ಪ್ರವಾಸೋದ್ಯಮಕ್ಕೆ ಕೊಕ್ಕೆ ಹಾಕಿದ ಕೊರೊನಾ
Team Udayavani, Mar 16, 2020, 1:23 PM IST
ಅಮೀನಗಡ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತವರು ಎಂದೆ ಖ್ಯಾತಿ ಪಡೆದ ರಾಷ್ಟ್ರೀಯ ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ರವಿವಾರದಿಂದ ಒಂದು ವಾರ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆಯತ್ತ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಪ್ರವಾಸ್ಯೋದ್ಯಮ ಆರು ತಿಂಗಳಲ್ಲಿ ಮತ್ತೂಮ್ಮೆ ನಲುಗಿದೆ.
ಪ್ರವಾಹದಿಂದ ನಲುಗಿತ್ತು: ಕಳೆದ ಆಗಸ್ಟ್‌ನಲ್ಲಿ ಮಲಪ್ರಭಾ ನದಿಯ ಭೀಕರ ಪ್ರವಾಹದಿಂದ ಪ್ರವಾಸಿಗರು ಪ್ರವಾಸ ಮೊಟಕುಗೊಳಿಸಿದ್ದರು. ಅಕ್ಟೋಬರ್ ತಿಂಗಳಲ್ಲಿ ಪ್ರವಾಸಿಗರು ಪ್ರವಾಸದತ್ತ ಸ್ವಲ್ಪ ಮುಖ ಮಾಡಿದ್ದರು. ಇದರಿಂದ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಿದೆ ಎನ್ನುವಷ್ಟರಲ್ಲಿ ಇದೀಗ ಕೊರೊನಾ ಭೀತಿ, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬರೆ ಎಳೆದಿದೆ.
ಬಾರದ ಪ್ರವಾಸಿಗರು: ಭಾರತೀಯ ದೇವಾಲಯ ವಾಸ್ತುಶೈಲಿಗಳ ತೊಟ್ಟಿಲು, ಪ್ರಯೋಗಾಲಯ ಎಂದೇ ಹೆಸರಾದ ಐಹೊಳೆ, ರಾಷ್ಟ್ರ ದ ಪ್ರಸಿದ್ದ ಐತಿಹಾಸಿಕ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ದ ಪಾರಂಪರಿಕ ಸ್ಮಾರಕಗಳಾದ ದುರ್ಗಾ ದೇವಾಲಯ, ಲಾಡಖಾನ ದೇವಾಲಯ, ಗೌಡರ ದೇವಾಲಯ, ಹುಚ್ಚಮಲ್ಲಿ ದೇವಾಲಯ, ರಾವಳಫಡಿ ದೇವಾಲಯ, ಗಳಗನಾಥ ದೇವಾಲಯ, ಸೂರ್ಯನಾರಯಣ ಗುಡಿ, ಕೊಂತಿ ಗುಡಿಗಳ ಗುಂಪು ಸೇರಿದಂತೆ 125ಕ್ಕೂ ಹೆಚ್ಚು ದೇವಾಲಯಗಳಿವೆ.
6ನೇ ಶತಮಾನದ ಈ ಕೋಟೆ ಕರ್ನಾಟಕದ ಪ್ರಾಚೀನ ದುರ್ಗವಾಗಿದೆ. ಇಲ್ಲಿ ಬೃಹತ್ ಶಿಲಾಯುಗದ ಕಾಲದಿಂದಲೂ ಪ್ರಾಚ್ಯ ಅವಶೇಷಗಳು ಇಲ್ಲಿ ಕಾಣಸಿಗುತ್ತವೆ. ಇಂತಹ ಅದ್ಭುತ ಪ್ರವಾಸಿ ಕೇಂದ್ರವನ್ನು ವೀಕ್ಷಣೆ ಮಾಡಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈಗ ಮಹಾಮಾರಿ ಕೊರೊನಾ ಭೀತಿಯಿಂದಾಗಿ ದೇಶ-ವಿದೇಶಗಳ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಬೀಕೋ ಎನ್ನುತ್ತಿವೆ ಪ್ರವಾಸಿ ಕೇಂದ್ರ: ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಯ ಪ್ರವಾಸಿ ಕೇಂದ್ರ ಐಹೊಳೆಯ ಪ್ರವಾಸಿ ತಾಣಗಳು ಕೊರೊನಾ ಭೀತಿಯಿಂದಾಗಿ ಪ್ರವಾಸಿಗರಿಲ್ಲದೆ ಪ್ರವಾಸಿ ತಾಣಗಳು ಬೀಕೋ ಎನ್ನುತ್ತಿವೆ. ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಇಲ್ಲದೇ ಭಣಗುಡುತ್ತಿದೆ. ಕಳೆದ ನಾಲ್ಕೈದು ದಿನಗಳ ಅಂಕಿ ಅಂಶ ಗಮನಿಸಿದರೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರತಿವರ್ಷ ವಿದೇಶಿಗರು ಅತಿಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಮಯ ಇದಾಗಿದ್ದರೂ, ಕೊರೊನಾ ಭೀತಿ, ಅದಕ್ಕೆ ಕೊಕ್ಕೆ ಹಾಕಿದೆ. ಮಾ.10ರಿಂದ ಇಲ್ಲಿಯವರೆಗೆ ಕೇವಲ 64 ಜನ ವಿದೇಶ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಪ್ರವಾಸಿಗರನ್ನು ನೆಚ್ಚಿಕೊಂಡಿದ್ದ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಹಣ್ಣು ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ನಿರಾಶರಾಗಿದ್ದಾರೆ.
ತುರ್ತು ತಪಾಸಣಾ ತಂಡ: ಅಪಾಯಕಾರಿ ಹಾಗೂ ಸಾಂಕ್ರಾಮಿಕ ಕೋವಿಡ್-19 ಹರಡಂತೆ ಐಹೊಳೆ ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ತುರ್ತು ತಪಾಸಣಾ ತಂಡ ನೇಮಕ ಮಾಡಲಾಗಿದೆ. ಆ ತಂಡವೂ ವಿದೇಶ ಪ್ರವಾಸಿಗರನ್ನು ಯಾವ ದೇಶದಿಂದ ಆಗಮಿಸಿದ್ದಾರೆ ಮತ್ತು ಯಾವಾಗ ಆಗಮಿಸಿದ್ದಾರೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದು, ಅವರ ಆರೋಗ್ಯ ತಪಾಸಣೆ ಕೂಡ ಮಾಡಿದೆ. ಇಲ್ಲಿಯವರೆಗೂ ಯಾವುದೇ ರೀತಿ ವೈರಸ್ ಕಂಡು ಬಂದಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಪ್ರವಾಸಿ ತಾಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹುನಗುಂದ ತಾಲೂಕ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ| ಪ್ರಶಾಂತ ತುಂಬಗಿ ಉದಯವಾಣಿಗೆ ತಿಳಿಸಿದ್ದಾರೆ.
ಐಹೊಳೆಯತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. ಪ್ರವಾಸೋದ್ಯಮಕ್ಕೆ ಆರ್ಥಿಕವಾಗಿ ಬಹಳಷ್ಟು ಹಿನ್ನಡೆ ಉಂಟು ಮಾಡಿದೆ. ಇದೆಲ್ಲದರ ಮಧ್ಯೆ ರವಿವಾರದಿಂದ ಮಾ. 22ರವರೆಗೆ ಪ್ರವಾಸಿ ತಾಣಗಳ ಬಾಗಿಲು ಬಂದ್ ಮಾಡಲಾಗಿದೆ.
ಮಾ.10 ರಿಂದ ಇಲ್ಲಿಯವರೆಗೆ ಇಟಲಿ, ಜರ್ಮಿನಿ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶದ 64 ಜನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಿಶೇಷವಾಗಿ ಬಿಸಿಲಿನ ತಾಪಮಾನಕ್ಕೆ ಪ್ರತಿವರ್ಷ ವಿದೇಶ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ವಿದೇಶ ಪ್ರವಾಸಿಗರು ಕಡಿಮೆಯಾಗಿದ್ದಾರೆ ಮತ್ತು ಸ್ಥಳಿಯ ಪ್ರವಾಸಿಗರ ಸಂಖ್ಯೆ ಕೂಡಾ ಕಡಿಮೆಯಾಗಿದೆ. –ಬಿ.ಡಿ. ಮುತ್ತಗಿ, ಭಾರತೀಯ ಪುರಾತತ್ವ ಇಲಾಖೆ ಸಿಬ್ಬಂದಿ
– ಎಚ್.ಎಚ್. ಬೇಪಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.