ಕಾಟನ್ ಮಾರ್ಕೆಟ್: ರಣಾಂಗಣವಾದ ನಗರಸಭೆ
ತೀವ್ರ ಗದ್ದಲ-ವಾಗ್ವಾದ ನಡೆದಿದ್ದ ಸಭೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಸೃಷ್ಟಿಯಾಯಿತು.
Team Udayavani, Feb 8, 2022, 6:17 PM IST
ಬಾಗಲಕೋಟೆ: ಇಲ್ಲಿನ ನಗರಸಭೆಯ ಬಹುಕೋಟಿ ಮೊತ್ತದ ಕಾಟನ್ ಮಾರ್ಕೆಟ್ ಆಸ್ತಿಯನ್ನು ಲೀಜ್ ದಾರರಿಗೆ ಮಾರಾಟ ಮಾಡಲು ಸರ್ಕಾರಕ್ಕೆ ಅನುಮತಿ ಕೊಡುವ ಪ್ರಸ್ತಾವನೆ ಕುರಿತು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಕಳೆದ ತಿಂಗಳು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾಟನ್ ಮಾರ್ಕೆಟ್ ಆಸ್ತಿಯನ್ನು ಲೀಜ್ ದಾರರಿಗೆ ಮಾರಾಟ ಮಾಡಲು ನಗರಸಭೆ ಠರಾವು ಕೈಗೊಳ್ಳಲಾಗಿತ್ತು. ಆಗ ಕಾಂಗ್ರೆಸ್‌ನ ಹಾಜಿಸಾಬ ದಂಡಿನ ಸಹಿತ ಕೆಲ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಕುರಿತು ಚರ್ಚೆಯ ವೇಳೆ ಇದೇ ವಿಷಯದ ಕುರಿತು ಠರಾವು ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು
ನಮೂದಿಸಲಾಗಿತ್ತು.
ಈ ವೇಳೆ ಕಾಂಗ್ರೆಸ್‌ನ ಹಾಜಿಸಾಬ ದಂಡಿನ ಮಾತನಾಡಿ, ಕಾಟನ್ ಮಾರ್ಕೆಟ್ ಮಾರಾಟದ ವಿಷಯದಲ್ಲಿ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ, ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಗಿದೆ ಎಂದು ಬರೆಯಲಾಗಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಈ ಆಸ್ತಿ ಮಾರಾಟ ಮಾಡಬೇಕಾದರೆ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ಒತ್ತಾಯಿಸಿದರು.
ದಂಡಿನ ಅವರ ಈ ಮಾತಿನಿಂದ ಕೆರಳಿದ ಶಾಸಕ ಡಾ|ವೀರಣ್ಣ ಚರಂತಿಮಠ, ಕಾಂಗ್ರೆಸ್‌ನವರಿಂದಲೇ ಇಡೀ ಕಾಟನ್ ಮಾರ್ಕೆಟ್ ಹಾಳಾಗಿದೆ. ಸಾವಿರಾರು ಕುಟುಂಬಗಳು ಕೆಲಸ ಕಳೆದುಕೊಂಡಿವೆ. ಬಾಗಲಕೋಟೆಯ ಮಾರುಕಟ್ಟೆಯನ್ನೇ ಬೀದಿಗೆ ತರಲಾಗಿದೆ. ಒಂದೇ ಜಾಗದಲ್ಲಿ 10 ವರ್ಷ ನಿರಂತರವಾಗಿ ವಾಸ ಮಾಡಿದರೆ, ಆ ಜಾಗೆಯನ್ನು ಉಪಯೋಗ ಮಾಡುತ್ತಿದ್ದರೆ ಆಗ ಜಾಗ ಅವರಿಗೆ ನೀಡಬೇಕೆಂಬುದು ಸುಪ್ರೀಂ ಕೋರ್ಟ್ ಆದೇಶ ಇದೆ.
ಆದರೆ, ಹಿಂದಿನ ನಗರಸಭೆ ಪೌರಾಯುಕ್ತರೊಂದಿಗೆ ಕೂಡಿಕೊಂಡು ಕಾಂಗ್ರೆಸ್‌ನವರು ಬಾಗಲಕೋಟೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸಿದ್ದಾರೆ ಎಂದು ಹಾಜಿಸಾಬ ದಂಡಿನ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಹಾಜಿಸಾಬ ದಂಡಿನ ಮತ್ತು ಶಾಸಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಶಾಸಕರು, ಸದಸ್ಯ ದಂಡಿನ ಅವರಿಗೆ ಏರಿದ ಧ್ವನಿಯಲ್ಲಿ ಮಾತನಾಡಿ, ಇಲ್ಲಿ ಜಾಸ್ತಿ ಮಾತನಾಡಬೇಡ ಎಂದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಇನ್ನೋರ್ವ ಹಿರಿಯ ಸದಸ್ಯ ಚನ್ನವೀರ ಅಂಗಡಿ, ನೀವು ಶಾಸಕರು, ನಾವು ನಗರಸಭೆ ಸದಸ್ಯರು. ನಮಗೂ ಗೌರವವಿದೆ.
ಸದಸ್ಯರೆಂದರೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದರು. ಆಗ ಕಾಂಗ್ರೆಸ್ ಸದಸ್ಯರು, ಶಾಸಕರು ಹಾಗೂ ಬಿಜೆಪಿ ಸದಸ್ಯರ ಮಧ್ಯ ವಾಗ್ವಾದ ನಡೆಯಿತು. ತೀವ್ರ ವಾಗ್ವಾದ ನಡೆಯುತ್ತಿರುವಾಗ ವಿಧಾನಪರಿಷತ್ ಸದಸ್ಯರಾಗಿ, ಮೊದಲ ಬಾರಿಗೆ ನಗರಸಭೆ ಸಾಮಾನ್ಯ ಸಭೆಗೆ ಹಿರಿಯ ಮುಖಂಡ ಪಿ.ಎಚ್. ಪೂಜಾರ ಆಗಮಿಸಿದರು. ತೀವ್ರ ಗದ್ದಲ-ವಾಗ್ವಾದ ನಡೆದಿದ್ದ ಸಭೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಸೃಷ್ಟಿಯಾಯಿತು. ಬಳಿಕ ಈ ಗಲಾಟೆಗೆ ಏನು ಕಾರಣ ಎಂದು ಪಿ.ಎಚ್. ಪೂಜಾರ ಅವರು ಕೆಲ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
12.41 ಲಕ್ಷ ಉಳಿತಾಯ ಬಜೆಟ್: ಬಳಿಕ ನಗರಸಭೆಯು 2022-23 ನೇ ಸಾಲಿಗೆ 12.41 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅವರು, 85.03 ಕೋಟಿ ರೂ. ನಿರೀಕ್ಷಿತ ಆದಾಯಗಳು, 84.91 ಕೋಟಿ ರೂ. ನಿರೀಕ್ಷಿತ ವೆಚ್ಚಗಳೊಂದಿಗೆ ಈ ಬಾರಿ ನಗರಸಭೆ 12.41 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ಇದಕ್ಕೆ ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ನೂತನ ಸಭಾಪತಿ ಅಂಬಾಜಿ ಜೋಶಿ, ನಗರಸಭೆ ಆಯುಕ್ತ ವಿ. ಮುನಿಶಾಮಪ್ಪ, ಸದಸ್ಯರಾದ ವಿ.ವಿ. ಶಿರಗಣ್ಣವರ, ಯಲ್ಲಪ್ಪ ನಾರಾಯಣಿ ಮುಂತಾದವರಿದ್ದರು.
ಸಭಾಪತಿಯಾಗಿ ಅಂಬಾಜಿ ಆಯ್ಕೆ
ನಗರಸಭೆಗೆ ನೂತನ ಸಭಾಪತಿಯಾಗಿ ಸದಸ್ಯ ಅಂಬಾಜಿ ಜೋಶಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯ ಯಲ್ಲಪ್ಪ ನಾರಾಯಣಿ ಅವರು ಸದಸ್ಯ ಅಂಬಾಜಿ ಜೋಶಿ ಅವರ ಹೆಸರು ಸೂಚಿಸಿದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.