ವಿಳಂಬ ಧೋರಣೆ; ಸಿಡಿಪಿಒಗಳಿಗೆ ನೋಟಿಸ್
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಆಹಾರ ಸಾಮಗ್ರಿಗಳ ವಿತರಣೆ ಬಗ್ಗೆ ಪರಿಶೀಲನೆ ನಡೆಸಬೇಕು
Team Udayavani, Jan 14, 2022, 3:51 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ನಡೆದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಲ್ಲಿ ವಿಳಂಬ ದೋರಣೆ ಅನುಸರಿಸಿದ 5 ಜನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 41 ಬಾಲ್ಯವಿವಾವ ನಡೆದ ಪೈಕಿ 32 ಮಾತ್ರ ಪ್ರಕರಣ ದಾಖಲಿಸಲಾಗಿತ್ತು. ಬಾಕಿ ಉಳಿದ 9 ಬಾಲ್ಯವಿವಾಹ ಬಗ್ಗೆ ಎಫ್ ಐಆರ್ ದಾಖಲಿಸಲು ತಿಳಿಸಿದಾಗ್ಯೂ ಸಹ ವಿಳಂಬ ದೋರಣೆ ತೋರಿದ 5 ಜನ ಸಿಡಿಪಿಒಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಅವರಿಗೆ ಸೂಚಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 2164 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ, ಸಮುದಾಯ, ಪಂಚಾಯತ, ಶಾಲಾ ಕಟ್ಟಡ, ಶಾಲಾ ಕಟ್ಟಡ ಸೇರಿದಂತೆ ಗ್ರಾಮೀಣ ಹಾಗೂ ನಗರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲು ಆಯಾ ತಾಲೂಕಿನ ಸಿಡಿಪಿಒಗಳಿಗೆ ಸೂಚಿಸಿದರು.
ಅಲ್ಲದೇ ಅಂಗನವಾಡಿಗಳಲ್ಲಿ ಆಗಾಗ್ಗೆ ಭೇಟಿ ನೀಡಿ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸುವಂತೆ ತಾಪಂ ಇಒ ಹಾಗೂ ಸಿಡಿಪಿಒಗಳಿಗೆ ಸೂಚಿಸಿದರು. ಅಪೌಷ್ಟಿಕ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳಿಗೆ ನೀಡುತ್ತಿರುವ ಆಹಾರದ ಬಗ್ಗೆ ಪರೀಕ್ಷಿಸಬೇಕು. ಅನಿರೀಕ್ಷಿತವಾಗಿ ಎಂಎಸ್‌ಪಿಟಿಸಿಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುವ ಕೆಲಸವಾಗಬೇಕು.
ಸಾಂತ್ವನ ಕೇಂದ್ರದಲ್ಲಿ ನೆರವು ಕೋರಿ ಬರುವ ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಕಾನೂನಿನ ನೆರವು ಒದಗಿಸುವ ಕೆಲಸವಾಗಬೇಕು. ಅವರನ್ನು ಉದ್ಯೋಗಸ್ಥರನ್ನಾಗಿ ಮಾಡಲು ಕ್ರಮವಹಿಸಲು ತಿಳಿಸಿದಾಗ ಈಗಾಗಲೇ 8 ಜನ ಮಹಿಳೆಯರಿಗೆ ವಿವಿಧ ಉದ್ಯೋಗದಲ್ಲಿ ತೊಡಗಿರುವುದಾಗಿ ಬಾದಾಮಿ, ಮುಧೋಳ ತಾಲೂಕಿನ ಸಾಂತ್ವನ ಕೇಂದ್ರದ ಪ್ರತಿನಿಧಿಗಳು ಸಭೆಗೆ ತಿಳಿಸಿದರು.
ಜಿಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೂರಕ ಪೌಷ್ಟಿಕ ಆಹಾರ ವಿತರಣೆ, ಮೂಲ ಸೌಕರ್ಯ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಆಹಾರ ಸಾಮಗ್ರಿಗಳ ವಿತರಣೆ ಬಗ್ಗೆ ಪರಿಶೀಲನೆ ನಡೆಸಬೇಕು. ಅನುಷ್ಠಾನದಲ್ಲಿ ಲೋಪವಾದಲ್ಲಿ ಶಿಸ್ತು ಕ್ರಮಜರುಗಿಸಲು ಮುಂದಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 2221 ಅಂಗನವಾಡಿ ಕೇಂದ್ರಗಳಿ ಕಾರ್ಯನಿರ್ವಹಿಸುತ್ತಿವೆ. ಮಾತೃಪೂರ್ಣ ಯೋಜನೆಯಡಿ 21208 ಗರ್ಭಿಣಿಯರು, 20408 ಬಾಣಂತಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮಕ್ಕಳಿ ಲಿಂಗ ಅನುಪಾತವು ಸಮತೋಲನಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದ್ಯ ಎನ್‌ಎಫ್
ಎಚ್‌ಎಸ್-5ರ ಪ್ರಕಾರ ಜಿಲ್ಲೆಯಲ್ಲಿ ಲಿಂಗಾನುಪಾತ 1007 ಇರುವುದಾಗಿ ತಿಳಿಸಿದರು.
ನವನಗರದ ಸೆಕ್ಟರ್ ನಂ.4ರಲ್ಲಿ ಸಖೀ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದು, ವಿದ್ಯುತ್ ವೈರಿಂಗ್ಗ ಕೆಲಸ ಮಾತ್ರ ಬಾಕಿ ಇರುವುದಾಗಿ ಸಭೆಗೆ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಚೌಕಿಮಠ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಕುಮಾರ ಬಾವಿದೊಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.