ಕುಗ್ಗಿದ ತ್ರಿವಳಿ ನದಿಗಳ ಪ್ರವಾಹ
Team Udayavani, Jul 29, 2021, 1:28 PM IST
ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ಮಂಗಳವಾರಕ್ಕೆ ಹೋಲಿಸಿದರೆ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗಿದ್ದು, ಘಟಪ್ರಭಾ ಮತ್ತು ಮಲಪ್ರಭಾ ನದಿಯ ಪ್ರವಾಹ ಗಣನೀಯ ಇಳಿಕೆಯಾಗಿದೆ.
ಬುಧವಾರ ಕೃಷ್ಣಾ ನದಿಗೆ 3,82,290 ಕ್ಯೂಸೆಕ್, ಘಟಪ್ರಭಾ ನದಿಗೆ 44,043 ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 7594 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹದಿಂದ ಮುಧೋಳ ತಾಲೂಕಿನ 36, ರಬಕವಿ-ಬನಹಟ್ಟಿ ತಾಲೂಕಿನ 8, ಜಮಖಂಡಿ ತಾಲೂಕಿನ 11, ಬಾಗಲಕೋಟೆ ತಾಲೂಕಿನ 1, ಬಾದಾಮಿ-4 ಸೇರಿ ಒಟ್ಟು 60 ಗ್ರಾಮಗಳು ಬಾಧಿತವಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಜಿಲ್ಲೆಯಲ್ಲಿ ಜುಲೈ 21ರಿಂದ ಈ ವರೆಗೆ ಒಟ್ಟು 84 ಮನೆಗಳು ಭಾಗಶಃ ಹಾನಿಯಾಗಿವೆ.
26 ಸಾವಿರ ಜನ ಅತಂತ್ರ: ಪ್ರವಾಹದಿಂದ ರಬಕವಿ-ಬನಹಟ್ಟಿ ತಾಲೂಕಿನ 1294 ಕುಟುಂಬಗಳ 6499 ಜನರು ಅತಂತ್ರವಾಗಿದ್ದು, ಅವರಿಗಾಗಿ 15 ಕಾಳಜಿ ಕೇಂದ್ರ ಸ್ಥಾಪಿಸಿ, ಆಶ್ರಯ ಕಲ್ಪಿಸಲಾಗಿದೆ. ಮುಧೋಳ ತಾಲೂಕಿನ 836 ಕುಟುಂಬಗಳ 3556 ಜನರು ಅತಂತ್ರರಾಗಿದ್ದು, ಅವರಿಗಾಗಿ 18 ಕಾಳಜಿ ಕೇಂದ್ರ ಸ್ಥಾಪಿಸಿ, ಊಟ-ವಸತಿ ಕಲ್ಪಿಸಲಾಗಿದೆ. ಜಮಖಂಡಿ ತಾಲೂಕಿನ 4079 ಕುಟುಂಬಗಳ 15883 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಅವರಿಗಾಗಿ 18 ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಬಾಗಲಕೋಟೆ ತಾಲೂಕಿನ 30 ಕುಟುಂಬಗಳ 138 ಜನರಿಗೆ ಎರಡು ಕಾಳಜಿ ಕೇಂದ್ರ ಸ್ಥಾಪಿಸಿ, ಆಶ್ರಯ ಕಲ್ಪಿಸಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ 2579, ಜಮಖಂಡಿ-7,777 ಸೇರಿ ಒಟ್ಟು 10,356 ಜಾನುವಾರುಗಳಿಗೂ ಕಾಳಜಿ ಕೇಂದ್ರ ತೆರೆಯಲಾಗಿದ್ದು, ನಿತ್ಯ ಮೇವು-ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ 8979 ಹೆಕ್ಟೇರ್ ಕೃಷಿ ಮತ್ತು 796.60 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬ, ರಸ್ತೆ, ಸೇತುವೆಗಳಿಗೆ ಹಾನಿಯಾಗಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಮಹಾಲಿಂಗಪುರ: ಘಟಪ್ರಭಾ ಪ್ರವಾಹದಿಂದ ನಡುಗಡ್ಡೆ ಆಗಿರುವ ನಂದಗಾವ ಗ್ರಾಮಕ್ಕೆ ಮಾಜಿ ಸಚಿವೆ ಉಮಾಶ್ರೀ ಭೇಟಿ ನೀಡಿ ಪ್ರವಾಹದಿಂದ ಆತಂಕಕ್ಕೊಳಗಾದ ಜನರೊಂದಿಗೆ ಬೆರೆತು ಧೈರ್ಯ ತುಂಬಿದರು. ಆಶ್ರಯ ಮನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಸರಿಯಾಗಿ ವಿತರಿಸಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ವಿನಂತಿಸಿದರೂ ಪ್ರಯೋಜನವಗಿಲ್ಲ ಎಂದು ಗ್ರಾಮಸ್ಥರು ಮಾಜಿ ಸಚಿವೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವೆ, ಜಿಲ್ಲಾ ಧಿಕಾರಿಗಳ ಸಮ್ಮುಖದಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಪಕ್ಷಬೇಧ ಮರೆತು ಹಕ್ಕುಪತ್ರಗಳ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು. ಎಲ್ಲರೂ ಪಕ್ಷಬೇಧ ಮರೆತು ಪರಸ್ಪರ ಸಹಕಾರ ಇಲ್ಲದಿದ್ದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ಜಿಲ್ಲಾ ಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು. ಬೆಳೆ ಹಾನಿ ಸರ್ವೇ ಮಾಡಿ ಫಲಾನುಭವಿಗಳಿಗೆ ಪರಿಹಾರ ನೀಡಬೇಕೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪುರ ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಯಮನವ್ವ ಬಾರಕೋಲ, ಉಪಾಧ್ಯಕ್ಷೆ ಸುಜಾತಾ ಪೂಜೇರಿ, ರಾಜು ಬಾರಕೋಲ, ಶಾಂತವ್ವ ನಂದಿಗೋನಿ, ಮಕುºಲ್ ಮುಲ್ಲಾ, ರಂಗಪ್ಪ ಹೊಸೂರ, ಪುಟ್ಟಪ್ಪ ಪೂಜೇರಿ, ಮಂಜುನಾಥ ಹುದ್ದಾರ ಇದ್ದರು. ಬನಹಟ್ಟಿ: ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರ ನೆರವಿಗಾಗಿ ತಾಲೂಕು ಆಡಳಿತ 12 ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಒಟ್ಟು 1207 ಕುಟುಂಬಗಳ 4867 ಜನರನ್ನು ಹಾಗೂ 4020 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕುಟುಂಬಗಳು ತಮ್ಮ ಸಂಬಂಧಿ ಕರ ಮನೆಗಳಿಗೆ ತೆರಳಿದ್ದಾರೆ. ತಾಲೂಕು ಆಡಳಿತ ನಿರ್ಮಾಣ ಮಾಡಿದ ಕಾಳಜಿ ಕೇಂದ್ರಗಳಲ್ಲಿ 1127 ಜನರು ವಾಸವಾಗಿದ್ದಾರೆ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು. ಸಮೀಪದ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
ಕಾಳಜಿ ಕೇಂದ್ರದ ಜನರಿಗೆ ಶಾಲೆಯ ಬಿಸಿಯೂಟದ ಅಡುಗೆಯವರು ಊಟ ತಯಾರು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಇಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ವೈದ್ಯರು, ಪಶು ವೈದ್ಯರು, ವಿದ್ಯುತ್ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕಾಳಜಿ ಕೇಂದ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ಅಧಿ ಕಾರಿಗಳು ಗಮನ ನೀಡುತ್ತಿದ್ದಾರೆ ಎಂದರು. ಯಾವುದೇ ಪ್ರಾಣಹಾನಿ ಇಲ್ಲ: ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರವಾಹವಿದ್ದರೂ ಇದುವರೆಗೆ ಯಾವುದೇ ಜನ ಹಾಗೂ ಜಾನು ವಾರುಗಳ ಪ್ರಾಣಹಾನಿಯಾಗಿಲ್ಲ. ರಬಕವಿ ಬನಹಟ್ಟಿ ತಾಲೂಕಿನ ಅನೇಕ ಕಡೆಗಳಲ್ಲಿ ಪ್ರವಾಹದಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವು ಗ್ರಾಮಗಳು ನಡುಗಡ್ಡೆಗಳಾಗಿವೆ. ತೇರದಾಳ ಹಳಿಂಗಳಿ, ಮದನಮಟ್ಟಿ ಅಸ್ಕಿ, ರಬಕವಿ ಮದನಮಟ್ಟಿ ಹಳಿಂಗಳಿ ರಸ್ತೆ, ಕುಲಹಳ್ಳಿ ಹಿಪ್ಪರಗಿ ತೋಟದ, ಕುಲಹಳ್ಳಿ ಗೊಂಬಿಗುಡ್ಡ ಅಸ್ಕಿ ರಸ್ತೆಗಳು ಹಾಗೂ ರಬಕವಿ ಬನಹಟ್ಟಿ ಜಾಕ್ ವೆಲ್‌ಗೆ ಹೋಗುವ ರಸ್ತೆ ಕೂಡಾ ಜಲಾವೃತಗೊಂಡಿವೆ ಎಂದು ತಹಶೀಲ್ದಾರ್ ಇಂಗಳೆ ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಸಂಜೀವ ಹಿಪ್ಪರಗಿ, ನೋಡಲ್ ಅಧಿ ಕಾರಿ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ. ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಪಂ ಅಭಿವೃದ್ಧಿ ಅಧಿ ಕಾರಿ ಪ್ರವೀಣ ಶಿರಬೂರ ಸೇರಿದಂತೆ ಅನೇಕ ಅಧಿ ಕಾರಿಗಳು ಇದ್ದರು. ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಬುಧವಾರ ಸಂಜೆ 4.10 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದ್ದು, ಅಷ್ಟೆ ಪ್ರಮಾಣದಲ್ಲಿ ಹೊರ ಹರಿವು ಕೂಡಾ ಇದೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು. ಹಿನ್ನೀರು ಹೆಚ್ಚಾಗುತ್ತಿರುವುದರಿಂದ ರಬಕವಿ ಸಮೀಪ ನೀರು ಹರಿದು ಬರುತ್ತಿದೆ. ಇದ್ದರಿಂದ ರಬಕವಿ-ಮದನಮಟ್ಟಿ ರಸ್ತೆ ಜಲಾವೃತವಾಗಿದೆ. ಹಿಪ್ಪರಗಿ ಜಲಾಶಯದಲ್ಲಿ 528 ಮೀಟರ್ ನೀರು ಇದೆ. ಜಮಖಂಡಿ: ಕೃಷ್ಣಾನದಿ ಪ್ರವಾಹಕ್ಕೆ ಪೀಡಿತಕ್ಕೊಳಗಾದ ತಾಲೂಕಿನ ಕಡಕೋಳ, ಕಂಕಣವಾಡಿ, ಮುತ್ತೂರ, ಶಿರಗುಪ್ಪಿ, ಮೈಗೂರ, ಜಂಬಗಿ ಗ್ರಾಮಗಳ ಸಂತ್ರಸ್ತರ ಕಾಳಜಿ ಕೇಂದ್ರಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ ಮತ್ತು ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಸಂತ್ರಸ್ತರು ವಾಸಿಸುವ ಸ್ಥಳಗಳಲ್ಲಿ ಊಟ, ಶುದ್ಧ ಕುಡಿಯುವ ನೀರು, ವಿದ್ಯುತ್, ಮೇವು ವ್ಯವಸ್ಥೆ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ನೊಡಲ್ ಅ ಕಾರಿಗಳಿಗೆ ನಿರ್ದೇಶನ ನೀಡಿದರು. ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನದಿತೀರದ ಜನರು ಯಾವುದೇ ವಂದತಿಗಳಿಗೆ ಕಿವಿಕೊಡಬಾರದು. ತಾಲೂಕಾಡಳಿತ ನೀಡುವ ಸಮರ್ಪಕ ರೀತಿಯಲ್ಲಿ ಸೂಚನೆಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರು, ನೊಡಲ್ ಅಧಿ ಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ತಾಲೂಕಾಮಟ್ಟದ ಅಧಿ ಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.