ಕರ್ನಾಟಕದ ಕಡೆ ಹಳ್ಳಿ ಕಡೆಗಣನೆ
ಒಂದೇ ಒಂದು ಯೋಜನೆ ಗ್ರಾಮಕ್ಕೆ ಬಂದಿಲ್ಲ •ಕನ್ನಡ ಮಾಧ್ಯಮ ಶಾಲೆ ಇಲ್ಲಿಲ್ಲ
Team Udayavani, Jun 26, 2019, 10:52 AM IST
ಔರಾದ: ಚೊಂಡಿಮುಖೇಡ್‌ದಲ್ಲಿ ಗ್ರಾಮವಾಸ್ತವ್ಯಕ್ಕೆ ಬಂದು ಗ್ರಾಮದ ಮುಖಂಡ ರಾಮದಾಸ ಮುಖೇಡಕರ್ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದ ಜಿಲ್ಲಾಧಿಕಾರಿ ಡಾ| ಮಹಾದೇವ. (ಸಂಗ್ರಹ ಚಿತ್ರ)
ಔರಾದ: ಕರ್ನಾಟಕದ ಕಡೆಯ ಹಳ್ಳಿ ಚೊಂಡಿಮುಖೇಡ ಗ್ರಾಮಸ್ಥರು ಒಂದು ಕಡೆ ಕನ್ನಡ ಭಾಷೆ ಶಿಕ್ಷಣದಿಂದ ವಂಚಿತರಾಗಿದ್ದರೆ, ಇನ್ನೊಂದು ಕಡೆ 371ಜೆ ಕಲಂ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಔರಾದ ತಾಲೂಕಿನ ಚೊಂಡಿಮುಖೇಡ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆ ಇಲ್ಲದೇ ಇರುವುದರಿಂದ ಇಲ್ಲಿನ ಪಾಲಕರು ತಮ್ಮ ಮಕ್ಕಳಿಗೆ ಮರಾಠಿ ಮಾಧ್ಯಮದಲ್ಲೇ ಕಲಿಸುವುದು ಅನಿವಾರ್ಯವಾಗಿದೆ.
1ರಿಂದ7 ತರಗತಿವರೆಗೆ ಮರಾಠಿ ಮಾಧ್ಯಮದಲ್ಲೇ ಓದಿ ಮುಂದಿನ ಶಿಕ್ಷಣಕ್ಕಾಗಿ ನೆರೆಯ ಮಹಾರಾಷ್ಟ್ರದ ಉದಗೀರ, ದೇಗಲುರ,ಲಾತುರ, ಮುಖೇಡಗೆ ಹೋಗಿ ವಿದ್ಯಾಭ್ಯಾಸ ಮಾಡುವಂಥ ಅನಿವಾರ್ಯತೆ ಇಲ್ಲಿದೆ.
ಗ್ರಾಮದಲ್ಲಿ 1500 ಜನರಿದ್ದಾರೆ ಆದರೆ ಇಲ್ಲಿಯವರೆಗೂ ಒಂದು ಕುಟುಂಬದ ಸದಸ್ಯರು ಕೂಡಾ 371(ಜೆ) ಪ್ರಮಾಣ ಪತ್ರ ಪಡೆದಿಲ್ಲ. 371ಜೆ ಎಂದರೇನು? ಅದರಿಂದಾಗುವ ಲಾಭಗಳೇನು? ಎಂಬ ಪ್ರಶ್ನೆಗಳು ಇಂದಿಗೂ ಇಲ್ಲಿನ ನಿವಾಸಿಗಳಿಗೆ ಕಾಡುತ್ತಿವೆ.
ನಮ್ಮ ಮನವಿಗೆ ಬೆಲೆ ಇಲ್ಲವೇ?: ನಾವು ಕರ್ನಾಟಕ ರಾಜ್ಯದಲ್ಲಿದ್ದೇವೆ. ನಮ್ಮ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭ ಮಾಡಿ, ನಮಗೂ 371 ಜೆ ಕಲಂ ಪ್ರಮಾಣ ಪತ್ರ ನೀಡುವ ಮೂಲಕ ಸರ್ಕಾರದ ಸೌಲಭ್ಯ ನೀಡಿ ಎಂದು ಅಂದಿನ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರಿಗೆ ಗ್ರಾಮಕ್ಕೆ ಭೇಟಿ ನೀಡಿದಾಗ ಮನವಿ ಮಾಡಲಾಗಿತ್ತು. ಕಳೆದ ಆಕೋrಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಗ್ರಾಮ ವಾಸ್ತವ್ಯ ಮಾಡಲು ಊರಿಗೆ ಬಂದಾಗ ಮನವಿ ಮಾಡಿದ್ದೆವು. ಆಗ ಅವರು ವಿವಿಧ ಯೋಜನೆ ಲಾಭ ಪಡೆಯುವಂತೆ ಮಾಡುತ್ತೇನೆಂದು ಭರವಸೆ ನೀಡಿ ಹೋಗಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನ ಆಗಿಲ್ಲವೆಂದು ಗ್ರಾಮದ ಮುಖಂಡರು ‘ಉದಯವಾಣಿ’ಗೆ ತಿಳಿಸಿದರು.
ಕಾಟಚಾರದ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಲು ಬಂದಾಗ ನಮ್ಮ ಗ್ರಾಮ ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ಸರ್ಕಾರದ ಸೌಲಭ್ಯದಿಂದ ವಂಚಿತವಾಗಿ ಜೀವನ ಸಾಗಿಸುತ್ತಿರುವ ನಮಗೆ, ನಮ್ಮ ಮಕ್ಕಳಿಗೆ ಉತ್ತಮ ಯೋಜನೆಗಳು ಸಿಗುತ್ತವೆ ಎನ್ನುವ ಲೆಕ್ಕಚಾರದಲ್ಲಿ ನಾವಿದ್ದೆವು. ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಿದಾಗಿನಿಂದ ಇಂದಿನವರೆಗೂ ಒಂದೇ ಒಂದು ಯೋಜನೆ ನಮ್ಮ ಗ್ರಾಮಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಅದೊಂದು ಕಾಟಾಚಾರದ ಹಾಗೂ ಸರ್ಕಾರದ ಹಣ ಖರ್ಚು ಮಾಡುವ ವಾಸ್ತವ್ಯವಾಗಿತ್ತು ಎಂದು ಗ್ರಾಮದ ಮುಖಂಡರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.