ಹಳ್ಳಿ ಸರ್ಕಾರಿ ಶಾಲೆಗೆ ಅಭಿವೃದ್ಧಿಯ ಭಾಗ್ಯ
ಮೂರು ಸರ್ಕಾರಿ ಶಾಲೆ ದತ್ತು ಪಡೆದ ಶಾಸಕ ಡಾ|ಚರಂತಿಮಠ, ಕಾಯಕಲ್ಪಕ್ಕೆ 55.54 ಲಕ್ಷ ವೆಚ್ಚ
Team Udayavani, Dec 19, 2020, 3:21 PM IST
ಬಾಗಲಕೋಟೆ: ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ಮುಂದಾಗಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ತಾಲೂಕಿನ ಮುಗೊಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೋಡನಾಯಕದಿನ್ನಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಅಚನೂರ ಗ್ರಾಮದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.
ಮುಗಳೊಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಒಂದೆಡೆ ಇದ್ದು, ಇದನ್ನು ಕಳೆದ ಒಂದೂವರೆ ವರ್ಷದ ಹಿಂದೆ ರಾಜ್ಯ ಸರ್ಕಾರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಣೆ ಮಾಡಿದೆ. ಒಂದೇ ಸಮುಚ್ಛಯದಡಿ ಎಲ್ಲ ಶಾಲೆಗಳಿದ್ದು, ಇಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಟ್ಟು 752 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಅದರಲ್ಲೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭಗೊಂಡಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ವ ಪ್ರಾಥಮಿಕ ಶಾಲೆಯೂ ನಡೆಯುತ್ತಿದೆ.
ಮುಗಳೊಳ್ಳಿ ಸಹಿತ ಸುತ್ತಲಿನ ಸುಮಾರು ನಾಲ್ಕೈದು ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಈ ಶಾಲೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಕಾಯಕಲ್ಪಕ್ಕೆ ಒಟ್ಟು 20.26 ಲಕ್ಷರೂ. ಅನುದಾನ ನೀಡಿದ್ದಾರೆ. ಇನ್ನು ಹನಮಪ್ಪದ ದೇವಸ್ಥಾನದ ಮೂಲಕ ಹಲವೆಡೆ ಖ್ಯಾತಿ ಪಡೆದ ಅಚನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನೂ ದತ್ತು ಪಡೆದಿದ್ದು, ಈ ಶಾಲೆಯ ಕಾಯಕಲ್ಪಕ್ಕೆ 21.52 ಲಕ್ಷ ಶಾಸಕರ ನಿಧಿ ವಿನಿಯೋಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಅಲ್ಲದೇ ಬೋಡನಾಯಕದಿನ್ನಿ ಸರ್ಕಾರಿ ಪ್ರೌಢ ಶಾಲೆ ದತ್ತು ಪಡೆದಿದ್ದು, ಈ ಶಾಲೆಯ ಅಭಿವೃದ್ಧಿಗೆ 13.76 ಲಕ್ಷ ಅನುದಾನ ವಿನಿಯೋಗಿಸಲು ನಿರ್ಧರಿಸಲಾಗಿದೆ. ಈ ಮೂರೂ ಗ್ರಾಮೀಣ ಶಾಲೆ ದತ್ತು ಪಡೆದಿರುವಶಾಸಕ ಡಾ|ಚರಂತಿಮಠ ಈಗಾಗಲೇ ಹಲವು ಬಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಶಿಕ್ಷಕರು, ಎಸ್‌ಡಿಎಂಸಿಯವರೊಂದಿಗೆ ಚರ್ಚಿಸಿದ್ದಾರೆ. ಶಿಕ್ಷಕರು ತಮ್ಮ ಮನೆಯಂತೆ ಸರ್ಕಾರಿ ಶಾಲೆಯನ್ನೂ ಇಡಬೇಕು ಎಂಬುದು ಅವರ ಕಾಳಜಿ.
ಮುಗಳೊಳ್ಳಿಯ ಕೆಪಿಎಸ್ ಶಾಲೆ-20.26 ಲಕ್ಷ :
ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿಯಿಂದ 12 ತರಗತಿಗಳಿದ್ದು, ಕೊಠಡಿಗಳ ಕೊರತೆ ಇದೆ. ಈ ಶಾಲೆಯನ್ನು ದತ್ತು ಪಡೆದಿರುವ ಶಾಸಕ ಡಾ|ಚರಂತಿಮಠರು ಆ ಕೊರತೆ ನೀಗಿಸಲು 1 ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 10.76 ಲಕ್ಷ, 3 ಹಳೆಯ ಕೊಠಡಿಗಳ ದುರಸ್ತಿಗೆ 5 ಲಕ್ಷ ಹಾಗೂ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಪಿಭಾಗಕ್ಕೆ ಪ್ರತ್ಯೇಕ ತಲಾ ಒಂದು ಶೌಚಾಲಯ ನಿರ್ಮಾಣಕ್ಕೆ 4.50 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದ ಶೌಚಾಲಯ ಸಮಸ್ಯೆ ನೀಗಲಿದ್ದು, ಇನ್ನೂ ಮೂರು ಕೊಠಡಿಗಳ ಅಗತ್ಯವಿದೆ. ಜತೆಗೆ
ಇಡೀ ಶಾಲೆಯ ಕಾಂಪೌಂಡ್ ಅರ್ಧಕ್ಕೆ ನಿಂತಿದ್ದು, ಅದು ಪೂರ್ಣಗೊಳ್ಳಬೇಕಿದೆ. ಇದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವೂ ಆಗಿದ್ದು, ಕೊಠಡಿಗಳ ಅಗತ್ಯತೆ ನೀಗಿಸುವತ್ತ ಕ್ರಮ ಕೈಗೊಳ್ಳಬೇಕಿದೆ. ಶಾಲೆಯಲ್ಲಿ ಚಿಣ್ಣರ ಗಾರ್ಡನ್, ಮಕ್ಕಳಿಗೆ ಆಟದ ಮೈದಾನ, ಶಾಲೆಗೆ ಸುಣ್ಣ-ಬಣ್ಣ ಹಚ್ಚಿ, ಮಾದರಿ ಶಾಲೆಯನ್ನಾಗಿ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ದಾನಿಗಳ ನೆರವು ಪಡೆಯಲೂ ನಿರ್ಧರಿಸಲಾಗಿದೆ. ಇಲ್ಲಿನ ವೃತ್ತಿಪರ ಶಿಕ್ಷಣ ಹಾಗೂ ಹಿಂದಿ ವಿಷಯ ಶಿಕ್ಷಕರು ನಿವೃತ್ತಿಯಾಗಿದ್ದು, ಆ ಹುದ್ದೆಗಳಿಗೆ ಹೊಸ ಶಿಕ್ಷಕರ ನಿಯೋಜನೆ ಮಾಡಬೇಕಿದೆ.
ನಮ್ಮ ಶಾಲೆಯನ್ನು ಶಾಸಕರು ದತ್ತು ಪಡೆದಿದ್ದು, ಶಾಲಾ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಮೂಲಭೂತ ಸೌಲಭ್ಯಗಳಿವೆ. ಕೊಠಡಿ ಕೊರತೆ ಕುರಿದು ಶಾಸಕರ ಗಮನಕ್ಕೆ ತಂದಿದ್ದೇವೆ. ತಾಲೂಕಿನಲ್ಲಿಯೇ ಮಾದರಿ ಶಾಲೆ ಮಾಡುವ ಸಂಕಲ್ಪ ನಮ್ಮೆಲ್ಲ ಶಿಕ್ಷಕರದ್ದಾಗಿದೆ. –ಎನ್.ಎಸ್. ಗಂಟಿ, ಮುಖ್ಯೋಪಾಧ್ಯಾಯ, ಮುಗಳೊಳ್ಳಿ, ಕೆಪಿಎಸ್ ಶಾಲೆ
ಅಚನೂರ ಪ್ರೌಢಶಾಲೆ-21.52 ಲಕ್ಷ :
ಬಾಗಲಕೋಟೆ ತಾಲೂಕಿನ ಅಚನೂರ, ಪುರಾತನ ಹನಮಂತ ದೇವಾಲಯದಿಂದ ಹೆಸರುವಾಸಿಯಾಗಿದೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆಯೂ ಹಳೆಯದ್ದಾಗಿದ್ದು, ಇಲ್ಲಿಯೂ ಕೊಠಡಿಗಳ ಕೊರತೆ ಇದೆ. ಈ ಕೊರತೆ ನೀಗಿಸಲು ಶಾಸಕರು 21.52 ಲಕ್ಷ ಮೊತ್ತದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿಸಲು ಮುಂದಾಗಿದ್ದಾರೆ. 8ರಿಂದ 10ನೇ ತರಗತಿಯ ಈ ಶಾಲೆಯಲ್ಲಿ ಕಳೆದ ವರ್ಷ 86 ವಿದ್ಯಾರ್ಥಿಗಳಿದ್ದು, ಈಗ ಅದು 100ಕ್ಕೆ ಏರಿಕೆಯಾಗಿದೆ. ಶಾಲೆಯ ಕಾಂಪೌಂಡ್ ಅರ್ಧಕ್ಕೆ ನಿಂತಿದ್ದು, ಅದನ್ನು ಗ್ರಾ.ಪಂ.ನವರು ಉದ್ಯೋಗ
ಖಾತ್ರಿಯಡಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದು ಪೂರ್ಣಗೊಂಡರೆ ಶಾಲೆಯ ಅಗತ್ಯ ಕೊರತೆ ನೀಗಲಿದೆ. ಆದರೆ, ಶಾಲೆಯ ಸುತ್ತಲೂ ಕಂಪೌಂಡ್ ನಿರ್ಮಿಸಿ, ಇಲ್ಲಿನ ವಾತಾವರಣ ಸ್ವಚ್ಛಗೊಳಿಸಬೇಕಿದೆ. ಶಾಲೆಯ ಮುಂದೆಯೇಜನರು ಕಸ ಹಾಕುತ್ತಿದ್ದು ನಿಲ್ಲಿಸಬೇಕಿದೆ. ಗ್ರಾಮದ ಕೆರೆಯ ಮುಂದೆಯೇ ಶಾಲೆಯಿದ್ದು, ಸುಂದರ ಪರಿಸರ ನಿರ್ಮಿಸಲು ಸುವರ್ಣಾವಕಾಶ ಇಲ್ಲಿವೆ.
ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಶಾಲಾ ಕೊಠಡಿಗಳ ಕೊರತೆ ಇದ್ದು, ಶಾಸಕರು 2 ಹೆಚ್ಚುವರಿ ಕೊಠಡಿ ನಿರ್ಮಿಸಲು ದತ್ತು ಪಡೆದಿದ್ದಾರೆ. ಶಾಲೆಯ ಪರವಾಗಿ ಶಾಸಕರನ್ನು ಅಭಿನಂದಿಸುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ ಮಾಡಿದ್ದೇವೆ. – ಶ್ರೀಮತಿ ಜೆ.ಎಂ. ಸಂಕ, ಅಚನೂರ ಪ್ರೌಢಶಾಲೆ ಮುಖ್ಯೋಪಾಧ್ಯಾಯನಿ
ಬೋಡನಾಯಕದಿನ್ನಿ ಸರ್ಕಾರಿ ಪ್ರೌಢಶಾಲೆ ;
ಈ ಶಾಲೆಯಲ್ಲಿ 8ರಿಂದ 10ನೇ ತರಗತಿಯಲ್ಲಿ ಒಟ್ಟು 211 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೂ ಕೊಠಡಿ ಸಮಸ್ಯೆ ಬಿಟ್ಟರೆ ಬೇರೆ ಕೊರತೆ ಇಲ್ಲ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ವಂತ ಕೊಳವೆ ಬಾವಿಯಿದ್ದು, ಅದಕ್ಕೆ ನಲ್ಲಿ ವ್ಯವಸ್ಥೆ ಮಾಡಬೇಕಿದೆ. ಅದನ್ನು ಗ್ರಾಪಂಗೆ ವಹಿಸಿದ್ದು, ಚುನಾವಣೆ ಬಳಿಕ ಆ ಕಾರ್ಯ ನೀಗಲಿದೆ. ಶಾಸಕರು ದತ್ತು ಪಡೆದ ಈ ಶಾಲೆಯಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣಕ್ಕೆ 10.76 ಲಕ್ಷ ಹಾಗೂ ಬಾಲಕ-ಬಾಲಕಿಯರಿಗಾಗಿ ಎರಡು ಪ್ರತ್ಯೇಕ ಶೌಚಾಲಯಕ್ಕಾಗಿ 3 ಲಕ್ಷ ಅನುದಾನ ಕಲ್ಪಿಸಿದ್ದಾರೆ. ಶೌಚಾಲಯ ಕೊರತೆಬಹಳ ದಿನಗಳಿಂದ ಇತ್ತು, ಅದು ಶಾಲಾ ದತ್ತು ಪ್ರಕ್ರಿಯೆಯಿಂದ ಪೂರ್ಣಗೊಂಡಿದೆ. ಇನ್ನುಳಿದಂತೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ಅಗತ್ಯ 10 ಜನ ಶಿಕ್ಷಕ ವರ್ಗ ಎಲ್ಲವೂ ಇದೆ. ಆದರೆ, ಶಾಲಾ ಪರಿಸರ ಸ್ವತ್ಛ ಹಾಗೂ ಸುಂದರಗೊಳಿಸುವ ಕಾರ್ಯ ನಡೆಯಬೇಕಿದೆ.
ನಮ್ಮ ಶಾಲೆಯಲ್ಲಿ ಶೌಚಾಲಯ ಮತ್ತು ಶಾಲಾ ಕೊಠಡಿ ಕೊರತೆ ಇತ್ತು. ಶಾಸಕರು, ನಮ್ಮ ಶಾಲೆ ದತ್ತು ಪಡೆದು, ಎರಡು ಶಾಲಾ ಕೊಠಡಿ ನಿರ್ಮಾಣದ ಭೂಮಿಪೂಜೆಯನ್ನೂ ಮಾಡಿದ್ದಾರೆಇನ್ನುಳಿದಂತೆ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಒಟ್ಟು 211 ವಿದ್ಯಾರ್ಥಿಗಳಿದ್ದು, 10 ಜನ ಶಿಕ್ಷಕ ವರ್ಗವಿದೆ. ಕುಡಿಯುವ ನೀರಿನ ಕೊಳವೆ ಬಾವಿಗೆ ಪ್ರತ್ಯೇಕ ನಲ್ಲಿ ವ್ಯವಸ್ಥೆ ಮಾಡಲು ಗ್ರಾ.ಪಂ.ಗೆ ಶಾಸಕರು ಸೂಚನೆ ನೀಡಿದ್ದಾರೆ. ಆ ಸಮಸ್ಯೆಯೂ ನೀಗಲಿದೆ. – ಕೆ.ವೈ. ಯರಪಲ್ಲ, ಬೋಡನಾಯಕದಿನ್ನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ
ಕ್ಷೇತ್ರದ ಗ್ರಾಮೀಣ ಭಾಗದ ಎಲ್ಲ ಸರ್ಕಾರಿ ಶಾಲೆಗಳು, ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬುದು ನನ್ನ ಆಸೆ. ಹೀಗಾಗಿ ನಮ್ಮಸರ್ಕಾರ ಹಾಗೂ ಶಿಕ್ಷಣ ಸಚಿವರ ವಿಶೇಷ ಆಸಕ್ತಿಯಿಂದ ಶಾಲಾ ದತ್ತು ಪ್ರಕ್ರಿಯೆಯಲ್ಲಿ ಮೊದಲ ಹಂತದಲ್ಲಿ ಮೂರು ಶಾಲೆ ದತ್ತು ಪಡೆದು, ಅಲ್ಲಿನ ತುರ್ತು ಅಗತ್ಯಗಳ ಮಾಹಿತಿ ಪಡೆದು ಆ ಕೊರತೆ ನೀಗಿಸಲುಅನುದಾನ ಒದಗಿಸಲಾಗಿದೆ. ಹಳ್ಳಿ ಮಕ್ಕಳ ಅನುಕೂಲಕ್ಕೆ ದತ್ತು ಪಡೆದ 3 ಶಾಲೆಗಳಲ್ಲಿ ಡಿಎಂಎಫ್ ಅನುದಾನದಡಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಿಸಲಾಗುತ್ತದೆ. – ಡಾ| ವೀರಣ್ಣ ಚರಂತಿಮಠ, ಶಾಸಕರು, ಬಾಗಲಕೋಟೆ
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.