ಬಿಸಿಎಂ ಹಾಸ್ಟೆಲ್; ಹೊರಗುತ್ತಿಗೆ ಸೇವೆ ಮುಂದುವರಿಸಿ
Team Udayavani, Jun 11, 2019, 1:58 PM IST
ಬಾಗಲಕೋಟೆ: ಬಿಸಿಎಂ ವಸತಿ ನಿಲಯಗಳ ಡಿ ದರ್ಜೆ ಸಿಬ್ಬಂದಿ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಡಿ ಗ್ರುಪ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಅಡುಗೆ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬಿಎಂಸಿ ಹಾಸ್ಟೆಲ್ಗಳ ಅಡುಗೆ ಸಿಬ್ಬಂದಿ, ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ಬಿಸಿಎಂ ಇಲಾಖೆಯಡಿ ನಡೆಯುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಸತಿ ನಿಲಯಗಳಲ್ಲಿ ಸರ್ಕಾರದಿಂದ ಮಂಜೂರಾಗಿ, ಖಾಲಿ ಇರುವ ಅಡುಗೆಯರು, ಅಡುಗೆ ಸಹಾಯಕಿಯರು, ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಸುಮಾರು 3312 ಜನ ಹೊರಗುತ್ತಿಗೆ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಹೊರ ಗುತ್ತಿಗೆ ನೌಕರರೆಲ್ಲರೂ ಬಡಕಾರ್ಮಿಕರಾಗಿದ್ದು, ಅವರ ಸೇವೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಹೊರ ಗುತ್ತಿಗೆ ನೌಕರರ ಸೇವೆಯನ್ನು ಮುಂದುವರೆಸುವುದಾಗಿ ಸ್ವತಃ ಮುಖ್ಯಮಂತ್ರಿಗಳು ಈಚೆಗೆ ನಡೆಸಿದ ಪ್ರತಿಭಟನೆ ವೇಳೆ ಹೇಳಿದ್ದರು. ಸಿಎಂ ಭರವಸೆಗಳ ಬಳಿಕವೂ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಆದ್ದರಿಂದ ಈ ನೌಕರರಿಗೆ ಶಾಶ್ವತ ಪರಿಹಾರದ ಅವಶ್ಯಕತೆ ಇದ್ದು, ಡಿ ದರ್ಜೆ ನೌಕರರನ್ನು ಯಾವುದೇ ಕಾರಣಕ್ಕೂ ಸೇವೆಯಿಂದ ಬಿಡುಗಡೆಗೊಳಿಸಬಾರದು. ನಿವೃತ್ತಿ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರಿಸಬೇಕು. ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷೆ ರೇಣುಕಾ ಬೆನಕೊಪ್ಪ, ಪ್ರಮುಖರಾದ ರಾಜು ಲಮಾಣಿ, ಸಂಗೀತಾ ಕೊಡಗ, ಸುರೇಖಾ, ಮಹಾನಂದ, ಲಕ್ಷ್ಮಿ, ರಮೇಶ ಕುಲಕರ್ಣಿ ಮುಂತಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.