Bagalkote: ಒಳಚರಂಡಿ ಬಿಟಿಡಿಎಗೆ; ಹೊರಚರಂಡಿ ನಗರಸಭೆಗೆ
ನವನಗರ ನಿರ್ವಹಣೆಗೇ ನಮ್ಮ ಬಳಿ ಹಣವಿಲ್ಲ
Team Udayavani, Oct 3, 2023, 1:40 PM IST
ಬಾಗಲಕೋಟೆ: ಹೊರ ಚರಂಡಿಗಳ ನಿರ್ವಹಣೆ ನಗರಸಭೆ ವ್ಯಾಪ್ತಿಗೆ. ಒಳಚರಂಡಿ ನಿರ್ಮಾಣ-ನಿರ್ವಹಣೆ ಹೊಣೆ ಬಿಟಿಡಿಎಗೆ. ಇಡೀ ದೇಶದ ಯಾವ ನಗರದಲ್ಲೂ ಇರದ ವ್ಯವಸ್ಥೆ ಬಾಗಲಕೋಟೆಯಲ್ಲಿದೆ ಎಂಬ ಆಕ್ರೋಶ ಜನರಿಂದ ಕೇಳಿ ಬರುತ್ತಿದೆ.
ಹೌದು, ಬಾಗಲಕೋಟೆ ಸಮಸ್ಯೆಯೇ ವಿಚಿತ್ರ. ಇಲ್ಲಿ ಅಧಿಕಾರಿಗಳದ್ದೇ ದರ್ಬಾರ. ಅವರು ಹೇಳಿದ್ದನ್ನೇ ಜನಪ್ರತಿನಿಧಿಗಳೂ ತಲೆ ಅಲ್ಲಾಡಿಸಿ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಸುತ್ತಾರೆ. ಅದಕ್ಕೆ ದಕ್ಷತೆ ಹಾಗೂ ಕಠಿಣ ಜವಾಬ್ದಾರಿ ವಹಿಸುವ ದಿಟ್ಟತನ ಈ ವರೆಗೆ ಯಾರೂ ತಗೆದುಕೊಂಡಿಲ್ಲ. ಸ್ವಯಾಸಕ್ತಿಗೆ ಇಡೀ ವ್ಯವಸ್ಥೆಯನ್ನೇ ಕೆಡಿಸಿಬಿಡಲಾಗಿದೆ ಎಂಬ ಅಸಮಾಧಾನ ಪ್ರಜ್ಞಾವಂತರದ್ದು.
ಏನಿದು ಸಮಸ್ಯೆ?: ನದಿಯೊಂದಕ್ಕೆ ಅಡ್ಡಲಾಗಿ ಡ್ಯಾಂ ನಿರ್ಮಿಸಿದಾಗ, ಬಹುಭಾಗ ಜಿಲ್ಲಾ ಕೇಂದ್ರ ಮುಳುಗಡೆಯಾಗಿದ್ದು ಬಾಗಲಕೋಟೆ. ಇದು ಭಾರತದಲ್ಲೇ 2ನೇ ನಗರ ಎಂಬ ಮಾತೂ ಇದೆ. ಬಾಗಲಕೋಟೆ ನಗರಸಭೆ 35 ವಾರ್ಡ್ ಹೊಂದಿದೆ.
ಅದರಲ್ಲಿ ನವನಗರ ಯೂನಿಟ್-1ರ 9 ವಾರ್ಡ್‌ಗಳು, ವಿದ್ಯಾಗಿರಿಯ 2 ಹಾಗೂ ಹಳೆಯ ಬಾಗಲಕೋಟೆ ವ್ಯಾಪ್ತಿಯ 24 ವಾರ್ಡ್‌ಗಳಿವೆ. ನವನಗರ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿ ಕಡ್ಡಾಯವಾಗಿಲ್ಲ. ಆದರೆ, ಸರ್ಕಾರಿ ದಾಖಲೆ ಅಥವಾ ಇನ್ಯಾವುದೇ ದಾಖಲೆಗೆ ಪ್ರಮಾಣ ಪತ್ರ ಪಡೆಯಬೇಕಾದರೆ ಆಸ್ತಿ ತೆರಿಗೆಯನ್ನು ನಗರಸಭೆಗೆ ಪಾವತಿಸಬೇಕಾಗುತ್ತದೆ.
ವಿಚಿತ್ರವೆಂದರೆ ನವನಗರ ನಿರ್ವಹಣೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗಿದ್ದರೆ, ಹಳೆಯ ಬಾಗಲಕೋಟೆ, ವಿದ್ಯಾಗಿರಿ ಸಹಿತ 26 ವಾರ್ಡಗಳ ನಿರ್ವಹಣೆ ನಗರಸಭೆಗಿದೆ. ಇನ್ನೂ ವಿಚಿತ್ರವೆಂದರೆ, ನಗರಸಭೆ ವ್ಯಾಪ್ತಿಯಲ್ಲೂ ಇರುವ ಎಲ್ಲಾ ವಾರ್ಡಗಳ ಒಳ ಚರಂಡಿ ನಿರ್ವಹಣೆ ಈ ವರೆಗೆ ಬಿಟಿಡಿಎ ಮಾಡುತ್ತ ಬಂದಿದೆ. ಹೊರ ಚರಂಡಿ ಸ್ವತ್ಛತೆ, ಕಸಗೂಡಿಸುವ ಕೆಲಸ ಮಾತ್ರ ನಗರಸಭೆ ಮಾಡುತ್ತಿದೆ.
ನಮಗೆ ಬರಲ್ಲ; ನಗರಸಭೆ ವ್ಯಾಪ್ತಿಯ ಯಾವುದೇ ವಾರ್ಡ್‌ನಲ್ಲಿ ಚರಂಡಿಗಳು ಬ್ಲಾಕ್ ಆದರೆ, ಜನರು ತಕ್ಷಣ ಕರೆ ಮಾಡುವುದು ನಗರಸಭೆಗೆ. ಆದರೆ, ಇಲ್ಲಿನ ಅಧಿಕಾರಿಗಳು, ಇದು ನಮಗೆ ಬರಲ್ಲ. ಬಿಟಿಡಿಎ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ. ಇನ್ನು ಬಿಟಿಡಿಎ ಅಧಿಕಾರಿಗಳಿಗೆ ಕರೆ ಮಾಡಿದರೆ, ನವನಗರ ನಿರ್ವಹಣೆ ಮಾಡಲು ನಮ್ಮ ಬಳಿ ಹಣವಿಲ್ಲ. ಹಳೆಯ ನಗರವನ್ನೂ ನಮಗೇಕೆ ತಂದು ಗಂಟು ಹಾಕ್ತೀರಿ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಬಿಟಿಡಿಎ ಅಧಿಕಾರಿಗಳು ಮಾತ್ರ, ಯಾವುದೇ ಕೋಟಿ ಕೋಟಿ ಮೊತ್ತದ ಕಾಮಗಾರಿ ಇದ್ರೆ ನಮಗೇ ಕೊಡಿ, ಅದು ನಮಗೇ ಬರುತ್ತದೆ ಎಂಬಂತೆ ಕಾಮಗಾರಿ ನಡೆಸಲು ದುಂಬಾಲು ಬೀಳುತ್ತಾರೆ. ಇದರಲ್ಲಿ ಹಲವು ರೀತಿಯ ಹೊಂದಾಣಿಕೆ-ವ್ಯವಹಾರ ಕೂಡ ಇರುತ್ತವೆ. ಆ ಕಾರಣಕ್ಕಾಗಿಯೇ ಬಿಟಿಡಿಎ, ತನ್ನ ವ್ಯಾಪ್ತಿಯಲ್ಲದಿದ್ದರೂ ಹಳೆಯ ನಗರದಲ್ಲಿ ಒಳ ಚರಂಡಿ ಕಾಮಗಾರಿ ಕೈಗೊಂಡಿದೆ. ಹೀಗಾಗಿ ಅದನ್ನು ಬಿಟಿಡಿಎ ನಿರ್ವಹಣೆ ಮಾಡಬೇಕಾಗುತ್ತದೆ.
ಆದರೆ, ಈಗ ಹೇಳುತ್ತಿರುವುದು, ನಾವು ಕಾಮಗಾರಿ ಕೈಗೊಂಡು ನಗರಸಭೆಗೆ ಹಸ್ತಾಂತರಿಸಿದ್ದೇವೆ. ಅವರೇ ನಿರ್ವಹಣೆ ಮಾಡಬೇಕೆಂಬ ಸಬೂಬು ಬಿಟಿಡಿಎ ಅಧಿಕಾರಿಗಳದ್ದು. ಒಟ್ಟಾರೆ, ಇಬ್ಬರ ಮಧ್ಯೆ ಬಾಗಲಕೋಟೆಯ ಜನ ಮಾತ್ರ ಹೈರಾಣ ಆಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ.
ರಸ್ತೆಯ ಮೇಲೆ ಮನುಷ್ಯರ ಮಲ !: ನಗರಸಭೆ ಹಾಗೂ ಬಿಟಿಡಿಎ ಅಧಿಕಾರಿಗಳ ಮಧ್ಯೆ ಸಮನ್ವಯತೆ ಹಾಗೂ ಜನಪರ ಕಾಳಜಿ ಇಲ್ಲದ ಕಾರಣ, ಇಡೀ ನಗರ-ನವನಗರ ಗಬ್ಬೆದ್ದು ನಾರುತ್ತಿದೆ. ಬಿಟಿಡಿಎದಲ್ಲಿ 387 ಕೋಟಿ ಕಾಪ್‌ರ್ಸ್ ಫಂಡ್ ಇದ್ದಾಗ ಸ್ವಚ್ಛತೆಯ ಟೆಂಡರ್ ಪಡೆಯಲು ಹಲವು ಗುತ್ತಿಗೆದಾರರೂ ದುಂಬಾಲು ಬೀಳುತ್ತಿದ್ದರು. ಸ್ವಚ್ಛತೆಯ ಹೆಸರಿನಲ್ಲಿ ಕೋಟಿ ಕೋಟಿ ಬಾಚಿಕೊಂಡವರೂ ಇದ್ದಾರೆ. ಆದರೆ, ಇದೀಗ ಹಿಂದಿನ ಸರ್ಕಾರದ ನಡಾವಳಿಯ ನಿರ್ಧಾರ, ಹೊಸ ಸರ್ಕಾರದ ಮೌನದೊಂದಿಗೆ ಬಿಟಿಡಿಎದಲ್ಲಿದ್ದ 387 ಕೋಟಿ ಕಾರ್ಪಸ್ ಫಂರ್ಡ್, ಕೆಬಿಜೆಎನ್‌ಎಲ್ ಗೆ ಹೋಗಿದೆ. ಆ ಫಂಡ್‌ನ ಬಡ್ಡಿ ಹಣದಲ್ಲಿಯೇ
ಬಿಟಿಡಿಎ ನಿರ್ವಹಣೆ ಆಗುತ್ತಿತ್ತು. ಈಗ ಹಣವಿಲ್ಲ ಎಂಬ ಕಾರಣಕ್ಕೆ ಬಿಟಿಡಿಎ ಸ್ವಚ್ಚತಾಗಾರರು ಹೋರಾಟಕ್ಕಿಳಿದಿದ್ದಾರೆ. ಅದರ ಪರಿಣಾಮ, ಹಳೆಯ ನಗರದ ರಸ್ತೆಗಳಲ್ಲಿ ಮನುಷ್ಯರ ಮಲ ಹರಿದಾಡುವ ಪರಿಸ್ಥಿತಿ ಬಂದಿದೆ.
ಹಳೆಯ ನಗರದಲ್ಲಿ ಒಳ ಚರಂಡಿ ಕಾಮಗಾರಿ ಕೈಗೊಂಡು, ನಗರಸಭೆಗೆ ಹಸ್ತಾಂತರಿಸಿದ್ದೇವೆ. ಒಳ ಚರಂಡಿ ನಿರ್ವಹಣೆ ಅವರೇ ಮಾಡಬೇಕು. ನವನಗರ ನಿರ್ವಹಣೆಗೇ ನಮ್ಮ ಬಳಿ ಹಣವಿಲ್ಲ. ಬಿಟಿಡಿಎ, ನಿರ್ವಹಣೆ ಮಾಡಲು ಇಲ್ಲ, ಕೇವಲ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಜವಾಬ್ದಾರಿ ಹೊತ್ತಿದೆ. 3ನೇ ಯೂನಿಟ್ ಕಾಮಗಾರಿ ಪೂರ್ಣಗೊಂಡರೆ, ಬಿಟಿಡಿಎ ಅಸ್ತಿತ್ವದಲ್ಲೇ ಇರುವುದಿಲ್ಲ. ನವನಗರ ನಿರ್ವಹಣೆಯ ಜತೆಗೆ ಹಳೆಯ ನಗರದ ಒಳ ಚರಂಡಿ ವ್ಯವಸ್ಥೆ ನಿರ್ವಹಣೆ ನಮ್ಮಿಂದ ಕಷ್ಟ.
ಹೆಬ್ಬಳ್ಳಿ, ಕಾರ್ಯಪಾಲಕ ಅಭಿಯಂತರ, ಬಿಟಿಡಿಎ
ಹಳೆಯ ನಗರದಲ್ಲಿ ಒಳ ಚರಂಡಿ ಕಾಮಗಾರಿಯನ್ನು ಬಿಟಿಡಿಎದವರು ಕೈಗೊಂಡಿದ್ದು, ಹಲವು ವರ್ಷಗಳಿಂದ ಅವರೇ
ನಿರ್ವಹಣೆ ಕೂಡ ಮಾಡುತ್ತಾರೆ. ಹೀಗಾಗಿ ನಗರಸಭೆಯಲ್ಲಿ ಒಳ ಚರಂಡಿ ನಿರ್ವಹಣೆಯ ತಂತ್ರಜ್ಞ ಪೌರಕಾರ್ಮಿಕರು, ಅದಕ್ಕೆ ಬೇಕಾದ ಛಡಿಯಂತಹ ಸಾಮಗ್ರಿ ಕೂಡ ಇಲ್ಲ. ಬಿಟಿಡಿಎ, ಒಳ ಚರಂಡಿ ಕಾರ್ಮಿಕರು ಹೋರಾಟ ನಡೆಸುತ್ತಿರುವುದರಿಂದ ನಮ್ಮ ಸಿಬ್ಬಂದಿ ಮೂಲಕವೇ ಬ್ಲಾಕ್ ಆಗಿರುವ ಒಳ ಚರಂಡಿ ಕ್ಲೀನ್ ಮಾಡಲು ಪ್ರಯತ್ನಿಸಿದ್ದೇವೆ. ಸರಿಯಾದ ಸಾಮಗ್ರಿ ಇಲ್ಲದ ಕಾರಣ ಅದು ಸಾಧ್ಯವಾಗಿಲ್ಲ.
ನವೀದ್ ಖಾಜಿ, ಎಂಜಿನಿಯರ್ ನಗರಸಭೆ
*ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.