ನಕಲುಮುಕ್ತ ಪರೀಕ್ಷೆಗೆ ಡಿಸಿ ಸೂಚನೆ
Team Udayavani, Feb 27, 2020, 1:15 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಮಾ. 4ರಿಂದ 23ರವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗಳನ್ನು ಪಾರದರ್ಶಕ ಮತ್ತು ನಕಲುಮುಕ್ತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಪರೀಕ್ಷಾ ಸಿದ್ಧತೆ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 37 ಪರೀಕ್ಷಾ ಕೇಂದ್ರಗಳು ಸ್ಥಾಪಿಸಲಾಗಿದ್ದು, ಒಟ್ಟು 23,185ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 12,089 ಬಾಲಕರು ಮತ್ತು 11,096 ಬಾಲಕಿಯರು, 18,716 ಹೊಸ, 1,353 ಬಾಹ್ಯ ಮತ್ತು 3,116 ಪುನರಾವರ್ತಿತ ಅಭ್ಯರ್ಥಿಗಳು ಇದ್ದಾರೆ ಎಂದು ತಿಳಿಸಿದರು.
ಕಳೆದ ವರ್ಷ 24 ಪುಟಗಳ ಉತ್ತರ ಪತ್ರಿಕೆ ನೀಡಲಾಗುತ್ತಿದ್ದು, ಈ ವರ್ಷ 40 ಪುಟಗಳ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯದಂತೆ ನೋಡಿಕೊಳ್ಳಬೇಕು. ಪ್ರಶ್ನೆಪತ್ರಿಕಾ ಪಾಲಕರನ್ನಾಗಿ ಈಗಾಗಲೇ ಇಲಾಖೆಯಿಂದ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರನ್ನು ಒಳಗೊಂಡ ಅಧಿಕಾರಿಗಳ ತಂಡ ನೇಮಕಮಾಡಲಾಗಿದೆ. ನಿಗದಿಪಡಿಸಿದ ದಿನಾಂಕಗಳವರೆಗೆ ಖಜಾನೆಯಲ್ಲಿ ಠೇವಣಿಸಲಾದ ಪ್ರಶ್ನೆ ಪತ್ರಿಕೆ ಪರೀಕ್ಷಾ ದಿನಗಳಂದು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿತರಣೆ ಮಾಡುವ ಕೆಲಸವಾಗಬೇಕು ಎಂದರು. ಪ್ರಾಂಶುಪಾಲರ ನೇತೃತ್ವದಲ್ಲಿ ತಾಲೂಕಾ ಸ್ವ್ಯಾಡ್ ನೇಮಕ ಮಾಡಿ, ಪ್ರತಿ ತಾಲೂಕು ತಂಡಕ್ಕೆ ಒಬ್ಬ ಚೇರಮನ್ ಹಾಗೂ 3 ಜನ ಉಪನ್ಯಾಸಕರು ಸದಸ್ಯರಾಗಿರುತ್ತಾರೆ. ಈ ತಂಡವು ನಿಗದಿಪಡಿಸಿದ ತಾಲೂಕಗಳ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ದಿನ ಭೇಟಿ ನೀಡಿ ಅಕ್ರಮ ಚಟುವಟಿಕೆ ತಡೆಗಟ್ಟಲು ಕ್ರಮಕೈಗೊಳ್ಳಬೇಕು. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಸಿಬ್ಬಂದಿಗಳಿಗೆ ಆಯಾ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗೆ ಗುರುತಿನ ಪತ್ರ ನೀಡಿ ದುರುಪಯೋಗವಾಗದಂತೆ ಮುಖ್ಯ ಅಧೀಕ್ಷಕರು ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಬಂಡಲ್ ತೆರೆಯುವ ಹಾಗೂ ಉತ್ತರ ಪತ್ರಿಕೆ ಸ್ವೀಕರಿಸುವ ಪ್ರಕ್ರಿಯೆ ಸಿಸಿಟಿವಿ ವೀಕ್ಷಣಾಡಿಯಲ್ಲಿ ನಡೆಸಬೇಕು. ಪರೀಕ್ಷೆ ಆರಂಭದಿಂದ ಕೊನೆಯವರೆಗೆ ಸಿಸಿಟಿವಿ ಯಾವುದೇ ಕಾರಣಕ್ಕೂ ಬಂದ್ ಆಗದಂತೆ ನೋಡಿಕೊಳ್ಳಬೇಕು ಎಂದರು.
ಪರೀಕ್ಷೆ ಪ್ರಾರಂಭವಾಗುವ 15 ನಿಮಿಷ ಮುಂಚಿತವಾಗಿ ಸಹಮುಖ್ಯ ಅಧೀಕ್ಷಕರು, ವಿಶೇಷ ಜಾಗೃತಿ ದಳದ ಸದಸ್ಯರ ಸಮ್ಮುಖದಲ್ಲಿ ಬಾಕ್ಸ್ ತೆಗೆದು ಸೀಲ್ ಮಾಡಲ್ಪಟ್ಟಿರುವ ಲಕೋಟೆಗಳನ್ನು ತೆರೆಯದೇ ಕೊಠಡಿ ಮೇಲ್ವಿಚಾರಕರಿಗೆ ವಿತರಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಫೋನ್, ಇ-ಕ್ಯಾಮರಾ, ಲ್ಯಾಪ್‌ಟಾಪ್ ತರುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಪರೀಕ್ಷಾ ಆರಂಭವಾದ ಅರ್ಧ ಗಂಟೆಯ ನಂತರ ಗೈರು ಹಾಜರಿ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ನೀಡಬೇಕು. ಪರೀಕ್ಷೆ ಮುಗಿದ ತಕ್ಷಣ ಪರೀಕ್ಷಾ ಕೇಂದ್ರದಲ್ಲಿ ಡಿಬಾರ್ ಆದ, ಆಗದಿರುವ ಬಗ್ಗೆ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆಗಳು ಉದ್ಬವವಾದಲ್ಲಿ ಕೂಡಲೇ ಉಪ ನಿರ್ದೇಶಕರನ್ನು ಸಂಪರ್ಕಿಸಬೇಕು. ಪರೀಕ್ಷೆ ವ್ಯವಸ್ಥಿತವಾಗಿ ನಡೆಯುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವುದಾಗಿ ತಿಳಿಸಿದರು. ಅಲ್ಲದೇ ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಝರಾಕ್ಸ್ ಅಂಗಡಿಗಳು ಮುಚ್ಚಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರಿ, ಪರೀಕ್ಷಾ ಸಿದ್ಧತೆ ಬಗ್ಗೆ ಸಭೆಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತರಬೇತಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಬಿರಾದಾರ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
ಬಾಗಲಕೋಟೆ: ಗುಳೇದಗುಡ್ಡಕ್ಕೆ ಎದ್ದೋ ಬಿದ್ದೋ ಬರ್ಬೇಕು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.