ಬಾಗಲಕೋಟೆ: ಕೃಷ್ಣೆಗೆ ಇಲ್ಲ ಸರ್ಕಾರದ ಬದ್ಧತೆ; ಕೇವಲ 2 ಸಾವಿರ ಎಕರೆ ಸ್ವಾಧೀನ
ಕೇವಲ 2500 ಎಕರೆಯಷ್ಟು ಭೂಮಿ ಮಾತ್ರ ಸ್ವಾಧೀನಪಡಿಸಿಕೊಂಡಿದೆ
Team Udayavani, Jul 19, 2023, 6:46 PM IST
ಬಾಗಲಕೋಟೆ: ಇಡೀ ಏಷ್ಯಾ ಖಂಡದಲ್ಲಿಯೇ ದೊಡ್ಡ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಎರಡು ದಶಕಗಳಿಂದ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಪ್ರಬಲ ಅಸಮಾಧಾನ ಕೇಳಿ ಬರುತ್ತಿದೆ. ಹೌದು, ಕೃಷ್ಣಾ ನದಿಗೆ ಆಲಮಟ್ಟಿ ಬಳಿ ಜಲಾಶಯ ನಿರ್ಮಿಸಿ, ಆ ಮೂಲಕ ಬರಡುಭೂಮಿಗೆ ನೀರಾವರಿ ಒದಗಿಸುವ ಮಹತ್ವದ ಯೋಜನೆಯಿದು.
ಹಲವು ಸರ್ಕಾರಗಳ ನಿರ್ಲಕ್ಷ್ಯ: ಮೊದಲ ಹಂತದಲ್ಲಿ 173 ಟಿಎಂಸಿ ನೀರು ಬಳಸಿಕೊಂಡು, ಉತ್ತರದ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ ಹಾಗೂ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವುದು ಈ ಯೋಜನೆಯ ಗುರಿ. ಅದಕ್ಕಾಗಿಯೇ 1964ರ ಮೇ 22ರಂದು ಅಂದಿನ ಪ್ರಧಾನಿ ಲಾಲ್ ಬಹದ್ದೂರ ಶಾತ್ರಿ ಅವರು, ಆಲಮಟ್ಟಿಯಲ್ಲಿ ಬೃಹತ್ ಜಲಾಶಯ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ್ದರು. ಡ್ಯಾಂ ನಿರ್ಮಾಣ ಕಾರ್ಯ ಮುಗಿದರೂ ನೀರು ನಿಲ್ಲಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
1998-99ರ ಅವಧಿಯಲ್ಲಿ ಕ್ರಮೇಣ ನೀರು ನಿಲ್ಲಿಸಲು ಆರಂಭಿಸಿ, ಎಸ್.ಎಂ. ಕೃಷ್ಣಾ ಸರ್ಕಾರದಲ್ಲಿ ಯುಕೆಪಿ ಆಯುಕ್ತರಾಗಿದ್ದ ಡಾ| ಎಸ್.ಎಂ. ಜಾಮದಾರ ಅವರ ಧೈರ್ಯದ ಕಾರ್ಯದಿಂದ ನೀರು ನಿಲ್ಲಿಸಲು ಆರಂಭಿಸಲಾಯಿತು. ಅಲ್ಲಿಂದ 2004ರವರೆಗೆ
ಬಹುತೇಕ ಪುನರ್‌ವಸತಿ, ಪುನರ್ ನಿರ್ಮಾಣ, ಪರಿಹಾರ ವಿತರಣೆ ಮುಂತಾದ ಕಾರ್ಯಗಳು ವೇಗವಾಗಿ ನಡೆದಿದ್ದವು. ಆದರೆ, 2005-06ರಲ್ಲಿ ಕುಮಾರಸ್ವಾಮಿ ಅವಧಿಯಲ್ಲಿ ಆಲಮಟ್ಟಿ ಜಲಾಶಯವನ್ನು, ಅಂದಿನ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ಕಲಾಂ ಲೋಕಾರ್ಪಣೆಗೊಳಿಸಿದ್ದರು.
ಅಧಿಸೂಚನೆಯೇ ಇಲ್ಲ: ಮೂರು ರಾಜ್ಯಗಳಲ್ಲಿ ವಿಶಾಲವಾಗಿ ಹರಿಯುವ ಕೃಷ್ಣಾ ನದಿ, ದೇಶದ ದೊಡ್ಡ ನದಿಗಳಲ್ಲಿ ಸ್ಥಾನವೂ ಪಡೆದಿದೆ. ಈ ನದಿ ನೀರಿನ ಹಂಚಿಕೆ ವಿಷಯದಲ್ಲಿ ವ್ಯಾಜ್ಯ ಉಂಟಾಗಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ, ನ್ಯಾಯಮೂರ್ತಿ ಆರ್.ಎಸ್. ಬಚಾವತ್ ನೇತೃತ್ವದ ನ್ಯಾಯಾಧೀಕರಣ ಪೀಠ ರಚಿಸಿತ್ತು. ಅದಾದ ಬಳಿಕ ನ್ಯಾಯಮೂರ್ತಿ ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣವೂ ರಚನೆಯಾಗಿತ್ತು. 2ನೇ ನ್ಯಾಯಾಧೀಕರಣ ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ, ತನ್ನ ಅಂತಿಮ ಆದೇಶ ನೀಡಿ, ಈಗ ಬರೋಬ್ಬರಿ 13 ವರ್ಷ ಕಳೆಯುತ್ತಿವೆ. ಈ ನ್ಯಾಯಾಧೀಕರಣದ ನೀರು ಹಂಚಿಕೆಯ ಆದೇಶಕ್ಕೆ ಕೇಂದ್ರ ಸರ್ಕಾರ ಈವರೆಗೂ ಅಧಿಸೂಚನೆ ಹೊರಡಿಸಿಲ್ಲ.
ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ದಿಂದ 524.256 ಮೀಟರ್ ಎತ್ತರಿಸಲು ಅನುಮತಿ ಸಿಕ್ಕಿದೆ. ಅದರಿಂದ ಸಂಗ್ರಹವಾಗುವ ನೀರನ್ನು ಬಳಸಿಕೊಂಡು ನೀರಾವರಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ರಾಜ್ಯಕ್ಕೆ ಎಲ್ಲ ರೀತಿಯ ಹಕ್ಕೂ ನೀಡಲಾಗಿದೆ. ಆದರೆ, ನ್ಯಾಯಾಧೀಕರಣದ ಅಂತಿಮ ತೀರ್ಪು ಪ್ರಶ್ನಿಸಿ, ಆಂದ್ರ, ಮಹಾರಾಷ್ಟ್ರ ಸರ್ಕಾರಗಳು ತಕರಾರು ತಗೆದಿವೆ. ಜತೆಗೆ ಅಲ್ಲಿನ ಸಂಸದರು, ರಾಜ್ಯ ಸರ್ಕಾರಗಳು, ಕೇಂದ್ರದ ಮೇಲೆ ಸಂಘಟಿತ ಒತ್ತಡ ಹಾಕಿ, ಅಧಿಸೂಚನೆ ಹೊರಡಿಸದಂತೆ ಪ್ರಯತ್ನಿಸಿವೆ. ಆದರೆ, ಈ ವಿಷಯದಲ್ಲಿ ರಾಜ್ಯ ಸರ್ಕಾರವಾಗಲೂ, ರಾಜ್ಯದ ಸಂಸದರಾಗಲಿ, ಕೇಂದ್ರದ ಮೇಲೆ ಒತ್ತಡ ತಂದು, ಅಧಿಸೂಚನೆ ಹೊರಡಿಸುವ ಗಂಭೀರ ಪ್ರಯತ್ನ ನಡೆದಿಲ್ಲ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ.
13 ವರ್ಷದಲ್ಲಿ 2543 ಎಕರೆ ಸ್ವಾಧೀನ:
ಆಲಮಟ್ಟಿ ಜಲಾಶವನ್ನು 524.256 ಮೀಟರ್‌ಗೆ ಎತ್ತರಿಸಿದಾಗ 188 ಹಳ್ಳಿಗಳ ಸುಮಾರು 75,573 ಎಕರೆ ಭೂಮಿ ಮುಳುಗಡೆ ಆಗುತ್ತದೆ. ಇದು ಹೊರತುಪಡಿಸಿ, ಕಾಲುವೆ, ಪುನರ್‌ವಸತಿ ಕೇಂದ್ರಗಳ ನಿರ್ಮಾಣ ಸಹಿತ ವಿವಿಧ ಕಾರ್ಯಗಳಿಗೆ ಭೂಮಿಯ ಅಗತ್ಯವಿದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಮತ್ತು ವಿವಿಧ ಕಾರ್ಯಗಳಿಗೆ 1.36 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಆದರೆ, ಕಳೆದ 2014ರ ಹೊಸ ಭೂಸ್ವಾಧೀನ ಕಾಯ್ದೆ ಅನುಷ್ಠಾನಗೊಂಡ ಬಳಿಕ ಈ ವರೆಗೆ ಒಟ್ಟು 2,543 ಎಕರೆ ಭೂಮಿ ಮಾತ್ರ ಸ್ವಾಧೀನ ಮಾಡಿಕೊಳ್ಳಲಾಗಿದೆ. ಬರೋಬ್ಬರಿ 13 ವರ್ಷಗಳಿಂದ 1.36 ಲಕ್ಷ ಎಕರೆ ಅಗತ್ಯ ಭೂಮಿಯಲ್ಲಿ ಕೇವಲ 2500 ಎಕರೆಯಷ್ಟು ಭೂಮಿ ಮಾತ್ರ ಸ್ವಾಧೀನಪಡಿಸಿಕೊಂಡಿದೆ ಎಂದರೆ, ಈ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ಊಹಿಸಲಸಾಧ್ಯ.
ಪೂರ್ಣ ಪ್ರಮಾಣದ ಅಧಿಕಾರಿಗಳೂ ಇಲ್ಲ:
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಪ್ರತ್ಯೇಕ ನೀರಾವರಿ ನಿಗಮವೇ ಸ್ಥಾಪಿಸಿದೆ. ಕೃಷ್ಣಾ ಭಾಗ್ಯ ಜಲ ನಿಗಮ, ಅದರಡಿ ಯುಕೆಪಿ ಆರ್ ಮತ್ತು ಆರ್ ಕಚೇರಿ ಇದೆ. ಇದಕ್ಕಾಗಿ ಐಎಎಸ್, ಕೆಎಎಸ್ ಅಧಿಕಾರಿಗಳ ನೇಮಕ ಮಾಡಬೇಕೆಂಬ ನಿಯಮವೂ ಇದೆ. ಆದರೆ, ಈ ಕಚೇರಿಗಳಿಗೆ ಪೂರ್ಣ ಪ್ರಮಾಣದ ಅಧಿಕಾರಿಗಳನ್ನೇ ನೇಮಕ ಮಾಡಿಲ್ಲ. ಜಾಮದಾರ ಬಳಿಕ, ಇಲ್ಲಿಗೆ ಬಂದ ಪ್ರತಿಯೊಬ್ಬ ಅಧಿಕಾರಿಗಳಿಗೂ ಹೆಚ್ಚುವರಿ ಜವಾಬ್ದಾರಿ ಕೊಡುತ್ತ ಬರಲಾಗಿದೆ. ಹೀಗಾಗಿ ಯುಕೆಪಿಗೆ ಯಾವ ಅಧಿಕಾರಿಗಳು, ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ-ಬದ್ಧತೆಯೇ ತೋರಿಸಿಲ್ಲ ಎಂಬ ಅಸಮಾಧಾನದ ಮಾತು ಕೇಳಿ ಬರುತ್ತಿದೆ.
ಮೊಹ್ಮದ ಮೊಹ್ಸಿನ್ ನೇಮಕ
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕಚೇರಿಯ ಆಯುಕ್ತರನ್ನಾಗಿ 1996ನೇ ಸಾಲಿನ ಹಿರಿಯ ಐಎಎಸ್ ಅಧಿಕಾರಿ ಮೊಹ್ಮದ ಮೊಹ್ಸಿನ್‌ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಹುದ್ದೆಯಲ್ಲಿ ಮತ್ತೂಬ್ಬ ಹಿರಿಯ ಐಎಎಸ್ ಅಧಿಕಾರಿ ಉಜ್ವಲಕುಮಾರ ಘೋಷ್ ಅವರನ್ನು ವರ್ಗ ಮಾಡಿ, ಆ ಹುದ್ದೆಗೆ ಮೊಹ್ಸಿನ್ ಅವರು ನೇಮಕಗೊಂಡಿದ್ದಾರೆ. ಅದಕ್ಕೂ ಮುಂಚೆ ಶಿವಯೋಗಿ ಕಳಸದ ಅವರು ಆಯುಕ್ತರಾಗಿದ್ದರು. ಅವರ ನಿವೃತ್ತಿಯ ಬಳಿಕ ಘೋಷ ಅವರು ನೇಮಕವಾಗಿದ್ದರಾದರೂ ಅವರು ಯುಕೆಪಿಗೆ ಸಂಬಂಧಿಸಿದ ಕಾರ್ಯದಲ್ಲಿ ಕ್ರಿಯಾಶೀಲತೆ ತೋರಿಸಲೇ ಇಲ್ಲ ಎಂಬ ಆರೋಪವಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಹಿಂದಿನ ಸರ್ಕಾರದ ನಿರ್ಲಕ್ಷé ಹಾಗೂ ನಮ್ಮ ಸರ್ಕಾರ ತೋರಬೇಕಾದ ಬದ್ಧತೆ ಕುರಿತು ಸದನದಲ್ಲೇ ಒತ್ತಾಯಿಸಿದ್ದೇನೆ. ಜಲಾಶಯ 524.246 ಮೀಟರ್ ಎತ್ತರಿಸಿದಾಗ, 525 ಮೀಟರ್ ವ್ಯಾಪ್ತಿವರೆಗೂ ಭೂಮಿ ಸ್ವಾಧೀನಪಡಿಸಿಕೊಂಡು ಅದನ್ನು ಮುಳುಗಡೆ ಪ್ರದೇಶವೆಂದು ಘೋಷಿಸಲು ನಿರ್ಧಾರ ಕೈಗೊಂಡಿದೆ. ಆದರೆ, ಇದನ್ನು 522 ಮೀಟರ್ ಮತ್ತು 525 ಮೀಟರ್ ವರೆಗೆ ಎರಡು ಹಂತ ದಲ್ಲಿ ಸ್ವಾಧೀನಕ್ಕೆ ಹಿಂದಿನ ಬಿಜೆಪಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಅತ್ಯಂತ ಅವೈಜ್ಞಾನಿ. ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಒತ್ತಾಯಿಸಿದ್ದೇನೆ.
ಜೆ.ಟಿ. ಪಾಟೀಲ, ಶಾಸಕರು, ಬೀಳಗಿ
ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯ ಸರ್ಕಾರ, ಯುಕೆಪಿಗಾಗಿ ಕೇವಲ 1200 ಕೋಟಿ ಅನುದಾನ ಇಟ್ಟಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಈ ಕುರಿತು ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣದಂತಹ ಹಲವು ಕಾರ್ಯ ಕೈಗೊಳ್ಳಬೇಕಿದೆ. ಚುನಾವಣೆಗೆ ಮುಂಚೆ ಕಾಂಗ್ರೆಸ್‌ನವರು, 2 ಲಕ್ಷ ಕೋಟಿ ನೀರಾವರಿಗೆ ಕೊಡುವುದಾಗಿ ಹೇಳಿದ್ದರು. ಆದರೆ, ಈ ಬಜೆಟ್‌ನಲ್ಲಿ ಕೃಷ್ಣೆಗೆ ಅನ್ಯಾಯ ಮಾಡಲಾಗಿದೆ.
ಪಿ.ಎಚ್. ಪೂಜಾರ, ವಿ.ಪ ಸದಸ್ಯರು
*ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.