Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
ಹೇರ್ ಡ್ರೈಯರ್ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು, ಆಸ್ಪತ್ರೆಗೆ ಬಂದು ಮಹಿಳೆಯ ಕಂಡರೂ ಕೃತ್ಯದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ ಭೂಪ
Team Udayavani, Nov 22, 2024, 9:42 PM IST
ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ಬಸವ ನಗರದಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡು, ಮಹಿಳೆಯ ಎರಡೂ ಮುಂಗೈ (ಅಂಗೈ) ತುಂಡಾದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರತಗೇರಿಯ ಒಬ್ಬ ಆರೋಪಿಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ಸಿದ್ದಪ್ಪ (ಸಿದ್ದನಗೌಡ) ಶರಣಗೌಡ ಶೀಲವಂತ (36) ಎಂದು ಗುರುತಿಸಲಾಗಿದೆ. ಮೃತ ಮಾಜಿ ಸೈನಿಕನ ಪತ್ನಿ-ಗಾಯಗೊಂಡ ಬಸವರಾಜೇಶ್ವರಿ ಯರನಾಳ ಅವಳೊಂದಿಗೆ ಸಿದ್ದಪ್ಪ ಅನೈತಿಕ ಸಂಬಂಧ ಹೊಂದಿದ್ದ. ಬಸವರಾಜೇಶ್ವರಿ ಅವರ ಪಕ್ಕದ ಮನೆಯ ಮತ್ತೊಬ್ಬ ಮೃತ ಮಾಜಿ ಸೈನಿಕ ಪತ್ನಿ ಶಶಿಕಲಾ ಹಡಪದ, ಅವರ ಸಂಬಂಧದ ಕುರಿತು ಬುದ್ದಿಮಾತು ಹೇಳಿದ್ದರು. ಅನೈತಿಕ ಸಂಬಂಧ ಬೇಡ ಎಂದು ಬಸವರಾಜೇಶ್ವರಿಗೆ ಹೇಳಿದಾಗ, ಅವಳು, ಸಿದ್ದಪ್ಪನನ್ನು ಮನೆಗೆ ಬರಬೇಡ ಎಂದು ಹೇಳಿದ್ದರು. ಆಗ ಸಿಟ್ಟಾಗಿದ್ದ ಸಿದ್ದಪ್ಪ, ಶಶಿಕಲಾ ಅವರಿಗೆ ಫೋನ್ ಮಾಡಿ, ನಾವು ಮದುವೆಗೂ ಮುಂಚೆಯೇ ಪರಿಚಯ. ಅವರ ಪತಿ ಮರಣ ಹೊಂದಿದ ಬಳಿಕ ಅವರ ಕುಟುಂಬ ನಾನೇ ನೋಡಿಕೊಳ್ಳುತ್ತಿದ್ದೇನೆ. ನಮ್ಮ ಸಂಬಂಧದಲ್ಲಿ ಏಕೆ ಹುಳಿ ಹಿಂಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದ.
ಈ ವಿಷಯ ಬಸವರಾಜೇಶ್ವರಿ ಎದುರು ಹೇಳಿದ್ದು. ಅನೈತಿಕ ಸಂಬಂಧ ಸರಿಯಲ್ಲ. ಸಮಾಜದಲ್ಲಿ ನೋಡಿ ಬದುಕು ಎಂದೆಲ್ಲ ಬುದ್ಧಿ ಹೇಳಿದ್ದಳು. ಇದಾದ ಬಳಿಕ ಕಳೆದ 15 ದಿನಗಳ ಹಿಂದೆ ಮತ್ತೆ ಸಿದ್ದಪ್ಪ, ಬಸವರಾಜೇಶ್ವರಿ ಮನೆಗೆ ಬಂದಿದ್ದ. ಆಗ ಮನೆಯೊಳಗೆ ಬಿಟ್ಟುಕೊಳ್ಳದೇ ಕಳುಹಿಸಿದ್ದಳು. ಇದರಿಂದ ಕುಪಿತಗೊಂಡ, ಶಶಿಕಲಾಳನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂಬ ಸಂಚು ರೂಪಿಸಿದ್ದ.
ಹೇರ್ ಡ್ರೈಯರ್ ಖರೀದಿಸಿ ಡಿಟೋನೇಟರ್ ಇಟ್ಟ ಭೂಪ:
ಬಳಿಕ ತಾನು ಕಳೆದ 16 ವರ್ಷದಿಂದ ಕೆಲಸ ಮಾಡುತ್ತಿದ್ದ ಕುಷ್ಟಗಿ ತಾಲೂಕಿನ ಹಣಮಸಾಗರ ಬಳಿ ಇರುವ ಡಾಲಿನ್ ಇಂಟರ್‌ನ್ಯಾಶನಲ್ ಗ್ರಾನೈಟ್ ಹೋಗಿ ವಿಚಾರ ಮಾಡುತ್ತಿದ್ದ ವೇಳೆ, ಗ್ರಾನೈಟ್ ಕಲ್ಲು ಒಡೆಯಲು ಬಳಸುವ ಡಿಟೋನೇಟರ್ ಬಳಸಿ, ಶಶಿಕಲಾಳ ಕೊಲೆಗೆ ಮುಂದಾಗಿದ್ದು, ಶಶಿಕಲಾ ಹೇರ್ ಡ್ರೈಯರ್ ಬಳಸುತ್ತಿರುವ ವಿಷಯ ಮೊದಲೇ ತಿಳಿದಿದ್ದು, ಕೊನೆಗೆ ಹೇರ್ ಡ್ರೈಯರ್ ಅನ್ನು ಇಳಕಲ್ಲದ ದೇವಗಿರಿಕರ್ ಅಂಗಡಿಯಲ್ಲಿ ಹೇರ್ ಡ್ರೈಯರ್ ಖರೀದಿಸಿ, ಅದರೊಳಗೆ ಡಿಟೋನೇಟರ್ ಇಟ್ಟು, ಬಾಗಲಕೋಟೆಯಿಂದ ಕೋರಿಯರ್ ಮೂಲಕ ಶಶಿಕಲಾ ವಿಳಾಸಕ್ಕೆ ಕಳುಹಿಸಿದ್ದ.
ಕೋರಿಯರ್ ಪಡೆದ ಬಸವರಾಜೇಶ್ವರಿ
ಶಶಿಕಲಾ ಅಂದು ಮನೆಯಲ್ಲಿ ಇರಲಿಲ್ಲ. ಕೋರಿಯರ್‌ನವರು, ಶಶಿಕಲಾಗೆ ಫೋನ್ ಮಾಡಿದಾಗ, ನಾನು ಯಾವುದೇ ಆನ್‌ಲೈನ್ ಪ್ರೊಡಕ್ಟ್ ಬುಕ್ ಮಾಡಿಲ್ಲ ಎಂದು ಹೇಳಿದ್ದರು. ಆದರೂ, ನಿಮ್ಮ ಹೆಸರಿಗೆ ಬಂದಿದೆ ಎಂದು ಕೋರಿಯರ್ ಹುಡುಗ ಹೇಳಿದಾಗ, ಆಯ್ತು ನಾನು ಊರಲ್ಲಿ ಇಲ್ಲ. ಪಕ್ಕದ ಮನೆಯ-ಸ್ನೇಹಿತೆ ಬಸವರಾಜೇಶ್ವರಿ ಮನೆಯಲ್ಲಿ ಕೊಡಲು ತಿಳಿಸಿದ್ದರು. ಅದೇ ರೀತಿ ಕೋರಿಯರ್‌ನವರು, ಪಾರ್ಸೆಲ್ ಕೊಟ್ಟು ಹೋಗಿದ್ದರು. ಆಗ ಬಸವರಾಜೇಶ್ವರಿ ಮತ್ತು ಶಶಿಕಲಾ ಪರಸ್ಪರ ವಿಡಿಯೋ ಕಾಲ್ ಮಾಡಿ, ಪಾರ್ಸೆಲ್ ಓಪನ್ ಮಾಡಿ ತೋರಿಸಿದ್ದರು. ಅದು ಹೇರ್ ಡ್ರೈಯರ್ ಇರುವುದು ಗೊತ್ತಾಗಿತ್ತು. ನಾನು ಊರಿಗೆ ಬಂದ ಬಳಿಕ ಪಡೆಯುವೆ ಎಂದು ಹೇಳಿ ಶಶಿಕಲಾ ಫೋನ್ ಇಟ್ಟಿದ್ದರು.
ಸಂಜೆ ಬಸವರಾಜೇಶ್ವರಿ ಮಕ್ಕಳು ಶಾಲೆಯಿಂದ ಬಂದ ಬಳಿಕ, ಆ ಪಾರ್ಸೆಲ್ ಬಗ್ಗೆ ಕುತೂಹಲದಿಂದ ವಿಚಾರಿಸಿದ್ದರು. ಅದನ್ನು ಓಪನ್ ಮಾಡಿ, ಮಗಳು ಆರಂಭಿಸಲು ಹೊರಟಿದ್ದಳು. ಬೇಡ, ನಾನೇ ಹಚ್ಚಿ ತೋರಿಸುತ್ತೇನೆ ಎಂದು ಬಸವರಾಜೇಶ್ವರಿ ಅದನ್ನು ಸ್ವಿಚ್ ಬೋರ್ಡಗೆ ಹಾಕಿ ಆನ್ ಮಾಡಿದಾಗ, ಸ್ಫೋಟಗೊಂಡಿತ್ತು. ಎರಡೂ ಕೈಗಳ ಅಂಗೈ (ಮುಂಗೈ) ಛಿದ್ರ ಛಿದ್ರಗೊಂಡಿದ್ದವು.
ಆಸ್ಪತ್ರೆಗೂ ಬಂದಿದ್ದ ಆರೋಪಿ :
ಈ ಘಟನೆ ನಡೆದ ಬಳಿಕ, ಆರೋಪಿ ಸಿದ್ದಪ್ಪ ಶೀಲವಂತ, ಬಸವರಾಜೇಶ್ವರಿ ದಾಖಲಾದ ಆಸ್ಪತ್ರೆಗೆ ಬಂದು ಮಾತನಾಡಿಸಿ ಹೋಗಿದ್ದ. ಆಗಲೂ ತಾನು ಮಾಡಿದ ಕೃತ್ಯ ಹೇಳಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಗೆ ತಂಡ ರಚಿಸಿದ್ದರು. ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಹುನಗುಂದ ಡಿವೈಎಸ್ಪಿ ಕುಲಕರ್ಣಿ, ಬಾದಾಮಿ ಮತ್ತು ಹುನಗುಂದ ಸಿಪಿಐ, ಇಳಕಲ್ಲ ಪೊಲೀಸರು, ಮಹಿಳೆಯ ಫೋನ್ ಕರೆ, ಡಿಟಿಡಿಸಿ ಕೋರಿಯರ್ ವಿವರ ಎಲ್ಲವನ್ನು ತಪಾಸಣೆ ಮಾಡಿದಾಗ, ಆರೋಪಿ ಸಿದ್ದಪ್ಪನ ಕೃತ್ಯ ಬಯಲಾಗಿದೆ.
“ಇಳಕಲ್ಲ ಹೇರ್ ಡ್ರೈಯರ್ ಮೆಷಿನ್ ಸ್ಫೋಟ ಘಟನೆಯಲ್ಲಿ ಆರೋಪಿ ಸಿದ್ದಪ್ಪ, ಶಶಿಕಲಾ ಎಂಬುವವರ ಗುರಿಯಾಗಿಸಿದ್ದ. ಆದರೆ, ಬಸವರಾಜೇಶ್ವರಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಆರೋಪಿಯ ಬಂಧಿಸಿದ್ದು, ಈ ಘಟನೆಯಲ್ಲಿ ಡಾಲಿನ್ ಗ್ರಾನೈಟ್ ಕಂಪನಿ, ಡಿಟಿಡಿಸಿ ಕೋರಿಯರ್‌ನವರ ನಿರ್ಲಕ್ಷ್ಯ ಕುರಿತೂ ಪ್ರಕರಣ ದಾಖಲಿಸಲಾಗುತ್ತಿದೆ.” –ಅಮರನಾಥ ರೆಡ್ಡಿ, ಎಸ್ಪಿ, ಬಾಗಲಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.