ಜನರಿಗೆ ನೆಮ್ಮದಿ ಬದುಕು ಕಲ್ಪಿಸಿರುವೆ: ಸಚಿವ ನಿರಾಣಿ
Team Udayavani, May 4, 2023, 9:19 AM IST
ಬಾಗಲಕೋಟೆ: ಪ್ರತಿ ಕುಟುಂಬ ಸ್ವಾಭಿಮಾನ ಹಾಗೂ ಗೌರವಯುತವಾಗಿ ಬದುಕಬೇಕು. ನೆಮ್ಮದಿಯ ಕೌಟುಂಬಿಕ ಜೀವನ ಅವರದ್ದಾಗಿರಬೇಕೆಂಬ ನಿಟ್ಟಿನಲ್ಲಿ ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದಲ್ಲಿ ವಸತಿ ಯೋಜನೆಯಡಿ ಮನೆಗಳನ್ನು ತಂದು ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೂ ಸೂರು ನೀಡಿದ್ದೇನೆ ಎಂದು ಸಚಿವ, ಬೀಳಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ಕ್ಷೇತ್ರದ ಹೊನ್ನಿಹಾಳ, ಸೋರಕೊಪ್ಪ, ನಕ್ಕರಗುಂದಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.
ವಸತಿರಹಿತರಿಗೆ ಬಸವ ವಸತಿ ಯೋಜನೆಯಡಿ 2,246 ಮನೆ ನಿರ್ಮಿಸಿಕೊಳ್ಳಲು 27 ಕೋಟಿ ರೂ. ಹಾಗೂ ಡಾ| ಬಿ. ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 1,124 ಫಲಾನುಭವಿಗಳಿಗೆ 19.67 ಕೋಟಿ ರೂ. ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 842 ಫಲಾನುಭವಿಗಳಿಗೆ 12.12 ಕೋಟಿ ರೂ. ಸಹಾಯಧನ ಮನೆ ನಿರ್ಮಿಸಿಕೊಳ್ಳಲು ನೀಡಲಾಗಿದೆ ಎಂದು ವಿವರಿಸಿದರು.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಬೇಡಿಕೆ ಬಂದಿದ್ದನ್ನು ಪರಿಗಣಿಸಿ ಬಸವ ವಸತಿ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಹೆಚ್ಚುವರಿ 600 ಫಲಾನುಭವಿಗಳಿಗೆ 8.30 ಕೋಟಿ ರೂ. ಅನುದಾನ ತಂದು ಮನೆ ನಿರ್ಮಿಸಿಕೊಡಲಾಗಿದೆ. ಆದಾಗ್ಯೂ 14.75 ಕೋಟಿ ರೂ. ಅನುದಾನದಲ್ಲಿ 500 ಬಸವ ವಸತಿ ಯೋಜನೆ ಮತ್ತು 500 ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಈಗಾಗಲೇ ಮಂಜೂರು ಮಾಡಿಸಲಾಗಿದೆ. ಪ್ರತಿ ಕುಟುಂಬಕ್ಕೂ ನೆಮ್ಮದಿ ಬದುಕು ಕಟ್ಟಿಕೊಡುವುದು ನನ್ನ ಸಂಕಲ್ಪವಾಗಿದೆ. ಆದ್ದರಿಂದ ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೂಮ್ಮೆ ಆಶೀರ್ವದಿಸಿ ಎಂದು ಮತದಾರರಲ್ಲಿ ನಿವೇದನೆ ಮಾಡಿಕೊಂಡರು.
ಕಾಂಗ್ರೆಸ್ ಪ್ರಣಾಳಿಕೆ ಘೋಷಿಸಿದ್ದು ಪೊಳ್ಳು ಭರವಸೆಗಳ ಜೊತೆಗೆ ಹಿಂದುತ್ವ ದಮನ ಮಾಡುವ ಹುನ್ನಾರ ನಡೆಸಿದೆ. ಇದು ಸೂರ್ಯ-ಚಂದ್ರರಿರುವರೆಗೂ ಸಾಧ್ಯವಿಲ್ಲ. ಬಜರಂಗದಳ ನಿಷೇಧಿಸುತ್ತೇನೆ ಎನ್ನುವ ನಿಮ್ಮನ್ನು ಈ ಬಾರಿ ಜನರೇ ಬಹಿಷ್ಕರಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಸವರಾಜ ಖೋತ, ಮುಖಂಡರಾದ ಡಾ|ಜೋಶಿ, ಡಾ| ಗಡ್ಡಿ, ಡಾ| ಬಾಳಿಕಾಯಿ, ಮಲ್ಲಿಕಾರ್ಜುನ ಗೌಡರ್, ಶಿವನಗೌಡ ಪಾಟೀಲ, ಈರಣ್ಣ ಕುಂಬಾರ, ಶಿವಲಿಂಗಪ್ಪ ಬೆಳವಲರ್, ಸಂಗಪ್ಪ ಅನವಾಲ, ಸಿದ್ದಪ್ಪ ನೀರಲಕೇರಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.