13 ದಿನದಲ್ಲಿ ಹರಿಯಿತು 442 ಟಿಎಂಸಿ ನೀರು!
ಆಲಮಟ್ಟಿ ಜಲಾಶಯದ ಇತಿಹಾಸದಲ್ಲೇ ದಾಖಲೆ•ಹೆಚ್ಚಿನ ಒಳ-ಹೊರ ಹರಿವೂ ಇದೇ ಮೊದಲು•ಆಂಧ್ರಕ್ಕೆ ಹರಿದು ಹೋದ ಹೆಚ್ಚುವರಿ ನೀರು
Team Udayavani, Aug 14, 2019, 11:19 AM IST
ಬಾಗಲಕೋಟೆ: ಆಲಮಟ್ಟಿ ಜಲಾಶಯದಿಂದ ಮಂಗಳವಾರ ಎಲ್ಲ 26 ಗೇಟ್ ಮೂಲಕ ನೀರು ಹೊರಗೆ ಬಿಡುತ್ತಿರುವುದು
ಶ್ರೀಶೈಲ ಬಿರಾದಾರ
ಬಾಗಲಕೋಟೆ:ದೇಶದ 2ನೇ ಅತಿದೊಡ್ಡ ಜಲಾಶಯ ಆಲಮಟ್ಟಿಯಲ್ಲಿ ಈ ಬಾರಿ ಮತ್ತೂಂದು ದಾಖಲೆ ನಿರ್ಮಾಣವಾಗಿದೆ. ಕೇವಲ 13 ದಿನಗಳಲ್ಲಿ 442 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ಹರಿ ಬಿಟ್ಟಿದ್ದು, ಇದು ಜಲಾಶಯದ ಇತಿಹಾಸದಲ್ಲೂ ಮೊದಲು.
ಆ.1ರಿಂದ 13ರವರೆಗೆ ಒಟ್ಟು 48,68,423 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಬಿಟ್ಟಿದ್ದು, ಅದು ಆಂಧ್ರಪ್ರದೇಶಕ್ಕೆ ಸೇರಿದೆ. 2000-01ರಿಂದ ಜಲಾಶಯದಲ್ಲಿ ನೀರು ಸಂಗ್ರಹ ಆರಂಭಿಸಿದ್ದು, ಈವರೆಗೆ ಕೇವಲ 13 ದಿನಗಳಲ್ಲಿ ಇಷ್ಟೊಂದು ನೀರು ಹೊರ ಬಿಡಲಾಗಿಲ್ಲ.
1964ರಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರಿಂದ ಅಡಿಗಲ್ಲು ಹಾಕಲಾಗಿದ್ದ ಆಲಮಟ್ಟಿ ಜಲಾಶಯವನ್ನು 2006ರಲ್ಲಿ ಅಂದಿನ ರಾಷ್ಟ್ರಪತಿ ಡಾ|ಎ.ಪಿ.ಜೆ. ಅಬ್ದುಲ್ ಕಲಾಂ ಲೋಕಾರ್ಪಣೆಗೊಳಿಸಿದ್ದರು. 2000ನೇ ಇಸ್ವಿಯಿಂದ ನೀರು ಸಂಗ್ರಹ ಆರಂಭಿಸಿದ್ದು, ಈವರೆಗೆ ಒಟ್ಟು ಮೂರು ಬಾರಿ ಪ್ರವಾಹ ಬಂದಿದೆ. ಮೂರೂ ಬಾರಿ ಪ್ರವಾಹ ಬಂದರೂ ಈ ವರ್ಷದಷ್ಟು ನೀರು ಒಳ ಅಥವಾ ಹೊರ ಹರಿವು ಇರಲಿಲ್ಲ. 2005ರಲ್ಲಿ 4.75 ಲಕ್ಷ ಕ್ಯೂಸೆಕ್ ಒಳ ಹರಿವಿತ್ತು. ಇದೇ ಅತಿ ಹೆಚ್ಚು ಒಳ ಹರಿವು ಬಂದ ದಾಖಲೆಯಾಗಿತ್ತು. 2009ರಲ್ಲಿ ಪ್ರವಾಹ ಬಂದಾಗಲೂ ಒಳ ಹರಿವಿನ ಗರಿಷ್ಠ ಪ್ರಮಾಣ 3.75 ಲಕ್ಷ ಕ್ಯೂಸೆಕ್ ಇತ್ತು. ಇದಾದ ಬಳಿಕ ಜಲಾಶಯಕ್ಕೆ 1.40 ಲಕ್ಷ ಕ್ಯೂಸೆಕ್‌ನಿಂದ 1.60 ಲಕ್ಷ ಕ್ಯೂಸೆಕ್‌ವರೆಗೆ ಮಾತ್ರ ನೀರು ಹರಿದು ಬಂದಿದೆ.
13 ದಿನ; 442 ಟಿಎಂಸಿ ನೀರು: 519.60 ಮೀಟರ್ ಎತ್ತರದ, 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯಕ್ಕೆ ಮಂಗಳವಾರ 5.70 ಲಕ್ಷ ಕ್ಯೂಸೆಕ್ ಒಳ ಹರಿವು ಇತ್ತು. ಕಳೆದ ವರ್ಷ ಇದೇ ದಿನ 519.60 ಮೀಟರ್ (ಪೂರ್ಣ ತುಂಬಿತ್ತು) ವರೆಗೆ ನೀರು ತುಂಬಿಕೊಂಡು, ಒಳ ಹರಿವು 22,900 ಕ್ಯೂಸೆಕ್‌ನಷ್ಟಿತ್ತು. ಅಷ್ಟೇ ಪ್ರಮಾಣದ ನೀರನ್ನೂ ಹೊರ ಬಿಡಲಾಗುತ್ತಿತ್ತು. ಜತೆಗೆ ಕಳೆದ ವರ್ಷ ಇದೇ ದಿನ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ ಕಾರ್ಯಕ್ರಮವೂ ಆಯೋಜಿಸಲಾಗಿತ್ತು. ಹುಬ್ಬಳ್ಳಿಗೆ ಬಂದಿದ್ದ ಅಂದಿನ ಸಿಎಂ ಕುಮಾರಸ್ವಾಮಿ, ಹವಾಮಾನ ವೈಪರೀತ್ಯದಿಂದ ಆಲಮಟ್ಟಿಗೆ ಬಂದಿರಲಿಲ್ಲ. ಹೀಗಾಗಿ ಬಾಗಿನ ಅರ್ಪಿಸುವ ಕಾರ್ಯವೂ ನಡೆದಿರಲಿಲ್ಲ.
ಆ.1ರಂದು 2,38,573 ಕ್ಯೂಸೆಕ್ ನೀರಿನ ಹರಿವು ಆರಂಭಗೊಂಡಿತ್ತು. ಜಲಾಶಯಕ್ಕೆ 2 ಲಕ್ಷ ಮೇಲ್ಪಟ್ಟು ನೀರು ಹರಿದು ಬರುವುದು ಆ.1ರಿಂದ ಆರಂಭಗೊಂಡಿದೆ. ಈವರೆಗೆ ಅದು 5 ಲಕ್ಷ ಕ್ಯೂಸೆಕ್ ದಾಟಿದೆ. ಜಲಾಶಯ ಮುಂಭಾಗದಲ್ಲಿ ಇನ್ನೂ ಉಂಟಾಗಬಹುದಾಗಿದ್ದ ಪ್ರವಾಹ ಪರಿಸ್ಥಿತಿ ನಿಭಾಯಿಸಲು, ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಉಪ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಹರಿವು ನೋಡಿಕೊಂಡು, ನಿತ್ಯವೂ ಅಷ್ಟೇ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಕೇವಲ 13 ದಿನದಲ್ಲಿ 442.583 ಟಿಎಂಸಿ ಅಡಿ ನೀರು ಜಲಾಶಯದಿಂದ ಹೊರಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.