Online ವಂಚಕರಿದ್ದಾರೆ ಹುಷಾರ್..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ
Team Udayavani, May 13, 2024, 3:57 PM IST
ಓದುಗ ಮಿತ್ರರೇ, ಈಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಗೊತ್ತಿಲ್ಲದ ಯಾವುದೇ ನಂಬರ್‌ನಿಂದ ಕರೆ ಬಂದಾಗ ನೀವು ಸ್ವಲ್ಪ ಎಚ್ಚರ ತಪ್ಪಿದರೂ, ನಿಮ್ಮದೇ ಬ್ಯಾಂಕ್ ಖಾತೆಯಲ್ಲಿರುವ ಹಣ, ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತೀರಿ. ಈ ಆನ್‌ಲೈನ್ ವಂಚನೆ ಕೇವಲ ಹಣ ಲಪಟಾಯಿಸುವ ಕೈಚಳಕವಾದರೂ ಎಚ್ಚರ ತಪ್ಪಿದರೆ, ನಿಮ್ಮ ಮಾನ ಮರ್ಯಾದೆಗೂ ಕುಂದು ಬರದೇ ಇರದು. ಕಾರಣ ಆನ್‌ಲೈನ್ ವಂಚನೆ ಇದೀಗ ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರಗಾರಿಕೆಯತ್ತ ಹೊರಳಿದೆ. ಬಾಗಲಕೋಟೆ ಜಿಲ್ಲೆಯ ಜನರು ಇಂತಹ ವಂಚನೆಗಳಿಂದ ಎಚ್ಚರಿಕೆ ವಹಿಸಲು, ಹಣ ಕಳೆದುಕೊಳ್ಳದೇ ಇರಲು ಜಾಗೃತಿ ಮೂಡಿಸುವ ಭಾಗವಾಗಿ “ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ.
ಉದಯವಾಣಿ ಸಮಾಚಾರ
ಬಾಗಲಕೋಟೆ: ಐ ಆ್ಯಮ್ ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಶನ್ ಆಫೀಸರ್…ನಾವು ಹೇಳೋವರೆಗೂ ನೀವು ಎಲ್ಲೂ ಹೋಗುವಂತಿಲ್ಲ. ನಮ್ಮ ಅಧಿಕಾರಿಗಳು ನಿಮ್ಮನ್ನು ವಿಚಾರಣೆ ಮಾಡಲಿದ್ದಾರೆ. ತಕ್ಷಣ ಆನ್‌ಲೈನ್ ವಿಡಿಯೋ ಕಾಲ್‌ಗೆ ಬನ್ನಿ. ನಿಮ್ಮ ಬುದ್ಧಿವಂತಿಕೆ ತೋರಿಸಿದರೆ ಶಾಶ್ವತವಾಗಿ ಒಳಗೆ ಹೋಗ್ತಿರಿ. ನಮ್ಮ ವಿಚಾರಣೆಗೆ ನೀವು ಸ್ಪಂದಿಸಲೇಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸುತ್ತೀರಿ.
ಹೌದು. ನಿಮಗೂ ಈ ರೀತಿಯ ಮೊಬೈಲ್ ಕರೆ ಬರಬಹುದು. ಇಂತಹ ಕರೆಗಳು ಬಂದಾಗ ಎಚ್ಚರಿಕೆ ವಹಿಸಲೇಬೇಕು. ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳು, ನಿಮಗೆ ಫೋನ್ ಕರೆ ಮಾಡಿ ತನಿಖೆ ಮಾಡುವುದೇ ಇಲ್ಲ. ಆ ರೀತಿಯ ತನಿಖಾ ಮಾನದಂಡ ಯಾವ ಇಲಾಖೆಯಲ್ಲೂ ಇಲ್ಲ. ನೀವು ಯಾವುದೇ ಗುರುತರವಾದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಫೋನ್ ಕರೆ ಮಾಡಿ ವಿಚಾರಣೆಯೇ ಮಾಡಲ್ಲ. ನಿಜವಾದ ತನಿಖಾಧಿಕಾರಿಗಳಿಗೆ ಅನುಮಾನ ಬಂದರೆ ನಿಮ್ಮನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ ಹೊರತು ನಿಮ್ಮನ್ನು ಮೊಬೈಲ್ ಫೋನ್ ನಲ್ಲಿ ವಿಚಾರಣೆ ಮಾಡಲ್ಲ ಎಂಬುದು ಜನತೆಗೆ ಗೊತ್ತಿರಬೇಕು. ಆಗ ಆನ್ ಲೈನ್ ವಂಚನೆಯಂತಹ ಜಾಲದಿಂದ ತಪ್ಪಿಸಿಕೊಳ್ಳಬಹುದು ಎಂಬುದು ಪೊಲೀಸ್ ಇಲಾಖೆ ಕಳಕಳಿ.
ಚಕ್ಕಂದವಾಡಿ ಹಣ ಕೀಳ್ತಾರೆ:
ಮನೆ ಬೀಗ ಒಡೆದು ಕನ್ನ ಹಾಕಿ, ಚಿನ್ನಾಭರಣ ಕದಿಯುವ ಕಾಲ ಹಳತು. ಆ ರೀತಿ ಮಾಡಿ ಸಿಕ್ಕಿ ಹಾಕಿಕೊಳ್ಳುವ ಖದೀಮರು ಇದೀಗ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಅದುವೇ ಆನ್‌ಲೈನ್ ವಂಚನೆ. ಈ ವಂಚನೆಯ ಜಾಲ ಇಡೀ ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ನೈಸ್ ಆಗಿ ಮಾತನಾಡಿ ಹಣ ಕಿತ್ತುಕೊಳ್ಳುವ ಜಾಲ ಒಂದೆಡೆ ಇದ್ದರೆ, ಮತ್ತೂಂದೆಡೆ ನಿಮ್ಮೊಂದಿಗೆ ಮೊಬೈಲ್‌ನಲ್ಲೇ ಚೆಲ್ಲಾಟವಾಡಿ ಹಣ ಕೀಳುವ ಮಹಿಳಾ ವಂಚಕಿಯರೂ ಬಹಳಷ್ಟಿದ್ದಾರೆ.
ಇದೆಲ್ಲದರ ಮಧ್ಯೆ ಆನ್‌ನೈಲ್ ಶಾಪಿಂಗ್, ಅತಿ ಹೆಚ್ಚು ಹಣ ವರ್ಗಾವಣೆ ಮಾಡಿದ ಮೂಲ ಕಂಡು ಹಿಡಿಯುವ ಹ್ಯಾಕರ್ ಹಂತಕರೂ, ನಿಮ್ಮನ್ನು ತನಿಖೆ ಹೆಸರಿನಲ್ಲಿ ವಂಚನೆ ಮಾಡುತ್ತಾರೆ. ಇಂತಹ ಪ್ರಕರಣಗಳು ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಆ ರೀತಿ ಹಣ ಕಳೆದುಕೊಂಡವರಲ್ಲಿ ಶೇ.15 ಜನ ಮಾತ್ರ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಾರೆ. 10ರಿಂದ 25 ಸಾವಿರವರೆಗೆ ಹಣ ಕಳೆದುಕೊಂಡ ಲಕ್ಷಾಂತರ ಜನ ಈ ವರೆಗೆ ಠಾಣೆಯ ಮೆಟ್ಟಿಲು ಹತ್ತಿಲ್ಲ.
ಆದರೆ ಸಮಸ್ಯೆ ಮಾತ್ರ ಹೇಳಿಕೊಳ್ಳುತ್ತಾರೆ. ಹಣ ಕಳೆದುಕೊಂಡ ಬಳಿಕ ಅದೇನ್ ಬರುತ್ತದೆ ಬಿಡ್ರಿ, ಹೋಗಿದ್ದು ಹೋಗೈತಿ. ಇನ್ನರ ಹುಷಾರ್ ಆಗಿರಿ ಎಂದು ಸಲಹೆ ಕೊಡುವವರೇ ಹೆಚ್ಚು. ಅದೆಲ್ಲಕ್ಕಿಂತ ಮುಖ್ಯವಾಗಿ ಹೊಸ ನಂಬರ್, ಗೊತ್ತಿಲ್ಲದವರ ಧ್ವನಿ, ಭಾಷೆಯ ಕರೆ ಬಂದಾಗ ನೀವು ಯಾವುದೇ ವಂಚನೆಯ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸುವುದೇ ಸೂಕ್ತ.
ಯಾವ ರೀತಿ ವಂಚನೆಗಳು: ಆನ್‌ಲೈನ್ ವಂಚನೆಗಳು ಹಲವು ರೀತಿ ನಡೆಯುತ್ತಿವೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮನ್ನು ಬಲೆಗೆ ಬೀಳಿಸುತ್ತಾರೆ. ಮುಖ್ಯವಾಗಿ ಮನೆಯಲ್ಲೇ ಕುಳಿತು ಆನ್‌ಲೈನ್ ವಸ್ತುಗಳ ಖರೀದಿ ವೇಳೆ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಎಂತಹದ್ದೇ ಸಂದರ್ಭದಲ್ಲೂ ಬ್ಯಾಂಕಿನ ಖಾತೆ ವಿವರ ಕೊಡಲೇಬಾರದು. ಲಾಟರಿ, ಗಿಫ್ಟ್ ಆಫರ್, ಮೊಬೈಲ್ ಲೋನ್ ಆ್ಯಪ್, ಕ್ರೆಡಿಟ್ ಕಾರ್ಡ್ ಆಫರ್, ಪಾರ್ಟ್ ಟೈಂ ಜಾಬ್ ಆಫರ್, ಮಕ್ಕಳ ಅಶ್ಲೀಲ ಚಿತ್ರಗಳ ಹೆಸರಿನಲ್ಲಿ, ಜಾಹೀರಾತು ಮೂಲಕ, ಬ್ಯಾಂಕ್ ಕೆವೈಸಿ ಅಪ್‌ಡೇಟ್ ಹೆಸರಲ್ಲಿ, ನಕಲಿ ಕಸ್ಟಮರ್ ಕೇರ್, ಆನ್‌ಲೈನ್ ಸೆಕ್ಸ್ ವರ್ಕರ್ ಹೆಸರಿನಲ್ಲೂ ನಿಮ್ಮ ಹಣ ದೋಚುವ ಜತೆಗೆ ಮಾನ-ಮರ್ಯಾದೆಯೂ ತೆಗೆಯಲಾಗುತ್ತದೆ.
ಜಾಗೃತಿ ಅತ್ಯಗತ್ಯ
ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರುವ ವಿಷಯ ಖಾತ್ರಿ ಪಡಿಸಿಕೊಳ್ಳುವವರೆಗೂ ನಂಬಬಾರದು. ಕಮೀಷನ್ ಕೊಡುವ ವ್ಯವಹಾರ, ಅತ್ಯುತ್ತಮ ಲಾಭ ಬರುವ ಉದ್ಯಮ ಹೆಸರಲ್ಲೂ ವಂಚನೆ ನಡೆದಿವೆ. ಮುಖ್ಯವಾಗಿ ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರಗಾರಿಕೆಯ ಆನ್‌ಲೈನ್ ವಂಚನೆ ನಡೆಯುತ್ತಿವೆ. ಇಂತಹ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವ ಜತೆಗೆ ನಮ್ಮ
ಜಿಲ್ಲೆಯ ಜನರು ಆನ್‌ಲೈನ್ ವಂಚನೆಯಿಂದ ದೂರ ಇರಬೇಕು ಎಂಬುದು ಜಿಲ್ಲಾ ಪೊಲೀಸ್ ಇಲಾಖೆಯ ಹಾಗೂ ನಮ್ಮ ಕಾಳಜಿ
ಮೊಟ್ಟ ಮೊದಲು, ಆನ್‌ಲೈನ್ ವಂಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ “ಉದಯವಾಣಿ’ ಪತ್ರಿಕೆಗೆ ನಮ್ಮ ಇಲಾಖೆಯಿಂದ ಅಭಿನಂದಿಸುವೆ. ಅಪರಾಧ ಮುಕ್ತ ಬಾಗಲಕೋಟೆ ಮಾಡಬೇಕೆಂಬುದು ಇಲಾಖೆಯ ಮುಖ್ಯ ಗುರಿ. ಇದು ಅಷ್ಟು ಸುಲಭವೂ ಅಲ್ಲ. ಕೊನೆ ಪಕ್ಷ ಗೊತ್ತಿದ್ದೂ ವಂಚನೆಗೆ ಒಳಗಾಗುವುದನ್ನು ತಡೆಯಬೇಕು. ಅದಕ್ಕಾಗಿ ನಮ್ಮ ಜಿಲ್ಲೆಯ ಜನರು ಎಚ್ಚರಿಕೆಯ ಜಾಗೃತಿ ವಹಿಸಬೇಕು.
●ಅಮರನಾಥ ರಡ್ಡಿ, ಎಸ್ಪಿ, ಬಾಗಲಕೋಟೆ
*ಶ್ರೀಶೈಲ ಕೆ.ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.