ಪ್ರವಾಹ ಹೊಡೆತಕ್ಕೆ ಅಂಗಾತ ಬಿದ್ದ ಬೆಳೆ!
ನೆರೆ-ಬರಕ್ಕೆ ನಲುಗಿದ ಅನ್ನದಾತ•ಮಳೆ ಬರ್ಲಿಲ್ಲ-ನೆರೆ ಬಿಡ್ಲಿಲ್ಲ•ಮನೆ-ಹೊಲಗಳಿಗೆ ನುಗ್ಗಿದ ನೀರು
Team Udayavani, Aug 15, 2019, 1:07 PM IST
ಬಾಗಲಕೋಟೆ: ಬಾದಾಮಿ ತಾಲೂಕು ಕಾಟಾಪುರದಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಸಂಪೂರ್ಣ ಮಲಗಿದ ಮೆಕ್ಕೆಜೋಳ ಬೆಳೆ.
•ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಜಿಟಿ ಜಿಟಿ ಮಳೆ ಬಿಟ್ರ, ಭೂಮಿಗೆ ಹದವಾದ ಮಳೆ ಬಿದ್ದಿಲ್ಲ. ಇಂಥಾ ಬರದಾಗೂ ಕೊಳವೆ ಬಾವಿ, ತೆರೆದ ಬಾವಿ ನೀರಿನಿಂದ ಬೆಳೆದ ಬೆಳೆಯಲ್ಲ ನೆಲಸಮವಾಗೈತಿ. ಎದಿಮಟ ಬೆಳೆದ ಕಬ್ಬು, ಮೆಕ್ಕೆಜೋಳ, ಸೂರ್ಯಕಾಂತಿ ಬೆಳಿ ಭೂಮ್ಯಾಗ ಅಂಗಾತ ಬಿದ್ದೈತಿ. ಭೂಮಿಯ ಸೀಮೀ ಕಾಣವಲ್ವು. ನಾವ್ ಮಾಡಿದ ಪಾಪ ಆದ್ರೂ ಏನ್. ಈ ವಿಕೋಪ ನಮ್ಮನ್ಯಾಕ ಕಾಡಕತೈತಿ.
ಹೀಗೆ ಹೇಳಿದ್ದು ಕಣ್ಣೀರು ಸುರಿಸುತ್ತ ಬಾದಾಮಿ ತಾಲೂಕು ಮಂಗಳಗುಡ್ಡ ಗ್ರಾಮದ ರೈತ ದ್ಯಾವಪ್ಪ ಪೂಜಾರಿ. ದ್ಯಾವಪ್ಪಗ ಏಳು ಎಕರೆ ಭೂಮಿ ಇದೆ. ಪಕ್ಕದಲ್ಲೇ ಮಲಪ್ರಭಾ ನದಿ ಇದೆ. ಕೊಳವೆ ಬಾವಿಗೆ ಉತ್ತಮ ನೀರೂ ಇದೆ. ಆಗಸ್ಟ್ 6ರವರೆಗೂ ಬರಿದಾಗಿದ್ದ ಮಲಪ್ರಭಾ ನದಿಯಲ್ಲಿ ಬಸಿ ನೀರಿಗೂ ಕುಡುಕುವಂಗಾಗಿತ್ತು. ನದಿ ಪಕ್ಕದಲ್ಲೇ ಬೋರ್ ಹಾಕಿ, ಹೊಲಕ್ಕೆ ನೀರು ಬಿಡುತ್ತಿದ್ದೆವು. ಆದರೀಗ ನದಿಯೇ ತನ್ನ ಹೊಲ, ಮನೀಗೆ ಬಂದಿದೆ. ನದಿ ನೀರ ಮನೆಯೊಳಗೆ ಹೊಕ್ಕು ಬದುಕು ಬರ್ಬಾದ ಮಾಡಿದೆ. ಅಷ್ಟೇ ಅಲ್ಲ, ಹೊಲದಲ್ಲಿ ಬೆಳೆದ ಬೆಳೆ ನೆಲಹಾಸಿಗೆ ಮಾಡಿ ಹೋಗಿದೆ. ಈಗ ರೈತನಿಗೆ ದಿಕ್ಕು ತೋಚದಂಗಾಗೈತಿ ಎನ್ನುತ್ತಾನೆ ರೈತ ದ್ಯಾವಪ್ಪ.
ಮಲಗಿದ ಬೆಳೆಗಳು: ಮಲ್ರಪಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಈ ಬಾರಿ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಸೃಷ್ಟಿಸಿವೆ. ಮೂರು ನದಿಗಳು ತಮ್ಮ ಪಾತ್ರ ಬಿಟ್ಟ ಅಕ್ಕ-ಪಕ್ಕದಲ್ಲಿ 4ರಿಂದ 5 ಕಿ.ಮೀ ವರೆಗೆ ವಿಸ್ತಾರವಾಗಿ ಹರಿದಿವೆ. ಜಿಲ್ಲೆಯ ಯಾವ ಭಾಗದಲ್ಲೂ ಮಳೆ ಇಲ್ಲ. ಆದರೆ, ನದಿ ಪಕ್ಕ-ಪಕ್ಕದ ರೈತರು, ಆ ನದಿಗಳನ್ನೇ ನಂಬಿ ಬೆಳೆ ಬೆಳೆದಿದ್ದರು. ನದಿಯಲ್ಲಿ ಹರಿಯುವ ಅಲ್ಪಸ್ವಲ್ಪ ನೀರನ್ನು ಭೂಮಿಗೆ ಹಾಯಿಸಲು ನದಿ ಪಾತ್ರದಲ್ಲಿ ಪಂಪಸೆಟ್ ಹಾಕಿಕೊಂಡಿದ್ದರು. ಈ ಪ್ರವಾಹಕ್ಕೆ ಬೆಳೆಯಷ್ಟೇ ಅಲ್ಲ, ಲಕ್ಷಾಂತರ ಖರ್ಚು ಮಾಡಿ ಹಾಕಿದ್ದ ಪಂಪಸೆಟ್‌ಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ. ಲಕ್ಷಾಂತರ ಖರ್ಚು ಮಾಡಿ ಹಾಕಿಕೊಂಡಿದ್ದ ವೈಯಕ್ತಿಕ ಹಾಗೂ ಹೆಸ್ಕಾಂನ ವಿದ್ಯುತ್ ಪರಿವರ್ತಕಗಳ ಕುರುಹು ಸಿಗುತ್ತಿಲ್ಲ. ನದಿ ಪಾತ್ರದ ಎರಡೂ ಬದಿಯ 5 ಕಿ.ಮೀ. ವರೆಗಿನ ಎಲ್ಲಾ ರೈತರ ಬೆಳೆಗಳು, ಭೂಮಿಯಲ್ಲಿ ಅಂಗಾತ ಮಲಗಿಕೊಂಡಂತೆ ಬಿದ್ದಿವೆ. ತೆನೆ ಕಟ್ಟಿದ ಮೆಕ್ಕೆಜೋಳ, ಕೈಗೆ ಬಂದಿದ್ದ ಹೆಸರು, ಇನ್ನೇನು ಹೂವು ಬಿಟ್ಟು ಕಾಳು ಕಟ್ಟಡಲಿದ್ದ ಸೂರ್ಯಕಾಂತಿ ಬೆಳೆ ಎಲ್ಲವೂ ನೆಲಸಮಗೊಂಡಿರುವುದು ಕಂಡು ರೈತರು ಕಣ್ಣೀರಾಗುತ್ತಿದ್ದಾರೆ.
ಮರುಗಿದ ಮಹಿಳೆ: ತಾನು ಕಷ್ಟಪಟ್ಟು ಬೆಳೆದ ಈರುಳ್ಳಿ ಮತ್ತು ಕಬ್ಬು ಬೆಳೆ, ಸಂಪೂರ್ಣ ನೆಲ ಕಚ್ಚಿದ್ದನ್ನು ಕಂಡ ತಾಲೂಕಿನ ಚಿಕ್ಕಸಂಶಿಯ ಮಹಿಳೆ, ಮಲಗಿದ ಬೆಳೆ ಮುಂದೆ ಹಾಡ್ಯಾಡಿಕೊಂಡು ಅಳುವ ದೃಶ್ಯ ಎಂತಹ ಕ್ರೂರಿಗಳ ಹೃದಯ ಕರಗುವಂತಿದೆ. ಗ್ರಾಮೀಣ ಜನರು ತಮ್ಮ ಪ್ರೀತಿಯ ಪ್ರಾಣಿಗಳು, ಮನುಷ್ಯರು ಮೃತಪಟ್ಟರೆ ಹಾಡಿಕೊಂಡು ಅಳುತ್ತಾರೆ. ಹಾಗೆಯ ಭೂಮಿಯಲ್ಲಿ ಬೆಳೆ ಮಲಗಿದ್ದು ಕಂಡ ಮಹಿಳೆ, ನಾನೂ ಸಾಯಿತೇನ್ರಿ. ಸಾಲಾ ಮಾಡಿ ಬೆಳಿ ಬೆಳೆದಿದ್ದೆ. ನೀರು ಬಂದು ಎಲ್ಲಾ ಕೊಚ್ಕೊಂಡು ಹೋಗೈತಿ. ನಾನೂ ನೀರಾಗ್ ಬಿದ್ದು ಸಾಯತೇನ್ರಿ. ಎದಿ ಮಟ ಕಬ್ಬು ಬಂದಿತ್ತು ಎಂದು ಹಾಡ್ಯಾಡಿಕೊಂಡು ಅತ್ತು ಮಮ್ಮಲ ಮರಗುತ್ತಿದ್ದಾಳೆ.
ಒಟ್ಟಾರೆ, ಈ ಬಾರಿ ಪ್ರವಾಹ, ಬರದಿಂದ ನಲುಗಿದ ರೈತರ ಬಾಳಿಗೆ ನೀರು ಬಿಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಇನ್ನೇನು ರಾಶಿ ಮಾಡಲಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸರ್ಕಾರ, ತಕ್ಷಣ ರೈತರ ಬದುಕು ಕಟ್ಟಿಕೊಡಲು ಮುಂದಾಗಬೇಕಿದೆ.
ನಮ್ಮಲ್ಲಿ ಮಳೀ ಬರದಿದ್ರೂ ನದಿಯನ್ನೇ ನಂಬಿ ಬೆಳಿ ಬೆಳೀತಿದ್ವಿ. ಆಗಾಗ ನದಿಗೆ ಹರಿದು ಬರುತ್ತಿದ್ದ ನೀರನ್ನ ಬೆಳೀಗೆ ಬಿಡುತ್ತಿದ್ದೆವು. ಆದ್ರ ಈ ಸಲಾ ನಮ್ಮ ಹೊಲ, ಮನೀಗೆ ನದಿ ನೀರ್ ಬಂದೈತಿ. ಎಲ್ಲಾ ಕೊಚ್ಚಕೊಂಡ ಹೋಗೈತಿ. ಕಷ್ಟಪಟ್ಟು ಬೆಳೆದ ಬೆಳೀ ನೆಲಕ್ಕೆ ಮಲಗ್ಯಾವ. ನಮ್ಮ ಹೊಲದ ಸೀಮೀ ಗುರುತು ಸಿಗದಷ್ಟು ಒಡ್ಡು, ಮಣ್ಣು ಕೊಚ್ಚಕೊಂಡು ಹೋಗೈತಿ. ಏನು ಮಾಡುದೂ ತಿಳಿತೀಲ್ಲ. ಬೆಳೀ ಬೆಳ್ದ ಅನ್ನಾ ಕೊಡುವ ನಾವ ಈಗ, ತುತ್ತು ಅನ್ನಕ್ಕ ಪರಿಹಾರ ಕೇಂದ್ರದೊಳ್ಗ ಪಾಳೀಗಿ ನಿಂತೀವಿ.
• ದ್ಯಾವಪ್ಪ ಪೂಜಾರಿ,
ಮಂಗಳಗುಡ್ಡ ರೈತ.
ತರ್ಕಕ್ಕೂ ಸಿಗ್ತಿಲ್ಲ ಹಾನಿ ಮಾಹಿತಿ
ಮೂರೂ ನದಿಗಳ ಪ್ರವಾಹಕ್ಕೆ ಹಾನಿಯಾದ ಮಾಹಿತಿ ತರ್ಕಕ್ಕೂ ಸಿಗುತ್ತಿಲ್ಲ. ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದ್ದು, ಕೃಷ್ಣೆಯ ಹರಿವು ಇನ್ನೂ ಯಥಾಸ್ಥಿತಿ ಇದೆ. ಭೂಮಿ, ಊರೊಳಗೆ ಹೊಕ್ಕ ನೀರು ಇಳಿದ ಮೇಲೆಯೇ ಹಾನಿಯ ಸರ್ವೇ ಮಾಡಲು ಸಾಧ್ಯ. ಮನೆಗಳು, ರಸ್ತೆ, ಬೆಳೆ ಹಾನಿ ಸಮಗ್ರ ಸಮೀಕ್ಷೆ ನಡೆಸಿ, ಪೂರ್ಣ ಹಾನಿಯ ಚಿತ್ರಣ ಸಿಗಲು ಇನ್ನೂ ಒಂದು ವಾರ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.