BJP ಶಾಸಕ ಸಿದ್ದು ಸವದಿ ವಿರುದ್ದ ಸಿಡಿದೆದ್ದ ಸ್ವಪಕ್ಷೀಯ 7 ಮಂದಿ ಪುರಸಭೆ ಸದಸ್ಯರು
ಕಾಂಗ್ರೆಸ್‌ನೊಂದಿಗೆ ಬುಕ್ ಆಗಿದ್ದಾರೆ ಎಂದು ಆರೋಪ...ಪಕ್ಷದ್ರೋಹವೆಸಗಿದ ಸವದಿ ಅವರನ್ನು ಪಕ್ಷದಿಂದ ಉಚ್ಚಾಟಿಸಿ..
Team Udayavani, Aug 24, 2024, 7:17 PM IST
ಮಹಾಲಿಂಗಪುರ: ಆ.23ರಂದು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇದ್ದರು ಸಹ ಮೂರು ದಿನ ಮೊದಲು ಬೆಂಗಳೂರಿಗೆ ಹೋಗಿ, ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಸಲು ಆಗದಂತೆ ನೋಡಿಕೊಂಡು, ಈಗ ಬಿಜೆಪಿ ಸದಸ್ಯರ ಮೇಲೆ ಪಕ್ಷದ್ರೋಹದ ಆರೋಪ ಮಾಡಿರುವ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕೆಂದು ಪುರಸಭೆಯ 7 ಜನ ಸದಸ್ಯರು ಬಿಜೆಪಿ-ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದರು.
ಶನಿವಾರ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯರು, ಆ.23 ರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅವಧಿ ಮುಂಜಾನೆ 10 ರಿಂದ 11 ಗಂಟೆ ಇತ್ತು. ಶಾಸಕರು ತಾವು ಬೆಂಗಳುರಿನಲ್ಲಿ ಇದ್ದುಕೊಂಡು ಮುಂಜಾನೆ 10ಕ್ಕೆ ಇಬ್ಬರು ಸದಸ್ಯರಿಗೆ ಪೋನ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಹೇಳುತ್ತಾರೆ. ನಿಜವಾಗಿಯೂ ಶಾಸಕರಿಗೆ ಬಿಜೆಪಿ ಪಕ್ಷದ ಹಿತಕಾಯವಂತಿದ್ದರೆ ಬೆಂಗಳೂರಿಗೆ ಹೋಗುವ ಅಗತ್ಯವೇನಿತ್ತು. ಕ್ಷೇತ್ರದಲ್ಲಿಯೇ ಇದ್ದು ಸದಸ್ಯರ ಸಭೆ ಕರೆದು ಪಕ್ಷದಿಂದ ನಾಮಪತ್ರ ಸಲ್ಲಿಸುವ ಕೆಲಸ ಮಾಡಬೇಕಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವವರೊಂದಿಗೆ ಶಾಸಕರೇ ಒಪ್ಪಂದ ಮಾಡಿಕೊಂಡು, ಕ್ಷೇತ್ರದಲ್ಲಿರದೇ ರಾಜಧಾನಿಗೆ ತೆರಳಿ, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಹಕಾರ ನೀಡಿದ್ದಾರೆ ಎಂದು ಶಾಸಕರ ವಿರುಧ್ದ ಆರೋಪಿಸಿದರು.
ಶಾಸಕರ ರಾಜಿನಾಮೆಗೆ ಒತ್ತಾಯ
ಬಿಜೆಪಿ ಸದಸ್ಯರು ಕಾಂಗ್ರೆಸ್‌ನೊಂದಿಗೆ ಬುಕ್ ಆಗಿದ್ದಾರೆ ಎಂದು ಆರೋಪ ಮಾಡಿರುವ ಸವದಿಯವರು ನಮ್ಮ ಆರೋಪವನ್ನು ಸಾಬಿತು ಮಾಡಿದರೆ, ನಾವು ಏಳು ಜನ ಸದಸ್ಯರು ರಾಜಿನಾಮೆ ನೀಡಲು ಸಿದ್ದರಿದ್ದೇವೆ. ಆರೋಪ ಸಾಬಿತು ಮಾಡುವಲ್ಲಿ ವಿಫಲರಾದರೇ ಶಾಸಕ ಸಿದ್ದು ಸವದಿಯವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನಾವು ಆ.23 ಮುಂಜಾನೆ 11ರವರೆಗೆ ಏಳು ಸದಸ್ಯರು ಊರಲ್ಲಿಯೇ ಇದ್ದೇವೆ. ಅವರು ಊರಲ್ಲಿ ಇಲ್ಲ. ಜೊತೆಗೆ ಓರ್ವ ಸದಸ್ಯ ಅವರೊಂದಿಗೆ ಬೆಂಗಳೂರಿನಲ್ಲೇ ಇದ್ದಾರೆ. ಇನ್ನೊರ್ವ ಸದಸ್ಯ ಗೋವಾಗೆ ತೆರಳಿದ್ದಾನೆ. ಈ ಮೂಲಕ ಮೂಲಕ ಕಾಂಗ್ರೆಸ್‌ಗೆ ಅಧಿಕಾರ ಸಿಗಲು ಶಾಸಕರಿಗೆ ಅನುವು ಮಾಡಿಕೊಟ್ಟಿದ್ದಾರೆ. ಸತ್ಯಾಸತ್ಯತೆಯನ್ನು ಪರಿಗಣಿಸದೇ ಶಾಸಕರು ನಮ್ಮ ವಿರುದ್ಧ ಪಕ್ಷ ದ್ರೋಹದ ಆರೋಪ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ. ನಮ್ಮ ರಾಜಿನಾಮೆ ಪತ್ರಗಳು ಸಿದ್ದ ಇವೆ. ಶಾಸಕರು ನಮ್ಮ ಮೇಲಿನ ಆರೋಪ ಸಾಬಿತು ಮಾಡಲಿ, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಶಾಸಕರ ನಡೆಯ ಕುರಿತು ಕಿಡಿಕಾರಿದರು.
ಒಂದೇ ಕುಟುಂಬಕ್ಕೆ ಮಾತ್ರ ಶಾಸಕರು ?
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ, ಶಾಸಕ ಸಿದ್ದು ಸವದಿ ಅವರು ಇಡಿ ತೇರದಾಳ ಮತಕ್ಷೇತ್ರಕ್ಕೆ ಶಾಸಕರೋ? ಅಥವಾ ಒಂದು ಕುಟುಂಬಕ್ಕೆ ಶಾಸಕರೋ ತಿಳಿಯುತ್ತಿಲ್ಲ. ಶಾಸಕರು ಯಾವ ಮನಸ್ಥಿತಿ ಇಟ್ಟುಕೊಂಡು ನಮ್ಮ ಮೇಲೆ ಪಕ್ಷದ್ರೋಹದ ಆರೋಪ ಮಾಡಿದ್ದಾರೆ. ನಾವು ಏಳು ಜನ ಶಾಸಕರಿಗೆ ಏನೇ ಹೇಳಿದರೂ ನಾವು ವಿರೋಧಿಗಳು. ಆ ಒಂದು ಕುಟುಂಬದ ಸದಸ್ಯರು ಹೇಳಿದ ಮಾತುಗಳು ಶಾಸಕರಿಗೆ ವೇದವಾಕ್ಯ. ಆ ಒಂದು ಕುಟುಂಬಕ್ಕಾಗಿಯೇ ಶಾಸಕರು ಬಿಜೆಪಿ ಪಕ್ಷವನ್ನೇ ಬಲಿಕೊಡುತ್ತಿದ್ದಾರೆ. ಅದಕ್ಕೆ 2020ರ ಪುರಸಭೆ ಅಧ್ಯಕ್ಷ ವೇಳೆ ನಡೆದ ಗಲಾಟೆಯಿಂದ ಹಿಡಿದು ಇಲ್ಲಿಯವರೆಗೆ ನಡೆದ ಹಲವಾರು ಘಟನೆಗಳೇ ಸಾಕ್ಷಿಯಾಗಿವೆ. ನಾವು ಪಕ್ಷದ್ರೋಹ ಮಾಡಿಲ್ಲ. ಶಾಸಕರೇ ಕಾಂಗ್ರೆಸ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣ, ಸದಸ್ಯರೊಂದಿಗೆ ಒಂದು ಸಭೆ ಮಾಡದೇ, ಬೆಂಗಳೂರಿಗೆ ಹೋಗಿ ಬಿಜೆಪಿ ಪಕ್ಷದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದಂತೆ ನೋಡಿಕೊಂಡಿದ್ದಾರೆ. ಬಿಜೆಪಿ 10 ಸದಸ್ಯರು, ಶಾಸಕ, ಸಂಸದರ ಮತಗಳು ಸೇರಿ ಬಿಜೆಪಿಗೆ 12 ಮತಗಳಿದ್ದು, ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಪಕ್ಷದ ಕಾರ್ಯಕರ್ತರಿಗೆ ಸಾಕಷ್ಟು ನೋವಾಗಿದೆ. ಇದಕ್ಕೆ ಶಾಸಕ ಸಿದ್ದು ಸವದಿ ಅವರೇ ನಡೆಯೇ ಕಾರಣವಾಗಿದೆ ಎಂದು ಶಾಸಕರ ವಿರುದ್ದ ಹರಿಹಾಯ್ದರು.
ಕರೆ ಸ್ವೀಕರಿಸದ ಶಾಸಕರಿಗೆ ವಾಟ್ಸಾಪ್ ಸಂದೇಶ
ಪುರಸಭೆ ಸದಸ್ಯ ರವಿ ಜವಳಗಿ ಮಾತನಾಡಿ ಆ.23ರ ಮುಂಜಾನೆ 10ಕ್ಕೆ ಶಾಸಕರು ನನಗೆ ಕಾಲ ಮಾಡಿ, ನಾಮಪತ್ರ ಸಲ್ಲಿಸಲು ಹೇಳಿದಾಗ ನಾವು 2ಎ ಮೀಸಲಾತಿಯಲ್ಲಿ ಬರುತ್ತೇವೆ. ಸಾಮಾನ್ಯ ಸ್ಥಾನದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಹೇಳಿರಿ ಎಂದೇ, ಅಷ್ಟಾಗಿಯೂ ನಾನು ಶಾಸಕರು ಬಂದು ಸೂಚಕರಾದರೇ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಮರಳಿ ಶಾಸಕರಿಗೆ ಹಲವು ಬಾರಿ ಕರೆ ಮಾಡಿದರೇ ಶಾಸಕ ಸಿದ್ದು ಸವದಿ ನಮ್ಮ ಕರೆಯನ್ನು ಸ್ವೀಕರಿಸಿಲ್ಲ. ಅದಕ್ಕಾಗಿ ವಾಟ್ಸಾಪ್ ಸಂದೇಶ ಕಳಿಸಿದ್ದೇನೆ. ನಾಮಪತ್ರ ಸಲ್ಲಿಸುವ ವೇಳೆ ಪ್ರಾರಂಭವಾದ ನಂತರ ನನಗೆ ಹೇಳುವ ಶಾಸಕರು ಓರ್ವ ಸದಸ್ಯನೊಂದಿಗೆ ಬೆಂಗಳೂರಿನಲ್ಲಿ ಇದ್ದಾರೆ. ನಿಜವಾಗಿಯೂ ನಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವ ಉದ್ದೇಶವಿದ್ದರೇ ಹಿಂದಿನ ದಿನವೇ ಸದಸ್ಯರ ಸಭೆ ನಡೆಸಿ, ಹೇಳಬೇಕಾಗಿತ್ತು. ಜೊತೆಗೆ ಶಾಸಕರು ಕ್ಷೇತ್ರದಲ್ಲಿಯೇ ಇರಬೇಕಾಗಿತ್ತು. ಇದರಿಂದಾಗಿಯೇ ಯಾರು ಬುಕ್ ಆಗಿದ್ದಾರೆ, ಯಾರು ಇಲ್ಲ ಎಂಬುದು ತಿಳಿಯುತ್ತದೆ ಎಂದರು.
ಶಾಸಕರನ್ನು ಉಚ್ಚಾಟಿಸಲು ಒತ್ತಾಯಿಸಿ ಪತ್ರ
ಸದಸ್ಯ ಬಸವರಾಜ ಚಮಕೇರಿ ಮಾತನಾಡಿ ಆ.23 ರಂದು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇದ್ದರು, ಪಕ್ಷದ ಸಭೆ ನಡೆಸದೇ ನಾಲ್ಕು ದಿನ ಮೊದಲೇ ತಾವು ಬೆಂಗಳೂರಿಗೆ ಹೋಗಿ, ಕಾಂಗ್ರೆಸ್‌ಗೆ ಅಧಿಕಾರ ಸಿಗುವಂತೆ ಅನುಕೂಲ ಮಾಡಿದ್ದಾರೆ. ಈ ಕುರಿತು ನಾವು ಏಳು ಜನ ಸದಸ್ಯರು ಜಿಲ್ಲಾಧ್ಯಕ್ಷ-ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಪಕ್ಷದ್ರೋಹ ಮಾಡಿದ ಶಾಸಕರನ್ನೇ ಬಿಜೆಪಿಯಿಂದ ಉಚ್ಛಾಟಿಸಲು ಆಗ್ರಹಿಸಿ ಪತ್ರ ಬರೆಯುತ್ತೇವೆ. ಶಾಸಕರು ನನಗೆ ಕಾಲ ಮಾಡಿ ಕಾಂಗ್ರೆಸ್‌ನೊಂದಿಗೆ ಬುಕ್ ಆಗಿದ್ದೇವೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನೀವೇ ಬುಕ್ ಆಗಿ ಊರ ಬಿಟ್ಟಿದ್ದೀರಿ ಎಂದು ವಾದಿಸಿದ್ದೇನೆ. ಶಾಸಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ನಮ್ಮ ವಿರುದ್ದ ಮಾಡಿದ ಆರೋಪ ಸಾಬಿತು ಮಾಡಲಿ, ಇಲ್ಲವೇ ಅವರೇ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು.
ಕಿವಿ ಕಚ್ಚುವವರ ಮಾತು ಕೇಳುತ್ತಿರುವ ಶಾಸಕರು
ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ ಶಾಸಕರು ನಾವು ಏಳು ಜನ ಸದಸ್ಯರು ಕಾಂಗ್ರೆಸ್‌ನೊಂದಿಗೆ ಬುಕ್ ಆಗಿದ್ದೇವೆ ಎಂದು ಆರೋಪಿಸಿದ್ದಾರೆ. ನಾವು ಏಳು ಜನರು ಆ.23ರ ಮಧ್ಯಾಹ್ನದವರೆಗೆ ಊರಲ್ಲಿಯೇ ಇದ್ದೇವೆ. ಶಾಸಕರು ಯಾರ ಮಾತು ಕೇಳುತ್ತಾರೋ ಆ ಮೂವರು ಸದಸ್ಯರೇ ಊರಲ್ಲಿ ಇಲ್ಲ ಜೊತೆಗೆ ಸ್ವತ: ಶಾಸಕರು ಊರಲ್ಲಿ ಇಲ್ಲ. ಬುಕ್ ಆದ ಶಾಸಕರು, ಸದಸ್ಯರೇ ಊರು ಬಿಟ್ಟಿದ್ದಾರೆ ಹೊರತು ನಾವಲ್ಲ. ನಮ್ಮ ಮೇಲೆ ಕಾಂಗ್ರೆಸ್‌ನೊಂದಿಗೆ ಬುಕ್ ಆಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಶಾಸಕರು ಆರೋಪವನ್ನು ಸಾಬಿತು ಮಾಡಿದರೇ ನಾವೇಲ್ಲರೂ ರಾಜಿನಾಮೆಗೆ ಸಿದ್ದರಿದ್ದೇವೆ. ಸಾಬಿತಾಗದಿದ್ದರೆ ಶಾಸಕರು ರಾಜಿನಾಮೆ ನೀಡಲು ಸಿದ್ದರಿದ್ದಾರೆಯೇ ? ಎಂದು ಪ್ರಶ್ನಿಸಿದ ಅವರು 2020ರಲ್ಲಿ ಕಾಂಗ್ರೆಸ್‌ನೊಂದಿಗೆ ಹೋದ ಮೂವರು ಬಿಜೆಪಿ ಸದಸ್ಯರ ಮೇಲೆಯೇ ಶಾಸಕರು ಇದುವರೆಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಪಕ್ಷಕ್ಕೆ ಬದ್ದ ಇರುವ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಶಾಸಕರಿಂದ ಪಕ್ಷಕ್ಕೆ ದ್ರೋಹವಾಗಿದೆ ಹೊರತು ನಮ್ಮ ಏಳು ಜನ ಸದಸ್ಯರಿಂದ ಯಾವುದೇ ಲೋಪವಾಗಿಲ್ಲ. ಶಾಸಕರು ಕೇವಲ ಕಿವಿ ಕಚ್ಚುವ ಸದಸ್ಯರು, ಮುಖಂಡರ ಮಾತು ಕೇಳಿ ಮಹಾಲಿಂಗಪುರದಲ್ಲಿ ಬಿಜೆಪಿ ಪಕ್ಷದ ಸ್ಥಿತಿಯು ಇಲ್ಲಿಗೆ ಬಂದಿದೆ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ ಶಾಸಕರ ಚುನಾವಣೆಯ ಸಮಯದಲ್ಲಿ ಬಿಜೆಪಿ ಎಲ್ಲಾ ಸದಸ್ಯರ ಸಹಕಾರ ಬೇಕು. ಆದರೆ ಪುರಸಭೆಯ ಅಧ್ಯಕ್ಷರ-ಉಪಾಧ್ಯಕ್ಷ ಸಮಯದಲ್ಲಿ ಶಾಸಕರಿಂದ ಸದಸ್ಯರಿಗೆ ಯಾವುದೇ ಸಹಕಾರವಿಲ್ಲ. ಪಟ್ಟಣದಲ್ಲಿ ಒಂದೇ ಕುಟುಂಬದ ಸದಸ್ಯರ ಮಾತನ್ನು ಕೇಳಿತ್ತಿರುವ ಕಾರಣ ಬಿಜೆಪಿ ಸದಸ್ಯರು ಮತ್ತು ಶಾಸಕರ ನಡುವಿನ ಕಂದಕ ಹೆಚ್ಚಾಗುತ್ತಿದೆ ಎಂದು ಶಾಸಕರ ನಡೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಮಹಾಲಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಶಿವಾನಂದ ಹುಣಶ್ಯಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.