ಆಳಂದ ಸಕ್ಕರೆ ಕಾರ್ಖಾನೆಯಲ್ಲಿ ದಾಂಧಲೆ: ಇಬ್ಬರಿಗೆ ಗಾಯ
ನಾಲ್ವರ ವಿರುದ್ಧ ಪ್ರಕರಣ ದಾಖಲು-ಒಬ್ಬನ ಬಂಧನ
Team Udayavani, May 22, 2019, 9:53 AM IST
ಆಳಂದ: ಸ್ಥಳೀಯ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ರವಿವಾರ ರಾತ್ರಿ ನಡೆದ ದಾಂಧಲೆ ಪ್ರಕರಣದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಬ್ಬರೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಆಳಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ್ ಸಾಹು ಮತ್ತು ಕಾರ್ಖಾನೆ ಭದ್ರತಾ ಸಿಬ್ಬಂದಿ ಗುರುನಾಥ್ ಮಹಾದೇವ ಶೇರಖಾನಿ ಎಂಬುವವರು ಗಾಯಗೊಂಡಿದ್ದಾರೆ.
ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಶೋಕ ಮೈನಾಳ್ ಅವರನ್ನು ಬಂಧಿಸಲಾಗಿದೆ. ಈ ಮಧ್ಯೆ ಧರ್ಮರಾಜ್ ಸಾಹು ಅವರು ಪ್ರತಿ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಧರ್ಮರಾಜ ಸಾಹು ಮಾತನಾಡಿ, ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಬಾಕಿ ಕೊಡಬೇಕಾದ 100 ಕೋಟಿ ರೂ. ಪಾವತಿಸದೇ ತಮ್ಮ ಮೇಲೆಯೇ ಹಲ್ಲೆ ಮಾಡಿ, ಮತ್ತೆ ನಾವೇ ಹಲ್ಲೆ ಮಾಡಿರುವ ಕುರಿತು ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಬಾಕಿ ಹಣದ ಕುರಿತು ರವಿವಾರ ಸಂಜೆ ಕಾರ್ಖಾನೆಗೆ ಬರಲು ಎನ್‌ಎಸ್‌ಎಲ್ ಕಾರ್ಖಾನೆ ಉಪಾಧ್ಯಕ್ಷ ರಾಧಾಕೃಷ್ಣ, ಮಾನವ ಸಂಪನ್ಮೂಲ ಅಧಿಕಾರಿ ಮಾನೇಕರ್ ಹಾಗೂ ಸುರೇಶ ದೇಸಾಯಿ ಸಮಯ ಕೊಟ್ಟಿದ್ದರು. ಅವರು ಹೇಳಿದಂತೆ ಸಂಜೆ ಕಾರ್ಖಾನೆಗೆ ಹೋದರೂ ಯಾರೂ ಇರಲಿಲ್ಲ. ಅಲ್ಲಿದ್ದ ಸಿಬ್ಬಂದಿ ಇನ್ನೊಂದು ದಿನ ಸಭೆ ನಡೆಸಿದರಾಯಿತು ಎಂದು ಹೇಳಿದರು. ಸಭೆ ನಡೆಸುವುದಕ್ಕೂ ಮುಂದೆ ಹಾಕುತ್ತಿರುವುದರ ಕುರಿತು ನಾನು ಆಕ್ಷೇಪಿಸಿದೆ. ಆಗ ಅಲ್ಲಿದ್ದವರು ಗೂಂಡಾಗಳು ಎಂದು ನಮ್ಮ ಜತೆಗೆ ಅನುಚಿತವಾಗಿ ವರ್ತಿಸಿದರು. ಈ ಸಂದರ್ಭದಲ್ಲಿ ನಮಗೆ ಕೋಪ ಬಂದು ಅವರ ವಿರುದ್ಧ ವಾದ ಮಾಡಿದೆವು. ತಾಳ್ಮೆ ಮೀರಿದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಮಾತ್ರ ಸಿಸಿಟಿವಿಯಲ್ಲಿ ಕೊಡುವ ರೀತಿಯಲ್ಲಿ ಸುಳ್ಳು ವಿಡಿಯೋ ತುಣು ಕೊಡಲಾಗಿದೆ. ಸಿಸಿ ಕ್ಯಾಮೆರಾ ಇರದ ಸ್ಥಳದಲ್ಲಿ ನನ್ನ ಹಾಗೂ ಅಶೋಕ ಮೈನಾಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಎನ್‌ಎಸ್‌ಎಲ್ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ಕೇವಲ 1500ರೂ. ಕೊಡುತ್ತಿದ್ದಾರೆ. ಅದೇ ಆಲ್ಮೇಲದ ಕೆಪಿಆರ್ ಕಾರ್ಖಾನೆ 2,200 ರೂ.ಗಳು, ಹಾವಳಗಾದ ರೇಣುಕಾ ಸಕ್ಕರೆ ಕಾರ್ಖಾನೆ 2000 ರೂ. ಕೊಟ್ಟಿದ್ದಾರೆ. 1500 ರೂ. ಹಿಡಿದರೂ ಸಹ 100 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಇದು ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಈ ಕುರಿತು ನಾನು ಪದೇ ಪದೇ ಆಕ್ಷೇಪಿಸಿದರೆ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆಡಳಿತ ಮಂಡಳಿಯೇ ನನ್ನ ವಿರುದ್ಧ ದೂರು ದಾಖಲಿಸಿತ್ತು. ಅದು ಬಿ. ರಿಪೋರ್ಟ್ ಆಗಿದೆ. ಈಗ ಮತ್ತೆ ನನ್ನ ಮೇಲೆ ದೂರು ಸಲ್ಲಿಸಲು ಆಡಳಿತ ಮಂಡಳಿ ವ್ಯವಸ್ಥಿತ ಸಂಚು ನಡೆಸುತ್ತಿದೆ ಎಂದು ಅವರು ದೂರಿದರು.
ಹಲ್ಲೆ ನಡೆದ ನಂತರ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ರಾಜಾಪುರ, ಶಾಂತವೀರಪ್ಪ ಕಲಬುರ್ಗಿ, ನಾಗೇಂದ್ರರಾವ್ ದೇಶಮುಖ, ರಮೇಶ ಹೂಗಾರ, ಶಾಂತವೀರಪ್ಪ ದಸ್ತಾಪುರ ನನಗೆ ಭೇಟಿ ನೀಡಿ ದೈರ್ಯ ಹೇಳಿದ್ದಾರೆ ಎಂದು ಹೇಳಿದರು.
ಹೋರಾಟದ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ನನ್ನ ವಿರುದ್ಧ ನಡೆದ ಹಲ್ಲೆ ಪ್ರಕರಣವನ್ನು ರಾಜ್ಯ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ, ಅಶೋಕ ಗುತ್ತೇದಾರ, ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ಖಂಡಿಸಿದ್ದಾರೆ. ಎನ್‌ಎಸ್‌ಎಲ್ ಆಡಳಿತ ಮಂಡಳಿಯ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಇನ್ನೋರ್ವ ಗಾಯಾಳು ಭದ್ರತಾ ಸಿಬ್ಬಂದಿ ಗುರುನಾಥ ಶೇರಖಾನಿ ಹೇಳಿಕೆ ನೀಡಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು ಹಾಗೂ ಇತರೆ ಐವರು ಕಾರ್ಖಾನೆಗೆ ಬಂದು ದಾಂಧಲೆ ಮಾಡಿದರು. ಅದನ್ನು ತಡೆಯಲು ಹೋದಾಗ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ತಿಳಿಸಿದರು.
ಕಾರ್ಖಾನೆ ರೈತರ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪವನ್ನು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಾನೂನು ಸಲಹೆಗಾರ ಸಂಗಮೇಶ ಸ್ಥಾವರಮಠ ಹಾಗೂ ಅವಿನಾಶ ದೇಶಪಾಂಡೆ ಅಲ್ಲಗಳೆದಿದ್ದಾರೆ. ಕೆಲವು ರೈತರ 500 ಮತ್ತು 600ರೂ.ಗಳು ಬಾಕಿ ಇದೆ. ಆ ಹಣವನ್ನು ಹಂತ, ಹಂತವಾಗಿ ಪಾವತಿಸಲಾಗುತ್ತಿದೆ. ದಾಂಧಲೆಯಿಂದ 12 ಲಕ್ಷ ರೂ.ಗಳಷ್ಟು ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.