ಪ್ರವಾಹಕ್ಕೆ ನದಿ ಪಾತ್ರದ ರೈತರು ತತ್ತರ : ಜಿಲ್ಲೆಯಲ್ಲಿ 246 ಕೋಟಿ ಹಾನಿ
Team Udayavani, Aug 20, 2020, 5:01 PM IST
ಬಾಗಲಕೋಟೆ: ಕೋವಿಡ್, ಪ್ರವಾಹದ ಮಧ್ಯೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೆರಡು ದಿನಗಳಿಂದ ಉಂಟಾದ ಪ್ರವಾಹದಿಂದ ನದಿ ಪಾತ್ರದ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆ, ನೀರಿನಲ್ಲಿ ನಿಂತು ಹಾನಿಯಾಗಿದ್ದು, ಜಿಲ್ಲಾಡಳಿತ
ನಡೆಸಿದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಸುಮಾರು 246 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದ್ದು, ಸುಮಾರು 189 ಗ್ರಾಮಗಳ ರೈತರ ಬೆಳೆಗೆ ನೀರು ನುಗ್ಗಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ 34 ಹಳ್ಳಿಗಳು, ಹಾಗೂ ಇತರೆ 189 ಗ್ರಾಮದ ರೈತರು ಬೆಳೆದ ಮೆಕ್ಕೆಜೋಳ, ಕಬ್ಬು, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತಿದ್ದು ರೈತ ಕಂಗಾಲಾಗಿದ್ದಾನೆ.
ಕಳೆದ ವರ್ಷದ ಉಂಟಾದ ಭೀಕರ ಪ್ರವಾಹದಿಂದ ಜಿಲ್ಲೆಯಲ್ಲಿ ಸುಮಾರು 1600 ಕೋಟಿಯಷ್ಟು ಜಿಲ್ಲೆಯಲ್ಲಿ ಹಾನಿಯಾಗಿತ್ತು.
ಕೋವಿಡ್ ನಿಂದ ಕಳೆದ ಮಾರ್ಚ್‌ನಿಂದ ಜಿಲ್ಲೆಯ ಜನರು ಹೈರಾಣಾಗಿದ್ದು, ಇದೀಗ ಮತ್ತೆ ಪ್ರವಾಹ ಉಂಟಾಗಿದೆ. ಹೀಗಾಗಿ ಕೋವಿಡ್ ಸಂಕಷ್ಟ, ಪ್ರವಾಹ ಭೀತಿಯಲ್ಲೇ ಜನರು ಬದುಕುವಂತಾಗಿದೆ.
58 ಕುಟುಂಬಗಳ ಸ್ಥಳಾಂತರ: ಘಟಪ್ರಭಾ ನದಿ ಪ್ರವಾಹದಿಂದ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ 34 ಕುಟುಂಬಗಳ 115 ಜನ, ನಂದಗಾಂವ ಗ್ರಾಮದ 17 ಕುಟುಂಬಗಳ 45 ಜನ ಹಾಗೂ ಮುಧೋಳ ನಗರದ 7 ಕುಟುಂಬಗಳ
42 ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಕಾಳಜಿ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಉಳಿದ ಯಾವುದೇ ಕಡೆ ಕುಟುಂಬಗಳ ಸ್ಥಳಾಂತರಿಸುವ ಅನಿವಾರ್ಯತೆ
ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.