ ಆಯಿತೆಂದು ನಿಖರವಾಗಿ ಹೇಳಲು ಕಷ್ಟವಾದರೂ, ಭಾಷೆಯ ವಿಕಾಸದ ಪ್ರಕ್ರಿಯೆ ಸಾವಿರಾರು ವರ್ಷಗಳಿಂದ ನಡೆಯುತ್ತ ಬಂದಿದೆ ಎಂದು ತಿಳಿಯಬಹುದು. ಭಾಷಾ ಪಂಡಿತರ ಪ್ರಕಾರ ಕ್ರಿ.ಪೂ. 8000 ವರ್ಷದಲ್ಲಿ ಸರಿಸುಮಾರು 20,000 ಭಾಷೆಗಳು ಬಳಕೆಯಲ್ಲಿದ್ದವು ಎನ್ನುವ ಮಾಹಿತಿ ದೊರಕುತ್ತದೆ. ಅಂದಿನಿಂದ ಇಂದಿನವರೆಗಿನ ಭಾಷಾ ಚರಿತ್ರೆಯನ್ನು ನೋಡಿದರೆ, ಅನೇಕ ಭಾಷೆಗಳು ಅವನತಿ ಹೊಂದಿದ್ದು, ನಾಶವಾಗಿದ್ದು ಹೆಚ್ಚಾಗಿ ಕಂಡುಬರುತ್ತದೆ. ಸದ್ಯದ ಕಾಲಮಾನದಲ್ಲಿ 5000ಕ್ಕೂ ಹೆಚ್ಚು ಭಾಷೆಗಳು ಈ ಜಗತ್ತಿನಲ್ಲಿ ಬಳಕೆಯಲ್ಲಿವೆ ಎಂದು ಹೇಳಬಹುದು. ಮುಂದಿನ ಶತಮಾನದ ವೇಳೆಗೆ ಇವುಗಳಲ್ಲಿ ಅರ್ಧದಷ್ಟು ಭಾಷೆಗಳು ನಶಿಸಿಹೋಗಬಹುದೆಂದೂ ಭಾಷಾಪಂಡಿತರು ಅಭಿಪ್ರಾಯಪಡುತ್ತಾರೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಯಾವುದೇ ಒಂದು ಭಾಷೆಗೆ ಮತ್ತು ಇನ್ನೊಂದು ಭಾಷೆಗೆ, ಬೆಳವಣಿಗೆಯಲ್ಲಿ ಬಹಳಷ್ಟು ಅಂತರವನ್ನು ನಾವು ಕಾಣುತ್ತೇವೆ. ಏಕೆಂದರೆ ಕೆಲವು ಭಾಷೆಗಳು ಹೆಚ್ಚು ಪ್ರಗತಿಗೊಂಡು ಪ್ರಭಾವಿ ಭಾಷೆಯಾಗಿವೆ. ಹಾಗೆಯೇ ಇನ್ನೂ ಕೆಲವು ಭಾಷೆಗಳು ಬಳಕೆಯಾಗದೇ ನಶಿಸಿ ಹೋಗುವುದನ್ನು ಇಲ್ಲವೇ ವಿನಾಶದ ಅಂಚಿನಲ್ಲಿರುವುದನ್ನು ಕಾಣುತ್ತೇವೆ.
ಈ ನಿಟ್ಟಿನಲ್ಲಿ ಭಾಷೆಯ ಬೆಳವಣಿಗೆಯ ಹಿನ್ನೆಲೆಯನ್ನು ನೋಡುತ್ತ, ಒಂದು ಭಾಷೆಯ ಉದಾಹರಣೆಯಾಗಿ ಕನ್ನಡವನ್ನೇ ತೆಗೆದುಕೊಂಡರೆ, ಈ ಭಾಷೆಯ ಅಳಿವು-ಉಳಿವಿಗೆ ಹಲವಾರು ಕಾರಣಗಳಿವೆ ಎಂದು ತಿಳಿದುಬರುತ್ತದೆ. ಅದರೊಂದಿಗೆ ಭಾಷೆಗಳು ಹೇಗೆ ಪ್ರಭಾವಶಾಲಿಯಾಗುತ್ತವೆ ಇಲ್ಲವೇ ನಶಿಸಿಹೋಗುತ್ತವೆ ಮತ್ತು ಮುಖ್ಯವಾಗಿ ಒಂದು ಭಾಷೆ ಹೇಗೆ ಒಂದು ಸಂಸ್ಕೃತಿಯ ವ್ಯಕ್ತಿತ್ವವನ್ನು ಮತ್ತು ಭದ್ರತೆಯನ್ನು ಸುರಕ್ಷಿತವಾಗಿಡುತ್ತದೆ ಎನ್ನುವುದರ ಬಗ್ಗೆಯೂ ವಿಚಾರ ಮಾಡಬೇಕಾಗುತ್ತದೆ. ಸಮಾಜಿಕ ಭಾಷಾಶಾಸ್ತ್ರ, ಭಾಷೆಯ ಮೂಲ ಹಾಗೂ ಅವುಗಳ ಅಧ್ಯಯನ, ಭಾಷೆಯ ಪರಿಸರ, ವಿಜ್ಞಾನ, ಭೌಗೋಳಿಕ ಭಾಷಾಶಾಸ್ತ್ರ….ಇಂತಹ ಹಲವಾರು ಅಧ್ಯಯನಗಳನ್ನು ಮಾಡಬೇಕಾಗುತ್ತದೆ. ಇದರಿಂದ ಈಗಿನ ಪರಿಸ್ಥಿತಿಯಲ್ಲಿ ಒಂದು ಭಾಷೆಯ ಸ್ಥಾನಮಾನ, ಮುಂದಿನ ದಿನಗಳಲ್ಲಿ ಆ ಭಾಷೆಯ ಪ್ರಭಾವ…ಅಂದರೆ.. ನಮ್ಮ ಒಂದು ಭಾಷೆ ಪ್ರಗತಿಯತ್ತ ಸಾಗುತ್ತಿದೆಯೋ ಅಥವಾ ವಿನಾಶದ ಅಂಚಿನಲ್ಲಿದೆಯೋ ಅಂತ ತಿಳಿಯುವುದಲ್ಲದೇ ಮುಂದಿನ ದಿನಗಳಲ್ಲಿ ಭಾಷೆಯ ಉಳಿವಿಗೆ ಮಾಡಬಹುದಾದ ಕ್ರಮಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತದೆ.
ರಾಷ್ಟ್ರಕವಿ ಕುವೆಂಪುರವರು ಕನ್ನಡ ಭಾಷೆಯ ಬಗ್ಗೆ ಹೇಳಿರುವ ಸಾಲುಗಳು ಹೀಗಿವೆ. “ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ.’ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಚರಿತ್ರೆಯನ್ನು ನಾವು ನೋಡುತ್ತ ಹೋದಾಗ, ಈ ಭಾಷೆ ಎಷ್ಟು ಪುರಾತನವಾದದ್ದು ಎನ್ನುವುದಕ್ಕೆ ಮಾಹಿತಿ ಸಿಗುತ್ತಾ ಹೋಗುತ್ತದೆ. ಕನ್ನಡ ಭಾಷೆ, ದ್ರಾವಿಡ ಭಾಷೆಯ ಮೂಲದಿಂದ ಬಂದಿದ್ದು, ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ ಎಂದು ನಮಗೆ ತಿಳಿದೇ ಇದೆ. ಕ್ರಿ.ಪೂ. 5 ರಿಂದ 3 ನೇ ಶತಮಾನದ ವೇಳೆಗೆ ತನ್ನಷ್ಟಕ್ಕೇ ಸ್ವತಂತ್ರ ಭಾಷೆಯಾಗಿ ರೂಪ ಪಡೆದುಕೊಂಡಿರಬಹುದು ಎಂದು ಭಾಷಾ ವಿದ್ವಾಂಸರು ಹೇಳ್ತಾರೆ. ನಮಗೆ ಕನ್ನಡ ಭಾಷೆಯ ಬಗ್ಗೆ ಕ್ರಿ.ಶ. 450ರ ಹಲಿ¾ಡಿ ಶಾಸನದಲ್ಲಿ ದಾಖಲೆ ಸಿಗುತ್ತದೆ ಮತ್ತು ಕನ್ನಡ ಸಾಹಿತ್ಯ ಕೃತಿಗಳಲ್ಲಿ ಕ್ರಿ.ಶ.814 ರಿಂದ 877 ಕಾಲಮಾನದಲ್ಲಿ ಬರೆದ “ಕವಿರಾಜಮಾರ್ಗ’ ಮೊದಲನೆಯದ್ದು ಎಂದು ನಾವೆಲ್ಲ ಓದಿದ್ದೇವೆ. ಇದಲ್ಲದೇ ಕೆಲವು ಕನ್ನಡ ಪದಗಳ ಬಗ್ಗೆ, ಕನ್ನಡದ ಕೆಲವು ಸ್ಥಳಗಳ ಬಗ್ಗೆ ದಾಖಲೆಗಳು ದೊರೆತಿದ್ದು, ಕನ್ನಡ ಭಾಷೆ….ಇದೇ ದಿನ, ಇದೇ ರೀತಿ ಜನ್ಮತಾಳಿದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲದೇ ಇದ್ದರೂ, ಕನಿಷ್ಠ ಎರಡು ಸಾವಿರ ವರ್ಷಗಳಿಂದ ಇದು ಬಳಕೆ ಮಾತಾಗಿ ಪ್ರಚಲಿತವಾಗಿರಬಹುದು ಎಂದು ತಿಳಿದುಕೊಳ್ಳಲು ಸಾಕಷ್ಟು ಆಧಾರಗಳು ದೊರೆತಿವೆ. ಇದರಿಂದ ನಮಗೆ, ಒಂದು ಭಾಷೆ ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳದೇ, ಎಲ್ಲೋ ಪ್ರಾರಂಭವಾಗಿ ಬೆಳೆಯುತ್ತ ಹೋಗುತ್ತದೆ, ಬದಲಾಗುತ್ತ ಹೋಗುತ್ತದೆ ಎಂದು ತಿಳಿದು ಬರುತ್ತದೆ. ನಮ್ಮ ಕನ್ನಡ ಭಾಷೆಯೂ ಹೀಗೆ ಒಂದು ಮೂಲದಿಂದ ಜನ್ಮತಾಳಿ ಬೆಳೆದು ಬಂದಿದೆ, ಬೆಳೆಯುತ್ತಲೇ ಇದೆ, ಬದಲಾಗುತ್ತಲೇ ಇದೆ ಎಂದು ನಾವು ತಿಳಿದುಕೊಳ್ತೀವಿ.
ಇನ್ನು ಕನ್ನಡನಾಡಿನಿಂದ ದೂರವಿರುವ ಬಹುತೇಕ ಅನಿವಾಸಿ ಕನ್ನಡಿಗರ ಅಂತರಾಳವನ್ನು ಅರಿತಾಗ, “ಎಲ್ಲಿದ್ದರು ಎಂತಿದ್ದರು ಕನ್ನಡಿಗರು ನಾವು, ದೇಶ ದೇಶಗಳ ಗಡಿಗಳ ದಾಟುತ ನೆಲೆಸಿದರೂ ನಾವು, ಭುವನತ್ರಯವೇ ಸ್ವದೇಶವೆನ್ನುತ ಬದುಕಿದರೂ ನಾವು, ಅಂತರಾಳದ ಒಂಟಿತನದೊಳಗೆ ಕಾಡುತ್ತಿದೆ ಕನ್ನಡ ನಾಡು’ ಎನ್ನುವ ಕವಿಮಾತು, ಅವರ ಮನದಾಳದ ಮಾತಾಗಿರುವುದು ತಿಳಿದುಬರುತ್ತದೆ. ದೂರ ತೀರದ, ನೋಡಿ ಅರಿಯದ-ಶೋಧಿಸದ ಜಗತ್ತಿಗೆ ಬಂದು ನೆಲೆಸುವ ಪ್ರತೀ ಕನ್ನಡಿಗನ ಮನಸ್ಸಿನಲ್ಲಿ ಸುಪ್ತ ಬೀಜದಂತೆ ಜತೆಯಾಗುವ ಕನ್ನಡ ಭಾಷೆ, ಹೊಸ ಜಗತ್ತಿನಲ್ಲಿ ಮೊಳಕೆಯೊಡೆಯಲು ಅಂತರಾಳದ ಒಂಟಿತನದಲ್ಲಿ ಕಾಡುವ ಕನ್ನಡನಾಡೇ ಕಾರಣವಾಗುತ್ತದೆ. ಹೀಗೆ ಮೊಳಕೆಯೊಡೆದು, ಬೇರುಬಿಟ್ಟು, ಹಂತ-ಹಂತವಾಗಿ ಮರವಾಗಿ ಬೆಳೆದು, ಸುಂದರ ಹೂವುಗಳಿಂದ ಅಲಂಕೃತಗೊಳ್ಳುವ ಕನ್ನಡದ ವೃಕ್ಷ, ಹಲವಾರು ಕನ್ನಡದ ಮನಸ್ಸುಗಳಿಗೆ ನೆರಳು ನೀಡುವ ನೆಲೆಯಾಗುತ್ತದೆ, ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಅಂತರಾಳದ ಒಂಟಿತನದಲ್ಲಿ ಕಾಡುವ ಕನ್ನಡನಾಡು, ಅಮೆರಿಕದಲ್ಲಿ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಪ್ರಯತ್ನದಲ್ಲಿ ನನ್ನನ್ನು ಕಾಡಿದ್ದು ಹೇಗೆ ಎಂದು ಪ್ರಶ್ನಿಸಿಕೊಂಡಾಗ ಸಿಗುವ ಮೊದಲ ಉತ್ತರ, ಕನ್ನಡ ಸಾಹಿತ್ಯದ ಓದು ಮತ್ತು ಕನ್ನಡದ ಬರವಣಿಗೆ. ಮಾತೃಭಾಷೆ ಮೂಡಿಸುವ ಆತ್ಮವಿಶ್ವಾಸದಲ್ಲಿ ಅದೆಂಥ ಶಕ್ತಿಯಿದೆ ಎನ್ನುವುದನ್ನು ಕನ್ನಡ ಸಾಹಿತ್ಯದ ಓದು ಮತ್ತುಬರವಣಿಗೆಯಿಂದ ನಾನು ಕಂಡುಕೊಂಡಿದ್ದೇನೆ. ಈ ಶಕ್ತಿಯೇ ನ್ಯೂಜೆರ್ಸಿಯ ನಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳ ಸಂಗ್ರಹಣೆಯ ಪ್ರೇರಣೆಯಾಗಿದೆ ಎನ್ನಬಹುದು. ಮನಸ್ಸಿನಲ್ಲಿ ಮೊಳಕೆಯೊಡೆದ ಭಾಷೆಯ ಬೀಜವನ್ನು ನಮ್ಮ ನಿರಂತರ ಪ್ರಯತ್ನಗಳಿಂದಲೇ ಸುಂದರ ವೃಕ್ಷವಾಗಿಸಬಹುದು ಎನ್ನುವ ಅನುಭವವೂ ನನ್ನದಾಗಿದೆ. ಈ ಪ್ರಯತ್ನಗಳಲ್ಲಿ ಕನ್ನಡ ಪುಸ್ತಕಗಳ ಓದನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವುದು, ರಸಪ್ರಶ್ನೆಗಳ ವಿಜೇತರಿಗೆ ಬಹುಮಾನವಾಗಿ ಕನ್ನಡ ಪುಸ್ತಕಗಳನ್ನು ಕೊಡುವುದು ಮತ್ತು ಸ್ಥಳೀಯ ಕನ್ನಡ ಸಂಘಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಪ್ರದರ್ಶನ-ಮಳಿಗೆ, ನಮ್ಮ ಮನೆಯಲ್ಲಿ ನಡೆಸುವ “ಸಾಹಿತ್ಯ ಸುಧೆ’ ಸಂವಾದಗಳು ಮತ್ತು ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಮನೆಯಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸುವ “ನಿಮ್ಮ ಮನೆಗೆ ನಮ್ಮ ಪುಸ್ತಕ’ದ ಬೆಳ್ಳಿಹಬ್ಬ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಕಲ್ಪನೆ ಮತ್ತು ಪ್ರದರ್ಶನ…ಹೀಗೆ ಹಲವಾರು ಕನ್ನಡಪರ ಚಟುವಟಿಕೆಗಳು ಭಾಷೆಯನ್ನು ಪರದೇಶದಲ್ಲಿಯೂ ಬೆಳೆಸುವಲ್ಲಿ ನೆರವಾಗುತ್ತವೆ ಎನ್ನುವ ನಂಬಿಕೆ ನನ್ನದಾಗಿದೆ. ಕನ್ನಡ ಪುಸ್ತಕ ಓದಿಗೆ ಹೆಚ್ಚಿನ ಮಹತ್ವ ನೀಡುವ ಅಮೆರಿಕದ ಗ್ರಂಥಾಲಯಗಳಲ್ಲಿ ಕನ್ನಡಿಗರ ಓದಿಗಾಗಿ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಒದಗಿಸಿಬೇಕೆಂಬ ಸಂಕಲ್ಪದಿಂದ ನಮ್ಮ ಕನ್ನಡ ಪುಸ್ತಕ ಸಂಗ್ರಹಣೆಯ ಒಂದು ಭಾಗವನ್ನು ಇಲ್ಲಿನ ಗ್ರಂಥಾಲಯಗಳಿಗೆ ದೇಣಿಗೆಯಾಗಿ ಕೊಟ್ಟಿರುವುದು ನಮ್ಮ ಹೊಸ ಪ್ರಯತ್ನವಾಗಿದೆ.
ಈ ಎಲ್ಲ ಪ್ರಯತ್ನಗಳು ವಿದೇಶಿ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎನ್ನಬಹುದು. ನಮ್ಮ ಮಗನೂ ಕನ್ನಡ ಓದುವಲ್ಲಿ, ಬರೆಯುವಲ್ಲಿ, ಕರ್ನಾಟಕದ ಬಗ್ಗೆ ತಿಳಿದುಕೊಳ್ಳುವಲ್ಲಿ ಒಬ್ಬನಾಗಿ, ಇಲ್ಲಿನ ಅನೇಕ ಅನಿವಾಸಿ ಕನ್ನಡಿಗರ ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಪ್ರಯತ್ನದಲ್ಲಿರುವುದು ಸಂತೋಷವನ್ನು ನೀಡುತ್ತದೆ. ನಮ್ಮ ಭಾಷಾಭಿಮಾನ ದಿಂದ ಬೆಳೆಯುತ್ತಿರುವ ಕನ್ನಡದ ವೃಕ್ಷ ಸುಂದರವಾದ ಹೂವುಗಳಿಂದ ಅಲಂಕೃತ ಕೊಳ್ಳುವುದಲ್ಲದೇ, ಫಲಿಸಿ ಅದೆಷ್ಟೋ ಬೀಜಗಳನ್ನು ನೀಡುತ್ತದೆ ಎಂಬ ಸಮಾಧಾನವನ್ನು ಮೂಡಿಸುತ್ತದೆ. “ಬೀಜದಿಂದ ಬೀಜಕ್ಕೆ: ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ, ಎಷ್ಟು ಹೂ, ಎಷ್ಟು ಹಣ್ಣು, ಈ ಒಂದು ಬೀಜ ಕಡೆಗೂ ಮತ್ತೆ ಬೀಜವಾಗುವುದಕ್ಕೆ’ ಎನ್ನುವ ಕವಿಮಾತು ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವಲ್ಲಿನ ನಮ್ಮ ಪ್ರಯತ್ನಕ್ಕೆ ಅರ್ಥ ನೀಡುತ್ತದೆ.
ಹೀಗೆ ಕನ್ನಡವನ್ನು ಉಳಿಸಿ, ಬೆಳೆಸುವ ಸಂಕಲ್ಪ ತೊಟ್ಟಿರುವ ಅದೆಷ್ಟೋ ಕನ್ನಡಿಗರನ್ನು ನಾವು ಇಲ್ಲಿ ಕಾಣುತ್ತೇವೆ. ಅಮೆರಿಕದ ಪ್ರತೀ ರಾಜ್ಯದಲ್ಲೂ ಕನ್ನಡ ಸಂಘಗಳಿವೆ. ಕನ್ನಡ ಸಾಹಿತ್ಯವನ್ನೇ ಪ್ರೋತ್ಸಾಹಿಸುವ ಪ್ರತ್ಯೇಕ ಕೂಟಗಳಿವೆ. ಕನ್ನಡ ಕೂಟಗಳು ಹಮ್ಮಿಕೊಳ್ಳುವ ಕನ್ನಡಪರ ಕಾರ್ಯಕ್ರಮಗಳು, ವಿಶ್ವಕನ್ನಡ ಸಮ್ಮೇಳನಗಳು, ಸಾಹಿತ್ಯೋತ್ಸವಗಳು ಹಲವಾರು ವರ್ಷಗಳಿಂದ ಕನ್ನಡದ ಹಿರಿಮೆಯನ್ನು ಇಲ್ಲಿ ಪರಿಚಯಿಸುತ್ತಿವೆ ಮತ್ತು ಕನ್ನಡದ ಕಂಪನ್ನು ಪಸರಿಸುತ್ತಿವೆ. ಇದೆಲ್ಲನ್ನು ತಿಳಿದಾಗ, “ಓ ಎಳೆಯಿರೋ ಕನ್ನಡದ ತೇರ, ನೀವು ನಿಂತಿರುವಂಥ ನೆಲೆಗಳಿಂದ. ನಾವೆಲ್ಲರೂ ಒಂದು: ತೇರೆಳೆವ ಜನರು. ಆ ಊರೊ, ಈ ಊರೊ, ಹಿಂದೆಯೋ ಮುಂದೆಯೋ ಎಲ್ಲಿಯೋ ಒಂದು ಕಡೆ ಕೈ ಹಾಕಿದವರು.’ ಎನ್ನುವ ಕವಿಮಾತು ಅರ್ಥ ಪಡೆದುಕೊಂಡಿದೆ ಎನ್ನುಬಹುದು.
-ಸರಿತಾ ನವಲಿ, ನ್ಯೂಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.