ಶುದ್ಧ ಕುಡಿವ ನೀರಿನ ಘಟಕ ಬದಲಾವಣೆ ಮಾಡಿ
•ಕ್ಷೇತ್ರದಲ್ಲಿ ಘಟಕ ಕೆಟ್ಟು ಹೋಗಿವೆ•ಶೇ. 70 ನೀರು ಪೋಲು•ಬಿಸಿಎಂ ಅಧಿಕಾರಿ ತರಾಟೆಗೆ
Team Udayavani, Jun 11, 2019, 7:23 AM IST
ಬಾಗಲಕೋಟೆ: ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿದರು.
ಬಾಗಲಕೋಟೆ: ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕ ಸ್ಥಾಪಿಸಲಾಗಿದೆ. ಆದರೆ, ಯಾವ ಘಟಕವೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲವೂ ಕಳಪೆ ಮಟ್ಟದ ಘಟಕಗಳಾಗಿವೆ. ಅವುಗಳನ್ನು ಸಂಪೂರ್ಣ ಬದಲಾಯಿಸಬೇಕಿದೆ ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್‌ಒ ಘಟಕಗಳಿಂದ ಶೇ.70ರಷ್ಟು ನೀರು ಪೋಲಾಗುತ್ತದೆ. ಆ ನೀರು ಪುನಃ ಯಾವುದಕ್ಕೂ ಬಳಸಲು ಬರಲ್ಲ. ಅಲ್ಲದೇ ಕ್ಷೇತ್ರದಲ್ಲಿ ಸ್ಥಾಪಿಸಿದ ಎಲ್ಲ ಘಟಕ ಕೆಟ್ಟು ನಿಂತಿವೆ. ಘಟಕಗಳು, ಒಂದೂ ಸುಸ್ಥಿತಿಯಲ್ಲಿಲ್ಲ. ಈ ಘಟಕಗಳಿಂದ ನೀರು ಪೋಲಾಗುತ್ತಿದೆ. ಅತ್ತ ಜನರಿಗೆ ಶುದ್ಧ ನೀರೂ ಸಿಗುತ್ತಿಲ್ಲ. ಹೀಗಾಗಿ ಅವು ಎಲ್ಲಾ ಕೆಟ್ಟು ಹೋಗಬೇಕು, ಇಲ್ಲವೇ ಬದಲಾಯಿಸಿ, ಉತ್ತಮ ಘಟಕ ಸ್ಥಾಪಿಸಬೇಕು ಎಂದರು.
ನಮ್ಮ ಸಂಘದ ವಿವಿಧ ವಸತಿ ನಿಲಯ, ಮಂಗಲ ಕಾರ್ಯಾಲಯದಲ್ಲಿ ಕೇವಲ 2 ಲಕ್ಷಕ್ಕೆ ಒಂದು ಘಟಕ ಸ್ಥಾಪಿಸಿದ್ದೇವೆ. ಎಲ್ಲವೂ ಸರಿಯಾಗಿ ನಡೆಯುತ್ತಿವೆ. ಆದರೆ, ಸರ್ಕಾರದಿಂದ 7 ಲಕ್ಷಕ್ಕೆ ಒಂದೊಂದು ಘಟಕ ಸ್ಥಾಪಿಸಿದ್ದಾರೆ. ಒಂದು ದುರಸ್ಥಿ ಮಾಡಿದರೆ, ಮತ್ತೂಂದು ಕೆಟ್ಟಿರುತ್ತದೆ. ಎಲ್ಲವೂ ಕಳಪೆ ಗುಣಮಟ್ಟದ ಸಾಮಗ್ರಿ ಹಾಕಿದ್ದಾರೆ ಎಂದು ಆರೋಪಿಸಿದರು.
ಐಹೊಳೆಗೆ ಕೃಷ್ಣೆಯ ನೀರು: ಐಹೊಳೆ ಐತಿಹಾಸಿಕ ಗ್ರಾಮವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಿದೆ. ಮಲಪ್ರಭಾ ನದಿ ನೀರನ್ನೇ ಅವಲಂಬಿಸಿ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಮಾಡಿದ್ದು, ನದಿ ಖಾಲಿಯಾದಾಗ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ಆಲಮಟ್ಟಿ ಜಲಾಶಯದಿಂದ ಈಗಾಗಲೇ ಇರುವ ಗುಳೇದಗುಡ್ಡ ಕುಡಿಯುವ ನೀರು ಪೂರೈಕೆ ಯೋಜನೆ ಪೈಪ್‌ಲೈನ್‌ದಿಂದ ಐಹೊಳೆಗೆ ನೀರು ಕೊಡಲು ಸಾಧ್ಯವೇ ಎಂಬುದು ಪರಿಶೀಲಿಸಿ, ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗೆ ಸೂಚಿಸಿದರು.
ರೊಕ್ಕಾ ಕೊಟ್ರೂ ನೀರು ಸಿಗಲ್ಲ: ಬಾಗಲಕೋಟೆ ನಗರದಲ್ಲಿ ನಿತ್ಯವೂ ಬಹಳಷ್ಟು ನೀರು ಪೋಲಾಗುತ್ತದೆ. ಹಳ್ಳಿಗಳಲ್ಲೂ ನೀರು ಪೋಲು ಮಾಡಬೇಡಿ. ರೊಕ್ಕಾ ಕೊಟ್ರೆ ಮುಂದೆ ಎಲ್ಲವೂ ಸಿಗಬಹುದು. ಆದರೆ, ನೀರು ಸಿಗದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ ಸರಿಯಾಗಿ ನಡೆಯುವಂತೆ ಮಾಡಿ, ಮನೆ ಮನೆಗೆ ನೀರು ಕೊಡಬೇಕು. ನೀರಿನ ಸಮಸ್ಯೆ ಎಂದಾಗ ಕೇವಲ ಕೊಳವೆ ಬಾವಿ ಕೊರೆಯುವುದು ಮಾಡಬೇಡಿ ಎಂದು ತಿಳಿಸಿದರು.
ತಾಲೂಕಿನ ಶಿಗಿಕೇರಿ, ಬೆನಕಟ್ಟಿ, ಬೈರಮಟ್ಟಿ, ಭಗವತಿಯಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಹೊಸ ಕೊಳವೆ ಬಾವಿ ಕೊರೆಸಿ, ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ನೀಲಾನಗರ ತಾಂಡಾದಲ್ಲಿ ಹೆಚ್ಚು ಜನಸಂಖ್ಯೆ ಇದ್ದು, ಇಲ್ಲಿಯೂ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿ ಕೊರೆಸಿದರೂ ಇಲ್ಲಿ ನೀರು ದೊರೆಯುತ್ತಿಲ್ಲ. ಹೀಗಾಗಿ ಹೊನ್ನಾಕಟ್ಟಿ ಬಳಿ ಕೊಳವೆ ಬಾವಿ ಕೊರೆಸಿ, ನೀಲಾನಗರಕ್ಕೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಮತಗಿ-ಅಮೀನಗಡ ಹೊಸ ವಸತಿ ನಿಲಯ: ಹುನಗುಂದ ತಾಲೂಕು ವ್ಯಾಪ್ತಿಯ ಕಮತಗಿ ಅಥವಾ ಅಮೀನಗಡದಲ್ಲಿ ಮೆಟ್ರಿಕ್ ನಂತರದ ಹೊಸ ವಸತಿ ನಿಲಯ ಸ್ಥಾಪನೆಗೆ ತಕ್ಷಣ ಪ್ರಸ್ತಾವನೆ ಕೊಡಬೇಕು. ವಸತಿ ನಿಲಯ ನಡೆಸಲು ಖಾಸಗಿ ಕಟ್ಟಡ ಇಲ್ಲವೇ ಸರ್ಕಾರದ ಯಾವುದೇ ಕಟ್ಟಡಗಳಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಸಿಎಂ ಅಧಿಕಾರಿಗೆ ನಿರ್ದೇಶನ ನೀಡಿದರು.
ವಿದ್ಯುತ್ ಸಮಸ್ಯೆ ನೀಗಿಸಿ: ಮಳೆ-ಗಾಳಿಗೆ ವಿದ್ಯುತ್ ಕಂಬಗಳು ಬಾಗಿ ನಿಂತಿವೆ. ಅಲ್ಲಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ತಕ್ಷಣ ದುರಸ್ಥಿಗೊಳಿಸಬೇಕು. ನವನಗರದ ಗಿಡಗಳ ಮಧ್ಯೆ ವಿದ್ಯುತ್ ತಂತಿ ಹಾದು ಹೋಗಿದ್ದು, ಅಪಾಯಕಾರಿಯಾಗಿವೆ. ಹೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ, ಗಿಡಗಳ ಮಧ್ಯೆ ಹೋಗಿರುವ ವಿದ್ಯುತ್ ತಂತಿ ಸರಿಪಡಿಸಬೇಕು. ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೂ ರಾತ್ರಿಇಡೀ ಸಿಂಗಲ್ ಫೇಸ್ ವಿದ್ಯುತ್ ಕೊಡಬೇಕು ಎಂದರು.
ಸಾಂಕ್ರಾಮಿಕ ರೋಗ ತಡೆಗೆ ಸೂಚನೆ: ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗ ಹರಡುವುದು ಕಡಿಮೆ. ಈಗ ಮಳೆಗಾಲ ಆರಂಭಗೊಂಡಿದ್ದು, ಕ್ಷೇತ್ರದ ಯಾವುದೇ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇವೆಗೆ ಲಭ್ಯವಿರಬೇಕು. ಕೆಲವು ಆಸ್ಪತ್ರೆಯಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಹೊರಗಿನಿಂದ ತರಲು ಹೇಳುತ್ತಾರೆ ಎಂಬ ಆರೋಪವಿದ್ದು, ಈ ಕುರಿತು ಪರಿಶೀಲಿಸಿ, ಆಸ್ಪತ್ರೆಯಲ್ಲೇ ಔಷಧ ಸಹಿತ ಎಲ್ಲ ಸಾಮಗ್ರಿ ದೊರೆಯಬೇಕು ಎಂದು ತಿಳಿಸಿದರು.
ಅಧಿಕಾರಿಗಳಿಗೆ ನೋಟಿಸ್: ಕೆಡಿಪಿ ಸಭೆಗೆ ಬಾರದ ಹಾಗೂ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ನೀಡಿದ ಬುಕ್‌ಲೆಟ್‌ಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಹಿ ಮಾಡಿ ಕೊಟ್ಟಿಲ್ಲ. ಅಂತಹ ಅಧಿಕಾರಿಗಳಿಗೆ ನೋಟಿಸ್ ಕೊಡಬೇಕು. ಅಲ್ಲದೇ ಸಮಗ್ರ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಬರುವ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿ ಸಮೇತ ಬರಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.