“ಬಡವರ ಹಣ ಲೂಟಿ ಮಾಡಲು ಬಿಡಲ್ಲ’
ಹೊಸ ಟೆಂಡರ್ ಕರೆಯಲು ಉಮಾಶ್ರೀ ಆಗ್ರಹ
Team Udayavani, Jun 10, 2020, 1:02 PM IST
ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಕೆಎಚ್‌ಡಿಸಿ ನೇಕಾರರಿಗೆ ಆಹಾರದ ಕಿಟ್ ವಿತರಣೆ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಠರಾವು, ಜಿಲ್ಲಾಧಿಕಾರಿಗಳ ಆದೇಶ ಮತ್ತು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಟೆಂಡರ್‌ನಲ್ಲಿ ಪಾರದರ್ಶಕತೆ ಇಲ್ಲ. ಕೆಎಚ್‌ಡಿಸಿ ಬಡನೇಕಾರರ ಹಣವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಮಂಗಳವಾರ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನಗರಸಭೆ ಅಧಿಕಾರಿಗಳು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪಡೆಯದೆ ಟೆಂಡರ್ ಕರೆದಿದ್ದಾರೆ. ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಕೆಎಚ್‌ಡಿಸಿ ನೇಕಾರರ ಒಟ್ಟು ಸಂಖ್ಯೆ 1495. ಆದರೆ, ಅಧಿಕಾರಿಗಳು 8562 ಫಲಾನುಭವಿಗಳಿಗೆ 47 ಲಕ್ಷ ರೂ. ಮೊತ್ತಕ್ಕೆ ಟೆಂಡರ್ ಕರೆದಿರುವುದು ಸರಿಯಲ್ಲ. ಸರ್ಕಾರದ ಆದೇಶದಲ್ಲಿ ಕೆಎಚ್‌ಡಿಸಿ ನೇಕಾರರಿಗೆ ಒಂಭತ್ತು ವಿದದ ದಿನಸಿ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ನೀಡಬೇಕು ಎಂದು ನಮೂದಿಸಲಾಗಿದೆ. ಟೆಂಡರ್ ಪ್ರಕಾರ ಒಂದು ಕಿಟ್‌ನ ಅಂದಾಜು ಮೊತ್ತ 545 ರೂ. ಆಗುತ್ತದೆ. ಒಟ್ಟು 1495 ಫಲಾನುಭವಿಗಳಿಗೆ ಅಂದಾಜು ರೂ.8,25,000 ರಷ್ಟಾಗುತ್ತದೆ. ಅಷ್ಟು ಹಣಕ್ಕೆ ಮಾತ್ರ ಟೆಂಡರ ಕರೆಯಬೇಕಾಗಿತ್ತು ಎಂದರು.
47 ಲಕ್ಷ ಮೊತ್ತವನ್ನು 2012-13ನೇ ಸಾಲಿನಲ್ಲಿ ನೇಕಾರರಿಗೆ ಸೋಲಾರ ದೀಪ ಮತ್ತು ಮಗ್ಗದ ಬಿಡಿ ಭಾಗಗಳನ್ನು ಖರೀದಿಸಲು. ಕೇವಲ ಔದ್ಯೋಗಿಕರಣದ ಸವಲತ್ತುಗಳನ್ನು ಪೂರೈಸಿಕೊಳ್ಳಲು ಮಾತ್ರ ನೀಡಲಾಗಿತ್ತು. ಆದರೆ ಕೆಲ ಕಾರಣಗಳಿಂದ ಈ ಹಣ ಖರ್ಚಾಗದೆ ಇರುವುದರಿಂದ ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗಿತ್ತು. ಈ ಮೊತ್ತ ಈಗ ಬಡ್ಡಿ ಸೇರಿ ಅಂದಾಜು 52 ಲಕ್ಷದಷ್ಟಾಗಿರುತ್ತದೆ. ಈ ಹಣವನ್ನು ಕೆಎಚ್‌ಡಿಸಿ ನೇಕಾರರಿಗೆ ಮಾತ್ರ ವಿನಿಯೋಗಿಸಬೇಕು ಎಂಬ ಸರಕಾರದ ಆದೇಶವಿದೆ. ಕಾರಣ ಈ ಹಣದಲ್ಲಿ ಕಿಟ್ ವಿತರಣೆಗೆ ಬೇಕಾದ ಹಣ ಬಳಸಿಕೊಂಡು ಇನ್ನುಳಿದ ಹಣವನ್ನು ಬ್ಯಾಂಕ್‌ನಲ್ಲಿ ಮತ್ತೆ ಠೇವಣಿ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆಯ ಠರಾವಿನಲ್ಲಿ ಕೆಎಚ್‌ಡಿಸಿ ನೇಕಾರರ ಪಟ್ಟಿಯನ್ನು ಪಡೆದುಕೊಂಡು ಟೆಂಡರ್ ಕರೆಯಲಾಗುವುದು ಎಂದು ಹೇಳಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕೆಎಚ್‌ಡಿಸಿ ನಿಗಮದಿಂದ ಯಾವುದೆ ನೇಕಾರರ ಪಟ್ಟಿ ತರಿಸಿಕೊಂಡಿಲ್ಲ. ಅಧಿಕಾರಿಗಳ ಬಳಿ ಕೇವಲ ರಬಕವಿಯ ಕೆಎಚ್‌ಡಿಸಿ ನೇಕಾರರ ಪಟ್ಟಿ ಮಾತ್ರ ಇದೆ. ಅಧಿಕಾರಿಗಳು 8562 ಕಿಟ್ ತಯಾರಿಸಲು ಟೆಂಡರ್ ಕರೆದಿದ್ದಾರೆ. ಇದು ನಗರಸಭೆಯ ಸರಿಯಾದ ಕ್ರಮವಲ್ಲ. ಆದ್ದರಿಂದ ನಗರಸಭೆಯ ಅಧಿಕಾರಿಗಳು ಹಳೆಯ ಟೆಂಡರ್‌ನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯಬೇಕು. ಈಗಾಗಲೇ ಜಿಲ್ಲಾಧಿ ಕಾರಿಗಳ ಜತೆಗೆ ಈ ವಿಷಯ ಚರ್ಚಿಸಲಾಗಿದೆ. ಅಧಿಕಾರಿಗಳು ಯೋಗ್ಯ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದರು.
ಮುಖಂಡರಾದ ರಾಜೇಂದ್ರ ಭದ್ರನವರ, ನೀಲಕಂಠ ಮುತ್ತೂರ, ಶಂಕರ ಜಾಲಿಗಿಡದ, ಸಂಗಪ್ಪ ಕುಂದಗೋಳ, ಹುಮಾಯುನ ಮುಲ್ಲಾ ಬಸವರಾಜ ಬೀಳಗಿ, ರಾಹುಲ ಕಲಾಲ, ಬಸವರಾಜ ಗುಡೋಡಗಿ, ಸದಾಶಿವ ಗೊಂದಕರ, ಶಂಕರ ಕೆಸರಗೊಪ್ಪ, ಕೆಎಚ್‌ಡಿಸಿ ನೇಕಾರ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.