Bagalkote ಔದ್ಯೋಗಿಕ ಪ್ರಗತಿಗಿದೆ ಅವಕಾಶ
Team Udayavani, Nov 2, 2023, 11:00 AM IST
ಕನ್ನಡದ ಹೆಮ್ಮೆಯ ಬಾದಾಮಿ ಚಾಲುಕ್ಯರು ಆಳಿದ ಬಾಗಲಕೋಟೆ 1997 ರಲ್ಲಿ ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಉದಯವಾಯಿತು. ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳು, ಕೃಷಿ, ವ್ಯಾಪಾರ ಹಾಗೂ ಉದ್ಯಮದ ಅವಕಾಶಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಬಾಗಲಕೋಟೆ ಜಿಲ್ಲೆ, ಔದ್ಯೋಗಿಕವಾಗಿ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಅಗ್ರ 10 ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆಯು ಸರಾಸರಿ 5,920 ಕೋಟಿ ವಾರ್ಷಿಕ ವಹಿವಾಟು ಹೊಂದಿದ್ದು, ರಾಜ್ಯದ ಜಿ.ಡಿ.ಪಿ. ಯಲ್ಲಿ ಶೇ.1.9 ರಷ್ಟು ಪಾಲನ್ನು ಹೊಂದಿದೆ.
ಕೈಗಾರಿಕೆಗೆ ವಿಶೇಷ ವಲಯ: ಸಕ್ಕರೆ, ಸಿಮೆಂಟ್, ಆಹಾರ ಉತ್ಪಾದನೆ, ಗಣಿಗಾರಿಕೆ, ಜವಳಿ ಸೇರಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ 7,743 ಕ್ಕೂ ಅಧಿಕ ಎಂ.ಎಸ್.ಎಂ.ಇ.ಗಳು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿವೆ. ಬಾಗಲಕೋಟೆ, ನವನಗರ, ಜಮಖಂಡಿ, ಮುಧೋಳ, ಹುನಗುಂದ ಬನಹಟ್ಟಿ ಸೇರಿ 6 ಕಡೆ ಕೈಗಾರಿಕಾ ವಲಯಗಳು ಹಾಗೂ ನವನಗರದಲ್ಲಿ ಗ್ರೀನ್ ಫುಡ್ ಟೆಕ್ ಪಾರ್ಕ್ ಹಾಗೂ ಅಗ್ರೋಟೆಕ್ ಪಾರ್ಕ್ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿಯಲ್ಲಿ ವಿಶೇಷ ಕೈಗಾರಿಕಾ ಪ್ರದೇಶಗಳನ್ನು ಸರ್ಕಾರ ಗುರುತಿಸಿದೆ. ಅಲ್ಲದೇ ಇಳಕಲ್‌ನಲ್ಲಿ ಟೆಕ್ಸ್‌ಟೈಲ್ ಹ್ಯಾಂಡ್‌ಲೂಮ್ ಮತ್ತು ಪವರ್‌ಲೂಮ್ ಕ್ಲಸ್ಟರ್ ಹಾಗೂ ಗ್ರಾನೈಟ್ ಇಂಡಸ್ಟ್ರೀ ಕ್ಲಸ್ಟರ್‌ನ್ನು ಸರ್ಕಾರ ಸ್ಥಾಪಿಸಿದ್ದು ಇವೆಲ್ಲವುಗಳ ಪ್ರಯೋಜನ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಈಗಾಗಲೇ ಭೂಮಿ ಕಳೆದುಕೊಂಡವರಿಗೆ ಹಾಗೂ ಯುಕೆಪಿ ಹಂತ-3ರಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ಪರ್ಯಾಯ ನೀರಾವರಿ ಭೂಮಿ, ಉದ್ಯೋಗ ಅವಕಾಶಗಳು ಮತ್ತು ಸುಸ್ಥಿರವಾದ ಬದುಕನ್ನು ಕಟ್ಟಿಕೊಡುವ ಮಹತ್ತರ ಜವಾಬ್ದಾರಿ ಇದೆ. ಬಾದಾಮಿ, ಹುನಗುಂದ ತಾಲೂಕಿನಲ್ಲಿ ಅತಿಹೆಚ್ಚು ಒಣಬೇಸಾಯ ಭೂಮಿ ಇರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೃಷಿಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇದೆ. ಆದ್ದರಿಂದ ಕೃಷಿ ಆಧಾರಿತ ಉದ್ಯಮದ ಬಲವರ್ಧನೆ ಜಿಲ್ಲೆಗಿದೆ. ಇವೆಲ್ಲವನ್ನು ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಔದ್ಯೋಗಿಕ ಅವಕಾಶಗಳನ್ನು ವೃದ್ಧಿಸುವತ್ತ ಕಾರ್ಯೋನ್ಮುಖರಾಗುವುದು ಅವಶ್ಯ.
ಕೋಟೆ ನಾಡಿನಲ್ಲಿ ಸಕ್ಕರೆ ಕ್ರಾಂತಿ: ಕಬ್ಬು ಜಿಲ್ಲೆಯ ಪ್ರಮುಖ ಬೆಳೆ. 12 ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ರೈತರಿಗೆ ನಿಶ್ಚಿತ ಮಾರುಕಟ್ಟೆ ಲಭಿಸುವುದರೊಂದಿಗೆ ಸಕ್ಕರೆ ಉದ್ಯಮ ಜಿಲ್ಲೆಯಲ್ಲಿ ಅತಿಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ನಿರಾಣಿ ಉದ್ಯಮ ಸಮೂಹ ದೇಶದಲ್ಲಿಯೇ ಅತಿದೊಡ್ಡ ಇಥೆನಾಲ್ ಉತ್ಪಾದನೆ, 3ನೇ ಅತಿದೊಡ್ಡ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದ ಸಮೂಹವಾಗಿದ್ದು, ನಿರಾಣಿ ಸಮೂಹದ 5 ಕಾರ್ಖಾನೆಗಳು ಜಿಲ್ಲೆಯಲ್ಲಿವೆ.
ಸಕ್ಕರೆಯೊಡನೆ ಸಾಕಷ್ಟು ಸಹ ಉತ್ಪನ್ನಗಳನ್ನು ಉತ್ಪಾದಿಸಲು ಅವಕಾಶಗಳಿದ್ದು, ಕಾರ್ಖಾನೆಗಳು ಇಥೆನಾಲ್, ಸಹವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಕೇಂದ್ರ ಸರ್ಕಾರ ಇಥೆನಾಲ್ ನೀತಿ ರೂಪಿಸಿರುವುದರಿಂದ ಭವಿಷ್ಯದ ದೃಷ್ಟಿಯಲ್ಲಿ ಹಸಿರು ಇಂಧನ ನೀತಿಗೆ ಪ್ರೋತ್ಸಾಹ ಇರುವುದರಿಂದ ಇಥೆನಾಲ್ ಉದ್ಯಮಕ್ಕೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ.
ಅದರೊಡನೆ ಸಕ್ಕರೆ ಕಾರ್ಖಾನೆ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಸಿಓಟು, ಜೈವಿಕ ಅನಿಲ, ಗೊಬ್ಬರ ಸೇರಿದಂತೆ 25 ಕ್ಕೂ ಅಧಿಕ ಸಹ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಸಕ್ಕರೆ ಕಾರ್ಖಾನೆಗಳು ಇರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಬೇಕಾಗುವ ಬಿಡಿ ಭಾಗಗಳ ತಯಾರಿಕೆ, ಮಾರಾಟ ಹಾಗೂ ನಿರ್ವಹಣಾ ಘಟಕಗಳನ್ನು ತೆರೆಯಲು ಇಲ್ಲಿ ಅವಕಾಶಗಳಿವೆ. ಎಂ.ಎಸ್.ಎಂ.ಇ. ಅಡಿಯಲ್ಲಿ ಕಿರು ಉದ್ಯಮ ಸ್ಥಾಪಿಸಲು ಉತ್ತೇಜನ ಇರುವುದರಿಂದ ರೈತರ ಮಕ್ಕಳು ಈ ಅವಕಾಶ ಬಳಸಿಕೊಂಡು ಸ್ವಂತ ಉದ್ಯಮ ಪ್ರಾರಂಭಿಸಲು ಮುಂದಾಗಬೇಕಿದೆ.
ಕೃಷಿ ಲಾಭದಾಯಕ ವೃತ್ತಿಯಾಗಲಿ : ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನಿಶ್ಚಿತ ಮಾರುಕಟ್ಟೆ ದೊರಕಿದೆ. ಹಣ್ಣು, ತರಕಾರಿ, ಆಹಾರ ಧಾನ್ಯಗಳನ್ನು ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಕಲಾದಗಿ ಭಾಗದಲ್ಲಿ ಬೆಳೆಯುವ ಹಣ್ಣುಗಳಿಗೆ ರಾಜ್ಯವ್ಯಾಪಿ ಬೇಡಿಕೆ ಇದೆ. ಹೈನುಗಾರಿಕೆಯಲ್ಲೂ ಜಿಲ್ಲೆ ಮುಂದಿದೆ. ನಮ್ಮ ರೈತರು ಬೆಳೆದ ಉತ್ಪನ್ನಗಳಿಗೆ ರೈತರೇ ಸ್ಟೋರೇಜ್, ಪ್ರೊಸೆಸಿಂಗ್, ಬ್ಯಾಗಿಂಗ್, ಮಾಡಲು ಸಿದ್ಧವಾಗಬೇಕು. ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ ಆಹಾರ ತಯಾರಿಕೆ ಕೈಗಾರಿಕೆ ಮಂತ್ರಾಲಯವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಪಾರ್ಮಲೈಜೇಶನ್ ಆಫ್ ಮೈಕ್ರೋ ಫುಡ್ ಪ್ರೊಸೆಸ್ಸಿಂಗ್ ಎಂಟರ್‌ಪೈಸಸ್ ಸ್ಕೀಂ ಲಾಭ ಪಡೆದು ಜ್ಯೂಸ್ ತಯಾರಿಕೆ, ಫ್ಲೋರ್ ಮಿಲ್, ಸ್ಟಾರ್ಚ್ ಹಾಗೂ ತರಕಾರಿ ರಫ್ತು ಉದ್ಯಮಗಳಂತಹ ಸ್ಟಾರ್ಟ್‌ಅಪ್ ಕಂಪನಿಗಳನ್ನು ತೆರೆಯಬಹುದು. ಇಲ್ಲಿಯೇ ತೋಟಗಾರಿಕಾ ವಿಶ್ವವಿದ್ಯಾಲಯ ಇರುವುದರಿಂದ ತಾಂತ್ರಿಕ ಸಹಕಾರವನ್ನು ಸುಲಭವಾಗಿ ಪಡೆಯಬಹುದು.
ಉತ್ತರ ಕರ್ನಾಟಕದ ಕನ್‌ಸ್ಟ್ರಕ್ಷನ್ ಮಟಿರೀಯಲ್ ಹಬ್:
ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶ ಹೇರಳವಾಗಿರುವುದರಿಂದ ಇಲ್ಲಿ ಗಣಿ ಉದ್ಯಮಕ್ಕೂ ಅವಕಾಶವಿದೆ. ಲೈಮ್‌ಸ್ಟೋನ್, ಡೊಲೊಮೈಟ್, ಕ್ವಾಜ್, ಕಬ್ಬಿಣದ ಅದಿರು, ಗ್ರಾನೈಟ್, ಎಕ್ಸ್‌ಪೋರ್ಟ್ ಗ್ರೇಡ್ ಪಿಂಕ್ ಗ್ರಾನೈಟ್, ಆರ್ನಾಮೆಂಟಲ್ ಮತ್ತು ಬಿಲ್ಡಿಂಗ್ ಕಲ್ಲು ಸೇರಿದಂತೆ ಹಲವಾರು ಮಾದರಿಯ ಗಣಿಗಾರಿಕೆಗೆ ಅವಕಾಶವಿದೆ. ಸಿಮೆಂಟ್, ಗ್ರಾನೈಟ್, ಕಲ್ಲು, ಮರಳು ಗಣಿಗಾರಿಕೆ ಉದ್ಯಮ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ತೆರೆದುಕೊಡುವುದಲ್ಲದೇ ಸರ್ಕಾರದ ರಾಜಸ್ವ ವೃದ್ಧಿಗೂ ಸಹಕಾರಿಯಾಗುತ್ತದೆ. ಇದರಿಂದ ಉತ್ತರ ಕರ್ನಾಟಕದಲ್ಲಿಯೇ ಅತಿದೊಡ್ಡ “ಕನಸ್ಟ್ರಕ್ಷನ್ ಮಟಿರಿಯಲ್ ಹಬ್’ ಆಗಿ ಬಾಗಲಕೋಟೆ ಜಿಲ್ಲೆಯನ್ನು ನಿರ್ಮಿಸಬಹುದು.
ಜವಳಿ ಉದ್ಯಮಕ್ಕೆ ತೆರೆದ ಬಾಗಿಲು: ಜಿಲ್ಲೆಯ ರಬಕವಿ, ಬನಹಟ್ಟಿ, ಇಳಕಲ್, ಹುನಗುಂದ ಭಾಗಗಳಲ್ಲಿ ನೇಕಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳ ಮೂಲಕ ತಮ್ಮ ಉದ್ಯೋಗ ನಡೆಸುತ್ತಿದ್ದಾರೆ. ಕೈಗಾರಿಕಾ ವಿಭಾಗದಲ್ಲಿಯೇ ಜವಳಿ ಎವರ್ ಗ್ರೀನ್ ವಿಭಾಗ. ಈ ಉದ್ಯಮವನ್ನು ಜಿಲ್ಲೆಯಲ್ಲಿ ಬೆಳೆಸಲು ದೊಡ್ಡ ಅವಕಾಶಗಳಿವೆ. ಇಳಕಲ್ ಹಾಗೂ ಬನಹಟ್ಟಿ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದೆ. ಈ ಉದ್ಯಮಕ್ಕೆ ಮತ್ತಷ್ಟು ಹೊಸತನ ತಂದುಕೊಟ್ಟರೆ ಜವಳಿ ಉದ್ಯಮ ಜಿಲ್ಲೆಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತದೆ. ಜವಳಿ ಕೌಶಲ್ಯ ಹೊಂದಿದ ಅತಿಹೆಚ್ಚು ಜನ ಈ ಭಾಗದಲ್ಲಿ ಸಿಗುವುದರಿಂದ ದೊಡ್ಡ ಪ್ರಮಾಣದ ಗಾರ್ಮೆಂಟ್‌ಗಳನ್ನು ತೆರೆದರೆ ಮಹಿಳೆಯರಿಗೆ ಅತಿಹೆಚ್ಚಿನ ಪ್ರಮಾಣದ ಉದ್ಯೋಗಗಳನ್ನು ನೀಡಬಹುದು.
ಪ್ರವಾಸೋದ್ಯಮದಿಂದಲೂ ಆದಾಯ ವೃದ್ಧಿ : ಪ್ರವಾಸೋದ್ಯಮವನ್ನು ಉದ್ಯಮವಾಗಿ ಪರಿವರ್ತಿಸಿಕೊಳ್ಳುವುದನ್ನು ನಾವು ಕೇರಳ ಹಾಗೂ ದಕ್ಷಿಣ ಕರ್ನಾಟಕದವರಿಂದ ಕಲಿಯಬೇಕಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಅತಿಹೆಚ್ಚು ಪ್ರವಾಸಿ ತಾಣಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದ ಸ್ಥಳಗಳು ಈ ಜಿಲ್ಲೆಯಲ್ಲಿವೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ ಶಕ್ತಿಪೀಠ, ಮಹಾಕೂಟ, ಕೂಡಲ ಸಂಗಮ, ಚಿಕ್ಕ ಸಂಗಮ ಪಕ್ಷಿಧಾಮ, ಯಡಹಳ್ಳಿ ಜಿಂಕೆ ವನ್ಯಧಾಮ ಈ ಎಲ್ಲ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದರೆ ಪ್ರವಾಸೋದ್ಯಮ ಬೆಳವಣಿಗೆಯಾಗಿ ಸ್ಥಳೀಯ ವ್ಯಾಪಾರ, ಹೋಟೆಲ್ ಉದ್ಯಮ ವಿಕಾಸಕ್ಕೆ ಸಹಕಾರಿಯಾಗುತ್ತದೆ.
ಕೊಲ್ಹಾಪೂರ-ಸಾಂಗ್ಲಿ ಜಿಲ್ಲೆ ಮಾದರಿ: ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ನೀಡಿ, ಕೈಗಾರಿಕೆಗಳನ್ನು ಕಟ್ಟಿ, ರೈತರ ಉತ್ಪನ್ನಗಳಿಗೆ ನಿಶ್ಚಿತ ಮಾರುಕಟ್ಟೆ ಸೌಲಭ್ಯ ನೀಡುವ ಮೂಲಕ ಸಾಂಗ್ಲಿ-ಮೀರಜ್ ಸರ್ವತೋಮುಖ ಅಭಿವೃದ್ಧಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಹೊಸ ಭಾಷ್ಯ ಬರೆದರು. ದತ್ತಾಜಿರಾವ್ ಕದಮ್ ಹಾಗೂ ಕಲ್ಲಪ್ಪಣ್ಣ ಅವಡೆ ಕಟ್ಟಿದ ಜವಳಿ ಸಾಮ್ರಾಜ್ಯ ಇಚಲಕರಂಜಿಯನ್ನು ಮಹಾರಾಷ್ಟ್ರದ ಮ್ಯಾಂಚೆಸ್ಟರ್‌ನ್ನಾಗಿಸಿತು. ಪತಂಗರಾವ್ ಕದಮ್ ಕಟ್ಟಿದ ಭಾರತಿ ವಿದ್ಯಾಪೀಠ ಇಂದು ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿದೆ. ಸಾಂಗ್ಲಿ, ಮಿರಜ್, ಕೊಲ್ಹಾಪೂರ ಎಲ್ಲ ಕಡೆ ಶಾಲಾ-ಕಾಲೇಜು ತೆರೆದು ಶಿಕ್ಷಣ ಕ್ರಾಂತಿಗೆ ಕಾರಣವಾಗಿದೆ. ಶಿಕ್ಷಣ ಒಂದು ಸಮಾಜವನ್ನು ಸುಸಂಸ್ಕೃತವಾಗಿಸುವ ಜೊತೆಗೆ ಜೀವನಸ್ತರ ಅಭಿವೃದ್ಧಿಗೆ ಊರುಗೋಲಾಗುತ್ತದೆ. ಕೊಲ್ಹಾಪೂರದಲ್ಲಿ ಶಾಹು ಮಹಾರಾಜರಿಂದ ಪ್ರಾರಂಭವಾದ ಉದ್ಯಮ ಕ್ರಾಂತಿ ಕೊಲ್ಹಾಪೂರ ನಗರವನ್ನು ಇಂಜಿನಿಯರಿಂಗ್ ಇಂಡಸ್ಟ್ರೀ ವಿಭಾಗದಲ್ಲಿ ದೇಶದಲ್ಲಿಯೇ ಅಗ್ರಗಣ್ಯ ಎನಿಸಿಕೊಳ್ಳುತ್ತಿದೆ. ಮಶಿನರಿ ಬಿಡಿ ಭಾಗಗಳ ತಯಾರಿಕೆ ಕಾರ್ಖಾನೆಗಳು ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿವೆ. 70 ವರ್ಷಗಳ ಹಿಂದೆ ನಡೆದ ಈ ಬೆಳವಣಿಗೆಗಳು ಇಂದಿನ ಕೊಲ್ಹಾಪೂರ-ಸಾಂಗ್ಲಿ ಜಿಲ್ಲೆಗಳ ಸಮೃದ್ಧಿಗೆ ಕಾರಣವಾಗಿವೆ. ಮುರುಗೇಶ ನಿರಾಣಿಯವರು, ನಿರಾಣಿ ಉದ್ಯಮ ಸಮೂಹ ಕಟ್ಟಿ ಸಕ್ಕರೆ, ಇಥೆನಾಲ್, ಸಿಮೆಂಟ್, ಬ್ಯಾಂಕಿಂಗ್, ಶಿಕ್ಷಣ ರಂಗಗಳಲ್ಲಿ ತೊಡಗಿಕೊಂಡು 75 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ್ದಾರೆ. ಕಳೆದ 25 ವರ್ಷಗಳ ಅವಧಿಯಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ನೀರಾವರಿ, ಕೈಗಾರಿಕೆ, ಶಿಕ್ಷಣ ಅಭಿವೃದ್ಧಿಗೆ ಮುರುಗೇಶ ನಿರಾಣಿ, ವೀರಣ್ಣ ಚರಂತಿಮಠ, ಎಂ.ಬಿ. ಪಾಟೀಲರ ಕೊಡುಗೆ ಅಪಾರವಾಗಿದೆ. ಎಲ್ಲರೂ ದೂರದೃಷ್ಟಿಯ ಯೋಜನೆಗಳೊಂದಿಗೆ ಕಾರ್ಯೋನ್ಮುಖರಾದರೆ ಮುಂದಿನ 20-25 ವರ್ಷಗಳಲ್ಲಿ ಕೊಲ್ಹಾಪೂರ-ಸಾಂಗ್ಲಿ ಜಿಲ್ಲೆಗಳಂತೆ ಬಾಗಲಕೋಟೆ ಜಿಲ್ಲೆಯೂ ಔದ್ಯೋಗಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಇನ್ನಷ್ಟು ಸಮೃದ್ಧವಾಗುವುದರಲ್ಲಿ ಸಂಶಯವಿಲ್ಲ.
ಅವಕಾಶಗಳ ಸದ್ಭಳಕೆಗೆ ಮುಂದಾಗೋಣ: ಸಾಂಗ್ಲಿ-ಮಿರಜ್, ಇಚಲಕರಂಜಿ, ಕೊಲ್ಹಾಪೂರ ಮಾದರಿಯಲ್ಲಿಯೇ ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ನಗರಗಳಲ್ಲಿ ಕೈಗಾರಿಕೊದ್ಯಮ, ಜವಳಿ ಹಾಗೂ ವ್ಯಾಪಾರ ವಹಿವಾಟು ವೃದ್ಧಿಸಲು ಅವಕಾಶಗಳಿವೆ. ಹೊಸ ರಾಷ್ಟ್ರೀಯ ಹೆದ್ದಾರಿ, ಕುಡಚಿ-ಬಾಗಲಕೋಟೆ ರೈಲು ಮಾರ್ಗ ಯೋಜನೆಗಳು ಜಿಲ್ಲೆಯ ಔದ್ಯೋಗಿಕ ಅಭಿವೃದ್ಧಿಗೆ ಸಾಥ್ ನೀಡಬಹುದು. ಜಿಲ್ಲೆಯಲ್ಲಿ ಪ್ರದೇಶವಾರು ಸಂಪನ್ಮೂಲಗಳನ್ನು ಗುರುತಿಸಿ, ಆದ್ಯತಾ ವಲಯ ಸ್ಥಾಪಿಸಬೇಕು. ಹೊಸ ಉದ್ಯಮ ಪ್ರಾರಂಭಿಸುವವರಿಗೆ ಉತ್ತೇಜನ ನೀಡಬೇಕು. ಅಗ್ರಿಕಲ್ಚರ್ ಇನಾಸ್ಟ್ರಕ್ಚರ್, ಅಗ್ರಿ ಲಾಜೆಸ್ಟಿಕ್ ಹಬ್, ಹೊಸ ನೀರಾವರಿ ಯೋಜನೆಗಳು ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಡುತ್ತವೆ. ಕೃಷಿ, ಗಣಿ, ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ ಎಲ್ಲ ವಿಭಾಗಗಳಲ್ಲಿಯೂ ಬಾಗಲಕೋಟೆಯನ್ನು ಸದೃಢಗೊಳಿಸಲು ಸಾಕಷ್ಟು ಅವಕಾಶಗಳಿವೆ. ಅತ್ಯುತ್ತಮ ಮಾನವ ಸಂಪನ್ಮೂಲ ಜಿಲ್ಲೆಯಲ್ಲಿದೆ. ನಮ್ಮ ಜಿಲ್ಲೆಯ ಯುವ ಪ್ರತಿಭೆಗಳು, ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಎಲ್ಲವುಗಳನ್ನು ಸದ್ಬಳಕೆ ಮಾಡಿಕೊಂಡು ರಾಜಕಾರಣಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ತಂತ್ರಜ್ಞರು, ಪತ್ರಕರ್ತರು ಜಿಲ್ಲೆಯ ಬೆಳವಣಿಗೆಗೆ ಇರುವ ಅವಕಾಶಗಳನ್ನು ಸಮಗ್ರವಾಗಿ ಅಭ್ಯಸಿಸಿ, ಏಕಭಾವದಿಂದ ಜಿಲ್ಲೆಯ ಅಭಿವೃದ್ದಿಗೆ ಪಣ ತೊಟ್ಟರೆ, ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲಿಯೇ ಬಾಗಲಕೋಟೆಯನ್ನು ಮಾದರಿ ಜಿಲ್ಲೆಯನ್ನಾಗಿಸಬಹುದು.
ತ್ರಿವಿಕ್ರಮನಂತೆ ಬೆಳೆದ ಸಕ್ಕರೆ ಉದ್ಯಮ
ರೈತರ ಪಾಲಿನ ಅಕ್ಷಯಪಾತ್ರೆ
1997-98 ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಮೀರವಾಡಿ ಮತ್ತು ನಂದಿ ಸಹಕಾರಿ ಕಾರ್ಖಾನೆ ಸೇರಿ ಕೇವಲ 2 ಸಕ್ಕರೆ ಕಾರ್ಖಾನೆಗಳಿದ್ದವು. ಪ್ರತಿನಿತ್ಯ 2 ಕಾರ್ಖಾನೆಗಳು ಸೇರಿ 6 ಸಾವಿರ ಟನ್ ಕಬ್ಬು ನುರಿಸುವ ಮೂಲಕ ವಾರ್ಷಿಕ 11-12 ಲಕ್ಷ ಟನ್ ಕಬ್ಬು ನುರಿಸುತ್ತಿದ್ದವು. ಮುರುಗೇಶ ನಿರಾಣಿಯವರು ಮಿನಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದು ಹಲವರಿಗೆ ಮಾದರಿಯಾಯಿತು.
ಕಳೆದ 25 ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸುವಂತಹ ಸಕ್ಕರೆ ಕ್ರಾಂತಿಯ ಪರಿಣಾಮ ಕೇವಲ ನಮ್ಮ ಜಿಲ್ಲೆಯಲ್ಲಿ ಮಾತ್ರ 12 ಕಾರ್ಖಾನೆಗಳು ಹುಟ್ಟಿಕೊಂಡವು. ಆ ಮೂಲಕ ಇಂದು ಜಿಲ್ಲೆಯಲ್ಲಿ ಪ್ರತಿದಿನ 1.4 ಲಕ್ಷ ಟನ್ ಕಬ್ಬು ನುರಿಸುವ ಸಾಮರ್ಥಯ ಬಂದಿದೆ. ಕಳೆದ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.6 ಕೋಟಿ ಟನ್ ಕಬ್ಬು ನುರಿಸಿದ್ದು, ವಿಜಯಪುರ ಜಿಲ್ಲೆ 70 ಲಕ್ಷ ಟನ್ ಸೇರಿದರೆ 2.30 ಕೋಟಿ ಟನ್ ಕಬ್ಬು ನುರಿಸಲಾಗಿದೆ. ವಿಜಯಪುರ-ಬಾಗಲಕೋಟೆ ಜಿಲ್ಲೆ ಸೇರಿ ಕಳೆದ 25 ವರ್ಷಗಳ ಹಿಂದೆ 10 ಲಕ್ಷದಿಂದ ಪ್ರಾರಂಭವಾದ ಸಕ್ಕರೆಯಾನ ಇಂದು 2.30 ಕೋಟಿಗೆ ತಲುಪಿದೆ. ಕಬ್ಬು ನುರಿಸುವ ಸಾಮರ್ಥಯದಲ್ಲಿ ದೇಶದ ಮೊದಲ 3 ಸಕ್ಕರೆ ಕಾರ್ಖಾನೆಗಳು ಮುಧೋಳ ತಾಲೂಕಿನಲ್ಲಿದ್ದರೆ, ಜಮಖಂಡಿ ತಾಲೂಕಿನಲ್ಲಿನ 2 ಕಾರ್ಖಾನೆಗಳು 4,5 ನೇ ಸ್ಥಾನದಲ್ಲಿವೆ. ಹೀಗಾಗಿ ದೇಶದ ಅಗ್ರ 10 ಸ್ಥಾನದಲ್ಲಿನ ಕಾರ್ಖಾನೆಗಳಲ್ಲಿ 5 ಕಾರ್ಖಾನೆಗಳು ನಮ್ಮ ಜಿಲ್ಲೆಯಲ್ಲಿವೆ. ಇಥೆನಾಲ್ ಉತ್ಪಾದನೆಯಲ್ಲಿ ಬಾಗಲಕೋಟೆ ಜಿಲ್ಲೆ ಏಷ್ಯಾದಲ್ಲಿಯೇ ನಂ.1 ಸ್ಥಾನದಲ್ಲಿದೆ.
ಈ ಕ್ರಾಂತಿಯ ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಬಲಿಷ್ಠವಾಗಿದೆ. 25 ವರ್ಷಗಳ ಹಿಂದೆ ಸೊಸೈಟಿ ಸಾಲದ ನವೀಕರಣಕ್ಕೆ ಹೈರಾಣಾಗುತ್ತಿದ್ದ ನಮ್ಮ ಗ್ರಾಮೀಣ ಭಾಗದ ರೈತರು ಇಂದು ಸುಸ್ಥಿರರಾಗಿದ್ದಾರೆ. ಪ್ರತಿ ಹಳ್ಳಿಗಳ ಪಿಕೆಪಿಎಸ್, ಸೌಹಾರ್ದ ಸಹಕಾರಿಗಳಲ್ಲಿ 20-30 ಕೋಟಿ ಹೆಚ್ಚುವರಿ ಠೇವಣಿಗಳಿವೆ. ಒಂದು ಸಕ್ಕರೆ ಉದ್ಯಮ ಜಿಲ್ಲೆಯ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ತಂದಿದೆ.
ಸಕ್ಕರೆಯ ಕ್ರಾಂತಿ-ಜವಳಿ ಉದ್ಯಮಕ್ಕೂ ವಿಸ್ತರಣೆಯಾಗಲಿ: ರೈತ ಮತ್ತು ನೇಕಾರ ಈ ಜಿಲ್ಲೆಯ 2 ಕಣ್ಣುಗಳಿದ್ದಂತೆ. ಈ 25 ವರ್ಷಗಳಲ್ಲಿ ಸಕ್ಕರೆ ಉದ್ಯಮದಲ್ಲಿ ನಡೆದ ಕ್ರಾಂತಿ ಜವಳಿ ಕ್ಷೇತ್ರದಲ್ಲಿ ನಡೆಯಲಿಲ್ಲ. ಪರಿಣಾಮ ಇಳಕಲ್, ಹುನಗುಂದ, ರಬಕವಿ-ಬನಹಟ್ಟಿಯ ಪವರ್‌ಲೂಮ್ ಹಾಗೂ ಕೈಮಗ್ಗಗಳ ನೇಕಾರರ ಬದುಕು ಹಸನಾಗಿಲ್ಲ. ಜವಳಿ ಉದ್ಯಮ ಎವರ್‌ಗ್ರೀನ್ ಉದ್ಯಮ. ಜಿಲ್ಲೆಯಲ್ಲಿ ಜವಳಿಯನ್ನು ಆದ್ಯತೆಯಾಗಿ ಪರಿಗಣಿಸಬೇಕಿದೆ. ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ಗಳು, ಬೃಹತ್ ಗಾತ್ರದ ಗಾರ್ಮೆಂಟ್ ಗಳ ಸ್ಥಾಪನೆಯ ಅನಿವಾರ್ಯತೆ ಮತ್ತು ಅವಶ್ಯಕತೆ ಎರಡೂ ಇದೆ. ಉತ್ಪಾದನೆ, ಪ್ಯಾಕಿಂಗ್, ಮಾರ್ಕೆಟಿಂಗ್ ದೊಡ್ಡ ಆದಾಯ ತಂದುಕೊಡುವ ಜೊತೆಗೆ ಬೃಹತ್ ಗಾತ್ರದ ಉದ್ಯಮಗಳನ್ನು ಸೃಷ್ಟಿಸುತ್ತದೆ.
ಆಟೋಮೊಬೈಲ್ ಮತ್ತು ಖನಿಜ ಉದ್ಯಮಕ್ಕೆ ವಿಫುಲ ಅವಕಾಶ: ಜಿಲ್ಲೆಯಲ್ಲಿ ಡೊಲೋಮೈಟ್, ಲೈಮಸ್ಟೋನ್, ಕ್ವಾಜ್, ಐರನ್ ಓರ್, ಗ್ರಾನೈಟ್ ಸೇರಿ ಹಲವು ಖನಿಜ ನಿಕ್ಷೇಪಗಳ ಅಮೂಲ್ಯ ಸಂಪತ್ತು ಇದೆ. 25 ವರ್ಷಗಳಲ್ಲಿ ಜೆಕೆ ಸಿಮೆಂಟ್ ನಂತಹ ಮೆಗಾ ಪ್ರಾಜೆಕ್ಟ್ ಗಳು ಬಂದಿವೆ. ಬಾಗಲಕೋಟ ತಾಲೂಕಿನಲ್ಲಿ ಸಿಮೆಂಟ್ ಉದ್ಯಮಕ್ಕೆ ಇನ್ನೂ ಹೆಚ್ಚಿನ ಅವಕಾಶಗಳಿವೆ. ಜಿಲ್ಲೆಯಲ್ಲಿ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಮುಗಿಸಿದ ತಾಂತ್ರಿಕ ಶಿಕ್ಷಣ ಪಡೆದ ಕೌಶಲ್ಯಭರಿತ ಯುವ ಪೀಳಿಗೆಯ ದಂಡು ಇದೆ. ಜಿಲ್ಲೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಮನ್ನಣೆ ನೀಡಿದಲ್ಲಿ ಅವರೆಲ್ಲರಿಗೂ ಸ್ಥಳೀಯ ಮಟ್ಟದಲ್ಲಿ ದೊಡ್ಡ ಅವಕಾಶಗಳನ್ನು ರೂಪಿಸಿಕೊಡಬಹುದು. ಕೃಷಿ ಭೂಮಿಯೊಡನೆ ಕೈಗಾರಿಕೆಗೆ ಉಪಯುಕ್ತ ಭೂಮಿಯೂ ಜಿಲ್ಲೆಯಲ್ಲಿದೆ. ಕೃಷ್ಣಾ, ಘಟಪ್ರಭೆ, ಮಲಪ್ರಭಾ ನದಿಗಳು ಆಲಮಟ್ಟಿ ಹಿನ್ನೀರು ಸೇರಿ ಜಿಲ್ಲೆಯಲ್ಲಿ ಹೆರಳವಾದ ಜಲ ಸಂಪತ್ತು ಇದೆ. ಕೈಗಾರಿಕೋದ್ಯಮ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಜೊತೆಗೆ ಹೊಸ ಚಿಕ್ಕ-ಪುಟ್ಟ ಉದ್ಯಮ ಅವಕಾಶ ತೆರೆದುಕೊಟ್ಟು ಜನರ ಜೀವನಮಟ್ಟವನ್ನು ಸುಧಾರಿಸುತ್ತದೆ.
ನೀರಾವರಿ ನಮ್ಮ ಮಂತ್ರವಾಗಬೇಕು: ಆಲಮಟ್ಟಿ ಜಲಾಶಯದಿಂದಾಗಿ ಫಲವತ್ತಾದ ಭೂಮಿ ಕಳೆದುಕೊಂಡಿದ್ದೇವೆ. ಪರ್ಯಾಯವಾಗಿ ಹೊಸ ಭೂಮಿಗೆ ನೀರಾವರಿ ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ಮುರುಗೇಶ ನಿರಾಣಿಯವರು ಕಳೆದ ಬಾರಿ ಸಚಿವರಾಗಿದ್ದಾಗ ಬೀಳಗಿ ಕ್ಷೇತ್ರದಲ್ಲಿ 1.20 ಲಕ್ಷ ಎಕರೆ ಭೂಮಿ ನೀರಾವರಿ ಸಂಕಲ್ಪ ಮಾಡಿ ಹೊಸ ನೀರಾವರಿ ಯೋಜನೆ ಜಾರಿಗೆ ತಂದರು. ಹೆರಕಲ್ ಹಾಗೂ ಕಲಾದಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ನೀರಾವರಿ ಅವಕಾಶಗಳನ್ನು ವೃದ್ಧಿಸಿದರು. ಅದರೊಡನೆ ಹೆರಕಲ್ ಹಾಗೂ ಉಪ ನೀರಾವರಿ ಯೋಜನೆಗಳು, ಕೆರೂರು, ಅನವಾಲ, ಆನದಿನ್ನಿ, ಕಾಡರಕೊಪ್ಪ ಏತ ನೀರಾವರಿ ಯೋಜನೆ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದರು. ಅವೆಲ್ಲವೂ ಅನುಷ್ಠಾನಗೊಂಡರೆ ಬಾದಾಮಿ ತಾಲೂಕಿನಲ್ಲಿ ಜಲಕ್ರಾಂತಿಯಾಗುತ್ತದೆ. ಅದರೊಡನೆ ಸಸಲಾಟ್ಟಿ, ಮರೆಗುದ್ದಿ, ಸಾವಳಗಿ-ತುಂಗಳ, ಹೂನ್ನೂರು, ಕಲಹಳ್ಳಿ, ಮಂಟೂರ, ಹಲಗಲಿ ನೀರಾವರಿ ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆಯಲ್ಲಿ ವಿಫುಲ ಕೃಷಿ ಅವಕಾಶಗಳು ಸೃಷ್ಟಿಯಾಗುತ್ತವೆ. ಮಲಪ್ರಭೆ, ಘಟಪ್ರಭೆಗೆ ಜೀವ ತುಂಬಲು ನಿರಾಣಿ ಫೌಂಡೇಶನ್ ರೂಪಿಸಿದ ಅಮೃತಧಾರೆ ಕಾಳಿ-ಮಲಪ್ರಭಾ-ಘಟಪ್ರಭಾ ನದಿ ಜೋಡಣೆ, ಬಸವಧಾರೆ ಕೃಷ್ಣಾ-ಘಟಪ್ರಭಾ-ಮಲಪ್ರಭಾ ಹಾಗೂ ವಿಜಯಧಾರೆ ಹಿರಣ್ಯಕೇಶಿ ಯೋಜನೆಗಳು ಮತ್ತು ಮಲಪ್ರಭಾ ನದಿಗೆ ಬಾದಾಮಿ ತಾಲೂಕಿನಲ್ಲಿ ರಿವರ್ಸ್ ಲಿಫ್ಟಿಂಗ್ ಯೋಜನೆಗಳು ಜಿಲ್ಲೆಯನ್ನು ವರ್ಷವಿಡೀ ನೀರಾವರಿಯಲ್ಲಿ ಸದೃಢವಾಗಿಸುತ್ತವೆ.
-ಸಂಗಮೇಶ ಆರ್. ನಿರಾಣಿ,
ಕಾರ್ಯನಿರ್ವಾಹಕ ನಿರ್ದೇಶಕರು, ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆಗಳು, ಮುಧೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.