Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
ನಾಳೆ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
Team Udayavani, Apr 27, 2024, 6:03 PM IST
ರಬಕವಿ ಬನಹಟ್ಟಿ : ಕೇಂದ್ರಕ್ಕೆ ರಾಜ್ಯದ ಬರ ಪರಿಹಾರಕ್ಕೆಂದು18,172 ಕೋಟಿ ರೂ.ಗಳಷ್ಟು ಒದಗಿಸಬೇಕಾಗಿದ್ದ ಬರ ಪರಿಹಾರದಲ್ಲಿ ಕೇವಲ 3,498 ಕೋಟಿ ರೂ.ಗಳಷ್ಟು ಮಾತ್ರ ಒದಗಿಸಿದೆ. ಇದರ ವಿರುದ್ಧ ರವಿವಾರ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅವರು ಶನಿವಾರ ಬನಹಟ್ಟಿಯ ಎಸ್‌ಆರ್‌ಎ ಹೈಸ್ಕೂಲ್ ಮೈದಾನದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಗೆಲುವಿನ ಸಂದೇಶ ನೀಡಲು ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು.
ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ. ಇಂಥಾ ದ್ರೋಹ ಏಕೆ ಮಾಡಿದ್ರಿ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಬರ ಪರಿಹಾರವನ್ನು ಕಟಾಚಾರಕ್ಕೆ ನೀಡಿದೆ.
ನ್ಯಾಯಾಲಯಕ್ಕೂ ಗೌರವ ನೀಡದ ಬಿಜೆಪಿ ಸರ್ಕಾರದ ವರ್ತನೆಗೆ ಖಂಡನೆಯೆಂದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಕಿಡಿಕಾರಿದರು.
10 ವರ್ಷಗಳ ಭರವಸೆ ಸರ್ಕಾರ: ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಬರೀ ಭರವಸೆಗಳಿಂದಲೇ ದೇಶದ 140 ಕೋಟಿ ಜನರ ಕಣ್ಣಿಗೆ ಮಣ್ಣಿರೆಚುವ ಕಾರ್ಯದಲ್ಲಿದೆ. ವಿದೇಶಿ ಕಪ್ಪು ಹಣದಲ್ಲಿ ಕಾಂಗ್ರೆಸ್ ಹಾಗು ದೇಶದ ಶ್ರೀಮಂತರ ಹಣವಿದೆ. ಅದನ್ನು ತಂದು ತಲಾ 15 ಲಕ್ಷ ಎಲ್ಲರ ಖಾತೆಗೆ ಹಾಕುವುದಾಗಿ ಹೇಳಿದ್ದರು. 15 ರೂ.ಗಳನ್ನೂ ಹಾಕಿಲ್ಲ. ಡೀಸೆಲ್, ಪೆಟ್ರೋಲ್ ಮತ್ತು ಸಿಲಿಂಡರ್ ಬೆಲೆ 10 ವರ್ಷದಲ್ಲಿ ದುಪ್ಪಟ್ಟಾಗಿದೆ ಎಂದರು.
ರೈತರ ಹೋರಾಟ, ಪ್ರತಿಭಟನೆಗೆ ಗಮನಿಸದ ಕಾರಣ 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಿದೆ. 2 ಕೋಟಿ ಯುವಕರಿಗೆ ಉದ್ಯೋಗ ನೀಡಿದ್ದೇಲ್ಲಿ?. ಉದ್ಯೋಗಕ್ಕಾಗಿ ಅರಸಿ ಹೋದರೆ ಪಕೋಡಾ, ಬೋಂಡಾ ಮಾರಿ ಅಂತಿರುವ ಇಂತಹ ಪ್ರಧಾನಿ ದೇಶದ ಇತಿಹಾಸದಲ್ಲಿಯೇ ಬಂದಿಲ್ಲವೆಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಾರಿ ನೀವು ಬಿಜೆಪಿಯ ಗದ್ದಿಗೌಡರನ್ನು ಸೋಲಿಸಲೇ ಬೇಕು. ಕಾಂಗ್ರೆಸ್ಸಿನ ಸಂಯುಕ್ತ ಪಾಟೀಲ್ ಪಾರ್ಲಿಮೆಂಟಿನಲ್ಲಿ ನಿಮ್ಮ ಧ್ವನಿ ಆಗಿರ್ತಾರೆ. ಆದ್ದರಿಂದ ಗೆಲ್ಲಿಸಿ ಕಳುಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕಳೆದ 20 ವರ್ಷ ನಿಮ್ಮ ಪರವಾಗಿ ಒಂದೂ ಮಾತಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಈ ಬಾರಿ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಸಂಯುಕ್ತ ಪಾರ್ಲಿಮೆಂಟಿನಲ್ಲಿ ಬಾಗಲಕೋಟೆ ಜನರ ಧ್ವನಿ ಆಗಿರ್ತಾರೆ, ಕರ್ನಾಟಕದ ಜನರ ಧ್ವನಿ ಆಗಿರ್ತಾರೆ ಎಂದರು.
ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ ಎಂದು ಸಂಸದ ಗದ್ದಿಗೌಡರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೋರು ಧ್ವನಿಯಲ್ಲಿ ಬಹಿರಂಗವಾಗಿ ಘರ್ಜಿಸಿದರು.
ದೇಶದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಯವರಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಬಿಜೆಪಿಯವರು ಹತಾಶರಾಗಿ ಬೇಕಾ ಬಿಟ್ಟಿ ಮಾತನಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎನ್ನುವ ಸುಳ್ಳನ್ನು ಹೇಳುವ ಮೂಲಕ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದರು.
ಮೋದಿ ಮೀಸಲಾತಿ ವಿಚಾರದಲ್ಲೂ ಸುಳ್ಳು ಹೇಳ್ತಿದಾರೆ. ಇವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಈ ಮಟ್ಟದ ಸುಳ್ಳು ಹೇಳುವ ಇವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು.
ಮಂಡಲ್ ವರದಿ ವಿರೋಧಿಸಿ ಹಿಂದುಳಿದವರ ಹಾದಿ ತಪ್ಪಿಸಿ ಆತ್ಮಹತ್ಯೆಗೆ ದೂಡಿದ್ದು ಇದೇ ಬಿಜೆಪಿ. ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದ ರಾಮಾಜೋಯಿಸ್ ಬಿಜೆಪಿಯವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ವಿರೋಧಿಯಾಗಿರುವ ಇವರು ಈಗ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟಿ ಏಕ ಕಾಲದಲ್ಲಿ ಎರಡೂ ಸಮುದಾಯಗಳ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇಕಾರರಿಗೆ ಸಾಲ ಮನ್ನಾ ಮಾಡಿದೆ, ಮಗ್ಗಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ . ಇನ್ನೂ ಹಲವು ಅನುಕೂಲ ನೇಕಾರರಿಗೆ ಮಾಡಿದ್ದು ನಾವೇ. ಅಭಿವೃದ್ದಿ ಕೆಲಸ ಮಾಡಿದವರಿಗೆ ಶಕ್ತಿ ತುಂಬಿ.
ಸಚಿವರಾದ ಆರ್. ಬಿ. ತಿಮ್ಮಾಪುರ, ಶಿವಾನಂದ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಜಿ. ನಂಜಯ್ಯನಮಠ, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ವಿನಯ್ ಕುಲಕರ್ಣಿ, ಎಸ್.ಆರ್.ಪಾಟೀಲ್, ಶಾಸಕರುಗಳಾದ ಉಮಾಶ್ರೀ, ವಿಜಯಾನಂದ ಕಾಶಪ್ಪನವರ, ಜೆ.ಟಿ.ಪಾಟೀಲ, ಸುನಿತ ಪಾಟೀಲ, ಅಜಯಕುಮಾರ ಸರನಾಯಕ, ಭೀಮಸೇನ ಚಿಮ್ಮನಕಟ್ಟಿ, ಬಿ.ಆರ್.ಯಾವಗಲ್, ಎಐಸಿಸಿ ಉಸ್ತುವಾರಿ ಸಯ್ಯದ್, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.