ಕೋವಿಡ್ ಆತಂಕ; 1.68 ಲಕ್ಷ ಜನ ಹೈ ರಿಸ್ಕ್!
5,205 ಜನರಿಗೆ ಜ್ವರ-ಕೆಮ್ಮು-ನೆಗಡಿ
Team Udayavani, Jul 5, 2020, 3:33 PM IST
ಬಾಗಲಕೋಟೆ: ದಿನೇ ದಿನೇ ಭೀತಿ ಹುಟ್ಟಿಸುತ್ತಲೇ ಇರುವ ಕೋವಿಡ್ ಸೋಂಕು ಜಿಲ್ಲೆಯಲ್ಲೂ ತನ್ನ ಅಟ್ಟಹಾಸ ಮುಂದುವರಿಸಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ಮತ್ತಷ್ಟು ಭೀತಿಯ ಅಂಶಗಳು ಹೊರ ಬಿದ್ದಿದ್ದು, ಜನರು ಎಚ್ಚೆತ್ತುಕೊಳ್ಳದಿದ್ದರೆ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಎದುರಾಗಿದೆ.
ಮುಂಗಾರು ಮಳೆಗಾಲ ಆರಂಭದ ದಿನಗಳಾಗಿದ್ದರಿಂದ ಈ ಸಂದರ್ಭದಲ್ಲಿ ಕೆಮ್ಮು-ನೆಗಡಿ-ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಬಿಪಿ, ಶುಗರ್ ಇದ್ದವರು ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಜ್ವರ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇಡೀ ಜಿಲ್ಲೆಯ ಅಷ್ಟೂ ಕುಟುಂಬಗಳ ಸಮೀಕ್ಷೆ ನಡೆಸಿ ಯಾರಿಗೆ ಯಾವ ರೋಗದ ಲಕ್ಷಣಗಳಿವೆ. ಅವರಿಗೆ ಯಾವ ರೀತಿ ಆರೋಗ್ಯ ಕಾಳಜಿ ವಹಿಸಬೇಕು ಎಂಬುದರ ಕುರಿತು ಸಲಹೆ ನೀಡಲು ಜಿಲ್ಲಾಡಳಿತ ನಡೆಸಿದ ಸಮೀಕ್ಷೆ ನೆರವಾಗಲಿದೆ.
ಜಿಲ್ಲೆಯಾದ್ಯಂತ ಕಳೆದ ಒಂದೂವರೆ ತಿಂಗಳಿಂದ ಮತಗಟ್ಟೆವಾರು ಬಿಎಲ್‌ಒಗಳ ನೇತೃತ್ವದಲ್ಲಿ ಜಿಲ್ಲೆಯ 9 ತಾಲೂಕು ವ್ಯಾಪ್ತಿಯಲ್ಲಿ 3,61,729 ಕುಟುಂಬಗಳಿದ್ದು, ಅದರಲ್ಲಿ 3,50,956 ಕುಟುಂಬಗಳ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 1,68,909 ಜನರು ಹೈ ರಿಸ್ಕ್ ನಲ್ಲಿದ್ದಾರೆ. ಅವರ ಮನೆ ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ರೋಗಗಳ ಮಾಹಿತಿ ಎಲ್ಲವನ್ನೂ ಪಡೆಯಲಾಗಿದ್ದು, ಅತಿ ಹೈರಿಸ್ಕ್ ಇರುವ ಜನರ ಪಟ್ಟಿ ಮಾಡಿಕೊಂಡು ನಿಯಮಿತವಾಗಿ ದೂರವಾಣಿ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಕೆಲಸ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡುತ್ತಿದೆ. ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ಅಳವಡಿಸಲಾಗಿದೆ.
ಮಾರುಕಟ್ಟೆ-ಸಂತೆಯಲ್ಲಿ ರಷ್: ಮಾ.22ರಿಂದ ಮೇ 8ರವರೆಗೆ ಕಠಿಣ ಲಾಕ್‌ಡೌನ್ ವಿಧಿಸಿದ ವೇಳೆ ಹಲವರು ಹಲವು ರೀತಿಯ ಸಮಸ್ಯೆ ಅನುಭವಿಸಿದ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ತೊಂದರೆ ಮುಂದುವರಿಸುವುದು ಬೇಡ ಎಂಬ ಕಾರಣದಿಂದ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಲಾಕ್ ಡೌನ್ ಸಡಿಲಿಕೆವರೆಗೂ ಜಿಲ್ಲೆಯಲ್ಲಿ 91 ಜನರಿಗೆ ಮಾತ್ರ ಸೋಂಕು ತಗುಲಿತ್ತು. ಏ.2ರಂದು ಜಿಲ್ಲೆಯಲ್ಲಿ ಮೊದಲ ಸೋಂಕಿತ ಪತ್ತೆಯಾಗಿದ್ದು, ಮೇ 8ರವರೆಗೆ ಸೋಂಕಿತರ ಸಂಖ್ಯೆ ಕೇವಲ 91ರವರೆಗೆ ಇತ್ತು. ಆದರೆ, ಮೇ 8ರಿಂದ ಜು.4ರ ತನಕ ಸೋಂಕಿತರ ಸಂಖ್ಯೆ ಬರೋಬ್ಬರಿ 226ಕ್ಕೆ ಏರಿಕೆಯಾಗಿವೆ.
ಈಗಲಾದರೂ ಎಚ್ಚೆತ್ತುಕೊಳ್ಳಿ: ಕೆಮ್ಮು-ನೆಗಡಿ, ಜ್ವರ, ಉಸಿರಾಟದ ತೊಂದರೆಯಂತಹ ಸಾಮಾನ್ಯ ರೋಗದ ಲಕ್ಷಣ ಇರುವ ಜನರಿಗೂ ಕೊರೊನಾ ಕಾಣಿಸಿಕೊಂಡಿದೆ. ಈ ವರೆಗೆ ಆರಂಭದಲ್ಲಿ ಸೋಂಕಿತರ ಸಂಪರ್ಕ, ಮಹಾರಾಷ್ಟ್ರ ಸಹಿತ ಬೇರೆ ರಾಜ್ಯದಿಂದ ಬಂದವರಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು. ಆದರೆ ಇದೀಗ ಎಲ್ಲೂ ಪ್ರಯಾಣ ಮಾಡದ, ರೋಗದ ಲಕ್ಷಣವೂ ಇಲ್ಲದ ಹಲವು ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಅಂತಹ ವ್ಯಕ್ತಿಗಳಿಗೆ ಈ ಸೋಂಕು ಹೇಗೆ ಬಂತು ಎಂಬುದನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದೆ. ಸೋಂಕು ಕಾಣಿಸಿಕೊಂಡ ವ್ಯಕ್ತಿಗಳೂ ತಮ್ಮ ಪ್ರಯಾಣದ ಹಿನ್ನೆಲೆ ಸರಿಯಾಗಿ ಬಿಟ್ಟುಕೊಡುತ್ತಿಲ್ಲ. ಇದು ಕೋವಿಡ್ ನಿಯಂತ್ರಣಕ್ಕೆ ಆಯಾ ಪ್ರದೇಶ ಗುರುತಿಸಿ ಕ್ರಮ ಕೈಗೊಳ್ಳಲು ಹಿನ್ನಡೆ ಆಗುತ್ತಿದೆ. ಜನರು, ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ತಮ್ಮ ದೈನಂದಿನ ಕಾರ್ಯಗಳಲ್ಲಿ ಒಂದು ಎಂದು ಭಾವಿಸಲೇಬೇಕಿದೆ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ 3,50,956 ಕುಟುಂಬಗಳ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗಿದೆ. ಅದರಲ್ಲಿ 1.68 ಲಕ್ಷ ಜನರು ಹೈ ರಿಸ್ಕ್ನಲ್ಲಿ ಇರುವುದನ್ನು ಗುರುತಿಸಿದ್ದು, ಅವರಿಗೆ ಆರೋಗ್ಯ ತಿಳವಳಿಕೆ ನೀಡಲಾಗಿದೆ. 5,205 ಜನರಿಗೆ ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿದ್ದು, ಅವರಿಗೂ ಅಗತ್ಯ ತಿಳಿವಳಿಕೆ ನೀಡಿದ್ದೇವೆ. ಜನರು ಕೋವಿಡ್ ನಿಯಂತ್ರಣಕ್ಕೆ ಸ್ವಯಂ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿಕೊಳ್ಳಬೇಕು. ಡಾ| ಅನಂತ ದೇಸಾಯಿ, ಡಿಎಚ್‌ಒ, ಬಾಲಕೋಟೆ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.