ಜಮಖಂಡಿ ತಳಮಳ; ಬಾಗಲಕೋಟೆ ನಿರಾಳ!
ನಗರ-ನವನಗರ ಸಂಚಾರ ಬಂದ್
Team Udayavani, May 1, 2020, 4:30 PM IST
ಬಾಗಲಕೋಟೆ: ಕೋವಿಡ್ 19 ಮಹಾಮಾರಿ ಜಿಲ್ಲೆಯ ಮೂರು ಪ್ರಮುಖ ನಗರಗಳನ್ನು ಕೆಂಪುವಲಯಕ್ಕೆ ತಳ್ಳಿದೆ. ಬಾಗಲಕೋಟೆ ನಗರದಲ್ಲಿ ಸದ್ಯ ಒಂದಷ್ಟು ನಿರಾಳರಾಗಿದ್ದು, ಜಮಖಂಡಿಯಲ್ಲಿ ತಳಮಳ ಹೆಚ್ಚುತ್ತಲೇ ಇದೆ.
ಹೌದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 29 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಇನ್ನು ಆರು ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 22 ಜನರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14 ದಿನಗಳ ಚಿಕಿತ್ಸೆ ಅವಧಿ ಮತ್ತೂಬ್ಬ ವ್ಯಕ್ತಿಗೆ ಪೂರ್ಣಗೊಂಡಿದ್ದು, ಅವರ ಗಂಟಲು ದ್ರವವನ್ನು ಮತ್ತೂಮ್ಮೆ ತಪಾಸಣೆಗೆ ಕಳುಹಿಸಲಾಗಿದೆ.
ಪ್ರಮುಖ ನಗರಗಳೇ ಸ್ತಬ್ಧ: ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರ, ಪಟವರ್ಧನ ಮಹಾರಾಜರ ಸಂಸ್ಥಾನ ಕೇಂದ್ರವಾಗಿದ್ದ ಜಮಖಂಡಿ ಹಾಗೂ ಸಕ್ಕರೆ ನಾಡು ಎಂದೇ ಕರೆಸಿಕೊಳ್ಳುವ ಮುಧೋಳ ತಾಲೂಕು, ಕೋವಿಡ್ 19 ವೈರಸ್ ವಿಷಯದಲ್ಲಿ ಕೆಂಪು ವಲಯಕ್ಕೆ ಸೇರಿವೆ.
ಬಾಗಲಕೋಟೆಯಲ್ಲಿ 13, ಮುಧೋಳದಲ್ಲಿ 7 ಹಾಗೂ ಜಮಖಂಡಿಯಲ್ಲಿ 9 ಜನರಿಗೆ ಸೋಂಕು ತಗುಲಿದೆ. ಸೋಂಕು ತಗುಲಿದ ವ್ಯಕ್ತಿಗಳು ಸದ್ಯ ಗುಣಮುಖರಾಗುತ್ತಿದ್ದು, ಬಹುತೇಕರು ಚೇತರಿಸಿಕೊಂಡು ಬಿಡುಗಡೆಗೊಳ್ಳುವ ವಿಶ್ವಾಸ ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಆದರೆ, ವ್ಯಾಪಾರ- ವಹಿವಾಟು ಸೇರಿದಂತೆ ಜಿಲ್ಲೆಯ ವಾಣಿಜ್ಯ ಕೇಂದ್ರಗಳಂತಿರುವ ಬಾಗಲಕೋಟೆ, ಮುಧೋಳ ಹಾಗೂ ಜಮಖಂಡಿ ನಗರ ಸಂಪೂರ್ಣ ಸ್ತಬ್ಧವಾಗಿವೆ.
ಬಂದಿದ್ದೇ ನಿಗೂಢ: ಏ. 2ರಂದು ಬಾಗಲಕೋಟೆ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಸ್, ತನ್ನ ಆಗಮನವನ್ನು ನಿಗೂಢವಾಗಿಯೇ ಇಟ್ಟಿತ್ತು. ಮೊದಲ ಬಾರಿಗೆ ಸೋಂಕು ತಗುಲಿ ಮೃತಪಟ್ಟ ವೃದ್ಧನಿಗೆ ಪಿ-125 ಆತನ ಸಹೋದರನಿಂದ ತಗುಲಿರುವ ಕುರಿತು ಜಿಲ್ಲಾಡಳಿತ ಶಂಕೆ ವ್ಯಕ್ತಪಡಿಸಿದೆ. ಇನ್ನು ಮುಧೋಳದಲ್ಲಿ ಪ್ರಥಮ ಬಾರಿಗೆ ಕಂಡು ಬಂದ ಸೋಂಕಿತನಿಗೂ ಹೇಗೆ ಬಂತು ಎಂಬುದು ನಿಖರವಾಗಿ ಪತ್ತೆಯಾಗಿಲ್ಲ. ಅದು ತನಿಖೆಯ ಹಂತದಲ್ಲಿದೆ. ಮುಧೋಳದ ಒಂದು ಪ್ರಕರಣದಿಂದ ಮುಧೋಳದಲ್ಲಿ 7 ಹಾಗೂ ಜಮಖಂಡಿಯಲ್ಲಿ 9 ಜನರಿಗೆ ವಿಸ್ತರಣೆಯಾಗಿದೆ. ಇನ್ನು ಬಾಗಲಕೋಟೆಯಲ್ಲಿ ಮೊದಲು ಒಬ್ಬರಲ್ಲಿ ಕಂಡು ಬಂದಿದ್ದ ಈ ಸೋಂಕು ಬರೋಬ್ಬರಿ 13 ಜನರಿಗೆ ಅಂಟಿಕೊಂಡಿತ್ತು. ಹೀಗಾಗಿ ಜನರು, ಭೀತಿಯಿಂದ ಮನೆಯಲ್ಲೇ ಇದ್ದಾರೆ.
ನಗರ-ನವನಗರ ಸಂಚಾರ ಬಂದ್: ಹಳೆಯ ನಗರದ 14 ವಾರ್ಡ್‌ಗಳು ನಿರ್ಬಂಧಿ ತ ಪ್ರದೇಶಗಳಾಗಿದ್ದು, ಅಲ್ಲಿಂದ ವಿದ್ಯಾಗಿರಿ ಹಾಗೂ ನವನಗರಕ್ಕೆ ಯಾರೂ ಬರುವಂತಿಲ್ಲ, ಅಲ್ಲಿಗೆ ಹೋಗುವಂತಿಲ್ಲ. ಎರಡೂ ಪ್ರಮುಖ ನಗರ ಪ್ರದೇಶಗಳಿಗೆ ಸಂಪರ್ಕ ನಿಷೇಧಿಸಿ ದಂಡಾಧಿಕಾರಿ ಜಿ.ಎಸ್. ಹಿರೇಮಠ ಆದೇಶಿಸಿದ್ದಾರೆ. ಅದರಲ್ಲೂ ನಗರದಿಂದ ನವನಗರ- ವಿದ್ಯಾಗಿರಿಗೆ ಬೈಕ್ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.