10 ವರ್ಷವಾದ್ರೂ ಮೇಲಕ್ಕೇರದ ಆಸ್ಪತ್ರೆ! ಶಾಸಕರಿಂದ ಆರೋಗ್ಯ ಸಚಿವರಿಗೆ ಪತ್ರ
ಪ್ರತಿಭಟನೆ ನಡೆಸಿದರೂ ಸರ್ಕಾರದ ಪ್ರಯತ್ನ ಮಾತ್ರ ಇನ್ನೂ ಆಮೆಗತಿಯಲ್ಲಿ ಇದೆ.
Team Udayavani, Aug 4, 2023, 6:41 PM IST
ಅಮೀನಗಡ: ಕರದಂಟು ಖ್ಯಾತಿಯ ಅಮೀನಗಡ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂಬ
ದಶಕಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹೌದು, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಪಟ್ಟಣ ಸೇರಿದಂತೆ ಸುತ್ತಲಿನ ಹಲವಾರು
ಗ್ರಾಮಗಳ ಸಾರ್ವಜನಿಕರಿಗೆ ಆಸರೆಯಾಗಿದೆ. ಆದರೆ ಆರೋಗ್ಯ ಕೇಂದ್ರ ಕೇವಲ ಪ್ರಾಥಮಿಕ ಚಿಕಿತ್ಸೆ, ಸಾಂಕ್ರಾಮಿಕ ರೋಗಗಳಿಗೆ ಮಾತ್ರ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.
ತುರ್ತು ಮತ್ತು ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳಿಲ್ಲದೆ ಇರುವುದರಿಂದ ದೂರದ ಪಟ್ಟಣಗಳಿಗೆ
ಹೋಗಬೇಕಾದ ಪರಿಸ್ಥಿತಿ ಇದೆ.ಇದರಿಂದ ಪಟ್ಟಣ ಸೇರಿದಂತೆ ಆರು ಗ್ರಾಮಗಳ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಆದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕೆಂಬ ದಶಕಗಳ ಕನಸು ಆದಷ್ಟು ಬೇಗ ಈಡೇರಿಸಿ, ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬುವುದು ಪ್ರಜ್ಞಾವಂತರ ಆಗ್ರಹ.
ಸಿಬ್ಬಂದಿ ಕೊರತೆ: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರು ಹಾಸಿಗೆಯುಳ್ಳ ಆಸ್ಪತ್ರೆಯಾಗಿದೆ. ಆಸ್ಪತ್ರೆಯ
ಅಡಿಯಲ್ಲಿ ನಾಲ್ಕು ಉಪಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ,ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸೌಲಭ್ಯಗಳ ಕೊರತೆಯಿದೆ ಮತ್ತು ಸಿಬ್ಬಂದಿಗಳ ಕೊರೆತೆ ಇದೆ. ಇಬ್ಬರು ಮುಖ್ಯ ಆರೋಗ್ಯ ಸಹಾಯಕರು,ಇಬ್ಬರು ಪಿಎಚ್ ಸಿಒ ಹಾಗೂ ಒಂದು ಗ್ರೂಫ್ ಡಿ ಸಿಬ್ಬಂದಿಗಳ ಕೊರತೆಯಿಂದ ಉಪಕೇಂದ್ರಗಳಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಅವರ ಗ್ರಾಮದಲ್ಲಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ.
ಆಸ್ಪತ್ರೆ ಮೇಲ್ದಜೆಗೇರಲಿ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಟ್ಟಣವೂ ರಕ್ಕಸಗಿ, ಹುಲಗಿನಾಳ, ಕಲ್ಲಗೋನಾಳ, ಹಿರೇಮಾಗಿ, ಮಾದಾಪುರ, ಇನಾಂಬೂದಿಹಾಳ ಹಾಗೂ ಕಬ್ಬಿಣ ಖನಿಯ ಹತ್ತಿರ ಆಶ್ರಿತರಾದ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ವಿಶೇಷ ತಜ್ಞರ, ಆಪರೇಷನ್ ಥಿಯೇಟರ್, ವಿವಿಧ ರೋಗ ವಿಧದ ವಿಭಾಗಗಳು, ಹೆಚ್ಚಿನ ಹಾಸಿಗೆಗಳು
ಇಲ್ಲದೆ ರೋಗಿಗಳಿಗೆ ತೊಂದರೆಯಾಗಿದೆ.
ಪಟ್ಟಣದ ಮಧ್ಯೆಯೇ ರಾಯಚೂರು- ಬೆಳಗಾವಿ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು
ಹೆಚ್ಚು, ಆದರೆ ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಇಲ್ಲಿ ಕೇವಲ ಪ್ರಥಮ ಚಿಕಿತ್ಸೆ ಮಾತ್ರ ಸಿಗುತ್ತದೆ.
ಹೆಚ್ಚಿನ ಚಿಕಿತ್ಸೆಗಾಗಿ ಹುನಗುಂದ ಅಥವಾ ಬಾಗಲಕೋಟೆಗೆ ರೋಗಿಗಳನ್ನು ಕರೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಇದರ ಬಗ್ಗೆ ಸಂಘ-ಸಂಸ್ಥೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರದ ಪ್ರಯತ್ನ ಮಾತ್ರ ಇನ್ನೂ ಆಮೆಗತಿಯಲ್ಲಿ ಇದೆ.
ಒಂದು ವೇಳೆ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದರೆ ನಿರಂತರ ವೈದ್ಯರ ಸೇವೆ,ಅಗತ್ಯ ಸೌಲಭ್ಯಗಳು
ಇರುತ್ತದೆ ಇದರಿಂದ ಅಪಘಾತಗಳಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಿ ಅವರ ಜೀವ ಉಳಿಸಬಹುದು.
ಆದರಿಂದ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಡೇರುತ್ತಾ ದಶಕಗಳ ಕನಸು: ಪಟ್ಟಣವು ಗ್ರಾಪಂ ಇದ್ದಾಗಲೇ ಅಂದರೆ ಸುಮಾರುದಶಕಗಳ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆ ಪ್ರಸ್ತಾವಣೆ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿದೆ. ಪಟ್ಟಣವು ಗ್ರಾಪಂನಿಂದ ಪಪಂಗೆ ಮೇಲ್ದರ್ಜೇಗೇರಿದ ನಂತರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ
ಮೇಲ್ದರ್ಜೆಗೆ ಏರುತ್ತದೆ. ಈ ಭಾಗದ ಜನರಿಗೆ ಎಲ್ಲರ ರೀತಿಯ ಸೌಲಭ್ಯಗಳು ಸ್ಥಳಿಯವಾಗಿಯೇ ಸಿಗುತ್ತೆ ಎಂಬ ಕನಸು ನನಸಾಗಿಲ್ಲ.
ಸಚಿವರಿಗೆ ಪತ್ರ: ಅಮೀನಗಡ ಪಟ್ಟಣ ಹಿಂದುಳಿದ ಪಟ್ಟಣಗಳಲ್ಲಿ ಒಂದಾಗಿದ್ದು, ಆರ್ಥಿಕವಾಗಿಯೂ ಸಹ ಹಿಂದುಳಿದ
ಪ್ರದೇಶವಾಗಿದೆ. ಈ ಬಾಗದ ಜನರಿಗೆ ಹೆಚ್ಚಿನ ಚಿಕಿತ್ಸೆಗೆ, ತುರ್ತು ಚಿಕಿತ್ಸೆಗೆ ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಆದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಶಾಸಕ ಎಚ್.ವೈ. ಮೇಟಿ ಪತ್ರ ಬರೆದಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ಸೌಲಭ್ಯಗಳಿಲ್ಲ. ಹೀಗಾಗಿ ಪಟ್ಟಣವೂ ಸೇರಿದಂತೆ ಈ ಭಾಗದ ಆರಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ತೊಂದರೆಯಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ಶಾಸಕರು ಆರೋಗ್ಯ ಸಚಿವರಿಗೆ ಪತ್ರ ಕೂಡಾ ಬರೆದಿದ್ದಾರೆ. ಆದಷ್ಟು ಬೇಗ ನಮ್ಮ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗುತ್ತದೆ ಎಂಬ ಭರವಸೆ ಇದೆ.
*ರಮೇಶ ಮುರಾಳ, ಸದಸ್ಯ, ಪಟ್ಟಣ ಪಂಚಾಯಿತಿ
ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆಗೆ ಯಾವುದೇ ರೀತಿಯ ಅಗತ್ಯ ಸೌಲಭ್ಯಗಳಿಲ್ಲ. ಇದರಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯನ್ನು
ಮೇಲ್ದರ್ಜೆಗೇರಿಸಿ ಅಗತ್ಯ ಸೌಲಭ್ಯ ಒದಗಿಸಬೇಕು.
ಅಲ್ಲಾಭಕ್ಷ ದಫೇದಾರ,
ಪ್ರಶಾಂತ ಮನ್ನೇರಾಳ, ಸ್ಥಳಿಯರು
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆರಿಸಲು ಮೇಲಧಿಕಾರಿಗಳಿಗೆ
ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ|ಅರವಿಂದ,
ಆರೋಗ್ಯಾಧಿಕಾರಿ, ಅಮೀನಗಡ ಪಿಎಚ್‌ಸಿ
ಎಚ್.ಎಚ್. ಬೇಪಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.