ಎಪಿಎಂಸಿ ಮುಚ್ಚಲು ಸರ್ಕಾರದ ಹುನ್ನಾರ
18ರ ಬಳಿಕ ಎಲ್ಲೆಡೆ ಹೋರಾಟದ ಎಚ್ಚರಿಕೆ
Team Udayavani, May 15, 2020, 11:05 AM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಯಾವುದೇ ಚರ್ಚೆ ಇಲ್ಲದೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲು ಹೊರಟಿದ್ದು, ಕೂಡಲೇ ಈ ತೀರ್ಮಾನ ಕೈಬಿಡಬೇಕು. ಇಲ್ಲದಿದ್ದರೆ ಮೇ 18ರ ಬಳಿಕ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸ ಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ 2017ರ ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳಿಗೆ ಒತ್ತಾಯಿಸುತ್ತಿದೆ.ರೈತರಿಗೆ ಹಾಗೂ ಸಹಕಾರ ತತ್ವದಡಿ ನಡೆಯುತ್ತಿರುವ ಎಪಿಎಂಸಿ ವ್ಯವಸ್ಥೆಗೆ ಮಾರಕ ತಿದ್ದುಪಡಿ ತರಲು ಹೊರಟಿದೆ. ಇದನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸದೇ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಹೊರಟಿದೆ. ಇದನ್ನು ರಾಜ್ಯಪಾಲರು ಮರಳಿ ಕಳುಹಿಸಿದ್ದು, ಈ ಪ್ರಕ್ರಿಯೆ ಇಲ್ಲಿಗೆಕೈಬಿಡಬೇಕು. ಶ್ರೀಮಂತ ಕಂಪನಿಗಳಿಗೆ ಅವಕಾಶ ಕೊಡುವ ಮೂಲಕ ರೈತರ ಹಿತ ಗಾಳಿಗೆ ತೂರುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕರು ಎಂದು ಬಿಂಬಿಸಿಕೊಂಡಿದ್ದಾರೆ. ಅವರಿಂದ ರೈತರ ಬಲಿ ಕೊಡುವ ಎಪಿಎಂಸಿ ಕಾಯ್ದೆ ತಿದ್ದುಪಡಿಯಂತಹ ನಿರ್ಧಾರ ಬೇಡ ಎಂದು ಒತ್ತಾಯಿಸಿದರು.
ಈ ತಿದ್ದುಪಡಿ ವಿಷಯದಲ್ಲಿ ಸರ್ಕಾರ ಮೊಂಡುತನ ಬಿಡಬೇಕು. ಬ್ರಿಟಿಷರು,ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರಂಭಿಸಿದ ಸಹಕಾರ ವಲಯದ ಎಪಿಎಂಸಿ ವ್ಯವಸ್ಥೆ, ಇಂದು ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗಿದೆ. ಇದನ್ನು ಪ್ರತಿ ಹೋಬಳಿಗೂ ವಿಸ್ತರಿಸುವ ಕಾರ್ಯ ನಡೆಯಬೇಕು. ಬದಲಾಗಿ ಎಪಿಎಂಸಿಯನ್ನೇ ಮುಚ್ಚುವಂತಹ ಹುನ್ನಾರ ನಡೆಯುವುದು ಬೇಡ ಎಂದರು.
ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಬಹು ರಾಷ್ಟ್ರೀಯ ಕಂಪನಿಗಳು ನೇರವಾಗಿ ರೈತರಿಂದ ಖರೀದಿ ಮಾಡುವ ಪ್ರಯತ್ನದಿಂದ ರೈತರಿಗೆ ನಷ್ಟವಿದೆ. ತೂಕ, ಗುಣಮಟ್ಟದ ಹೆಸರಿನಲ್ಲಿ ರೈತರ ವಂಚನೆ ನಡೆಯಲಿದೆ. ರೈತರಿಗೆ ಮೋಸ ಹೆಚ್ಚಲಿದೆ. ಇಂತಹ ತಿದ್ದುಪಡಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ರೈತರು ಸ್ವಾವಲಂಬಿಗಳಿದ್ದಾರೆ. ಬಹು ರಾಷ್ಟ್ರೀಯ ಕಂಪನಿಗಳು ರಾಸಾಯನಿಕ ಗೊಬ್ಬರ ತಂದು ರೈತರನ್ನು ಹಾಳು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು, ರೈತರನ್ನು ಬಹು ರಾಷ್ಟ್ರೀಯ ಕಂಪನಿಗಳ ಕೈಗೆ ಕೊಡುವುದು ಬೇಡ. ಈ ತಿದ್ದುಪಡಿಯಿಂದ ರಾಜ್ಯ ಸರ್ಕಾರದ ಹಿಡಿತ ಹೋಗಲಿದೆ. ಕಂಪನಿಗಳು, ಕೇಂದ್ರ ಸರ್ಕಾರದ ಅಧಿಧೀನದಲ್ಲಿ ಬರುತ್ತಿದ್ದು, ರೈತರಿಗೆ ಸ್ಥಳೀಯ ಮಟ್ಟದಲ್ಲಿ ಮೋಸ-ವಂಚನೆ ನಡೆದರೂ ಕೇಳುವವರು ಇಲ್ಲದಂತಾಗುತ್ತದೆ ಎಂದು ಹೇಳಿದರು.
ತಿದ್ದುಪಡಿ ಕುರಿತು ಚರ್ಚೆ ನಡೆಯಬೇಕು. ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಪ್ರಯತ್ನ ಸರಿಯಲ್ಲ. ಕಂಪನಿಗಳು ಗೊಬ್ಬರಕ್ಕೆ ಎಂಆರ್‌ಪಿ ದರ ಇಟ್ಟಿವೆ. ರೈತರ ಯಾವ ಬೆಳೆಗೆ ಎಂಆರ್‌ಪಿ ದರವೂ ಇಲ್ಲ ಎಂದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ ಉಪಸ್ಥಿತರಿದ್ದರು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ರಾಜ್ಯ ಸರ್ಕಾರ, ಕೋವಿಡ್-19 ಲಾಕ್‌ಡೌನ್ ಮುಗಿದ ಬಳಿಕ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು. ಸಹಕಾರ ವಲಯದಲ್ಲಿ ನಡೆಯುವ ಎಪಿಎಂಸಿ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಬಲಿ ಕೊಡುವುದು ಬೇಡ. ಈ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ಸರ್ಕಾರ ಮೊಂಡುತನ ಬಿಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು. -ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಕೋವಿಡ್ ವಿಷಯದಲ್ಲಿ ಸರ್ಕಾರ ಈ ವರೆಗೆ ರಕ್ಷಣೆ ಮಾಡಿದೆ. ಮೇ 17ರ ಬಳಿಕ ಜನರೇ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜೀವ ಉಳಿಸಿಕೊಳ್ಳಲು ಜನರು ಜಾಗೃತರಾಗಬೇಕು. ಸರ್ಕಾರ ಕೈಗೊಂಡ ಕ್ರಮಗಳು ಜನರಿಗಾಗಿ ಎಂಬುದನ್ನು ಅರಿಯಬೇಕು. -ಜೆ.ಟಿ. ಪಾಟೀಲ, ಕಾಂಗ್ರೆಸ್ ಕೋವಿಡ್-19 ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.