ಜಿಲ್ಲೆಯಲ್ಲೂ ಕೋವಿಡ್ ಪರೀಕ್ಷೆ ಲ್ಯಾಬ್
50 ಲಕ್ಷ ಮೊತ್ತ ದ ಯಂತ್ರಗಳು ಆಗಮನ
Team Udayavani, May 13, 2020, 10:27 AM IST
ಬಾಗಲಕೋಟೆ: ಕೋವಿಡ್ ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಯಾನ್ಸ್ ಹಾಗೂ ಖಾಸಗಿ ಲ್ಯಾಬ್‌ಗಳನ್ನೇ ಆಶ್ರಯಿಸಿದ್ದ ಬಾಗಲಕೋಟೆ ಜಿಲ್ಲೆ, ಇನ್ನೊಂದು ವಾರದಲ್ಲಿ ಸ್ಥಳೀಯವಾಗಿಯೇ ಪರೀಕ್ಷೆ ನಡೆಯಲಿದೆ.
ಹೌದು, ಜಿಲ್ಲೆಗೆ ಏ. 3ರಂದು ಮೊದಲ ಕೋವಿಡ್ ಸೋಂಕು ಪ್ರಕರಣ ಪತ್ತೆಯಾದಾಗಿನಿಂದಲೂ ಜಿಲ್ಲೆಯಲ್ಲೇ ಲ್ಯಾಬ್ ಆರಂಭಿಸಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಇದಕ್ಕಾಗಿ ಬಾಗಲಕೋಟೆಯ ಶಾಸಕ ಡಾ|ವೀರಣ್ಣ ಚರಂತಿಮಠ, ತಮ್ಮ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲು ಪ್ರಯತ್ನಿಸಿದ್ದರು. ಆದರೆ, ಖಾಸಗಿಯಾಗಿ ಲ್ಯಾಬ್ ಆರಂಭಿಸುವ ಪ್ರಕ್ರಿಯೆಗೆ ದೆಹಲಿ ಮಟ್ಟದಲ್ಲೂ ಪರವಾನಗಿ ಸಹಿತ ವಿವಿಧ ಕಾರ್ಯಕ್ಕೆ ಬಹಳಷ್ಟು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ರಾಜ್ಯ ಸರ್ಕಾರ, ಬಾಗಲಕೋಟೆಗೆ ಕೋವಿಡ್ ಪರೀಕ್ಷೆ ಲ್ಯಾಬ್ ಮಂಜೂರು ಮಾಡಿದೆ.
ಜಿಲ್ಲಾಸ್ಪತ್ರೆಗೆ ಬಂದ ಯಂತ್ರಗಳು: ಕೋವಿಡ್ ಪರೀಕ್ಷೆಗೆ ಬಳಸುವ ಟ್ಯುವೆಂಟ್ ಎಂಬ ಎರಡು ವೈದ್ಯಕೀಯ ಯಂತ್ರಗಳು ಮಂಗಳವಾರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಬಂದಿವೆ. ಎಂಜಿನಿಯರ್‌ಗಳು ಆ ಯಂತ್ರಗಳ ಅಳವಡಿಕೆಯೂ ಆರಂಭಿಸಿದ್ದಾರೆ. ಎರಡು ದಿನದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಈ ಲ್ಯಾಬ್ ಗಾಗಿ ನಿಯೋಜನೆಗೊಳ್ಳುವ ವೈದ್ಯ-ನರ್ಸ್ ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ನಂತರ ಐಸಿಎಂಆರ್‌ನಿಂದ ಸರ್ಕಾರವೇ ಪರವಾನಗಿ ಪಡೆದು, ಬಾಗಲಕೋಟೆಯಲ್ಲಿ ಅಧಿಕೃತವಾಗಿ ಲ್ಯಾಬ್ ಆರಂಭಿಸಲು ಅನುಮತಿ ನೀಡಲಿದೆ.
ಈ ಎಲ್ಲ ಪ್ರಕ್ರಿಯೆಗಳೂ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇವೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಮೂರು ದಿನ ಕಾಯುವ ಸ್ಥಿತಿ ಬರಲ್ಲ: ಬಾಗಲಕೋಟೆ ಜಿಲ್ಲೆಯಲ್ಲಿ ಈ ವರೆಗೆ 68 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿವೆ. ಒಬ್ಬ ವ್ಯಕ್ತಿಯ ಗಂಟಲು ದ್ರವ ಮಾದರಿ ಪಡೆದು, ಅದನ್ನು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೆಕ್ಷಣ ವಿಭಾಗದ ಆ್ಯಂಬ್ಯುಲೆನ್ಸ್ ಮಾದರಿ ವಿಶೇಷ ವಾಹನದಲ್ಲಿ ಬೆಂಗಳೂರಿಗೆ ಕೊಟ್ಟು ಕಳುಹಿಸಲಾಗುತ್ತಿತ್ತು. ಅಲ್ಲಿ ಪರೀಕ್ಷೆ ನಡೆಸಿ, ಜಿಲ್ಲಾಡಳಿತ ವರದಿ ಕೈ ಸೇರಲು ಮೂರು ದಿನ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ, ಇನ್ನು ಮುಂದೆ ಸ್ಥಳೀಯವಾಗಿಯೇ ನೆಗೆಟಿವ್-ಪಾಜಿಟಿವ್ ವರದಿ ಜಿಲ್ಲಾಡಳಿತದ ಕೈ ಸೇರಲಿದೆ.
ಮುಂಜಾಗ್ರತೆಗೂ ಅನುಕೂಲ: ಕೋವಿಡ್ ಮಹಾಮಾರಿ ವಿಷಯದಲ್ಲಿ ಎಷ್ಟೇ ಮುಂಜಾಗ್ರತೆ ಕೈಗೊಂಡರೂ ಕೆಲವರಿಗೆ 14 ದಿನಗಳ ಬಳಿಕ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರ ಒಮ್ಮೆ ವರದಿ ನೆಗೆಟಿವ್ ಬಂದರೂ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆ ಅವಧಿಯಲ್ಲಿ ಸಂಪರ್ಕಿತರಿಗೆ ಪಾಟಿಜಿವ್ ಬಂದ ಉದಾಹರಣೆ ಬಹಳಷ್ಟಿವೆ. ಹೀಗಾಗಿ ಜಿಲ್ಲಾಡಳಿತ ಈಗ ಹೊರ ರಾಜ್ಯಗಳಿಂದ ಬಂದವರನ್ನು ಸ್ವತಃ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡುತ್ತಿದೆ. ಶಂಕೆಯ ಲಕ್ಷಣ ಕಂಡು ಬಂದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲೇ ಲ್ಯಾಬ್ ಆರಂಭಗೊಂಡರೆ, ಹೊರ ರಾಜ್ಯ, ಹೊರ ದೇಶದಿಂದ ಯಾರೇ ಬಂದರೂ ಅವರಿಗೆ ತಕ್ಷಣ ಕೊರೊನಾ ಪರೀಕ್ಷೆ ನಡೆಸಲು ಅವಕಾಶವಾಗಲಿದೆ ಎಂಬುದು ಆರೋಗ್ಯ ಇಲಾಖೆಯ ಆಶಯ.
4 ಸಾವಿರ ಜನರ ಪರೀಕ್ಷೆ: ಜಿಲ್ಲೆಯಲ್ಲಿ ಮಾರ್ಚ್ 31ರಿಂದ ಮಂಗಳವಾರದ ವರೆಗೆ ಒಟ್ಟು 4395 ಜನರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 4247 ನೆಗೆಟಿವ್ ಬಂದಿದ್ದು, 68 ಪಾಜಿಟಿವ್ ಬಂದಿವೆ. 9 ವರದಿ ರಿಜೆಕ್ಟ್ ಆಗಿವೆ. ಜಿಲ್ಲೆಯಲ್ಲಿ ಲ್ಯಾಬ್ ಆರಂಭಗೊಂಡರೆ, ಗಂಟಲು ಮಾದರಿ ಪರೀಕ್ಷೆಗೆ ಅನುಕೂಲವಾಗಲಿದೆ.
ಸರ್ಕಾರ ಜಿಲ್ಲೆಗೆ ಕೋವಿಡ್ ಪರೀಕ್ಷೆ ಲ್ಯಾಬ್ ಮಂಜೂರು ಮಾಡಿದೆ. ಟ್ರಾವೆಂಟ್‌ನ 2 ಯಂತ್ರಗಳು ಬಂದಿವೆ. ತಂತ್ರಜ್ಞರಿಗೆ ತರಬೇತಿ ನೀಡಿದ ಬಳಿಕ ಐಸಿಎಂಆರ್‌ನಿಂದ ಅನುಮತಿ ಪಡೆದು ಲ್ಯಾಬ್ ಆರಂಭಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗೆ ಇನ್ನೊಂದು ವಾರಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ.–ಡಾ| ಅನಂತ ದೇಸಾಯಿ, ಡಿಎಚ್ಒ
ಕೋವಿಡ್ ಟೆಸ್ಟಿಂಗ್ ಲ್ಯಾಬ್ ಯಂತ್ರಗಳು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಬಂದಿವೆ. ಅವುಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಇನ್ನೆರಡು ದಿನದಲ್ಲಿ ಯಂತ್ರಗಳ ಪ್ರಾಯೋಗಿಕ ಚಾಲನೆ ಬಳಿಕ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ. –ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.