ಕೃಷ್ಣೆಯಲ್ಲಿ ಮುಳುಗಿದ ನಿರೀಕ್ಷೆಗಳ ಬೆಟ್ಟ
Team Udayavani, Mar 6, 2020, 12:24 PM IST
ಬಾಗಲಕೋಟೆ: ಬಿಜೆಪಿ ಸರ್ಕಾರ ಮತ್ತೂಮ್ಮೆ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್, ಜಿಲ್ಲೆಗೆ ಬಹುತೇಕ ನಿರಾಶೆ ಮೂಡಿಸೆ. ಬಜೆಟ್ ಘೋಷಣೆಗೂ ಮುನ್ನ ಕೃಷ್ಣಾ ಕಣಿವೆಯ ಜನರು ಇಟ್ಟುಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆಗಳೂ ಕೃಷ್ಣೆಯಲ್ಲೇ ಮುಳುಗಿದಂತಾಗಿವೆ.
ಹೌದು, ಬಜೆಟ್ ಮೇಲೆ ಜಿಲ್ಲೆಯ ಎಲ್ಲ ವರ್ಗದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಲ್ಲೂ ಯುಕೆಪಿ ಯೋಜನೆ, ಮೂರು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಸ್ವತಃ ಸಿಎಂ, ಡಿಸಿಎಂ ಕೂಡ ಹೇಳಿಕೊಂಡಿದ್ದರು. ಬಜೆಟ್‌ನಲ್ಲಿ ಕೃಷ್ಣಾ ನದಿ ಅಥವಾ ಆಲಮಟ್ಟಿ ಜಲಾಶಯದ ಹೆಸರೇ ಇಲ್ಲ. ಇಲಾಖಾವಾರು ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ಯುಕೆಪಿಗಾಗಿ ಎಷ್ಟು ದೊರೆಯುತ್ತದೆಯೋ ತಿಳಿದಿಲ್ಲ. ಹೀಗಾಗಿ ಜಿಲ್ಲೆಯ ನಿರೀಕ್ಷೆಗಳೆಲ್ಲ ಹುಸಿಯಾಗಿವೆ ಎಂಬ ಅಸಮಾಧಾನ ಭುಗಿಲೆದ್ದಿದೆ.
ಆಡಳಿತ ಪಕ್ಷದ ಶಾಸಕರ ಪತ್ರಕ್ಕೂ ಸ್ಪಂದನೆ ಇಲ್ಲ: ಜಿಲ್ಲೆಯ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು, ಒಟ್ಟಾಗಿ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು 305 ಕೋಟಿ ಮೊತ್ತದ ಏತ ನೀರಾವರಿ ಯೋಜನೆಗೆ ಅನುದಾನ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದರು. ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ದೊರೆಯುತ್ತದೆ ಎಂಬ ದೊಡ್ಡ ನಿರೀಕ್ಷೆಯೂ ಜಿಎಲ್ ಬಿಸಿ ಬರಡು ಕಾಲುವೆ ವ್ಯಾಪ್ತಿಯ ಸಾವಿರಾರು ರೈತರಿಗಿತ್ತು. 18 ವರ್ಷಗಳ ಹಿಂದೆಯೇ ಕಾಲುವೆ ನಿರ್ಮಿಸಿದರೂ, ಹನಿ ನೀರು ಕಾಣದ ರೈತರು, ಕಾಲುವೆಗಾಗಿ ಭೂಮಿ ಕೊಟ್ಟು ಕಂಗಾಲಾಗಿದ್ದಾರೆ. ಆದರೆ, ಈ ಬಜೆಟ್‌ನಲ್ಲೂ ಹಣ ಸಿಗದ ಕಾರಣ, ತೀವ್ರ ನಿರಾಶೆಗೊಂಡಿದ್ದಾರೆ.
ಪ್ರವಾಸೋದ್ಯಮ-ಅಗ್ನಿ ಶಾಮಕ ಠಾಣೆ: ಪ್ರಸಕ್ತ ಬಜೆಟ್‌ನಲ್ಲಿ ಮುಧೋಳಕ್ಕೆ ಅಗ್ನಿ ಶಾಮಕ ಠಾಣೆ, ಬಾದಾಮಿ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ 25 ಕೋಟಿ, ನೇಕಾರರ ಸಾಲ ಮನ್ನಾ ಯೋಜನೆಗೆ 79.57 ಕೋಟಿ ಹಣ ಬಿಟ್ಟರೆ ಬೇರೆ ಯಾವ ಯೋಜನೆ, ವಿಶೇಷ ಅನುದಾನ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಓರ್ವ ಉಪ ಮುಖ್ಯಮಂತ್ರಿಗಳು ಸಹಿತ ನಾಲ್ವರು ಶಾಸಕರಿದ್ದರೂ ಜಿಲ್ಲೆಗೆ ಅಗತ್ಯ ಅನುದಾನ ತರುವಲ್ಲಿ ಯಶಸ್ವಿಯಾಗಿಲ್ಲ ಎಂಬ ಬೇಸರದ ಮಾತು ಕೇಳಿ ಬರುತ್ತಿವೆ.
ಇನ್ನು ಕಳೆದ ವರ್ಷ ಕೆರೂರ ಏತ ನೀರಾವರಿ ಯೋಜನೆಗೆ 520 ಕೋಟಿ ಘೋಷಿಸಿದ್ದರೂ ಈವರೆಗೆ ಅನುದಾನ ಸಿಕ್ಕಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಆ ಯೋಜನೆಗೆ ಅನುದಾನ ಕೊಡುವಂತೆ ಆಡಳಿತ ಪಕ್ಷದ ಶಾಸಕರೂ ಕೇಳಿಕೊಂಡಿದ್ದರು. ಅಲ್ಲದೇ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು, ತಮ್ಮ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾವಿರ ಕೋಟಿ, ಹೊಸದಾಗಿ ಎಂಜಿನಿಯರಿಂಗ್ ಕಾಲೇಜು, ಐಟಿಐ ಕಾಲೇಜು, ಆಸರೆ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಒಟ್ಟು ಸುಮಾರು 1500 ಕೋಟಿಗೂ ಅಧಿಕ ಅನುದಾನ ಕೊಡುವಂತೆ ಸಿಎಂಗೆ 17ಕ್ಕೂ ಹೆಚ್ಚು ಪತ್ರ ಬರೆದಿದ್ದರು. ಆದರೆ, ಬೆಜಟ್‌ನಲ್ಲಿ ಬಾದಾಮಿ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇವಲ 25 ಕೋಟಿ ಅನುದಾನ ಘೋಷಣೆ ಮಾಡಿದ್ದು, ಇದು ಯಾವುದಕ್ಕೆ ಸಾಲುತ್ತದೆ ಎಂಬುದು ಕ್ಷೇತ್ರದ ಕಾಂಗ್ರೆಸ್ಸಿಗರ ಪ್ರಶ್ನೆ.
ಒಟ್ಟಾರೆ, ಬಜೆಟ್ ಕುರಿತು ಇಟ್ಟುಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆಗಳು, ಕೃಷ್ಣೆಯಲ್ಲಿ ಮುಳುಗಿವೆ. ವಲಯವಾರು ಹಂಚಿಕೆ ಮಾಡಿರುವ ಅನುದಾನದಲ್ಲಿ, ಯುಕೆಪಿ ಯೋಜನೆಗಾಗಿ ಹೆಚ್ಚಿನ ಅನುದಾನ ನೀಡಬೇಕು ಎಂಬುದು ಈ ಜಿಲ್ಲೆಯ ಜನರ ಒತ್ತಾಯ.
ಆರ್ಥಿಕ ಸಂಕಷ್ಟದಲ್ಲೂ ಚೇತರಿಕೆಯ ಬಜೆಟ್ ಇದಾಗಿದೆ. ಪ್ರವಾಹ, ಬರ, ಜತೆಗೆ ಸಾಲ ಮನ್ನಾದ ತೀವ್ರ ಹೊರೆಯ ಮಧ್ಯೆ ಇದೊಂದು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್. ಯೋಜನಾವಾರು, ಇಲಾಖಾವಾರು ಅನುದಾನ ಕಲ್ಪಿಸದೇ, 6 ವಲಯವಾರು ಅನುದಾನ ಹಂಚಿಕೆ ಮಾಡಿದ್ದು, ಮುಂದೆ ಕ್ರಿಯಾ ಯೋಜನೆ ರೂಪಿಸಿ ಹಣ ನೀಡಲಾಗುತ್ತದೆ. ಆಗ ಯುಕೆಪಿಗೂ 10 ಸಾವಿರಕ್ಕೂ ಮೇಲ್ಪಟ್ಟು ಅನುದಾನ ದೊರೆಯಲಿದೆ ಎಂಬ ಆತ್ಮವಿಶ್ವಾಸವಿದೆ. – ಗೋವಿಂದ ಕಾರಜೋಳ, ಡಿಸಿಎಂ
ರಾಜ್ಯದ ಆರ್ಥಿಕ ಸಂಕಷ್ಟದಲ್ಲೂ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಎಂಬಂತೆ ಉತ್ತಮ ಬಜೆಟ್ ನೀಡಿದ್ದಾರೆ. ಇರುವ ಇತಿಮಿತಿಯಲ್ಲಿ ಸಂಪನ್ಮೂಲ ಕ್ರೋಢಿಕರಿಸುವುದು ಕಷ್ಟದ ಕೆಲಸ. ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ, ಹಿರಿಯರಿ ನಾಯಕರಿಗೆ ಎಲ್ಲರಿಗೂ ಯೋಜನೆ ನೀಡಲಾಗಿದೆ. ಯುಕೆಪಿಗೆ ಸ್ಪಷ್ಟತೆ ಕೊಡಬೇಕಿತ್ತು. ಬರುವ ದಿನಗಳಲ್ಲಿ ಅದಕ್ಕೆ ಯೋಗ್ಯ ಅನುದಾನ ನೀಡಲಿ. ಎಲ್ಲ ಜಿಲ್ಲೆಗಳಿಗೂ ಅವಕಾಶ ಕೊಡಬೇಕಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.- ಪ್ರಕಾಶ ತಪಶೆಟ್ಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ
ಕೃಷ್ಣೆಯ ಮಕ್ಕಳು ಇಟ್ಟಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಒಂದು ಲಕ್ಷ ಕೋಟಿಗೂ ಅಧಿಕ ಅಧಿಕ ವೆಚ್ಚದ ಯುಕೆಪಿ ಕಾಮಗಾರಿಗಳಿಗಾಗಿ ಪ್ರತ್ಯೇಕ ಹಣ ನೀಡಿಲ್ಲ. ಇಡೀ ರಾಜ್ಯದ ನೀರಾವರಿ ಯೋಜನೆಗಳಿಗಾಗಿ 21,308 ಕೋಟಿ ರೂ. ಇಟ್ಟಿದ್ದು, ಯುಕೆಪಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಸಿಎಂ ಬಿಎಸ್‌ವೈ, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಮುಖಂಡರು ಹೇಳುತ್ತಲೇ ಬಂದರಾದರೂ ಬಜೆಟ್‌ನಲ್ಲಿ ಆ ಬಗ್ಗೆ ಪ್ರಸ್ತಾಪವೇ ಇಲ್ಲ. -ರಕ್ಷಿತಾ ಭರತಕುಮಾರ ಈಟಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ
ಜಿಲ್ಲೆಯ ಮಟ್ಟಿಗೆ ಬಜೆಟ್ ಸಂಪೂರ್ಣ ನಿರಾಶೆ ತಂದಿದೆ. ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯವರು ದೊಡ್ಡ ಹೋರಾಟ ಮಾಡಿದ್ದರು. ಈಗ ಅವರೇ ಅಧಿಕಾರಕ್ಕೆ ಬಂದರೂ, ಜಿಲ್ಲೆಯ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯ ಬಿಜೆಪಿ ಶಾಸಕರೇ ಮಾಡಿಕೊಂಡ ಮನವಿಗೂ ಬಜೆಟ್‌ನಲ್ಲಿ ಅನುದಾನ ಕೊಟ್ಟಿಲ್ಲ. – ಬಾಯಕ್ಕ ಮೇಟಿ, ಜಿಪಂ ಅಧ್ಯಕ್ಷೆ
ಬಜೆಟ್ ಸಂಪೂರ್ಣ ನಿರಾಶೆ ತಂದಿದೆ. ರೈತರ ಪ್ರತ್ಯೇಕ ಬಜೆಟ್ ಮಂಡಿಸಿದವರು ರೈತರಿಗೆ ಯಾವ ಯೋಜನೆಯೂ ನೀಡಿಲ್ಲ. ನೀರಾವರಿಗಾಗಿ ತ್ಯಾಗ ಮಾಡಿದ ನಮಗೆ ಯೋಗ್ಯ ಪರಿಹಾರ, ಹೊಸ ನೀರಾವರಿ ಯೋಜನೆ ಕೊಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಜಿಲ್ಲೆಗೆ, ಅದರಲ್ಲೂ ರೈತರಿಗೆ ಅನ್ಯಾಯ ಮಾಡಿದ್ದಾರೆ. –ರಾಮಣ್ಣ ಸುನಗದ, ಮುಖಂಡ, ಅಚನೂರ ಏತ ನೀರಾವರಿ ಯೋಜನೆ ಸಮಿತಿ
ರಾಜ್ಯದ ಸಮಗ್ರತೆಗಾಗಿ ಆರು ವಲಯಗಳಿಗೆ ಅನುದಾನ ಹಂಚಿಕೆ ಮಾಡಿದ್ದು ಹೊಸ ಪ್ರಯತ್ನ. ಸಧ್ಯ ವಲಯವಾರು, ಇಲಾಖೆವಾರು ಅನುದಾನ ಹಂಚಿದ್ದು, ಕ್ರಿಯಾ ಯೋಜನೆಗಳ ಪ್ರಕಾರ ಮುಂದೆ ಅನುದಾನ ಹಂಚಿಕೆ ಮಾಡುತ್ತಾರೆ. ಆರ್ಥಿಕ ಸಮಸ್ಯೆಗಳ ಮಧ್ಯೆಯೂ ಸರ್ಕಾರ, ಸಮಗ್ರ ಅಭಿವೃದ್ಧಿಗೆ ಉತ್ತಮ ಬಜೆಟ್ ನೀಡಿದೆ. -ಡಾ| ಆರ್. ಮಾರುತೇಶ (ಲವಳಸರ), ರಾಜ್ಯ ಉಪಾಧ್ಯಕ್ಷ, ಬಿಜೆಪಿ ಸ್ಲಂ ಮೋರ್ಚಾ
ಜಿಲ್ಲೆಯಲ್ಲಿ ಐದು ಜನ ಬಿಜೆಪಿ ಶಾಸಕರು, ಓರ್ವ ಡಿಸಿಎಂ ಇದ್ದರೂ ಜಿಲ್ಲೆಗೆ ಒಂದೂ ಯೋಜನೆ ಇಲ್ಲ. ಬೆಳಗಾವಿಯ ಜಲಸಂಪನ್ಮೂಲ ಸಚಿವರಿದ್ದರೂ ಯುಕೆಪಿಗೆ ಒಂದು ಪೈಸೆ ಹಣ ಕೊಟ್ಟಿಲ್ಲ. ಅಭಿವೃದ್ಧಿಪರ ಯೋಜನೆ ನೀಡದೇ ಜನರಿಗೆ ಮೋಸ ಮಾಡಲಾಗಿದೆ. –ಎಂ.ಬಿ. ಸೌದಾಗರ, ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ
ಪ್ರಸಕ್ತ ಸಾಲಿನ ಪರಿಪೂರ್ಣ ಬಜೆಟ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಪಾರ ರಾಜಕೀಯ ಅನುಭವಕ್ಕೆ ಸಾಕ್ಷಿಯಾಗಿದೆ. ಕೃಷಿ-ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಉದ್ಯೋಗ ಸೃಷ್ಟಿ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸ್ವಾಗತಾರ್ಹ. ಒಟ್ಟಿನಲ್ಲಿ ರೈತ-ಮಹಿಳೆ, ಕಾರ್ಮಿಕ, ಯುವಕರು, ದಲಿತ ವರ್ಗ ಸೇರಿದಂತೆ ಎಲ್ಲರಿಗೂ ಸಲ್ಲುವ ಉತ್ತಮ ಬಜೆಟ್ ಇದಾಗಿದೆ.-ಹನುಮಂತ ನಿರಾಣಿ, ವಿಧಾನ ಪರಿಷತ್ ಸದಸ್ಯರು
ರಾಜ್ಯದ ಸಮಗ್ರ ಅಭಿವೃದ್ಧಿ ಚಿಂತನೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಮಹಿಳಾ ಕಾರ್ಮಿಕರಿಗಾಗಿ ವನಿತಾ ಸಂಗಾತಿ ಯೋಜನೆ, ಸ್ಮಾರಕಗಳ ರಕ್ಷಣೆಗೆ ವಿಶೇಷ ಅನುದಾನ ನೀಡಿರುವುದು ಶ್ಲಾಘನೀಯ.– ಮುರುಗೇಶ ನಿರಾಣಿ, ಶಾಸಕರು, ಬೀಳಗಿ
ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆಗೆ ಬಜೆಟ್‌ನಲ್ಲಿ ಒತ್ತು ನೀಡಿಲ್ಲ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗೆ ಮಹತ್ವ ನೀಡುವ ಮೂಲಕ ನಿರುದ್ಯೋಗ ಯುವಕರಿಗೆ ಕೆಲಸ ನೀಡುತ್ತಾರೆಂಬ ಭರವಸೆ ಹುಸಿಯಾಗಿದೆ. ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಬಜೆಟ್ ನಿರಾಶಾದಾಯಕವಾಗಿದೆ. -ಆನಂದ ನ್ಯಾಮಗೌಡ, ಜಮಖಂಡಿ ಶಾಸಕರು
-ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.