ಮೂಲಸೌಲಭ್ಯ ಸಿಗದೇ ನೂರಾರು ಕುಟುಂಬಗಳ ಪರದಾಟ
Team Udayavani, Dec 27, 2019, 3:02 PM IST
ಮಹಾಲಿಂಗಪುರ: ಪಟ್ಟಣದ ನೂರಾರು ಕುಟುಂಬಗಳು ಕಳೆದ ಎರಡು ದಶಕಗಳಿಂದ ಮೂಲಭೂತ ಸೌಲಭ್ಯಗಳು ಸಿಗದೇ ಪರದಾಡುತ್ತಿವೆ. ಪಟ್ಟಣದ ಮುಧೋಳ ರಸ್ತೆಯ ವಾರ್ಡ್ ನಂ.6 ಮತ್ತು 7ನೇ ವಾರ್ಡ್‌ಗೆ ಸಂಬಂಧಿ ಸಿದ ನೂರಾರು ಕುಟುಂಬಗಳು ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲೇ ವಾಸವಾಗಿವೆ. ಆದರೆ ಕಂದಾಯಇಲಾಖೆ ಸರ್ವೇ ಪ್ರಕಾರ ಅವರ ಆಸ್ತಿಗಳು ಪಕ್ಕದ ರನ್ನಬೆಳಗಲಿ(ಮೊದಲು ಗ್ರಾಪಂ)ಸದ್ಯ ಪಪಂ ವ್ಯಾಪ್ತಿಗೆ ಬರುವುದರಿಂದ ಪುರಸಭೆಯಿಂದ ಯಾವುದೇ ಮೂಲಭೂತ ಸೌಲಭ್ಯಗಳು ಸಿಗದೇ ಪರದಾಡುವಂತಾಗಿದೆ.
ಕಂದಾಯ ಇಲಾಖೆ ಸರ್ವೇ ಪ್ರಕಾರ ಪಕ್ಕದ ಬೆಳಗಲಿ ಹಾಲಿ ಪಪಂ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ಅಲ್ಲಿನ ನಿವಾಸಿಗಳು ಪುರಸಭೆಯಲ್ಲೇ ಮತದಾನ ಮಾಡುತ್ತಾರೆ. ಪಡಿತರ ಚೀಟಿಗಳು ಮಹಾಲಿಂಗಪುರ ಪುರಸಭೆ ವ್ಯಾಪ್ತಿಗೆ ಒಳಪಟ್ಟಿವೆ. ಪುರಸಭೆಯವರು ಇವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದರೆ ಅಲ್ಲಿನ ಎಲ್ಲಾ ನಿವಾಸಿಗಳು ತಮ್ಮ ಆಸ್ತಿಯನ್ನು ಸ್ಥಳೀಯ ಪುರಸಭೆಯಲ್ಲಿಯೇ ನೋಂದಣಿ ಮಾಡಿಸಬೇಕು. ಬೆರಳೆಣಿಕೆಯಷ್ಟು ನಿವಾಸಿಗಳು ಮಾಡಿಸಿ ಸ್ಥಳೀಯ ಪುರಸಭೆಯಲ್ಲಿ ಕರ ಪಾವತಿಸುತ್ತಿದ್ದಾರೆ. ಕಂದಾಯ ಇಲಾಖೆಯ (ತಲಾಟಿ ಉತಾರೆ) ಪ್ರಕಾರ ಕೆಲವರು (1995ರಿಂದ 2015) ಬೆಳಗಲಿ ಗ್ರಾಪಂಗೆ, 2015ರಿಂದ ಬೆಳಗಲಿ ಪಪಂಗೆ ಪಾವತಿಸುತ್ತಿದ್ದಾರೆ. ಇದರಿಂದ ಪಪಂನಿಂದಲೂ ಮತ್ತು ಸ್ಥಳೀಯ ಪುರಸಭೆಯಿಂದಲೂ ಪೂರ್ಣ ಪ್ರಮಾಣದಲ್ಲಿ ನಿಗದಿತ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕಾರಣ ಸೂಕ್ತ ಚರಂಡಿ, ರಸ್ತೆ, ವಿದ್ಯುತ್ ದ್ವೀಪ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಗೆ ಪರದಾಡುವಂತಾಗಿದೆ.
1995ರಲ್ಲೇ ಪುರಸಭೆ ಅಧೀನಕ್ಕೆ : ಮಹಾಲಿಂಗಪುರ ಪಟ್ಟಣದ ಪೂರ್ವ ದಿಕ್ಕಿನ ಬೆಳಗಲಿ ಗ್ರಾಮದ ಸರ್ವೇ ನಂಬರ 89, 87, 86, 82, 71, 68, 573, 565ರವೆಗೆ ಮಹಾಲಿಂಡಿಪುರ ಪುರಸಭೆಯ ಹದ್ದಿಯನ್ನು ವಿಸ್ತರಣೆ ಮಾಡಿ 4-9-1995ರ ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಅಂದಿನಿಂದ ಬೆಳಗಲಿ ಗ್ರಾಪಂ ವ್ಯಾಪ್ತಿಯಲ್ಲಿನ ಮೇಲಿನ ಸರ್ವೇ ನಂಬರ್‌ಗಳು ಪುರಸಭೆ ವ್ಯಾಪ್ತಿಗೆಒಳಪಟ್ಟಿವೆ. ಈ ಕುರಿತು ಸಂಬಂಧಿಸಿದ ನಿವಾಸಿಗಳಿಗೆ ಪುರಸಭೆ ಅಧಿಕಾರಿಗಳು ಹಲವಾರು ಬಾರಿ ನೋಟಿಸ್ ನೀಡಿ, ನಿಮ್ಮ ಆಸ್ತಿಯ ಸರ್ವೇ ನಂಬರ್ ಗಳು ಪುರಸಭೆ ವ್ಯಾಪ್ತಿಗೆ ಬರುತ್ತವೆ ಇಲ್ಲಿಯೇ ಕರ ಸಂದಾಯ ಮಾಡಿ ಎಂದು ಹೇಳಿದ್ದಾರೆ.
ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಪುರಸಭೆಗೆ ಹೆಚ್ಚಿನ ಕರ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ನಾವು ಬೆಳಗಲಿ ಗ್ರಾಪಂನಲ್ಲೇ ಇರುತ್ತೇವೆ ಎಂದು ಹೇಳಿದ್ದಕ್ಕಾಗಿ ಸಮಸ್ಯೆ ಕಳೆದ 25 ವರ್ಷಗಳಿಂದ ಹಾಗೆ ಉಳಿದಿದೆ ಎಂಬುದು ಸಂಪೂರ್ಣ ಮಾಹಿತಿಯುಳ್ಳ ಪುರಸಭೆ ಅಧಿಕಾರಿಗಳ ಅನಿಸಿಕೆಯಾಗಿದೆ.
ಅಧಿಸೂಚನೆಯಂತೆ ಬೆಳಗಲಿ ಪಪಂ: ಗ್ರಾಪಂವಾಗಿದ್ದ ಬೆಳಗಲಿಯು 2015ರಲ್ಲಿ ಪಟ್ಟಣ ಪಂಚಾಯತಿಯಾಗಿ ಮಾರ್ಪಟ್ಟಿದೆ. ಗ್ರಾಪಂನಿಂದ ಪಪಂವಾಗಿ ನಿರ್ಮಾಣವಾಗುವ ವೇಳೆ, 1995ರ ರಾಜ್ಯ ಸರಕಾರದ ಅಧಿ ಸೂಚನೆಯಂತೆ ಮಹಾಲಿಂಗಪುರ ಪುರಸಭೆ ವ್ಯಾಪ್ತಿಗೆ ಸೇರಿದ ಬೆಳಗಲಿ ಗ್ರಾಮದ ಸರ್ವೇ ನಂಬರ 89, 87, 86, 82, 71, 68, 573, 565 ರವರೆಗಿನ ಎಲ್ಲಾ ಸರ್ವೇ ನಂಬರಗಳನ್ನು ಹೊರತುಪಡಿಸಿಯೇ, ಬೆಳಗಲಿ ಪಟ್ಟಣ ಪಂಚಾಯತಿ ಗಡಿ(ಹದ್ದಿ)ಯನ್ನು ಗುರುತಿಸಲಾಗಿದೆ. ಈ ಮೂಲಕ ವಾಸ್ತವವಾಗಿ ಸರಕಾರಿ ದಾಖಲೆಗಳ ಪ್ರಕಾರ ಬೆಳಗಲಿ ಪಪಂ ಮತ್ತು ಮಹಾಲಿಂಗಪುರ ಪುರಸಭೆ ಗಡಿ ಸಮಸ್ಯೆ 2015ರಲ್ಲಿಯೇ ಬಗೆಹರಿದಿದೆ. ಈ ಮೂಲಕ ಮಹಾಲಿಂಗಪುರ ಪುರಸಭೆ ವ್ಯಾಪ್ತಿಯು ಮುಧೋಳ ರಸ್ತೆಯ ರೋಹಿಣಿ ಬಯೋಟೆಕ್‌ನ ಪೂರ್ವ ಭಾಗದ 573 ಮತ್ತು 576ರವರೆಗೆ ಒಳಪಟ್ಟಿದೆ.
4-9-1995ರ ರಾಜ್ಯ ಸರಕಾರದ ಅಧಿಸೂಚನೆಯಂತೆ ಮಹಾಲಿಂಗಪುರ ಪುರಸಭೆ ವ್ಯಾಪ್ತಿಗೆ ಬೆಳಗಲಿ ಗ್ರಾಮದ ಸರ್ವೇ ನಂಬರಗಳು ಸೇರಿವೆ. ಅಲ್ಲಿನ ನಿವಾಸಿಗಳು ಕಾನೂನಿನ ಪ್ರಕಾರ ಪುರಸಭೆಯಲ್ಲಿಯೇ ಕರ ಪಾವತಿಸಬೇಕು. ಪುರಸಭೆಯಿಂದ ಹಲವಾರು ಬಾರಿ ನಿವಾಸಿಗಳಿಗೆ ನೋಟಿಸ್ ನೀಡಿ ಈ ಕುರಿತು ತಿಳಿಸಲಾಗಿದೆ. ಈ ಸರ್ವೇ ನಂಬರ್‌ಗಳಲ್ಲಿ ನಿರ್ಮಿಸಿರುವ ನೂತನ ಭೂ ವಸತಿ ಯೋಜನೆಗಳು ನಮ್ಮ ಪುರಸಭೆಯಲ್ಲಿ ದಾಖಲಾಗಿವೆ. ಕೆಲವರು ಇಲ್ಲಿಯೇ ಕರ ಪಾವತಿಸಿ, ಕಟ್ಟಡ ಮತ್ತು ಇತರೇ ಪರವಾನಗಿ ಪಡೆದಿದ್ದಾರೆ. ಮಹಾಲಿಂಗಪುರ ವ್ಯಾಪ್ತಿಗೆ ಸೇರಿದ ಸರ್ವೇ ನಂಬರ್‌ಗಳಲ್ಲಿ ವಾಸಿಸುವ ಎಲ್ಲರೂ ನಮ್ಮ ಪುರಸಭೆಯಲ್ಲಿ ಆಸ್ತಿ ನೋಂದಾಯಿಸಿ, ಕರ ಪಾವತಿಸಿದರೆ ಪುರಸಭೆಯಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ಸಿದ್ಧರಿದ್ದೇವೆ. ಬಾಬುರಾವ್ ಕಮತಗಿ. ಮುಖ್ಯಾಧಿಕಾರಿ, ಪುರಸಭೆ ಮಹಾಲಿಂಗಪುರ
-ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.