ಸರ್ಕಾರಿ ಕಚೇರಿಗಳಲ್ಲಿ ನಿಲ್ಲದ ಹೊರ ಗುತ್ತಿಗೆ
Team Udayavani, Nov 17, 2019, 11:01 AM IST
ಬಾಗಲಕೋಟೆ: ಸರ್ಕಾರಿ ಕಚೇರಿಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಇನ್ನು ಮುಂದೆ ನಿಲ್ಲಬೇಕು. ಯಾವುದೇ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಂದ ನೌಕರರ ಸೇವೆ ಪಡೆಯಬಾರದು. ಒಂದು ವೇಳೆ ಮುಂದುವರಿಸಿದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಹೀಗೆ ಖಡಕ್ ಎಚ್ಚರಿಕೆ ನೀಡಿ ಆಗಲೇ ತಿಂಗಳು ಕಳೆಯುತ್ತ ಬಂದಿದೆ. ಆದರೆ, ಈವರೆಗೆ ಹೊರ ಗುತ್ತಿಗೆ ಸೇವೆ ನಿಂತಿಲ್ಲ. ಬಡ ವಿದ್ಯಾವಂತರಿಂದ ಹಣ ಪಡೆದು, ನೌಕರಿ ಕೊಡುವ ಆಮಿಷವೂ ತಡೆಯಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದೊಂದು ಹಗರಣ: ಸರ್ಕಾರಿ ಕಚೇರಿಗಳಿಗೆ ಹೊರ ಗುತ್ತಿಗೆ ಸೇವೆ ಪಡೆಯುವುದು ಒಂದು ದೊಡ್ಡ ಹಗರಣವಾಗಿದೆ. ಕಾರ್ಮಿಕ ಇಲಾಖೆಯ ನಿಯಮಾವಳಿ ಪ್ರಕಾರ, ಹೊರ ಗುತ್ತಿಗೆಯಡಿ ನೇಮಕಗೊಳ್ಳುವ ಸಿಬ್ಬಂದಿಗೆ ಕಡ್ಡಾಯವಾಗಿ ಇಎಸ್‌ಐ, ಪಿಎಫ್ ನೀಡಬೇಕು. ಕನಿಷ್ಠ ವೇತನ ನಿಗದಿ ಮಾಡಬೇಕು ಎಂಬ ನಿಯಮಗಳಿವೆ. ಆದರೆ, ಬಹುತೇಕ ಸಂಸ್ಥೆಗಳು, ಅದನ್ನು ಪಾಲಿಸುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇದೆ.
ನಿಯಮ ಪಾಲಿಸದಿರುವುದು ಒಂದೆಡೆಯಾದರೆ, ಒಬ್ಬ ಸಿಬ್ಬಂದಿಗೆ ಕನಿಷ್ಠ 8 ಸಾವಿರ ವೇತನ ನಿಗದಿ ಮಾಡಿದ್ದರೆ, ಅವರಿಗೆ 8 ಸಾವಿರ ಅಕೌಂಟ್ ಮೂಲಕ ಹಾಕಿ, ಬಳಿಕ ಎರಡು ಸಾವಿರ ಹಿಂಬದಿಯಿಂದ ಪಡೆಯಲಾಗುತ್ತದೆ. ಇದು ಬಹುತೇಕ ಕಡೆ ನಡೆಯುತ್ತಿದೆ ಎಂದು ಸ್ವತಃ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ, ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲೇ ಹೇಳಿದ್ದರು.
ಈ ರೀತಿ ಗೋಲ್‌ಮಾಲ್ ಮೂಲಕ ಹೊರ ಗುತ್ತಿಗೆ ನೌಕರರಿಗೆ ಅನ್ಯಾಯವಾಗುತ್ತಿರುವುದು ಸ್ವತಃ ಡಿಸಿ ಗಮನಕ್ಕಿದ್ದರೂ ಅದನ್ನು ತಡೆಯುವ ಪ್ರಯತ್ನ ನಡೆಯುತ್ತಿಲ್ಲ . ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತಹಶೀಲ್ದಾರ್ ಕಚೇರಿಗಳು, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಲವು ವಸತಿ ನಿಲಯಗಳು ಹೀಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಇಂದು ಹೊರ ಗುತ್ತಿಗೆ ನೌಕರರಿದ್ದಾರೆ. ಹೆಸರು ಒಬ್ಬರದು,
ನಡೆಸುವವರು ಮತ್ತೂಬ್ಬರು: ಜಿಲ್ಲೆಯಲ್ಲಿ ಅತಿ ಹೆಚ್ಚು ಇಲಾಖೆಗಳಿಗೆ ಹೊರ ಗುತ್ತಿಗೆ ನೌಕರರನ್ನು ಪೂರೈಸುತ್ತಿರುವ ದೊಡ್ಡ ಸಂಸ್ಥೆಗಳ ಲಿಸ್ಟನಲ್ಲಿ ಮೇಘಾ ಮತ್ತು ಸಾಯಿನಾಥ ಮ್ಯಾನ್ ಪಾವರ್ ಏಜೆನ್ಸಿಗಳಿವೆ. ಈ ಎರಡೂ ಏಜೆನ್ಸಿಗಳ ಮಾಲೀಕರು ವಿಜಯಪುರದವರಾಗಿದ್ದು, ಮೇಘಾ ಏಜೆನ್ಸಿಯನ್ನು ಜಿಲ್ಲೆಯ ಒಬ್ಬ ಸರ್ಕಾರಿ ನೌಕರರೇ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಮೇಘಾ ಮ್ಯಾನ್ ಪಾವರ್ ಏಜೆನ್ಸಿ ಕಂಡರೆ ಜಿಲ್ಲೆಯ ಕೆಲ ಅಧಿಕಾರಿಗಳಿಗೂ ಕಾಳಜಿ. ಸಂಸ್ಥೆ ಪೂರೈಸುವ ಗುತ್ತಿಗೆ ನೌಕರರಿಗೆ ಇಲಾಖೆಯಿಂದ ನೇರವಾಗಿ ವೇತನ ಕೊಡಲ್ಲ. ಬದಲಾಗಿ, ಸಂಸ್ಥೆಗೆ ಪಾವತಿಸಲಾಗುತ್ತದೆ. ಈ ಸಂಸ್ಥೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ವರ್ಷ ಶೇ.7 ಗುತ್ತಿಗೆ ಮೊತ್ತ ಪಾವತಿಸಲಾಗಿದೆ ಎಂದು ತಿಳಿದು ಬಂದಿದೆ.
ಶೇ.1 ಕಡಿಮೆ ಗುತ್ತಿಗೆ ಹಾಕಿದ್ದ ಸಂಸ್ಥೆಯನ್ನು ಯಾವುದೋ ಕಾರಣವೊಡ್ಡಿ ಕೈಬಿಟ್ಟ ಆರೋಗ್ಯ ಇಲಾಖೆ, ಶೇ.7ರಷ್ಟು ಹೆಚ್ಚಿನ ಟೆಂಡರ್ ಹಾಕಿದ್ದ ಸಂಸ್ಥೆಗೆ ಗುತ್ತಿಗೆ ಕೊಟ್ಟಿದೆ. ಇದು ಜಿಲ್ಲೆಯಲ್ಲೇ ಅತಿ ಹೆಚ್ಚು ಗುತ್ತಿಗೆಯ ಕಮೀಷನ್ ಪಡೆದ ಸಂಸ್ಥೆ ಎನ್ನಲಾಗಿದೆ.
ನೌಕರಿಗೆ ಸೇರಿಸಲು ಹಣ ವಸೂಲಿ: ಖಾಸಗಿ ಏಜೆನ್ಸಿಯವರು, ನೌಕರರನ್ನು ಪಡೆಯುವ ವೇಳೆ, ಸರ್ಕಾರಿ ಕಚೇರಿಯಲ್ಲಿ ನಿಮಗೆ ಗುತ್ತಿಗೆ ಆಧಾರಿತ ನೌಕರಿ ದೊರೆಯಲಿದೆ. ಗುತ್ತಿಗೆ ಆಧಾರಿತ ಅಂದ ಮೇಲೆ ಇಂದಲ್ಲ-ನಾಳೆ ಕಾಯಂ ಆಗುತ್ತವೆ. ಹೀಗಾಗಿ ನಮ್ಮ ಸಂಸ್ಥೆಗೆ ಇಷ್ಟು ಹಣ ಕೊಡಿ. ನಾವು ನೇಮಕ ಮಾಡಿಕೊಳ್ಳುತ್ತೇವೆ ಎಂಬ ಷರತ್ತು ಹಾಕಲಾಗುತ್ತದೆ. ಒಮ್ಮೆ ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆಯಡಿ ನೌಕರಿಗೆ ಸೇರಿದರೆ, ಸಾಕು ಮುಂದೆ ಕಾಯಂ ಮಾಡಿಕೊಳ್ಳಬಹುದು ಎಂಬ ಆಲೋಚನೆಯಿಂದ ವಿದ್ಯಾವಂತರೂ 25 ಸಾವಿರದಿಂದ 1 ಲಕ್ಷದ ವರೆಗೆ ಹಣ ಕೊಟ್ಟ ಉದಾಹರಣೆಗಳು ಜಿಲ್ಲೆಯಲ್ಲಿವೆ. ಇದನ್ನು ಸ್ವತಃ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿ, ಡಿಸಿಎಂ ಕಾರಜೋಳ ಕೂಡ ಇದಕ್ಕೆ ಕಡಿವಾಣ ಹಾಕಲು ಸೂಚಿಸಿದ್ದರು.
ಸರ್ಕಾರಿ ಸಂಸ್ಥೆಗೆ ವಹಿಸಲು ಸೂಚನೆ: ಜಿಲ್ಲೆಯಲ್ಲಿ ಹೊರ ಗುತ್ತಿಗೆಯಡಿ ಸಿಬ್ಬಂದಿ ಪಡೆಯುವುದನ್ನು ಸರ್ಕಾರಿ ಅಧೀನದ ಕಿಯೋನಿಕ್ಸ್ ಸಂಸ್ಥೆಗೆ ವಹಿಸಲು ಚರ್ಚೆ ನಡೆದಿದೆ. ಇದು ಒಂದು ರೀತಿ ಭೂ ಸೇನಾ ನಿಗಮ ಅಥವಾ ನಿರ್ಮಿತಿ ಕೇಂದ್ರ ಇದ್ದಂತೆ. ಕಿಯೋನಿಕ್ಸ್ ಹೆಸರಿನಲ್ಲಿ ಹೊರ ಗುತ್ತಿಗೆ ನೌಕರರನ್ನು ಪೂರೈಕೆ ಮಾಡುವುದು, ಇಲಾಖೆಗಳು ಕಿಯೋನಿಕ್ಸ್‌ಗೆ ವಾರ್ಷಿಕ ಗುತ್ತಿಗೆ ಮೊತ್ತ ಪಾವತಿಸುವುದು ನಿಯಮ. ಆದರೆ, ಈ ಸಂಸ್ಥೆ ಶೇ.10 ಕಮೀಷನ್ ಪಡೆಯುತ್ತದೆ. ಅದರಲ್ಲಿ ಶೇ.5 ಇಎಸ್‌ಐ, ಪಿಎಫ್ ಪಾವತಿಸುತ್ತದೆ.
ಅದೇ ಖಾಸಗಿಯವರಾದರೆ ಶೇ.1ರಿಂದ 8ರ ವರೆಗೆ ಟೆಂಡರ್ ಹಾಕುತ್ತಿದ್ದರು. ಕಿಯೋನಿಕ್ಸ್‌ಗೆ ವಹಿಸಿದರೆ, ಸರ್ಕಾರಕ್ಕೆ ಹೆಚ್ಚಿನ ಹೊರೆ ಹೊರತು, ಉಳಿತಾಯವಾಗಲ್ಲ. ಆದರೆ, ವಿದ್ಯಾವಂತರಿಂದ ನೌಕರಿ ಕೊಡುವ ಆಮಿಷವೊಡ್ಡಿ ಹಣ ವಸೂಲಿ ಮಾಡುವುದು ತಪ್ಪುತ್ತದೆ ಎಂಬುದು ಇಲಾಖೆಯೊಂದರ ಅಧಿಕಾರಿಯ ಅಭಿಪ್ರಾಯ. ಕಿಯೋನಿಕ್ಸ್ ಸಂಸ್ಥೆಗೆ ಹೊರ ಗುತ್ತಿಗೆ ಕೊಟ್ಟರೂ ಅದು ಉಪ ಗುತ್ತಿಗೆ ಕೊಡುತ್ತದೆ. ಆ ಉಪ ಗುತ್ತಿಗೆಯನ್ನು ರಾಜಕೀಯ ಪ್ರಭಾವ ಇರುವವರೇ ಪಡೆಯುತ್ತಾರೆ. ಮತ್ತದೇ ಹಳೆಯ ಪದ್ಧತಿ ಶುರುವಾಗುತ್ತದೆ. ಇದರಲ್ಲಿ ಜಿಲ್ಲಾಡಳಿತದ ಮೂಲ ಉದ್ದೇಶ ಈಡೇರಲ್ಲ.
ನಮ್ಮ ಜಿಲ್ಲೆಯ ಯಾವುದೇ ಇಲಾಖೆಗೆ ಹೊರ ಗುತ್ತಿಗೆ ನೌಕರನ್ನು ಖಾಸಗಿ ಏಜೆನ್ಸಿಗಳಿಂದ ಪಡೆಯದಂತೆ ಸೂಚಿಸಲಾಗಿದೆ. ಕಿಯೋನಿಕ್ಸ್ ಅಥವಾ ಸರ್ಕಾರಿ ಅಧೀನದ ಇನ್ಯಾವುದೇ ಸರ್ಕಾರಿ ಸಂಸ್ಥೆಯ ಮೂಲಕ ಗುತ್ತಿಗೆ ನೌಕರರನ್ನು ಪಡೆಯುವ ಕುರಿತು ಚರ್ಚೆ ನಡೆದಿದೆ. ಈ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. –ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.