Special Story: ಬದುಕಿ ಉಳಿದದ್ದೇ ದೇವರ ದಯೆ…! ಕನ್ನಡ ಯೋಧನ ಸೇನೆಯ ನೆನಪುಗಳು
Team Udayavani, Aug 20, 2023, 1:37 PM IST
Old soldiers never die, they simply fade away ಇದು ಇಂಗ್ಲೆಂಡಿನ ಜನಪ್ರಿಯ ನುಡಿಗಟ್ಟು. ಹಳೆಯ ಸೈನಿಕರು ಸಾಯುವುದಿಲ್ಲ, ಮಾಸಿ ಹೋಗುತ್ತಾರಷ್ಟೇ ಎಂದು ಇದರ ಅರ್ಥ. ಇದು ಸತ್ಯವೂ ಸಹ. ಸೈನಿಕರ ನೆನಪುಗಳೂ ಮಾಸುವುದಿಲ್ಲ. ಭಾರತದ ಸ್ವಾತಂತ್ರ್ಯ ದಿನದ ಆಚರಣೆಯ ಸಂದರ್ಭದಲ್ಲಿ ಸದ್ಯ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರಾದ, ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಕೃಷ್ಣ ಮಿರ್ಜಿ ಅವರ ಸಂದರ್ಶನದ ಸಾರಾಂಶ ಈ ಬಾರಿಯ ಸಂಚಿಕೆಯಲ್ಲಿ.
ಉತ್ತರ ಕರ್ನಾಟಕದ ಗಡಿಯ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಒಂದು ಘಟನೆ ಆ ಊರಿನ ಹತ್ತು ವರ್ಷದ ಬಾಲಕನ ಮೇಲೆ ಅತಿಯಾದ ಪ್ರಭಾವವನ್ನು ಬೀರಿ ಬಾಲಕನನ್ನು ಭಾರತೀಯ ಸೇನೆಗೆ ಸೇರ್ಪಡೆಯಾಗುವಂತೆ ಪ್ರೇರೇಪಿಸುತ್ತದೆ. ಸುದೀರ್ಘ 38 ವರ್ಷ ಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ, ರಾಷ್ಟ್ರಪತಿಯಿಂದ ವಿಶಿಷ್ಟ ಸೇವಾ ಪದಕವನ್ನು ಪಡೆದಿರುವ, ನಿವೃತ್ತ ಮೇಜರ್ ಜನರಲ್ ಮೇಜರ್ ಕೃಷ್ಣ ಮಿರ್ಜಿ ತಮ್ಮ ಸೇನಾನುಭವನ್ನು ಹಂಚಿಕೊಳ್ಳುತ್ತಿದ್ದಾಗ ಅವರ ಮಾತು, ಭಾವವೆಲ್ಲವು ಹೆಮ್ಮೆಯಿಂದ ಕೂಡಿತ್ತು.
“ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ’ ಎಂದು ಬನವಾಸಿ ದೇಶವನ್ನು ನೆನೆಯುತ್ತ ಆದಿ ಕವಿ ಪಂಪ ಹಾಡಿದರೆ, ಆಗಸ್ಟ್ ಬಂತೆಂದರೆ ಪರದೇಶದಲ್ಲಿ ನೆಲೆಸಿದ್ದರೂ ತಾಯಿನಾಡನ್ನು ಹೆಮ್ಮೆ, ಗೌರವದಿಂದ ನೆನೆಯುತ್ತಾರೆ ನಿವೃತ್ತ ಮೇಜರ್ ಜನರಲ್ ಕೃಷ್ಣ ಮಿರ್ಜಿ. ಪ್ರತೀ ವರ್ಷದಂತೆ ಈ ಬಾರಿಯೂ ಇಂಗ್ಲೆಂಡಿನ ಬೋಲ್ಟನ್ ನಗರದಲ್ಲಿ ನೆಲೆಸಿರುವ ತನ್ನ ಮಗಳ ಮನೆಯಲ್ಲಿ ಮೊಮ್ಮಗಳೊಂದಿಗೆ ಬೇಸಗೆಯ ರಜೆ ಕಳೆಯಲು ಪತ್ನಿ ಅಲಕಾ ಅವರೊಡನೆ ಬಂದಿದ್ದಾರೆ. ಈ ವೇಳೆಯಲ್ಲಿ ಅವರನ್ನು ಮಾತನಾಡಿಸಿದಾಗ ತಮ್ಮ ಸೇನೆಯ ದಿನಗಳನ್ನು, ಕಾರ್ಗಿಲ್‌ನ ವೀರ ಹುತಾತ್ಮರನ್ನು ನೆನೆದು ಮಾತನಾಡುವಾಗ ಅವರ ಧ್ವನಿಯಲ್ಲಿ ಆದ್ರìತೆಯಿತ್ತು. ಮಿರ್ಜಿ ಅವರ ಜೀವನ, ಭಾರತೀಯ ಸೇನೆಯಲ್ಲಿ ಕಳೆದ ದಿನಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಬೆಳಗಾವಿಯ ಕೃಷ್ಣ ಮಿರ್ಜಿಯನ್ನು ಭಾರತೀಯ ಸೇನೆ ಆಕರ್ಷಿಸಿದ್ದು ಹೇಗೆ? ಎಂಬುದರ ಹಿಂದೆ ಸ್ವಾರಸ್ಯಕರವಾದ ಘಟನೆಯಿದೆ.
ಹತ್ತು ವರ್ಷದ ಶಾಲಾ ಬಾಲಕ ಕೃಷ್ಣ ಮಿರ್ಜಿಯ ಜೀವನದಲ್ಲಿ ಅದೊಂದು ಅಮೃತ ಘಳಿಗೆ. ಉತ್ತರ ಕರ್ನಾಟಕದ ಗಡಿನಾಡಿನಲ್ಲಿದ್ದ ಚಿಕ್ಕ ಪಟ್ಟಣ, ಹುಟ್ಟೂರಾದ ಬೆಳಗಾವಿಯಲ್ಲಿ ಆ ದಿನ ಬೆಳಗ್ಗೆ ಎಲ್ಲ ಮಾಮೂಲಿ ಆಗೇ ಇತ್ತು. ಶಾಲೆಯಿಂದ ಮರಳಿ ಮನೆಗೆ ಬರುವಷ್ಟರಲ್ಲಿ ಊರ ತುಂಬ ಗಿಜಿಗಿಜಿ ಜನಸ್ತೋಮ. ಎಲ್ಲೆಡೆ ಮಿಲಿಟರಿ ವಾಹನಗಳು, ರಸ್ತೆಯ ಬದಿಗಳಲ್ಲಿ ಶಸ್ತ್ರಧಾರಿ ಸೈನಿಕರು ವಾಹನಗಳನ್ನು ಮತ್ತು ಅವರೆಲ್ಲರೂ ಓಡಾಡುವ ಜನರನ್ನು ನಿಯಂತ್ರಿಸುತ್ತಿದ್ದರು. ಖಾಲಿಯಾಗಿದ್ದ ಮೈದಾನಗಳÇÉೆಲ್ಲ ಸೈನಿಕರ ಟೆಂಟುಗಳು.ಇದನ್ನು ನೋಡಿ ಬಾಲಕನಿಗೆ ಒಂದು ಕಡೆ ಕುತೂಹಲ, ಉತ್ಸಾಹ, ಇನ್ನೊಂದು ಕಡೆ ಹೆದರಿಕೆ. ಮತ್ತೂಂದೆಡೆ ದುಗುಡ ಇದೇನು ನಡೆಯುತ್ತಿರಬಹುದು ನಮ್ಮೂರಲ್ಲಿ ಇಂದು? ಅಂತ. ಆಗ 1961ರ ಡಿಸೆಂಬರ್. ತಲೆಯ ಮೇಲೆ ಆಕಾಶದಲ್ಲಿ ಕೆಳಸ್ತರದಲ್ಲಿ ಹಾರುತ್ತಿದ್ದ ಗಡಚಿಕ್ಕುವ ವಿಮಾನದ ಸದ್ದು. ಅವು ಪಕ್ಕದಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿಯಲು ತಯಾರಾದ ಮಿಲಿಟರಿ ವಿಮಾನಗಳಂತೆ ಕಂಡವು. ಇದಾದ ಎರಡು ದಿನಗಳ ಅನಂತರವೇ ಭಾರತದ ಸೇನಾ ಪಡೆ ಆಪರೇಶನ್ ವಿಜಯ್ ಮಿಲಿಟರಿ ಆಕ್ಷನ್‌ನಲ್ಲಿ ಗೋವಾ, ದೀವ್, ದಮನ್‌ಗಳನ್ನು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತಗೊಳಿಸಿದ ಸುದ್ದಿ ಎಲ್ಲೆಡೆ ಹರಡಿತು. ಇದನ್ನೆಲ್ಲ ನೋಡಿ ಸ್ಫೂರ್ತಿಗೊಂಡಿದ್ದ, ಭಾರತದ ಸ್ವಾತಂತ್ರÂ ಚಳುವಳಿ ಕಂಡಿದ್ದ ತಂದೆಯ ಪಾಲನೆಯಲ್ಲಿ ಬೆಳೆದಿದ್ದ ಕೃಷ್ಣ ತಾನೂ ಸಹ ಭಾರತದ ಸೈನಿಕನಾಗುವ ಕನಸು ಕಾಣಲು ಪ್ರಾರಂಭಿಸಿ ಬಿಟ್ಟಿದ್ದ.
ಮಿರ್ಜಿಯ ಅದೃಷ್ಟಕ್ಕೆ ಎರಡೇ ವರ್ಷಗಳ ಅನಂತರ ವಿಜಾಪುರದಲ್ಲಿ (ಆಗಿನ ಹೆಸರು) ಹೊಸದಾಗಿ ಆರಂಭವಾಗಿದ್ದ ರಾಷ್ಟ್ರೀಯ ಸೈನಿಕ ಶಾಲೆಯಲ್ಲಿ ಭರ್ತಿಯಾಯಿತು. 1962ರಲ್ಲಿ ಭಾರತದ ಮೇಲೆ ಚೀನದ ಆಕ್ರಮಣದ ತರುವಾಯ ಭಾರತದ ರಕ್ಷಣ ಪಡೆ ವಿಸ್ತರಿಸಲು ಈ ಸೈನಿಕ ಶಾಲೆಯನ್ನು ಪ್ರಾರಂಭಿಸಲಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರÂ ದೊರಕಿದ್ದರೂ, 1954ರಲ್ಲಿ ಫ್ರೆಂಚರಿಂದ ಪಾಂಡಿಚೇರಿ ಮತ್ತು 1961ರಲ್ಲಿ ಪೋರ್ಚುಗೀಸರ ಆಳಿಕೆಯಿಂದ ಗೋವಾ, ದೀವ್, ದಮನ್, ದಾದರಾ, ನಗರ ಹವೇಲಿಗಳು ಮುಕ್ತವಾದಾಗಲೇ ಭಾರತ ಸಂಪೂರ್ಣವಾಗಿ ವಸಹಾತುಶಾಹಿಗಳಿಂದ ಮುಕ್ತವಾಯಿತು ಅನ್ನಬಹುದು.
ಶಿಸ್ತಿನ ತರಬೇತಿ
ತನ್ನ ಕನಸನ್ನು ಸಾಕಾರಗೊಳಿಸಲು ಸೈನಿಕ ಶಾಲೆಯನ್ನು ಸೇರಿದ ಮಿರ್ಜಿ ಅವರಿಗೆ ಅಲ್ಲಿ ಶಿಸ್ತುಬದ್ಧವಾದ ತರಬೇತಿ ದೊರೆತಿತ್ತು. ಸೈನಿಕ ಶಾಲೆಯಲ್ಲಿ ಐದು ವರ್ಷಗಳ ಕಲಿಕೆಯ ಅನಂತರ ಪುಣೆಯ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ, ಆಮೇಲೆ ಡೆಹ್ರಾಡೂನ್ ಮಿಲಿಟರಿ ಅಕಾಡೆಮಿಯಿಂದ ಉತ್ತೀರ್ಣರಾದಾಗ ಜನರಲ್ ಮಾಣೆಕ್ ಷಾ ಅವರ ಸಮ್ಮುಖದಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ಎದೆಯುಬ್ಬಿಸಿ ಭಾಗವಹಿಸಿದ್ದರು. ಇದಾದ ಬಳಿಕ ಭಾರತದ ಆರ್ಟಿಲ್ಲರಿ ರೆಜಿಮೆಂಟಿಗೆ ಸೇರಿ ಸ್ವಂತ ಪರಿಶ್ರಮ ಮತ್ತು ಕಾರ್ಯ ದಕ್ಷತೆಯಿಂದ ಹಂತ ಹಂತವಾಗಿ ಒಂದೊಂದೆ ಹುದ್ದೆಯನ್ನು ಅಲಂಕರಿಸುತ್ತ ಮೇಜರ್ ಜನರಲ್ ರ್‍ಯಾಂಕ್ ತಲುಪಿ 38 ವರ್ಷಗಳ ಸುದೀರ್ಘ ಸೇವೆಯ ಕೊನೆಯಲ್ಲಿ ದೊರಕಿಸಿಕೊಂಡಿದ್ದು “ವಿಶಿಷ್ಟ ಸೇವಾ ಮೆಡಲ…’. ಇದು ಮಿರ್ಜಿ ಅವರ ಸಾರ್ಥಕ ಜೀವನದ ಹೈಲೆಟ್.
ಸರ್ವತ್ರ ಗೌರವ ಮತ್ತು ಕೀರ್ತಿ
ತೇರ್ಗಡೆಯಾದ ಮೇಲೆ ಕೃಷ್ಣ ಮಿರ್ಜಿ ಯವರು ಅರಿಸಿಕೊಂಡ ರೆಜಿಮೆಂಟ್ ಆರ್ಟಿಲ್ಲರಿ (ಫಿರಂಗಿ ದಳ). ಅದರ ಧ್ಯೇಯ ವಾಖ್ಯ ಸಂಸ್ಕೃತ ಮತ್ತು ಪರ್ಷಿಯನ್ ಐತಿ ಹಾಸಿಕ ಪರಂಪರೆಯನ್ನು ಸೂಚಿಸುವ ಪದ ಗಳ ಕಲಸುಮೇಲೋಗರ: “ಸರ್ವತ್ರ ಇಜ್ಜತ್ ಔರ್ ಇಕ್ಬಾಲ್’. ದೇಶದ ಸಂರಕ್ಷಣೆಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟ ಸೈನಿಕರ ಒಂದೊಂದು ವೃತ್ತಾಂತವೂ ಮೈನವಿರೇಳಿಸು ವಂಥದ್ದು. ಅವರ ಕಾರ್ಯ ಬರೀ ಯುದ್ಧದ ಸಮಯದಲ್ಲಷ್ಟೇ ಅಲ್ಲ ಪ್ರತೀ ದಿನವೂ, ಪ್ರತೀ ಕ್ಷಣವೂ ಸತತವಾಗಿ ನಡೆದಿರುತ್ತದೆ.
ಆಪರೇಶನ್ ಪರಾಕ್ರಮ್
2001ರಲ್ಲಿ ದಿಲ್ಲಿ ಪಾರ್ಲಿಮೆಂಟ್ ಶತ್ರುಗಳ ಪಡೆ ಆಕ್ರಮಣ ನಡೆಸಿದಾಗ ಇದಕ್ಕೆ ಪ್ರತ್ಯುತ್ತರವಾಗಿ ಭಾರತ “ಆಪರೇಶನ್ ಪರಾಕ್ರಮ’ಕ್ಕೆ ಸಿದ್ಧವಾಗಿತ್ತು. ಈ ಆಪರೇಶನ್ ಪರಾ ಕ್ರಮದಲ್ಲಿ ಮಿರ್ಜಿಯವರು ಇದ್ದರು. ಈ ವೇಳೆಯಲ್ಲಿ ಕುಟುಂಬ ಹಾಗೂ ಮಡದಿಯವರು ಬೆನ್ನೆಲುಬಾಗಿ ನಿಂತಿರುವ ಬಗ್ಗೆ ಮಿರ್ಜಿ ಸ್ಮರಿಸಿ ಕೊಳ್ಳುತ್ತಾರೆ. ಮಿರ್ಜಿಯವರು ಒಬ್ಬ ನಿಷ್ಠ ಸೈನಿಕನಂತೆ ತನು ಮನ ದಿಂದ ತಾಯ್ನಾಡಿನ ರಕ್ಷಣೆಯಲ್ಲಿ ತೊಡಗಿದ್ದಾಗ ಶಾಲಾ ಶಿಕ್ಷಕಿಯಾಗಿದ್ದ ಇವರ ಮಡದಿ ಸ್ವಾರ್ಥವನ್ನು ತ್ಯಜಿಸಿ, ತನ್ನ ಪ್ರೀತಿಯ ಶಾಲೆಯ ಕೆಲಸಕ್ಕೆ ರಾಜೀನಾಮೆ ನೀಡಿ ಸಾಥ್ ಕೊಟ್ಟಿದ್ದಳು ಎಂದು ಮಡದಿ ಅಲಕಾ ಅವರಿಗೆ ಹೃತೂ³ರ್ವಕವಾಗಿ ಕೃತಜ್ಞತೆಗಳನ್ನು ಸಮರ್ಪಿಸುತ್ತಾರೆ.
– ಶ್ರೀವತ್ಸ ದೇಸಾಯಿ ಡೋಂಕಾಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.